ಭಾರತದಲ್ಲಿ ನಮೀಬಿಯಾ ಚೀತಾಗಳಿಂದ ಮೊದಲ ಬೇಟೆ
3 ತಿಂಗಳ ಹಿಂದೆ ನಮೀಬಿಯಾದಿಂದ ಭಾರತಕ್ಕೆ ತರಲಾಗಿದ್ದ ಚೀತಾಗಳು ಭಾರತದಲ್ಲಿ ತಮ್ಮ ಮೊದಲ ಬೇಟೆಯಾಡಿವೆ.
ಶಿಯೋಪುರ್: 3 ತಿಂಗಳ ಹಿಂದೆ ನಮೀಬಿಯಾದಿಂದ ಭಾರತಕ್ಕೆ ತರಲಾಗಿದ್ದ ಚೀತಾಗಳು ಭಾರತದಲ್ಲಿ ತಮ್ಮ ಮೊದಲ ಬೇಟೆಯಾಡಿವೆ. ಇದರೊಂದಿಗೆ ನಮೀಬಿಯಾ ಚೀತಾಗಳು ಭಾರತದಲ್ಲಿ ಬೇಟೆಯಾಡುವ ಕುರಿತು ಅಧಿಕಾರಿಗಳಿಗೆ ಇದ್ದ ಅನುಮಾನಗಳು ದೂರವಾಗಿವೆ. ನಮೀಬಿಯಾದಿಂದ ತರಲಾಗಿದ್ದ 8 ಚೀತಾಗಳ ಪೈಕಿ ಫ್ರೆಡ್ಡಿ ಮತ್ತು ಆಲ್ಟನ್ ಎಂಬ ಎರಡು ಗಂಡು ಚೀತಾಗಳನ್ನು ಕ್ವಾರಂಟೈನ್ ಪ್ರದೇಶದಿಂದ 98 ಹೆಕ್ಟೇರ್‌ನಷ್ಟು ವಿಸ್ತಾರವಾದ ಅರಣ್ಯ ಪ್ರದೇಶಕ್ಕೆ ಶನಿವಾರ ಬಿಡುಗಡೆ ಮಾಡಲಾಗಿತ್ತು. ಹೀಗೆ ಬಿಡುಗಡೆ ಮಾಡಲಾದ 24 ಗಂಟೆಗಳ ಒಳಗಾಗಿ ಚೀತಾಗಳು ಚುಕ್ಕೆ ಜಿಂಕೆಯೊಂದನ್ನು ಬೇಟೆಯಾಡಿವೆ. ‘ಭಾನುವಾರ ರಾತ್ರಿ ಇಲ್ಲವೇ ಸೋಮವಾರ ಬೆಳಗ್ಗೆ ಚೀತಾಗಳು ಈ ಬೇಟೆಯಾಡಿವೆ. ಬೇಟೆಯಾಡಿದ 2 ಗಂಟೆಯೊಳಗೆ ಅದನ್ನು ಸೇವಿಸಿವೆ’ ಎಂದು ಹಿರಿಯ ಅರಣ್ಯಾಧಿಕಾರಿ ಉತ್ತಮ್ ಕುಮಾರ್ ತಿಳಿಸಿದ್ದಾರೆ.
ಉಳಿದ 6 ಚೀತಾಗಳನ್ನೂ (Cheetah) ಹಂತಹಂತವಾಗಿ ವಿಸ್ತಾರವಾದ ಅರಣ್ಯ ಪ್ರದೇಶಕ್ಕೆ ಹಂತಹಂತವಾಗಿ ಬಿಡುಗಡೆ ಮಾಡಲಾಗುತ್ತದೆ. ಅಲ್ಲಿನ ವಾತಾವರಣಕ್ಕೆ ಅವು ಪೂರ್ಣ ಹೊಂದಿಕೊಂಡ ನಂತರ ಅವುಗಳನ್ನು ಮುಕ್ತವಾದ ಅರಣ್ಯ ಪ್ರದೇಶಕ್ಕೆ (Forest) ಬಿಡಲು ನಿರ್ಧರಿಸಲಾಗಿದೆ. 1947ರಲ್ಲಿ ಭಾರತದಲ್ಲಿ (India) ಕಡೆಯ ಚೀತಾ ನಶಿಸಿತ್ತು. 1952ರಲ್ಲಿ ಚೀತಾ ಸಂತತಿ ಭಾರತದಲ್ಲಿ ಅವಸಾನಗೊಂಡಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿತ್ತು.
ಕುನೋ ಉದ್ಯಾನಕ್ಕೆ ಹೊಂದಿಕೊಂಡ ಚೀತಾಗಳು: ವಿಡಿಯೋ ಟ್ವಿಟ್ ಮಾಡಿದ ಮೋದಿ
ನಮೀಬಿಯಾದಿಂದ ತಂದಿದ್ದ ಚೀತಾ ‘ಆಶಾ’ಗೆ ಗರ್ಭಪಾತ