*  ಒಂದೇ ದಿನದಲ್ಲಿ ಶೇ.28ರಷ್ಟು ಸೋಂಕು ಏರಿಕೆ*  ಸಕ್ರಿಯ ಕೇಸ್‌ 3.71 ಲಕ್ಷಕ್ಕೆ ಏರಿಕೆ*  ದೈನಂದಿನ ಪಾಸಿಟಿವಿಟಿ ದರ ಶೇ.7.74ಕ್ಕೇರಿಕೆ 

ನವದೆಹಲಿ(ಜ.08): ಭಾರತದಲ್ಲಿ(India) ಕೋವಿಡ್‌(Covid19) ಸ್ಫೋಟ ಮುಂದುವರೆದಿದ್ದು, ಶುಕ್ರವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ಮತ್ತೆ 1,40,021 ಕೊರೋನಾ(Coronavirus) ಪ್ರಕರಣಗಳು ಪತ್ತೆಯಾಗಿವೆ. ಇದು ಕಳೆದ 214 ದಿನಗಳ (7 ತಿಂಗಳ) ಗರಿಷ್ಠ ಸಂಖ್ಯೆಯಾಗಿದೆ. ಅಲ್ಲದೆ ಗುರುವಾರ ವರದಿಯಾಗಿದ್ದ ಪ್ರಕರಣಗಳಿಗಿಂತ ಶೇ.28ರಷ್ಟು ಅಧಿಕ. ಇದೇ ಅವಧಿಯಲ್ಲಿ 302 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಹೊಸ ಸೋಂಕಿತರೂ ಸೇರಿ ಸಕ್ರಿಯ ಸೋಂಕಿನ ಪ್ರಮಾಣ 3.71 ಲಕ್ಷಕ್ಕೆ ಹೆಚ್ಚಿದೆ. ಚೇತರಿಕೆ ಪ್ರಮಾಣ ಶೇ.97.57ಕ್ಕೆ ಕುಸಿದಿದೆ. ದೈನಂದಿನ ಸೋಂಕಿನ ದರ ಶೇ.7.74ಕ್ಕೆ ಏರಿಕೆಯಾಗಿದೆ.

ಹೊಸ ಕೇಸುಗಳೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3.52 ಕೋಟಿಗೆ ಏರಿಕೆಯಾಗಿದೆ. ಒಟ್ಟು ಸಾವಿಗೀಡಾದವರ ಸಂಖ್ಯೆ 4,83,187ಕ್ಕೆ ತಲುಪಿದೆ. ಒಟ್ಟು ಸೋಂಕಿತರ ಪೈಕಿ 3.43 ಕೋಟಿ ಮಂದಿ ಗುಣಮುಖರಾಗಿದ್ದಾರೆ. ಈ ನಡುವೆ 149.6 ಕೋಟಿ ಡೋಸ್‌ ಲಸಿಕೆ(Vaccine) ವಿತರಣೆ ಮಾಡಲಾಗಿದೆ.

Coronavirus : ನಾವಂದುಕೊಂಡಂತಿಲ್ಲ ಓಮಿಕ್ರೋನ್, WHO ಕೊಟ್ಟ ಶಾಕಿಂಗ್ ಮಾಹಿತಿ

3000 ದಾಟಿದ ಒಮಿಕ್ರೋನ್‌:

ದೇಶದಲ್ಲಿ ಶುಕ್ರವಾರ ಒಂದೇ ದಿನ 377 ಒಮಿಕ್ರೋನ್‌(Omicron) ರೂಪಾಂತರಿ ವೈರಸ್‌ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಒಟ್ಟು ಒಮಿಕ್ರೋನ್‌ ಸೋಂಕಿತರ ಸಂಖ್ಯೆ 3007ಕ್ಕೆ ಏರಿಕೆಯಾಗಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ 896, ದೆಹಲಿಯಲ್ಲಿ 465, ಕರ್ನಾಟಕದಲ್ಲಿ 333, ರಾಜಸ್ಥಾನದಲ್ಲಿ 291, ಕೇರಳದಲ್ಲಿ 284 ಮತ್ತು ಗುಜರಾತಲ್ಲಿ 204 ಕೇಸ್‌ ಪತ್ತೆಯಾಗಿದೆ. ಒಟ್ಟು ಸೋಂಕಿತರ ಪೈಕಿ 1,199 ಮಂದಿ ಗುಣಮುಖರಾಗಿದ್ದಾರೆ.

ಬೂಸ್ಟರ್‌ ಡೋಸ್‌ಗೆ ಇಂದಿನಿಂದ ನೋಂದಣಿ ಆರಂಭ

ನವದೆಹಲಿ: ಕೋರೋನಾ ವಾರಿಯರ್‌ಗಳು ಮತ್ತು 60 ವರ್ಷ ದಾಟಿದ ಕಾಯಿಲೆ ಪೀಡಿತರಿಗೆ ಬೂಸ್ಟರ್‌ ಡೋಸ್‌(Booster Dose) (ಮುಂಜಾಗ್ರತಾ ಡೋಸ್‌) ಲಸಿಕೆ ನೋಂದಣಿ ಶನಿವಾರ ಸಂಜೆಯಿಂದ ಆರಂಭವಾಗಲಿದೆ. ಸ್ಥಳದಲ್ಲೇ ನೋಂದಣಿ ಕಾರ್ಯ ಜ.10ರಿಂದ ಆರಂಭವಾಗಲಿದೆ. ಈಗಾಗಲೇ 2 ಡೋಸ್‌ ಪಡೆದಿರುವುದರಿಂದ ನೇರವಾಗಿ ಲಸಿಕಾ ಕೇಂದ್ರಗಳಿಗೆ ಹೋಗಿಯೂ ಲಸಿಕೆ ಪಡೆದುಕೊಳ್ಳಬಹುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ. ಜನರಿಗೆ ಜ.10ರಿಂದ ಲಸಿಕಾ ಅಭಿಯಾನ(Vaccinde Drive) ಆರಂಭವಾಗಲಿದೆ.

ಬ್ರಿಟನ್‌ನಲ್ಲಿ 1.78 ಲಕ್ಷ ಮಂದಿಗೆ ಸೋಂಕು

ಲಂಡನ್‌: ಬ್ರಿಟನ್‌ನಲ್ಲಿ(Britain) ಒಮಿಕ್ರೋನ್‌ ತೀವ್ರತೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಶುಕ್ರವಾರ ಮತ್ತೆ 1,78,250 ಮಂದಿಗೆ ಸೋಂಕು ವ್ಯಾಪಿಸಿದೆ. ಇದೇ ಅವಧಿಯಲ್ಲಿ 229ಕ್ಕೂ ಹೆಚ್ಚು ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಇದರೊಂದಿಗೆ ಒಟ್ಟಾರೆ ಸಾವಿನ ಸಂಖ್ಯೆ 1,49,744 ಏರಿಕೆಯಾಗಿದೆ. ಗುರುವಾರ 179,727 ಹೆಚ್ಚು ಕೇಸ್‌ಗಳು ದಾಖಲಾಗಿದ್ದವು. ತನ್ಮೂಲಕ ಕಳೆದೊಂದು ವಾರದಲ್ಲಿ 978,054 ಕೇಸ್‌ಗಳು ದಾಖಲಾಗಿದೆ.

Lockdown ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಆಗುತ್ತಾ? ಸ್ಪಷ್ಟನೆ ಕೊಟ್ಟ ಸಚಿವ ಸುಧಾಕರ್

ಕರ್ನಾಟಕದಲ್ಲಿ ಕೊರೋನಾ ಸ್ಫೋಟ, ಶೇ.4ರ ಮೇಲೇರಿದ ಪಾಸಿಟಿವಿಟಿ ದರ

ಕರ್ನಾಟಕದಲ್ಲಿ ಶುಕ್ರವಾರ (ಜ.7) ಒಂದೇ ದಿನ 8449 ಕೊರೋನಾ ಪಾಸಿಟಿವ್ (Coronavirus) ಕೇಸ್ ಪತ್ತೆಯಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ 30,31,052 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಈವರೆಗೆ 29,62,548 ಮಂದಿ ಚೇತರಿಸಿಕೊಂಡಿದ್ದಾರೆ. ಕೊರೋನಾದಿಂದ ಒಟ್ಟು 38,362 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 30,113 ಸಕ್ರಿಯ ಪ್ರಕರಣಗಳಿವೆ. 

ಇನ್ನು ರಾಜ್ಯದಲ್ಲಿ ಪಾಸಿಟಿವಿಟಿ ಪ್ರಮಾಣ ಶೇ 4.15 ಇದ್ದು, ಸೋಂಕಿನಿಂದ ಮೃತಪಡುವವರ ಪ್ರಮಾಣ ಶೇ 0.04 ಇದೆ. ದಿನೇ ದಿನೇ ಕೊರೋನಾ ಪಾಸಿಟಿವ್ ಕೇಸ್‌ಗಳ ಸಂಖ್ಯೆ ದ್ವಿಗುಣವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಪ್ರಮುಖವಾಗಿ ಬೆಂಗಳೂರು ನಗರದಲ್ಲೇ ಕಳೆದ 24 ಗಂಟೆಗಳಲ್ಲಿ 6812 ಕೇಸ್ ಪತ್ತೆಯಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ. 352 ಮಂದಿ ಚೇತರಿಸಿಕೊಂಡಿದ್ದಾರೆ. 

ಈ ಮೂಲಕ ನಗರದಲ್ಲಿ ಒಟ್ಟು 12,83,186 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಒಟ್ಟು 16,417 ಮಂದಿ ಕೊವಿಡ್​ನಿಂದ ಮೃತಪಟ್ಟಿದ್ದಾರೆ. 12,41,398 ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ 25,370 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.