ಯುದ್ಧಪೀಡಿತ ಇರಾನ್‌ನಲ್ಲಿ ಸಿಲುಕಿದ್ದ ಚಿಕ್ಕಬಳ್ಳಾಪುರ ಮೂಲದ 16 ಮಂದಿ ಶನಿವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ಬೆಂಗಳೂರು : ಯುದ್ಧಪೀಡಿತ ಇರಾನ್‌ನಲ್ಲಿ ಸಿಲುಕಿದ್ದ ಚಿಕ್ಕಬಳ್ಳಾಪುರ ಮೂಲದ 16 ಮಂದಿ ಶನಿವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

Add Asianetnews Kannada as a Preferred SourcegooglePreferred

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಅಲಿಪುರ ಗ್ರಾಮದ 16 ಮಂದಿ ಇರಾನ್‌ನಲ್ಲಿ ಪ್ರವಾಸ ಮತ್ತು ವ್ಯಾಪಾರಕ್ಕೆಂದು ತೆರಳಿದ್ದವರು ಇಸ್ರೇಲ್‌-ಇರಾನ್‌ ನಡುವಿನ ಯುದ್ಧದಲ್ಲಿ ಸಿಲುಕಿದ್ದರು. ಇವರೆಲ್ಲರೂ ಶನಿವಾರ ಬೆಳಗ್ಗೆ ಇರಾನ್‌ನಿಂದ ದೆಹಲಿಗೆ ಆಗಮಿಸಿದ್ದು, ದೆಹಲಿಯಿಂದ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ವಿಮಾನ ನಿಲ್ದಾಣಕ್ಕೆ ಆಗಮಿಸಿದವರಿಗೆ ಗೌರಿಬಿದನೂರಿನ ಶಾಸಕ ಪುಟ್ಟಸ್ವಾಮಿ ಗೌಡ ಅವರು ಹಾರ, ಶಾಲು ಹಾಕಿ ಸ್ವಾಗತಿಸಿದರು. ಈ ವೇಳೆ ಕುಟುಂಬದವರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ಬೆಂಗಳೂರಿಗೆ ವಾಪಸಾದವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಇರಾನ್‌ನಲ್ಲಿ ಪ್ರವಾಸ, ವ್ಯಾಪಾರಕ್ಕೆಂದು ಹೋಗಿದ್ದೆವು. ಆದರೆ, ಅಲ್ಲಿ ಯುದ್ಧ ಆರಂಭವಾಗಿದ್ದು, ಭಯ ಭೀತರಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಎಲ್ಲೆಡೆ ಬಾಂಬ್‌ಗಳ ಸದ್ದು ಕೇಳಿಸುತ್ತಿತ್ತು. ಕರ್ನಾಟಕಕ್ಕೆ ವಾಪಸ್‌ ಬರುತ್ತೇವೋ ಇಲ್ಲವೋ ಎಂಬ ಆತಂಕ ಉಂಟಾಗಿತ್ತು. ಆದರೆ, ಭಾರತೀಯ ರಾಯಭಾರಿ ಅಧಿಕಾರಿಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಾಯದಿಂದ ವಾಪಸ್‌ ಬಂದಿದ್ದೇವೆ. ನಮ್ಮವರನ್ನು ಸೇರಿಕೊಂಡಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.

ಇರಾನ್‌ ಅಣುಸ್ಥಾವರದ ಮೇಲೆ 2ನೇ ಬಾರಿ ದಾಳಿ:

ಟೆಲ್‌ ಅವಿವ್‌/ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ತಲ್ಲಣ ಸೃಷ್ಟಿಸಿರುವ ಇಸ್ರೇಲ್‌-ಇರಾನ್‌ ಸಂಘರ್ಷ 9ನೇ ದಿನಕ್ಕೆ ಪ್ರವೇಶಿಸಿದೆ. ಇರಾನ್‌ ನಡೆಸಿದ ಕ್ಲಸ್ಟರ್‌ ದಾಳಿಯಿಂದ ಕೊಂಚ ಹಾನಿಯ ಅನುಭವಿಸಿದ್ದ ಇಸ್ರೇಲ್‌ ಮತ್ತೆ ಸಿಡಿದೆದ್ದಿದ್ದು, ಇರಾನ್‌ನ ಪ್ರಮುಖ ಅಣ್ವಸ್ತ್ರ ಘಟಕವಾದ ಇಸ್ಫಹಾನ್ ಅಣ್ವಸ್ತ್ರ ಘಟಕದ ಮೇಲೆ 2ನೇ ಬಾರಿ ದಾಳಿ ಮಾಡಿದೆ.

ಇದೇ ವೇಳೆ, ಇಸ್ರೇಲ್‌ನ 1200 ಜನರ ನರಮೇಧಕ್ಕೆ ಕಾರಣವಾದ ಅ.7ರ ಹಮಾಸ್‌ ದಾಳಿಗೆ ಸಹಕರಿಸಿದ್ದ ಕಮಾಂಡರ್‌ ಸೇರಿದಂತೆ ಇರಾನಿ ರೆವಲ್ಯೂಷನರಿ ಗಾರ್ಡ್ಸ್‌ನ 2 ಕಮಾಂಡರ್‌ಗಳನ್ನು ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದೆ

 ಇಸ್ರೇಲ್ ಸೇನೆಯು ಇರಾನ್‌ನ ಇಸ್ಫಹಾನ್ ಅಣ್ವಸ್ತ್ರ ಕೇಂದ್ರದ ಮೇಲೆ 2ನೇ ಬಾರಿ 50 ಯುದ್ಧವಿಮಾನಗಳ ಮೂಲಕ ದಾಳಿ ನಡೆಸಿದೆ. ದಾಳಿಯಿಂದ ಘಟಕಕ್ಕೆ ಹಾನಿಯಾಗಿದ್ದು ಉಪಗ್ರಹ ಚಿತ್ರದಲ್ಲಿ ಕಾಣುತ್ತದೆ ಆದರೆ ಇರಾನ್‌ ಮಾತ್ರ ದಾಳಿಯನ್ನು ಹಿಮ್ಮೆಟ್ಟಿಸಿರುವುದಾಗಿ ಹೇಳಿಕೊಂಡಿದ್ದು, ಅಣ್ವಸ್ತ್ರ ಸೋರಿಕೆ ಭೀತಿಯಿಲ್ಲ ಎಂದು ಸ್ಪಷ್ಟಪಡಿಸಿದೆ. ಇಸ್ಫಹಾನ್‌ ಇರಾನ್‌ನ ಪ್ರಮುಖ ಅಣ್ವಸ್ತ್ರ ಕೇಂದ್ರವಾಗಿದ್ದು, ಇಲ್ಲಿ ಯುರೇನಿಯಂ ಸಂಸ್ಕರಣೆ ಮಾಡಲಾಗುತ್ತದೆ. ಇಂಧನ ಫ್ಯಾಬ್ರಿಕೇಷನ್‌ ಘಟಕವನ್ನೂ ಇದು ಹೊಂದಿದೆ. ಈ ಹಿಂದೆ ಜೂ.13ರಂದು ಮೊದಲ ಬಾರಿ ಘಟಕದ ಮೇಲೆ ದಾಳಿ ಆಗಿತ್ತು.