Coronavirus : ನಾವಂದುಕೊಂಡಂತಿಲ್ಲ ಓಮಿಕ್ರೋನ್, WHO ಕೊಟ್ಟ ಶಾಕಿಂಗ್ ಮಾಹಿತಿ
* ಒಮಿಕ್ರೋನ್‌ನಿಂದ ಆಸ್ಪತ್ರೆ ವಾಸ ಸಾವು ಹೆಚ್ಚುತ್ತಿದೆ:
* ಜಗತ್ತಿಗೆ ಡಬ್ಲ್ಯುಎಚ್‌ಒ ಎಚ್ಚರಿಕೆ
* ಇದು ಸೌಮ್ಯ ಸೋಂಕು ಎನ್ನಲಾಗದು: ಟೆಡ್ರೋಸ್
* ಲಸಿಕೆ ಪಡೆದವರಿಗಷ್ಟೇ ಇದು ಅಪಾಯಕಾರಿಯಲ್ಲ
ಜಿನೆವಾ (ಜ. 08) ‘ಒಮಿಕ್ರೋನ್ (Omicron) ಕೋವಿಡ್ (Coronavirus) ರೂಪಾಂತರಿ ವೈರಸ್ ಜಗತ್ತಿನಾದ್ಯಂತ ಜನರನ್ನು ಕೊಲ್ಲುತ್ತಿದೆ. ಇದೊಂದು ಸೌಮ್ಯ ಸೋಂಕು ಎಂದು ಕಡೆಗಣಿಸುವಂತಿಲ್ಲ’ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಸಿದೆ.
ಈ ಬಗ್ಗೆ ಮಾತನಾಡಿದ ಡಬ್ಲುಎಚ್‌ಒ ಮುಖ್ಯಸ್ಥ ಟೆಡ್ರೋಸ್ ಘೇಬ್ರೆಯೇಸಸ್, ‘ಲಸಿಕೆ ಪಡೆದವರಲ್ಲಿ, ಡೆಲ್ಟಾಗಿಂತ ಒಮಿಕ್ರೋನ್ ಸೌಮ್ಯವಾಗಿ ಕಾಣುತ್ತಿದೆ. ಆದರೆ ಹಾಗಂತ ಅದನ್ನು ಸೌಮ್ಯ ಸೋಂಕು ಎಂದು ವರ್ಗೀಕರಿಸಲಾಗದು’ ಎಂದು ಹೇಳಿದರು. ಈ ಮೂಲಕ ಲಸಿಕೆ ಪಡೆಯದವರಿಗೆ ಇದು ಅಪಾಯಕಾರಿ ಎಂಬ ಎಚ್ಚರಿಕೆಯನ್ನು ಅವರು ಪರೋಕ್ಷವಾಗಿ ನೀಡಿದರು.
‘ಒಮಿಕ್ರೋನ್ ಸೋಂಕು ಈ ಹಿಂದಿನ ರೂಪಾಂತರಿಗಳಂತೇ ವೇಗವಾಗಿ ವ್ಯಾಪಿಸುತ್ತಿದೆ. ಹಲವು ದೇಶಗಳಲ್ಲಿ 2ನೇ ಅಲೆಗೆ ಕಾರಣವಾದ ಡೆಲ್ಟಾರೂಪಾಂತರಿ ವಿರುದ್ಧ ಸ್ಪರ್ಧಿಸುತ್ತಿದೆ. ಈ ಹಿಂದಿನ ರೂಪಾಂತರಿ ವೈರಸ್‌ಗಳಂತೆ ಇದೂ ಜನರನ್ನು ಕೊಲ್ಲುತ್ತಿದೆ. ಆಸ್ಪತ್ರೆಗೆ ದಾಖಲಾಗುವಂತೆ ಮಾಡುತ್ತಿದೆ. ಹೀಗಾಗಿ ಅದನ್ನು ಸೌಮ್ಯ ಸೋಂಕು ಎಂದು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ಆಸ್ಪತ್ರೆಗಳಿಗೆ ದಾಖಲಾಗುವ ವ್ಯಕ್ತಿಗಳಿಗೆ ಇದು ಮಾರಕವಾಗಬಹುದು’ ಎಂದರು.
ಇದೇ ವೇಳೆ, ‘ಕಳೆದ ವಾರ ಜಗತ್ತಿನಲ್ಲಿ 95 ಲಕ್ಷ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದು ಅದಕ್ಕೂ ಮುಂಚಿನ ವಾರಕ್ಕಿಂತ ಶೇ.71ರಷ್ಟುಅಧಿಕ. ಕೋವಿಡ್ ಮಣಿಸಲು, ಸಾವು-ನೋವು ತಗ್ಗಿಸಲು ಶ್ರೀಮಂತ ದೇಶಗಳು ಬಡ ದೇಶಗಳೊಂದಿಗೆ ಕೊರೋನಾ ಲಸಿಕೆಯನ್ನು ಪ್ರಾಮಾಣಿಕವಾಗಿ ಹಂಚಿಕೊಳ್ಳಬೇಕು’ ಎಂದು ಮನವಿ ಮಾಡಿದರು.
ಮತ್ತೆ ಲಾಕ್‌ಡೌನ್ ಮಾಡಲ್ಲ: ಕೋವಿಡ್ 3ನೇ ಅಲೆ ನಿಯಂತ್ರಣಕ್ಕೆ ಇನ್ನೂ ಕೆಲ ಬಿಗಿ ಕ್ರಮ ಕೈಗೊಳ್ಳಬಹುದು. ಆದರೆ, ಮತ್ತೆ ಲಾಕ್‌ಡೌನ್ ಮಾಡುವುದಿಲ್ಲ. ಜನರು ಆತಂಕಪಡಬೇಕಿಲ್ಲ. ಈಗ ಲಾಕ್‌ಡೌನ್ ಎಂಬುದು ಕಳೆದು ಹೋಗಿರುವ ನೀತಿ. ಮತ್ತೆ ಅದನ್ನು ಹೇರುವ ಪ್ರಶ್ನೆಯೇ ಇಲ್ಲ. ಲಸಿಕೆ ಮತ್ತು ಔಷಧಿ ಬಳಸಿ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಲಸಿಕೆ ಪಡೆದವರಿಗೆ ಪಾಸ್? ರಾಜ್ಯದಲ್ಲಿ ಎರಡೂ ಡೋಸ್ ಲಸಿಕೆ ಪಡೆದಿರುವವರಿಗೆ ಹಂತ ಹಂತವಾಗಿ ಗ್ರೀನ್ ಪಾಸ್ ಅಥವಾ ಯೂನಿವರ್ಸಲ್ ಪಾಸ್ ನೀಡುವ ಬಗ್ಗೆ ಚಿಂತಿಸಲಾಗಿದೆ. ಮೊದಲ ಹಂತದಲ್ಲಿ ಸರ್ಕಾರಿ ನೌಕರರಿಗೆ ಪಾಸ್ ನೀಡಲು ಯೋಜಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಈ ಪಾಸ್ ಪಡೆದವರು ಮಾಲ್, ಚಿತ್ರಮಂದಿರ ಹೀಗೆ ಎಲ್ಲಿಗೆ ಬೇಕಾದರೂ ಹೋಗಬಹುದು.
ನಟಿ ಸ್ವರಾ ಭಾಸ್ಕರ್, ಗಾಯಕ ವಿಶಾಲ್ ದದ್ಲಾನಿಗೆ ಕೊರೋನಾ: ಸಿನಿಮಾ ಸೆಲೆಬ್ರೆಟಿಗಳಿಗೂ ಕೊರೋನಾ ವ್ಯಾಪಿಸುತ್ತಿದ್ದು, ಇದೀಗ ನಟಿ ಸ್ವರಾ ಭಾಸ್ಕರ್ ಸಂಗೀತ ನಿರ್ದೇಶಕ ಹಾಗೂ ಗಾಯಕ ವಿಶಾಲ್ ದದ್ಲಾನಿ ಮತ್ತು ನಟಿ ಕುಬ್ರಾ ಸೇಠ್‌ಗೆ ಸೋಂಕು ತಗುಲಿದೆ. ಸ್ವರಾ ಭಾಸ್ಕರ್‌ಗೆ ಶುಕ್ರವಾರ ಕೊರೋನಾ ಪಾಸಿಟಿವ್ ಬಂದಿದೆ. ಜ್ವರ ಸೇರಿ ಸೋಂಕಿನ ಇತರೆ ಲಕ್ಷಣಗಳಿದ್ದು, ಹೋಮ್ ಕ್ವಾರಂಟೈನ್ ಆಗಿದ್ದಾರೆ. ಅವರ ಕುಟುಂಬಸ್ಥರೂ ಐಸೋಲೇಶನ್ ಆಗಿದ್ದಾರೆ. ಇನ್ನು ಗಾಯಕ ದದ್ಲಾನಿಗೆ ಕೊರೋನಾದ ಸೌಮ್ಯ ಲಕ್ಷಣಗಳಿದ್ದು,ಅವರ ಸಂಪರ್ಕಕ್ಕೆ ಬಂದವರು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಹೇಳಿದ್ದಾರೆ. ಇನ್ನು ನಟಿ ಕುಬ್ರಾ ಸೇಠ್ ಕೂಡ ಸೋಂಕಿಗೊಳಗಾಗಿದ್ದೇನೆ ಎಂದು ಇನ್ಸಾ$್ಟಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.