ಕಳೆದ ನಾಲ್ಕು ವರ್ಷದಲ್ಲಿ ಬರೋಬ್ಬರಿ 111 ಸಂಸದರು ಹಾೂ ಶಾಸಕರು ಪಕ್ಷ ಬದಲಿಸಿದ್ದಾರೆ. ಅತೀ ಹೆಚ್ಚು ಹಾಲಿ ಸಂಸದರು, ಶಾಸಕರು ಸೇರಿಕೊಂಡ ಪಕ್ಷದ ಪೈಕಿ ಬಿಜೆಪಿ 2ನೇ ಸ್ಥಾನದಲ್ಲಿದ್ದರೆ, ಮೊದಲ ಸ್ಥಾನದಲ್ಲಿರುವ ಪಕ್ಷ ಯಾವುದು?
ನವದೆಹಲಿ (ಸೆ.27) ಚುನಾವಣೆ ಸಮೀಪಿಸುತ್ತಿದ್ದಂತೆ ಟಿಕೆಟ್ ಸಿಗದೆ ಪಕ್ಷ ಬದಲಾಯಿಸುವುದು, ಗೆದ್ದ ಬಳಿಕ ಸಚಿವ ಸ್ಥಾನ ಸಿಗದೆ ಪಕ್ಷ ಬದಲಾಯಿಸುವುದು ಹೊಸದೇನಲ್ಲ. ಆದರೆ ಕಳೆದ ನಾಲ್ಕು ವರ್ಷದ ಅಂಕಿ ಅಂಶ ಭಾರತೀಯ ರಾಜಕೀಯ ಇತಿಹಾಸದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ. 2022ರಿಂದ 2026ರ ವರೆಗಿನ ಅವಧಿಯಲ್ಲಿ ಬರೋಬ್ಬರಿ 111 ಸಂಸದರು ಹಾಗೂ ಶಾಸಕರು ಪಕ್ಷ ಬದಲಾಯಿಸಿದ್ದಾರೆ. ಈ ಕುರಿತು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ನ್ಯಾಶನಲ್ ಎಲೆಕ್ಷನ್ ವಾಚ್ ವರದಿಯೊಂದು ಬಿಡುಗಡೆ ಮಾಡಿದ್ದು ಹಲವು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದೆ.
ಅತೀ ಹೆಚ್ಚು ನಾಯಕರು ಸೇರಿಕೊಂಡ ಪಕ್ಷ ಯಾವುದು?
ಅತೀ ಹೆಚ್ಚು ನಾಯಕರು ಪಕ್ಷ ತೊರೆದು ಸೇರಿಕೊಂಡು ಮತ್ತೊಂದು ಪಕ್ಷ ಯಾವುದು? ಇತ್ತೀಚೆಗೆ ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳ ಪ್ರಮುಖ ನಾಯಕರು ಬಿಜೆಪಿ ಸೇರಿಕೊಂಡಿದ್ದಾರೆ. ಆದರೆ ಅತೀ ಹೆಚ್ಚು ಹಾಲಿ ಸಂಸದರು, ಶಾಸಕರು ಸೇರಿಕೊಂಡ ಪಕ್ಷಗಳ ಪೈಕಿ ಬಿಜೆಪಿಗೆ 2ನೇ ಸ್ಥಾನ. ಮೊದಲ ಸ್ಥಾನ ನಾಗಾ ಪೀಪಲ್ಸ್ ಫ್ರಂಟ್ ಮೊದಲ ಸ್ಥಾನದಲ್ಲಿದೆ. ನಾಗಾ ಪೀಪಲ್ಸ್ ಫ್ರಂಟ್ ಪಕ್ಷಕ್ಕೆ 32 ಸಂಸದರು ಹಾಗೂ ಶಾಸಕರು ಸೇರಿಕೊಂಡಿದ್ದಾರೆ. ಪಕ್ಷಾಂತರಿಗಳ ಪೈಕಿ ಶೇಕಡಾ 29ರಷ್ಟು ಮಂದಿ ನಾಗಾ ಪೀಪಲ್ಸ್ ಫ್ರಂಟ್ ಪಕ್ಷ ಸೇರಿಕೊಂಡಿದ್ದಾರೆ.
2ನೇ ಸ್ಥಾನದಲ್ಲಿರುವ ಬಿಜೆಪಿ ಸೇರಿಕೊಂಡ ಸಂಸದರು, ಶಾಸಕರೆಷ್ಟು?
ಕಳೆದ ಕೆಲ ವರ್ಷಗಳಲ್ಲಿ ಬಿಜೆಪಿಗೆ ರಾಘವ್ ಚಡ್ಡ ಸೇರಿದಂತೆ ಹಲವು ಪ್ರಮುಖ ನಾಯಕರು ಸೇರಿಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ 29 ಹಾಲಿ ಸಂಸದರು, ಶಾಸಕರು ಸೇರಿಕೊಂಡಿದ್ದಾರೆ. ಈ ಮೂಲಕ 2ನೇ ಸ್ಥಾನದಲ್ಲಿದ್ದಾರೆ. ಶೇಕಡಾ 26ರಷ್ಟು ನಾಯಕರು ಬಿಜೆಪಿಗೆ ಪಕ್ಷಾಂತರಗೊಂಡಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ 20 ಹಾಲಿ ಸಂಸದರು ಹಾಗೂ ಶಾಸಕರು ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ ಸೇರಿಕೊಂಡಿದ್ದಾರೆ.
ಬಿಜೆಪಿ ಸೇರಿಕೊಂಡ 29 ನಾಯಕರ ಪೈಕಿ ರಾಜ್ಯಸಭಾ ಎಂಪಿ, ಶಾಸಕರಿದ್ದಾರೆ. ಆದರೆ ಹಾಲಿ ಲೋಕಸಭಾ ಸಂಸದರಿಲ್ಲ ಎಂದು ವರದಿ ಹೇಳಿದೆ. ರಾಜ್ಯಸಭಾ ಸಂಸದರ ಪೈಕಿ ಆಮ್ ಆದ್ಮಿಯಿಂದ ಆರಿಸಿಬಂದ 7 ಮಂದಿ ಬಿಜೆಪಿ ಸೇರಿದ್ದಾರೆ. ರಾಘವ್ ಚಡ್ಡಾ, ಸ್ವಾತಿ ಮಲಿವಾಲ್, ಅಶೋಕ್ ಮಿತ್ತಲ್, ಹರ್ಭಜನ್ ಸಿಂಗ್, ಸಂದೀಪ್ ಕುಮಾರ್ ಪಾಠಕ್, ವಿಕ್ರಮಜಿತ್ ಸಿಂಗ್ ಸಹನೆ ಹಾಗೂ ರಾಜೀಂದರ್ ಗುಪ್ತ. ಶಾಸಕರ ಪೈಕಿ 8 ಶಾಸಕರು ಗೋವಾ ಕಾಂಗ್ರೆಸ್‌ನಿಂದ ಬಿಜೆಪಿ ಸೇರಿಕೊಂಡಿದ್ದಾರೆ. ಗುಜರಾತ್ ಕಾಂಗ್ರೆಸ್‌ನಿಂದ ಇಬ್ಬರು, ಹಿಮಾಚಲ ಪ್ರದೇಶ ಕಾಂಗ್ರೆಸ್‌ನಿಂದ ಇಬ್ಬರು ಬಿಜೆಪಿ ಸೇರಿಕೊಂಡಿದ್ದಾರೆ. ಮಣಿಪುಪದ 5 ಜೆಡಿಯು ಶಾಸಕರು ಬಿಜೆಪಿ ಸೇರಿಕೊಂಡಿದ್ದಾರೆ ಎಂದು ವರದಿ ಹೇಳಿದೆ. ಕರ್ನಾಟಕದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜನಾರ್ಧನ ರೆಡ್ಡಿ ಬಿಜೆಪಿ ಸೇರಿಕೊಂಡಿದ್ದಾರೆ.


