Asianet Suvarna News Asianet Suvarna News

ಬಜೆಟ್‌ ಕುರಿತು 12 ದಿನ ಬಿಜೆಪಿ ದೇಶವ್ಯಾಪಿ ಅಭಿಯಾನ: ಇಂದು ಎಲ್ಲ ಸಿಎಂಗಳ ಸುದ್ದಿಗೋಷ್ಠಿ

ಕೇಂದ್ರ ಬಜೆಟ್‌ನಲ್ಲಿ ಘೋಷಿಸಿರುವ ಜನಪರ ಕ್ರಮಗಳ ಕುರಿತು ಜನರಿಗೆ ಅರಿವು ಮೂಡಿಸಲು ಬಿಜೆಪಿಯು 12 ದಿನಗಳ ಕಾಲ ರಾಷ್ಟ್ರವ್ಯಾಪಿ ಪ್ರಚಾರ ಅಭಿಯಾನ ನಡೆಸಲಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. 

12 days BJP Nationwide Campaign on Union Budget 2023 gvd
Author
First Published Feb 2, 2023, 6:03 AM IST

ನವದೆಹಲಿ (ಫೆ.02): ಕೇಂದ್ರ ಬಜೆಟ್‌ನಲ್ಲಿ ಘೋಷಿಸಿರುವ ಜನಪರ ಕ್ರಮಗಳ ಕುರಿತು ಜನರಿಗೆ ಅರಿವು ಮೂಡಿಸಲು ಬಿಜೆಪಿಯು 12 ದಿನಗಳ ಕಾಲ ರಾಷ್ಟ್ರವ್ಯಾಪಿ ಪ್ರಚಾರ ಅಭಿಯಾನ ನಡೆಸಲಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಪೂರ್ಣ ಬಜೆಟ್‌ ಇದಾಗಿದ್ದು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಜೆಟ್‌ಅನ್ನು ಪಕ್ಷದ ಪ್ರಚಾರದ ಅಸ್ತ್ರವನ್ನಾಗಿ ಬಳಸಲು ಬಿಜೆಪಿ ಮುಂದಾಗಿದೆ. ಈ ಹಿನ್ನೆಲೆ ಬುಧವಾರದಂದು ಅಭಿಯಾನ ಆರಂಭವಾಗಿದ್ದು ಫೆ.12 ರಂದು ಮುಕ್ತಾಯವಾಗಲಿದೆ. 

ಪ್ರಚಾರದ ಭಾಗವಾಗಿ ಬಿಜೆಪಿ ಆಡಳಿತವಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಗುರುವಾರದಂದು ಬಜೆಟ್‌ ಕುರಿತು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಪಕ್ಷದ ಹಿರಿಯ ನಾಯಕ ಸುಶೀಲ್‌ ಮೋದಿ ಅಭಿಯಾನದ ಸಂಯೋಜಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಅಲ್ಲದೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು 2023ರ ಕೇಂದ್ರ ಬಜೆಟ್‌ ಕುರಿತು ದೇಶದ ಎಲ್ಲ ಜಿಲ್ಲೆಗಳಲ್ಲಿ ಚರ್ಚೆ, ವಿಚಾರ ಸಂಕಿರಣಗಳು ಹಾಗೂ ಪತ್ರಿಕಾಗೋಷ್ಠಿಗಳನ್ನು ಆಯೋಜಿಸಲು ಪಕ್ಷದ ಪ್ರಧಾನ ಕಾರ್ಯದರ್ಶಿ ಸುನಿಲ್‌ ಬನ್ಸಾಲ್‌ ಹಾಗೂ ಇತರ ಘಟಕಗಳ ಮುಖ್ಯಸ್ಥರು ಸೇರಿದಂತೆ 9 ಜನರನ್ನೊಳಗೊಂಡ ಪಡೆಯನ್ನು ರಚಿಸಿದ್ದಾರೆ.

Union Budget 2023: ನವಭಾರತದ ಪಾಲಿಗೆ ದಾಖಲೆಯ ಬಜೆಟ್‌: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

ಇಂದು ಬಿಜೆಪಿ ಸಿಎಂಗಳ ಸುದ್ದಿಗೋಷ್ಠಿ: ಪ್ರಚಾರದ ಭಾಗವಾಗಿ ಬಿಜೆಪಿ ಆಡಳಿತವಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಗುರುವಾರದಂದು ಬಜೆಟ್‌ ಕುರಿತು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಬಿಜೆಪಿ ಆಡಳಿತವಿರದ ರಾಜ್ಯಗಳಲ್ಲಿ ಬಿಜೆಪಿ ಘಟಕಗಳ ಅಥವಾ ವಿರೋಧ ಪಕ್ಷದ ನಾಯಕರು ಈ ಕಾರ್ಯ ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ದೇಶದ 50 ಪ್ರಮುಖ ನಗರಗಳಲ್ಲಿ ಪ್ರಧಾನಿ ಮೋದಿ ಸರ್ಕಾರದ ವಿವಿಧ ಮಂತ್ರಿಗಳು ಬಜೆಟ್‌ನ ಜನಪರ ಕಾರ್ಯಕ್ರಮಗಳ ಪ್ರಚಾರದ ಭಾಗವಾಗಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

ಬಜೆಟ್‌ಗೆ ಸಿಂಗಾಪುರ, ಬ್ರಿಟನ್‌, ಯುಎಇ ಎನ್ನಾರೈಗಳ ಮೆಚ್ಚುಗೆ: ಭಾರತದ ಬಜೆಟ್‌ಗೆ ಕೇವಲ ಭಾರತವಲ್ಲದೇ ವಿದೇಶದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ. ಭಾರತದ ಬಜೆಟ್‌ಗೆ ವಿಶ್ವವೇ ಕಾದಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಅದರಂತೆ ಭಾರತದ ಬಜೆಟ್‌ಗೆ ಸಿಂಗಾಪುರ್‌, ಬ್ರಿಟನ್‌, ಯುಎಇಯಲ್ಲಿನ ಅನಿವಾಸಿ ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಸಿರು ಆರ್ಥಿಕತೆ, ಸ್ವಯಂ ಉದ್ಯಮ ಹಾಗೂ ಪರಿಸರ ಸ್ನೇಹಿ ಉಪಕ್ರಮದಂತಹ ಕಲ್ಪನೆಗಳ ಮೇಲೆ ಭಾರತ ಬೆಳಕು ಚೆಲ್ಲಿದೆ. ಮಧ್ಯಮ ಹಾಗೂ ಬಡವರ್ಗದ ಜನರಿಗೆ ಉಪಯುಕ್ತವಾಗಲಿದೆ. 

Budget 2023: ದೇಶದ ಭವಿಷ್ಯಕ್ಕೆ ಆದ್ಯತೆ ನೀಡಿರುವ ನಿರ್ಮಲ ಬಜೆಟ್‌: ವಿಜಯರಾಜೇಶ್‌

ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ ಹಾಗೂ ಸಿರಿಧಾನ್ಯಗಳನ್ನು ಜಗತ್ತಿನಲ್ಲಿ ಮರುಬಳಕೆಗೆ ಬರುವಂತೆ ಮಾಡುವ ದೊಡ್ಡ ಸಾಹಸಕ್ಕೆ ಭಾರತ ಕೈಹಾಕಿದೆ ಎಂದು ಯುಎಇ ಅನಿವಾಸಿ ಭಾರತೀಯರು ಅಭಿಪ್ರಾಯಪಟ್ಟಿದ್ದಾರೆ. ಎಲ್ಲ ವರ್ಗದ ಜನರಿಗೆ, ಉದ್ಯಮಗಳಿಗೆ ಉತ್ತೇಜನ ನೀಡುವ ಬಜೆಟ್‌ ಇದಾಗಿದೆ. ಬಂಡವಾಳ ಹಂಚಿಕೆಯು ದೇಶದ ಸುಸ್ಥಿರ ಅಭಿವೃದ್ಧಿಗೆ ಬೆನ್ನೆಲುಬಾಗಲಿದೆ ಎಂದು ಸಿಂಗಾಪುರದಲ್ಲಿರುವ ಭಾರತೀಯ ಮೂಲದ ಆರ್ಥಿಕ ತಜ್ಞರು ಬಜೆಟ್‌ ಅನ್ನು ಶ್ಲಾಘಿಸಿದ್ದಾರೆ. ಮಧ್ಯಮ ಹಾಗೂ ಬಡವರ್ಗ ಸೇರಿದಂತೆ ಉದ್ಯೋಗಿಗಳು, ಉದ್ಯಮ ಮಾಡುವವರಿಗೆ ಉತ್ತಮ ಅವಕಾಶವೊಂದನ್ನು ಭಾರತ ಒದಗಿಸುತ್ತಿದೆ ಎಂದು ಬ್ರಿಟನ್‌ ಅನಿವಾಸಿ ಭಾರತೀಯರು ಹೇಳಿದ್ದಾರೆ.

Follow Us:
Download App:
  • android
  • ios