ನವದೆಹಲಿ (ಡಿ.28]: ದೇಶದ ಎಲ್ಲಾ ಅರ್ಹ ನಾಗರಿಕರಿಗೆ ವಿತರಿಸಲಾಗುವ ವಿಶಿಷ್ಟ ಗುರುತಿನ ಸಂಖ್ಯೆಯಾದ ಆಧಾರ್‌ ಅನ್ನು ಇದುವರೆಗೆ 125 ಕೋಟಿಗೂ ಹೆಚ್ಚು ಜನರಿಗೆ ನೀಡಲಾಗಿದೆ. ಇದರೊಂದಿಗೆ 10 ವರ್ಷಗಳ ಹಿಂದೆ ಮೊದಲ ಬಾರಿಗೆ ವಿತರಿಸಲಾಗಿದ್ದ ಆಧಾರ್‌ ಇದೀಗ ಹೊಸ ದಾಖಲೆ ಬರೆದಿದೆ.

ಸದ್ಯ ಭಾರತದ ಜನಸಂಖ್ಯೆ 132 ಕೋಟಿ ಎಂದು ಅಂದಾಜಿಸಲಾಗಿದ್ದು, ಇದು ನಿಖರವಾಗಿದ್ದಲ್ಲಿ ಇನ್ನು ಕೇವಲ 7 ಕೋಟಿ ಜನರಷ್ಟೇ ಆಧಾರ್‌ ಪಡೆಯಬೇಕಿದೆ.

ನೋಂದಣಿ ಹೆಚ್ಚಳ:  ಕೇಂದ್ರ ಮತ್ತು ಬಹುತೇಕ ರಾಜ್ಯ ಸರ್ಕಾರಗಳು ಬಹುತೇಕ ಎಲ್ಲಾ ಸೇವೆಗಳಿಗೆ ಆಧಾರ್‌ ಅನ್ನು ಕಡ್ಡಾಯಗೊಳಿಸಿದ ಬೆನ್ನಲ್ಲೇ, ದೇಶದಲ್ಲಿ ಆಧಾರ್‌ ಕಾರ್ಡ್‌ ಪಡೆದುಕೊಳ್ಳುವ ನಾಗರಿಕರ ಸಂಖ್ಯೆಯೂ ಏರುಗತಿಯಲ್ಲೇ ಸಾಗಿದ್ದು, ಇದುವರೆಗೆ 125 ಕೋಟಿ ಆಧಾರ್‌ ಸಂಖ್ಯೆಯನ್ನು ನೋಂದಣಿ ಮಾಡಲಾಗಿದೆ.

ಸಾಲುಗಟ್ಟಿನಿಂತರೂ ಸಿಗದ ಆಧಾರ್‌ ಕಾರ್ಡ್‌..

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ವಿಶಿಷ್ಟಗುರುತಿನ ಚೀಟಿ ಪ್ರಾಧಿಕಾರ, ಈವರೆಗೆ 125 ಕೋಟಿಗೂ ಹೆಚ್ಚು ಆಧಾರ್‌ ಸಂಖ್ಯೆಯನ್ನು ನೋಂದಣಿ ಮಾಡಲಾಗಿದೆ. ಇದುವವರೆಗೆ ಆಧಾರ್‌ ಆಧರಿತ ದೃಢೀಕರಣ ಸೇವೆಯನ್ನು 370000 ಕೋಟಿ ಬಾರಿ ಬಳಸಿಕೊಳ್ಳಲಾಗಿದೆ. ನಿತ್ಯವೂ 3 ಕೋಟಿ ಹೊಸ ಆಧಾರ್‌ ಆಧರಿತ ದೃಢೀಕರಣ ಬೇಡಿಕೆ ಸಲ್ಲಿಕೆಯಾಗುತ್ತದೆ. ನಿತ್ಯವೂ 3-4 ಲಕ್ಷ ಜನ ಆಧಾರ್‌ ಮಾಹಿತಿಯನ್ನು ಪರಿಷ್ಕರಿಸುವ ಸಂಬಂಧ ಬೇಡಿಕೆ ಸಲ್ಲಿಸುತ್ತಾರೆ. ಇದುವರೆಗೆ 331 ಕೋಟಿ ಬಾರಿ ಇಂಥ ಮಾಹಿತಿಗಳನ್ನು ಪರಿಷ್ಕರಿಸಲಾಗಿದೆ ಎಂದು ಹೇಳಿದೆ.

ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಅಂದರೆ 2009ರಲ್ಲಿ ಮಹಾರಾಷ್ಟ್ರದ ನಂದರ್‌ಬಾರ್‌ ಸಮೀಪದ ತೆಂಬ್ಲಿ ಎಂಬಲ್ಲಿ ಮೊದಲ ಬಾರಿಗೆ 12 ಸಂಖ್ಯೆಗಳುಳ್ಳ ಆಧಾರ್‌ ಸಂಖ್ಯೆಯನ್ನು ವಿತರಿಸಲಾಗಿತ್ತು. ರಂಜನಾ ಸೋನವಾನೆ ಎಂಬ ಮಹಿಳೆ, ಮೊದಲ ಆಧಾರ್‌ ಕಾರ್ಡ್‌ ಪಡೆದ ಹಿರಿಮೆ ಹೊಂದಿದ್ದಾರೆ.