ಭಾರತೀಯ ಯೋಧರ ವಶಕ್ಕೆ ಪಡೆದು ಬಿಟ್ಟ ಚೀನಾ ಯೋಧರು!
ಪ್ಯಾಂಗ್ಯಾಂಗ್ ಸರೋವರದ ಬಳಿ ಹಲವು ದಿನಗಳಿಂದ ಬೀಡು ಬಿಟ್ಟಿರುವ ಚೀನಾ ಸೇನೆ| ಲಡಾಖ್‌ನಲ್ಲಿ ಭಾರತೀಯ ಯೋಧರ ವಶಕ್ಕೆ ಪಡೆದು ಬಿಟ್ಟ ಚೀನಾ ಯೋಧರು| ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡು ಬಳಿಕ ಮರಳಿದ್ದಾರೆ
ನವದೆಹಲಿ(ಮೇ.24):: ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ಯೋಧರ ನಡುವಿನ ಮುಸುಕಿನ ಗುದ್ದಾಟ ಮತ್ತಷ್ಟುತೀವ್ರಗೊಂಡಿದ್ದು, ಕಳೆದ ವಾರ ಕೆಲ ಭಾರತೀಯ ಯೋಧರನ್ನು ಚೀನಾ ಸೇನೆ ಹಲವು ಗಂಟೆಗಳ ಕಾಲ ತನ್ನ ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಚೀನಾದ ಗಡಿ ಖ್ಯಾತೆ, ಲಡಾಕ್ ಬೇಟಿ ನೀಡಿ ಪರಿಶೀಲಿಸಿದ ಭಾರತೀಯ ಸೇನಾ ಮುಖ್ಯಸ್ಥ!
ಲಡಾಖ್‌ನ ಪ್ಯಾಂಗ್ಯಾಂಗ್ ಸರೋವರದ ಬಳಿ ಹಲವು ದಿನಗಳಿಂದ ಬೀಡು ಬಿಟ್ಟಿರುವ ಚೀನಾ ಸೇನೆ, ಕಳೆದ ಬುಧವಾರ ಭಾರತದ ಜಲಗಡಿಯನ್ನು ಪ್ರವೇಶಿಸಿದ್ದೂ ಅಲ್ಲದೆ, ಹಲವು ಗಂಟೆಗಳ ಕಾಲ ಭಾರತದ ನೆಲದಲ್ಲಿ ಓಡಾಟ ನಡೆಸಿದೆ. ಈ ವೇಳೆ ಭಾರತೀಯ ಯೋಧರು ಆಕ್ಷೇಪ ವ್ಯಕ್ತಪಡಿಸಿದಾಗ ಹೆಚ್ಚಿನ ಸಂಖ್ಯೆಯಲ್ಲಿದ್ದ ಚೀನಾ ಯೋಧರು ಭಾರತೀಯ ಸೇನೆಯ ಗಡಿಪಹರೆ ಪಡೆ ಮತ್ತು ಐಟಿಬಿಪಿಯ ಕೆಲ ಯೋಧರನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡು ಬಳಿಕ ಮರಳಿದ್ದಾರೆ.
ಈ ವಿಷಯ ಕೈಮೀರುವ ಹಂತಕ್ಕೆ ತಲುಪುತ್ತಲೇ ಉಭಯ ದೇಶಗಳ ಕಮಾಂಡರ್‌ಗಳು ಮಾತುಕತೆ ನಡೆಸಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಬಳಿಕ ಭಾರತೀಯ ಯೋಧರನ್ನು ಬಿಡುಗಡೆ ಮಾಡಲಾಯ್ತು ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟೀವಿ ವರದಿ ಮಾಡಿದೆ.