10 ವರ್ಷದ ಬಾಲಕಿಯೊಬ್ಬಳು ಬೆಂಕಿಗೆ ಹಾರಿ ತನ್ನ ಚಿಕ್ಕ ತಮ್ಮಂದಿರನ್ನು ರಕ್ಷಿಸಿದಳು. 3 ತಿಂಗಳಿಂದ 6 ವರ್ಷದವರೆಗಿನ ಮಕ್ಕಳನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬಂದಿದ್ದಾಳೆ.
ಜೈಪುರ: ರಾಜಸ್ಥಾನದ ಜೈಪುರ ಜಿಲ್ಲೆಯ ಫಾಗಿ ಉಪವಿಭಾಗದ ನಿಮೇಡಾ ಗ್ರಾಮದಲ್ಲಿ ಶನಿವಾರ 10 ವರ್ಷದ ಮುಗ್ಧ ಬಾಲಕಿಯೊಬ್ಬಳು ತನ್ನ ಪ್ರಾಣದ ಬಗ್ಗೆ ಲೆಕ್ಕಿಸದೆ ಬೆಂಕಿಯ ಕೆನ್ನಾಲಿಗೆಗೆ ಹಾರಿ ಮೂರು ತಿಂಗಳಿಂದ 6 ವರ್ಷದವರೆಗೆ ಚಿಕ್ಕ ತಮ್ಮಂದಿರನ್ನು ರಕ್ಷಿಸಿದ್ದಾಳೆ. ಬಾಲಕಿಯ ಧೈರ್ಯವನ್ನು ಕಂಡು ಗ್ರಾಮಸ್ಥರು ಮೂಕವಿಸ್ಮಿತರಾಗಿದ್ದಾರೆ. ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಮಾನ್ಸಿ ನದಿ ದಡದಲ್ಲಿರುವ ಬಂಜಾರಾ ಬಸ್ತಿಯಲ್ಲಿ ಇದ್ದಕ್ಕಿದ್ದಂತೆ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆ ಸಮಯದಲ್ಲಿ ಮನೆಯಲ್ಲಿ ಕೇವಲ ಮಕ್ಕಳಿದ್ದರು.
ಮನೆಯ ಪುರುಷ ಸದಸ್ಯರು ಕೂಲಿ ಕೆಲಸಕ್ಕೆ ಹೋಗಿದ್ರೆ, ಮಹಿಳೆಯರು ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು. ಆರನೇ ತರಗತಿಯಲ್ಲಿ ಓದುತ್ತಿದ್ದ ಸರಿಪನಾ ಮನೆಯಲ್ಲಿ ತನ್ನ ಆರು ಚಿಕ್ಕ ತಮ್ಮಂದಿರನ್ನು ನೋಡಿಕೊಳ್ಳುತ್ತಿದ್ದಳು. ಆಗ ಆಕೆಯ ತಂಗಿ ಕೋಮಲ್ ಮನೆಯಲ್ಲಿ ಬೆಂಕಿ ತಗುಲಿದೆ ಎಂದು ಹೇಳಿದ್ದಾಳೆ.
ಉರಿಯುತ್ತಿರುವ ಗುಡಿಸಲು ಮತ್ತು ಪುಟ್ಟ ಜೀವಿಯ ಜಾಣತನ ಸರಿಪನಾ ಮೊದಲು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾಳೆ. ಆದರೆ ಬೆಂಕಿಯ ಕೆನ್ನಾಲಿಗೆ ಹೆಚ್ಚಾದಾಗ, ತಡಮಾಡದೆ ಮೊದಲು ಮಂಚದ ಮೇಲೆ ಮಲಗಿದ್ದ 18 ತಿಂಗಳ ಹರ್ಷಿತ್ ಮತ್ತು ಮೂರು ತಿಂಗಳ ರಾಮಧಣಿಯನ್ನು ಎತ್ತಿಕೊಂಡು ಹೊರಗೆ ಕರೆದುಕೊಂಡು ಬಂದಿದ್ದಾಳೆ. ನಂತರ ಮತ್ತೆ ಉರಿಯುತ್ತಿದ್ದ ಮನೆಗೆ ನುಗ್ಗಿ ಏಳು ವರ್ಷದ ಕೋಮಲ್, ಆರು ವರ್ಷದ ಶೀತಲ್, ನಾಲ್ಕು ವರ್ಷದ ನೀತು ಮತ್ತು ಮೂರು ವರ್ಷದ ರಿತಿಕಾಳನ್ನು ಸುರಕ್ಷಿತವಾಗಿ ಹೊರಗೆ ಕರೆತಂದಳು. ಈ ವೇಳೆ ಆಕೆಯ ಕೂದಲು ಮತ್ತು ಅಂಗೈ ಸುಟ್ಟುಹೋದರೂ ಸರಿಪನಾ ಮಾತ್ರ ಧೈರ್ಯಗೆಡಲಿಲ್ಲ.
ಗುಡಿಸಲುಗಳು ಸುಟ್ಟು ಕರಕಲು, ಜಾನುವಾರುಗಳು ಸಜೀವ ದಹನ
ಎಲ್ಲರನ್ನು ರಕ್ಷಣೆ ಮಾಡಿದ ಬಳಿಕ ಸಹಾಯಕ್ಕಾಗಿ ಸರಿಪನಾ ಕೂಗಿದ್ದಾಳೆ. ಸರಿಪನಾ ಧ್ವನಿ ಕೇಳಿ ದೌಡಾಯಿಸಿದ ಗ್ರಾಮಸ್ಥರು, ಗುಡಿಸಲುಗಳಿಗೆ ಬೆಂಕಿ ಹತ್ತಿಕೊಂಡಿರೋದನ್ನು ಕಂಡಿದ್ದಾರೆ. ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ ಗ್ರಾಮಸ್ಥರಿಗೂ ಏನು ಮಾಡಲು ಸಾಧ್ಯವಾಗಿರಲಿಲ್ಲ. ಬೆಂಕಿ ತೀವ್ರವಾಗಿದ್ದರಿಂದ ಮೂರು ಗುಡಿಸಲುಗಳು ಸುಟ್ಟು ಕರಕಲಾಗಿವೆ. ಕೆಲವು ಜಾನುವಾರುಗಳು ಸಜೀವವಾಗಿ ಸುಟ್ಟುಹೋಗಿವೆ.
ಇದನ್ನೂ ಓದಿ: ಕುಂಭಮೇಳ ನಾವಿಕನ ಕ್ರಿಮಿನಲ್ ಹಿನ್ನೆಲೆ ಕಂಡು ಬೆಚ್ಚಿದ ಜನರು; 30 ಕೋಟಿ ಗಳಿಕೆ ರಹಸ್ಯ!
ಜಾನುವಾರುಗಳನ್ನು ಸಹ ರಕ್ಷಿಸಲು ಸರಿಪನಾ ಮುಂದಾಗಿದ್ದಳು,. ಆದ್ರೆ ಗ್ರಾಮಸ್ಥರು ಸರಿಪನಾಳನ್ನು ತಡೆದಿದ್ದಾರೆ. ಘಟನೆ ನಡೆದ ಕೂಗಳತೆಯಲ್ಲಿದ್ದ ಶಾಲೆಯ ಶಿಕ್ಷಕ ಅವಧೇಶ್ ಶರ್ಮಾ ಎಂಬವರು ನೀರಿನ ಟ್ಯಾಂಕರ್ ತರಿಸಿ ಬೆಂಕಿ ನಂದಿಸುವಲ್ಲಿ ಸಹಾಯ ಮಾಡಿದ್ದಾರೆ. ಸ್ವಲ್ಪ ಸಮಯದ ನಂತರ ಗ್ರಾಮದ ಮುಖ್ಯಸ್ಥರು ಮತ್ತು ಪಟವಾರಿ ಕೂಡ ಆಗಮಿಸಿ ಸಂತ್ರಸ್ತ ಕುಟುಂಬಕ್ಕೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಇದೀಗ ಈ ಪುಟ್ಟ ಬಾಲಕಿಯ ಧೈರ್ಯ ಇಡೀ ಗ್ರಾಮದಲ್ಲಿ ಚರ್ಚೆಯ ವಿಷಯವಾಗಿದೆ. ನಿಜವಾದ ಧೈರ್ಯಕ್ಕೆ ವಯಸ್ಸಿನ ಹಂಗಿಲ್ಲ ಎಂದು ಆಕೆಯ ಧೈರ್ಯ ಸಾಬೀತುಪಡಿಸಿದೆ.
ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಿಂದ ಬೀಳುತ್ತಿದ್ದ ಮಹಿಳೆಯನ್ನು ರಕ್ಷಿಸಿದ ರೈಲ್ವೆ ಪೊಲೀಸ್: ವೈರಲ್ ವೀಡಿಯೋ
