Asianet Suvarna News Asianet Suvarna News

ಮತ್ತೆ ಭಾರತಕ್ಕೆ ಬಂದ 12 ಚೀತಾಗಳು: ದಕ್ಷಿಣ ಆಫ್ರಿಕಾದಿಂದ ಆಗಮಿಸಿದ ಅತಿಥಿಗಳು..!

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಮೀಬಿಯಾದಿಂದ 8 ಚೀತಾಗಳನ್ನು ಭಾರತಕ್ಕೆ ತರಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನದಂದು - ಅಂದರೆ ಸೆಪ್ಟೆಂಬರ್ 17 ರಂದು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಇವುಗಳನ್ನು ಬಿಡುಗಡೆ ಮಾಡಿದ್ದರು. 

12 cheetahs From south africa arrive in madhya pradesh ash
Author
First Published Feb 18, 2023, 1:21 PM IST

ಹೊಸದೆಹಲಿ /ಗ್ವಾಲಿಯರ್ (ಫೆಬ್ರವರಿ 18, 2023): ಭಾರತಕ್ಕೆ ಆಫ್ರಿಕಾದಿಂದ ಮತ್ತೆ 12 ಚೀತಾಗಳು ಇಂದು ಆಗಮಿಸಿವೆ. ನಮೀಬಿಯಾದಿಂದ 8 ಚೀತಾಗಳನ್ನು ಸಾಗಿಸಿದ 5 ತಿಂಗಳುಗಳ ನಂತರ  ದಕ್ಷಿಣ ಆಫ್ರಿಕಾದಿಂದ 12 ಚೀತಾಗಳು ಇಂದು ಮಧ್ಯ ಪ್ರದೇಶಕ್ಕೆ ಅಗಮಿಸಿವೆ. ಚೀತಾಳನ್ನು ಹೊತ್ತಿದ್ದ ವಾಯುಪಡೆಯ ವಿಮಾನವೊಂದು ಗ್ವಾಲಿಯರ್ ವಾಯುನೆಲೆಗೆ ಬೆಳಗ್ಗೆ 10 ಗಂಟೆಗೆ ಬಂದಿಳಿಯಿತು. ಬಳಿಕ ಆ ಚೀತಾಗಳನ್ನು ಹೆಲಿಕಾಪ್ಟರ್‌ಗಳ ಮೂಲಕ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಕರೆತರಲಾಗಿದೆ. 

ದಕ್ಷಿಣ ಆಫ್ರಿಕಾದ (South Africa) ಜೋಹಾನ್ಸ್‌ಬರ್ಗ್‌ನಿಂದ 10 ಗಂಟೆಗಳ ವಿಮಾನ ಹಾರಾಟದ ನಂತರ 12 ಚೀತಾಗಳ (Cheetahs) ಎರಡನೇ ಬ್ಯಾಚ್ ಅನ್ನು ಹೊತ್ತ IAF C-17 ವಿಮಾನವು (IAF C - 17 Flight) ಇಂದು ಬೆಳಗ್ಗೆ ಏರ್ ಫೋರ್ಸ್ ಸ್ಟೇಷನ್ ಗ್ವಾಲಿಯರ್‌ಗೆ (Gwalior) ಬಂದಿಳಿಯಿತು. ಬಳಿಕ  IAF ಹೆಲಿಕಾಪ್ಟರ್‌ಗಳಲ್ಲಿ (Helicopter)ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ (Kuno National Park) ತರಲಾಗಿದೆ ಎಂದು ತಿಳಿದುಬಂದಿದೆ. 

ಇದನ್ನು ಓದಿ: ನಾಳೆ ಭಾರತ ತಲುಪಲಿವೆ ಮತ್ತೆ 12 ಚೀತಾ: ಆಫ್ರಿಕಾದಿಂದ ವಿಶೇಷ ವಿಮಾನದಲ್ಲಿ ಆಗಮನ

12 ಚೀತಾಗಳ ಪೈಕಿ 7  ಗಂಡು ಮತ್ತು ಐದು ಹೆಣ್ಣು ಚೀತಾಗಳನ್ನು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ತಮ್ಮ ಕ್ವಾರಂಟೈನ್ ಆವರಣಗಳಿಗೆ ಬಿಡುಗಡೆ ಮಾಡುತ್ತಾರೆ. ಈ ಚೀತಾಗಳಿಗೆಂದೇ ಮೀಸಲು ಪ್ರದೇಶದಲ್ಲಿ 10 ಕ್ವಾರಂಟೈನ್ ಆವರಣಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ವನ್ಯಜೀವಿ ಕಾನೂನಿನ ಪ್ರಕಾರ, ದೇಶಕ್ಕೆ ಬಂದ ನಂತರ ಪ್ರಾಣಿಗಳನ್ನು 30 ದಿನಗಳವರೆಗೆ ಪ್ರತ್ಯೇಕವಾಗಿ ಇರಿಸಬೇಕಾಗುತ್ತದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಮೀಬಿಯಾದಿಂದ 8 ಚೀತಾಗಳನ್ನು ಭಾರತಕ್ಕೆ ತರಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನದಂದು - ಅಂದರೆ ಸೆಪ್ಟೆಂಬರ್ 17 ರಂದು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಇವುಗಳನ್ನು ಬಿಡುಗಡೆ ಮಾಡಿದ್ದರು. ಈ 8 ನಮೀಬಿಯಾದ ಚೀತಾಗಳು ಈಗ ಬೇಟೆಯಾಡುವ ಆವರಣದಲ್ಲಿವೆ. ಅಂದರೆ 6 ಚದರ ಕಿಮೀ-ಪ್ರದೇಶದಲ್ಲಿ ಅವು ಪರಸ್ಪರ ಸಂವಹನ ನಡೆಸುತ್ತವೆ - ಮತ್ತು ಶೀಘ್ರದಲ್ಲೇ ಅವುಗಳನ್ನು ಕಾಡಿಗೆ ಬಿಡಲಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಭಾರತದಲ್ಲಿ ನಮೀಬಿಯಾ ಚೀತಾಗಳಿಂದ ಮೊದಲ ಬೇಟೆ

ಕೇಂದ್ರ ಸರ್ಕಾರ 3 ವರ್ಷಗಳ ಹಿಂದೆ ಚೀತಾಗಳನ್ನು ಭಾರತಕ್ಕೆ ತರುವ ಯೋಜನೆ ಮಾಡಿತ್ತು. ಈಗ ನಮೀಬಿಯಾದ ಬಳಿಕ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಿಂದ ಒಂದು ಡಜನ್‌ ಚೀತಾಗಳು ಆಗಮಿಸಿವೆ. ಇದು ದೇಶದಲ್ಲಿ ಚೀತಾಗಳನ್ನು ಮರುಪರಿಚಯಿಸುವ ಗುರಿಯನ್ನು ಹೊಂದಿರುವ ವಿಶ್ವದ ಮೊದಲ ಖಂಡಾಂತರ ಸ್ಥಳಾಂತರ ಯೋಜನೆಯಾಗಿದೆ. ಭಾರತದಲ್ಲಿ 1947ರಲ್ಲಿ ಕೊನೆಯ ಚೀತಾ ಮೃತಪಟ್ಟಿತ್ತು ಮತ್ತು 1952 ರಲ್ಲಿ ದೇಶದಿಂದ ಈ ಪ್ರಭೇದವು ಅಳಿವಿನಂಚಿನಲ್ಲಿದೆ ಎಂದು ಘೋಷಿಸಲಾಯಿತು.

2020 ರಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ಈ ಕಾಡು ಪ್ರಾಣಿಗಳನ್ನು ಮರುಪರಿಚಯಿಸುವ ಪ್ರಯತ್ನಗಳು ವೇಗಗೊಂಡವು. ವಿಭಿನ್ನ ಉಪಜಾತಿಗಳಾದ ಆಫ್ರಿಕಾ ಚೀತಾಗಳನ್ನು ಪ್ರಾಯೋಗಿಕ ಆಧಾರದ ಮೇಲೆ "ಎಚ್ಚರಿಕೆಯಿಂದ ಆಯ್ಕೆ ಮಾಡಿದ ಸ್ಥಳದಲ್ಲಿ" ದೇಶಕ್ಕೆ ತರಬಹುದು ಎಂದು ದೇಶದ ಅತ್ಯುನ್ನತ ನ್ಯಾಯಾಲಯ ಅಭಿಪ್ರಾಯ ಪಟ್ಟಿತ್ತು.

ಇದನ್ನೂ ಓದಿ: ಕುನೋ ಉದ್ಯಾನಕ್ಕೆ ಹೊಂದಿಕೊಂಡ ಚೀತಾಗಳು: ವಿಡಿಯೋ ಟ್ವಿಟ್ ಮಾಡಿದ ಮೋದಿ

ಈ ಯೋಜನೆಯ ಪ್ರಕಾರ, ಹೊಸ ಚೀತಾ ಜನಸಂಖ್ಯೆಯನ್ನು ಸ್ಥಾಪಿಸಲು ಸೂಕ್ತವಾದ ಸುಮಾರು 12-14 ಪ್ರಾಣಿಗಳನ್ನು ದಕ್ಷಿಣ ಆಫ್ರಿಕಾ, ನಮೀಬಿಯಾ ಮತ್ತು ಇತರ ಆಫ್ರಿಕಾದ ದೇಶಗಳಿಂದ ಐದು ವರ್ಷಗಳವರೆಗೆ ಆರಂಭದಲ್ಲಿ ಆಮದು ಮಾಡಿಕೊಳ್ಳಲಾಗುತ್ತದೆ ಮತ್ತು ನಂತರ ಅಗತ್ಯವಿದ್ದರೆ ಮತ್ತಷ್ಟು ಚೀತಾಗಳನ್ನು ದೇಶಕ್ಕೆ ತರಲಾಗುತ್ತದೆ. 

Follow Us:
Download App:
  • android
  • ios