ಗಡಿಯಲ್ಲಿ ಮತ್ತೆ ಚೀನಾ ತಂಟೆ: ಲಡಾಖ್‌ ಬಳಿ ಬಂಕರ್‌ ನಿರ್ಮಾಣ!

ಗಡಿಯಲ್ಲಿ ಮತ್ತೆ ಚೀನಾ ತಂಟೆ: ಲಡಾಖ್‌ ಬಳಿ ಬಂಕರ್‌ ನಿರ್ಮಾಣ| ವಿವಾದಿತ 110 ಕಿ.ಮೀ. ವ್ಯಾಪ್ತಿಯಲ್ಲಿ ಅಧಿಪತ್ಯಕ್ಕೆ ಯತ್ನ| ಗಾಲ್ವಾನ್‌ ಕಣಿವೆ: 100 ಟೆಂಟಲ್ಲಿ ಬೀಡುಬಿಟ್ಟಚೀನೀ ಸೈನಿಕರು| ಲಡಾಖ್‌ನ ಗಾಲ್ವಾನ್‌ ಕಣಿವೆ, ಪ್ಯಾಂಗ್ಯಾಂಗ್‌ ಸರೋವರ ನಡುವೆ 110 ಕಿ.ಮೀ. ಅಂತರ| ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಸುತ್ತಮುತ್ತಲೂ ಇದೆ ಈ ವಿವಾದಿತ ಪ್ರದೇಶ| ಇದರ ಮೇಲೆ ಹಕ್ಕು ಸ್ಥಾಪಿಸಿ ಭೂಕಬಳಿಕೆಗೆ ಚೀನಾ ಯತ್ನ. ಭಾರತದಿಂದ ತೀವ್ರ ಪ್ರತಿರೋಧ| ಭಾರತದಿಂದಲೂ ಯೋಧರ ರವಾನೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ದೋವಲ್‌ ನಿಗಾ

100 tents machinery for bunkers: China bolsters its presence in Ladakh India maintains aggressive posturing

ನವದೆಹಲಿ(ಮೇ.25): ಲಡಾಖ್‌ನಲ್ಲಿನ ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ಭಾರತ ಮತ್ತು ಚೀನಾ ಯೋಧರ ನಡುವೆ ಕೆಲ ದಿನಗಳಿಂದ ನಡೆಯುತ್ತಿರುವ ಮುಸುಕಿನ ಗುದ್ದಾಟ ಮತ್ತಷ್ಟುತೀವ್ರವಾಗುವ ಎಲ್ಲಾ ಲಕ್ಷಣಗಳು ಕಂಡುಬಂದಿವೆ. ಲಡಾಖ್‌ನ ಪ್ಯಾಂಗ್ಯಾಂಗ್‌ ಸರೋವರ ಮತ್ತು ಗಾಲ್ವಾನ್‌ ಪ್ರದೇಶದಲ್ಲಿನ ವಿವಾದಿತ ಸ್ಥಳದ ಮೇಲಿನ ತನ್ನ ಹಕ್ಕನ್ನು ಪ್ರತಿಪಾದಿಸಲು ಇನ್ನಿಲ್ಲದ ಯತ್ನ ಮುಂದುವರೆಸಿರುವ ಚೀನಾ, ಇದೀಗ ಅಲ್ಲಿ ಬಂಕರ್‌ಗಳನ್ನು ನಿರ್ಮಿಸುತ್ತಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಗಾಲ್ವಾನ್‌ ಮತ್ತು ಪ್ಯಾಂಗ್ಯಾಂಗ್‌ ಪರಸ್ಪರ 110 ಕಿ.ಮೀ ಅಂತರದ ಪ್ರದೇಶಗಳಾಗಿವೆ. ಭಾರತಕ್ಕೆ ಸೇರಿದ ಈ ಜಾಗದ ಮೇಲೆ ತನ್ನ ಹಕ್ಕನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಮತ್ತು ಅಲ್ಲಿ ಭಾರತೀಯ ಯೋಧರ ಪಹರೆ ತಡೆಯುವ ನಿಟ್ಟಿನಲ್ಲಿ ಚೀನಾ ಯೋಧರು ಬಂಕರ್‌ ನಿರ್ಮಿಸುತ್ತಿದ್ದಾರೆ ಎನ್ನಲಾಗಿದೆ.

ಭಾರತೀಯ ಯೋಧರ ವಶಕ್ಕೆ ಪಡೆದು ಬಿಟ್ಟ ಚೀನಾ ಯೋಧರು!

ಕಳೆದ ಎರಡು ವಾರದಿಂದ ಗಾಲ್ವಾನ್‌ ಕಣಿವೆ ಪ್ರದೇಶ ಮತ್ತು ಪ್ಯಾಂಗ್ಯಾಂಗ್‌ ಸರೋವರ ಪ್ರದೇಶದಲ್ಲಿ ಚೀನಾ ಭಾರೀ ಪ್ರಮಾಣದಲ್ಲಿ ಸೇನಾ ವಾಹನಗಳ ಜಮಾವಣೆ ಮಾಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯೋಧರನ್ನೂ ಕೂಡಾ ನಿಯೋಜಿಸಿದೆ. ಈ ಪ್ರದೇಶದಲ್ಲಿ 100ಕ್ಕೂ ಹೆಚ್ಚು ಟೆಂಟ್‌ಗಳನ್ನು ಹಾಕಲಾಗಿದೆ. ಈ ಮಾಹಿತಿಗಳು ಉಪಗ್ರಹ ಚಿತ್ರದ ಮೂಲಕ ಖಚಿತಗೊಂಡಿದೆ. ಅಲ್ಲದೆ ಪ್ಯಾಂಗ್ಯಾಂಗ್‌ ಸರೋವರದಲ್ಲಿ ಹೆಚ್ಚುವರಿ ಬೋಟ್‌ಗಳನ್ನು ನಿಯೋಜಿಸುವ ಮೂಲಕ ಭಾರತಕ್ಕೆ ಎಚ್ಚರಿಕೆ ಸಂದೇಶ ರವಾನಿಸುವ ಯತ್ನ ಮಾಡಿದೆ. ಇದಕ್ಕೆ ಪ್ರತಿಯಾಗಿ ಭಾರತ ಕೂಡಾ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯೋಧರನ್ನು ರವಾನಿಸುವ ಮೂಲಕ ತನ್ನ ವಶದಲ್ಲಿರುವ ಪ್ರದೇಶಗಳು ಚೀನಾ ಕೈವಶವಾಗದಂತೆ ನೋಡಿಕೊಳ್ಳುವ ಯತ್ನ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಒಂದು ವೇಳೆ ಎರಡೂ ದೇಶಗಳ ನಡುವೆ ಈ ಮುಸುಕಿನ ಸಮರ ತೀವ್ರಗೊಂಡಿದ್ದೇ ಆದಲ್ಲಿ ಅದು 2017ರಲ್ಲಿ ಡೋಕ್ಲಾಂನಲ್ಲಿ 73 ದಿನಗಳ ಕಾಲ ನಡೆದ ಸಂಘರ್ಷ ರೀತಿಯಲ್ಲೇ ಮತ್ತೊಂದು ಘಟನೆಗೆ ಸಾಕ್ಷಿಯಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಎರಡು ವಾರಗಳ ಹಿಂದಷ್ಟೇ ಲಡಾಖ್‌ ಮತ್ತು ಸಿಕ್ಕಿಂನ ಗಡಿಭಾಗದಲ್ಲಿ ಭಾರತ ಮತ್ತು ಚೀನಾ ಯೋಧರು ಪರಸ್ಪರ ಕೈಮಿಲಾಯಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಭಾರತೀಯ ಸೇನಾ ಮುಖ್ಯಸ್ಥ ಜ.ಮನೋಜ್‌ ಮುಕುಂದ್‌ ನರವಣೆ ಅವರು ಶನಿವಾರ ಲಡಾಖ್‌ಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದರು. ಮತ್ತೊಂದೆಡೆ ಇಡೀ ಬೆಳವಣಿಗೆ ಮೇಲೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರು ಕಣ್ಣಿಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಾಜಾ ಮಾಹಿತಿ ರವಾನಿಸುತ್ತಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

Latest Videos
Follow Us:
Download App:
  • android
  • ios