ಮಧ್ಯ ಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಗಾಜಾ ಮತ್ತು ಇರಾನ್ ಮೇಲಿನ ಇಸ್ರೇಲ್ ದಾಳಿ ವಿಚಾರದಲ್ಲಿ ಭಾರತ ತಟಸ್ಥ ನಿಲುವು ಹೊಂದಿರುವುದಕ್ಕೆ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಕಿಡಿ ಕಾರಿದ್ದು, ‘ಇದು ಧ್ವನಿಯ ನಷ್ಟ ಮಾತ್ರವಲ್ಲ, ಮೌಲ್ಯಗಳ ಶರಣಾಗತಿ’ ಎಂದು ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.

ನವದೆಹಲಿ: ಮಧ್ಯ ಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಗಾಜಾ ಮತ್ತು ಇರಾನ್ ಮೇಲಿನ ಇಸ್ರೇಲ್ ದಾಳಿ ವಿಚಾರದಲ್ಲಿ ಭಾರತ ತಟಸ್ಥ ನಿಲುವು ಹೊಂದಿರುವುದಕ್ಕೆ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಕಿಡಿ ಕಾರಿದ್ದು, ‘ಇದು ಧ್ವನಿಯ ನಷ್ಟ ಮಾತ್ರವಲ್ಲ, ಮೌಲ್ಯಗಳ ಶರಣಾಗತಿ’ ಎಂದು ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.

‘ದಿ ಹಿಂದು ಪತ್ರಿಕೆ’ಗೆ ಬರೆದ ಲೇಖನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಸೋನಿಯಾ, ‘ಈ ಹಿಂದೆ ಇಸ್ರೇಲ್‌ನಿಂದ ದಾಳಿಗೆ ಒಳಗಾದ ಗಾಜಾ ವಿವಾದದಲ್ಲಿ ಮೋದಿ ಸರ್ಕಾರ ಮೌನ ತಾಳಿತ್ತು. ಸ್ವತಂತ್ರ ಪ್ಯಾಲೆಸ್ತೀನ್ ಪರ ವಾದ ಮಂಡಿಸಿರಲಿಲ್ಲ. ಇದೀಗ ಇರಾನ್ ವಿರುದ್ಧ ಇಸ್ರೇಲ್‌ ಅಪ್ರಚೋದಿತ ದಾಳಿ ಮಾಡುತ್ತಿದೆ. ಈ ಬಗ್ಗೆ ಕೂಡ ಮೋದಿ ಮೌನ ವಹಿಸಿರುವುದು ಸಲ್ಲದು. ಇದು ನಮ್ಮ ನೈತಿಕತೆ ಮತ್ತು ರಾಜತಾಂತ್ರಿಕ ಸಂಪ್ರದಾಯದಿಂದ ದೂರ ಸರಿಯುವುದನ್ನು ಪ್ರತಿಬಿಂಬಿಸುತ್ತದೆ, ಇದು ಕೇವಲ ಧ್ವನಿಯ ನಷ್ಟ ಮಾತ್ರವಲ್ಲದೇ ಮೌಲ್ಯಗಳ ಶರಣಾಗತಿ ಕೂಡ ಆಗಿದೆ’ ಎಂದಿದ್ದಾರೆ.

ಮುಂದುವರೆದಂತೆ ಭಾರತ ಎರಡೂ ರಾಷ್ಟ್ರಗಳ ನಡುವಿನ ಶಾಂತಿ ಸ್ಥಾಪನೆಗೆ ಭಾರತ ಜವಾಬ್ದಾರಿಯುತ ನಡೆ ಅನುಸರಿಸಬೇಕೆಂದು ಆಗ್ರಹಿಸಿರುವ ಅವರು, ‘ಇನ್ನೂ ತಡವಾಗಿಲ್ಲ. ಭಾರತವು ಸ್ಪಷ್ಟವಾಗಿ ಮಾತನಾಡಬೇಕು. ಜವಾಬ್ದಾರಿಯುತವಾಗಿ ವರ್ತಿಸಬೇಕು. ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಶಮನ, ಶಾಂತಿ ಸ್ಥಾಪನೆಗೆ ಲಭ್ಯವಿರುವ ಪ್ರತಿಯೊಂದು ರಾಜತಾಂತ್ರಿಕ ಮಾರ್ಗವನ್ನು ಬಳಸಬೇಕು ’ ಎಂದಿದ್ದಾರೆ.ಇದೇ ವೇಳೆ ಸೋನಿಯಾ ಗಾಂಧಿ ಅವರು ಇರಾನ್ ನೆಲದಲ್ಲಿ ನಡೆದ ಬಾಂಬ್ ದಾಳಿ, ನಾಗರಿಕರ ಹತ್ಯೆಯನ್ನು ರಾಷ್ಟ್ರೀಯ ಕಾಂಗ್ರೆಸ್ ಖಂಡಿಸುತ್ತದೆ ಎಂದು ಹೇಳಿದ್ದಾರೆ.

ಇರಾನ್‌ ಅಣುಸ್ಥಾವರದ ಮೇಲೆ 2ನೇ ಬಾರಿ ದಾಳಿ:

ಟೆಲ್‌ ಅವಿವ್‌/ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ತಲ್ಲಣ ಸೃಷ್ಟಿಸಿರುವ ಇಸ್ರೇಲ್‌-ಇರಾನ್‌ ಸಂಘರ್ಷ 9ನೇ ದಿನಕ್ಕೆ ಪ್ರವೇಶಿಸಿದೆ. ಇರಾನ್‌ ನಡೆಸಿದ ಕ್ಲಸ್ಟರ್‌ ದಾಳಿಯಿಂದ ಕೊಂಚ ಹಾನಿಯ ಅನುಭವಿಸಿದ್ದ ಇಸ್ರೇಲ್‌ ಮತ್ತೆ ಸಿಡಿದೆದ್ದಿದ್ದು, ಇರಾನ್‌ನ ಪ್ರಮುಖ ಅಣ್ವಸ್ತ್ರ ಘಟಕವಾದ ಇಸ್ಫಹಾನ್ ಅಣ್ವಸ್ತ್ರ ಘಟಕದ ಮೇಲೆ 2ನೇ ಬಾರಿ ದಾಳಿ ಮಾಡಿದೆ.

ಇದೇ ವೇಳೆ, ಇಸ್ರೇಲ್‌ನ 1200 ಜನರ ನರಮೇಧಕ್ಕೆ ಕಾರಣವಾದ ಅ.7ರ ಹಮಾಸ್‌ ದಾಳಿಗೆ ಸಹಕರಿಸಿದ್ದ ಕಮಾಂಡರ್‌ ಸೇರಿದಂತೆ ಇರಾನಿ ರೆವಲ್ಯೂಷನರಿ ಗಾರ್ಡ್ಸ್‌ನ 2 ಕಮಾಂಡರ್‌ಗಳನ್ನು ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದೆ

ಇಸ್ರೇಲ್ ಸೇನೆಯು ಇರಾನ್‌ನ ಇಸ್ಫಹಾನ್ ಅಣ್ವಸ್ತ್ರ ಕೇಂದ್ರದ ಮೇಲೆ 2ನೇ ಬಾರಿ 50 ಯುದ್ಧವಿಮಾನಗಳ ಮೂಲಕ ದಾಳಿ ನಡೆಸಿದೆ. ದಾಳಿಯಿಂದ ಘಟಕಕ್ಕೆ ಹಾನಿಯಾಗಿದ್ದು ಉಪಗ್ರಹ ಚಿತ್ರದಲ್ಲಿ ಕಾಣುತ್ತದೆ ಆದರೆ ಇರಾನ್‌ ಮಾತ್ರ ದಾಳಿಯನ್ನು ಹಿಮ್ಮೆಟ್ಟಿಸಿರುವುದಾಗಿ ಹೇಳಿಕೊಂಡಿದ್ದು, ಅಣ್ವಸ್ತ್ರ ಸೋರಿಕೆ ಭೀತಿಯಿಲ್ಲ ಎಂದು ಸ್ಪಷ್ಟಪಡಿಸಿದೆ. ಇಸ್ಫಹಾನ್‌ ಇರಾನ್‌ನ ಪ್ರಮುಖ ಅಣ್ವಸ್ತ್ರ ಕೇಂದ್ರವಾಗಿದ್ದು, ಇಲ್ಲಿ ಯುರೇನಿಯಂ ಸಂಸ್ಕರಣೆ ಮಾಡಲಾಗುತ್ತದೆ. ಇಂಧನ ಫ್ಯಾಬ್ರಿಕೇಷನ್‌ ಘಟಕವನ್ನೂ ಇದು ಹೊಂದಿದೆ. ಈ ಹಿಂದೆ ಜೂ.13ರಂದು ಮೊದಲ ಬಾರಿ ಘಟಕದ ಮೇಲೆ ದಾಳಿ ಆಗಿತ್ತು.