ಕೊಚ್ಚಿ(ಜು.15): ಕೇರಳ ರಾಜ್ಯ ರಾಜಕೀಯದಲ್ಲಿ ಭಾರೀ ತಲ್ಲಣಕ್ಕೆ ಕಾರಣವಾಗಿರುವ ಸ್ವಪ್ನಾ ಸುರೇಶ್‌ ಮತ್ತು ಆಕೆಯ ತಂಡದ ಚಿನ್ನ ಕಳ್ಳಸಾಗಣೆ ಹಿಂದೆ ಭಯೋತ್ಪಾದನೆ ಕರಾಳ ಸಂಚು ಅಡಗಿರುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ದಳ, ಪ್ರಾಥಮಿಕ ತನಿಖೆಯಲ್ಲಿ ಇಂಥದ್ದೊಂದು ಅಂಶವನ್ನು ಕಂಡುಕೊಂಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಪ್ರಕರಣ ಮತ್ತಷ್ಟುವಿಸ್ತಾರಗೊಳ್ಳುವ ಎಲ್ಲಾ ಸುಳಿವುಗಳೂ ಗೋಚರಿಸಿವೆ.

ತಪ್ಪಿಸಿಕೊಳ್ಳೋ ಟೈಮಲ್ಲಿ ಫೋನ್ ಆನ್ ಮಾಡಿದ ಮಗಳು: ಸಿಕ್ಕಿಬಿದ್ದ ಸ್ವಪ್ನಾ ಸುರೇಶ್

ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿಗಳಾದ ಸ್ವಪ್ನಾ ಸುರೇಶ್‌, ಸಂದೀಪ್‌ ನಾಯರ್‌ ಅವರನ್ನು ಎನ್‌ಐಎ ಅಧಿಕಾರಿಗಳು ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಆರೋಪಿಗಳ ವಿರುದ್ಧ ಗಂಭೀರ ಸ್ವರೂಪದ ಮಾಹಿತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಅವರನ್ನು ಜು.21ರವರೆಗೂ ವಶಕ್ಕೆ ನೀಡುವಂತೆ ಕೋರಿದ್ದರು. ಇಂಥ ಕೋರಿಕೆ ಸಲ್ಲಿಕೆ ವೇಳೆ ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದ ಅಂಶಗಳನ್ನು ತನಿಖಾಧಿಕಾರಿಗಳು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅದರನ್ವಯ ಸ್ವಪ್ನಾ ಮತ್ತು ಅವರ ತಂಡ ಕಳೆದ 10 ತಿಂಗಳಲ್ಲಿ ರಾಯಭಾರ ಕಚೇರಿಗೆ ಇರುವ ವಿನಾಯ್ತಿಗಳನ್ನು ಬಳಸಿಕೊಂಡು 150 ಕೆಜಿಯಷ್ಟುಚಿನ್ನವನ್ನು ಕೇರಳಕ್ಕೆ ಕಳ್ಳಸಾಗಣೆ ಮಾಡಿತ್ತು. ಚಿನ್ನವನ್ನು ಆಭರಣ ಉದ್ದೇಶಕ್ಕಾಗಿ ತರದೇ, ಭಯೋತ್ಪಾದನಾ ಕೃತ್ಯಗಳಿಗಾಗಿ ತರಲಾಗಿತ್ತು ಎಂಬ ವಿಷಯವು ಕೇಂದ್ರ ಗೃಹ ಸಚಿವಾಲಯದ ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ. ಅಲ್ಲದೆ ಇಂಥ ಕೃತ್ಯವನ್ನು ನಡೆಸಲು ತಂಡವು, ಯುಎಎ ರಾಯಭಾರಿ ಕಚೇರಿ ಚಿಹ್ನೆಯನ್ನು ಬಳಸಿಕೊಂಡಿತ್ತು ಎಂದು ಮಾಹಿತಿ ನೀಡಿದೆ.

ಕೇರಳದಲ್ಲಿ ಸಿಕ್ಕಿದ್ದ 15 ಕೋಟಿ ಚಿನ್ನ, ಬೆಂಗಳೂರಲ್ಲಿ ಬಲೆಗೆ ಬಿದ್ದ ಸ್ವಪ್ನ!

ಸ್ವಪ್ನಾ ಮತ್ತು ಸಂದೀಪ್‌ ಮೊದಲು ಯುಎಇ ರಾಯಭಾರ ಕಚೇರಿಯಲ್ಲಿ ಕೆಲಸಕ್ಕಿದ್ದರು. ಈ ವೇಳೆ ಅವರಿಗೆ ರಾಯಭಾರ ಕಚೇರಿ ಹೆಸರಲ್ಲಿ ಸರಕು ರವಾನೆ ಮಾಹಿತಿ ಇತ್ತು. ಬಳಿಕ ಇಬ್ಬರೂ ರಾಯಭಾರ ಕಚೇರಿ ಕೆಲಸ ಬಿಟ್ಟಿದ್ದರು. ನಂತರದಲ್ಲಿ ಚಿನ್ನ ಕಳ್ಳಸಾಗಣೆದಾರರ ಜೊತೆ ಸೇರಿಕೊಂಡು ತಾವೂ ಅದೇ ಕೃತ್ಯ ಆರಂಭಿಸಿದ್ದರು ಎಂದು ಅಧಿಕಾರಿಗಳು ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.