ತನ್ನ ಟ್ರೋಲ್ ಮಾಡ್ತಿದ್ದ ಯೂಟ್ಯೂಬರ್‌ಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಿದ 10 ವರ್ಷದ ಬಾಲಕ ಅಭಿನವ್
10 ವರ್ಷದ ಆಧ್ಯಾತ್ಮಿಕ ಪ್ರವಚಕ ಅಭಿನವ್ ಅರೋರಾ ತಮ್ಮನ್ನು ಟ್ರೋಲ್ ಮಾಡುತ್ತಿದ್ದ ಯೂಟ್ಯೂಬರ್‌ಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಕೃಷ್ಣ ಭಕ್ತ 10 ವರ್ಷ ಪ್ರಾಯದ ಆಧ್ಮಾತ್ಮಿಕ ಪ್ರವಚಕ ಅಭಿನವ್ ಅರೋರಾ ಅವರು ತಮ್ಮನ್ನು ಸಾಮಾಜಿಕ ಜಾಲತಾಣದಲ್ಲಿ ನಿರಂತರ ಟ್ರೋಲ್ ಮಾಡ್ತಿರುವ ಯೂಟ್ಯೂಬರ್‌ಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. 10 ವರ್ಷದ ಬಾಲಕ ಅಭಿನವ್ ಆರೋರಾ ಅವರು ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿದ್ದಾರೆ. ದೇವರನ್ನು ಅವರು ಆರಾಧಿಸುವ ರೀತಿಗೆ ದೇವರ ಬಗ್ಗೆ ಅವರಾಡುವ ಮಾತುಗಳ ಕಾರಣಕ್ಕೆ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಗಣೇಶ ವಿಸರ್ಜನೆ ವೇಳೆ ತಾವು ಆರಾಧಿಸಿದ ಗಣೇಶನನ್ನು ಕಳುಹಿಸಿಕೊಡುವಾಗ ಅಭಿನವ್ ಆರೋರಾ ಬಿಕ್ಕಿ ಬಿಕ್ಕಿ ಅತ್ತಿದ್ದರು. ಇವರ ಈ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು.
ಆದರೆ ಇದನ್ನೇ ಕೆಲ ಯೂಟ್ಯೂಬರ್‌ಗಳು ಮೀಮ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಡುವ ಮೂಲಕ ಪುಟ್ಟ ಬಾಲಕನನ್ನು ಟ್ರೋಲ್ ಮಾಡ್ತಿದ್ದರು. ಈ ಹಿನ್ನೆಲೆಯಲ್ಲಿ ಈಗ ಅಭಿನವ್ ಅರೋರಾ ಅವರ ವಕೀಲರಾದ ಪಂಕಜ್ ಆರ್ಯ ಅವರು ಟ್ರೋಲರ್‌ಗಳ ವಿರುದ್ಧ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಜನವರಿ 3ರಂದು ನಿಗದಿ ಮಾಡಿದೆ. ನಾವು ಇಂದು ಪ್ರಕರಣ ದಾಖಲಿಸಿದ್ದೇವೆ. ಮುಂದಿನ ವಿಚಾರಣೆಯನ್ನು ಜನವರಿ 3 ರಂದು ನಿಗದಿ ಮಾಡಲಾಗಿದೆ ಎಂದು ಅಭಿನವ್ ಅರೋರಾ ಪರ ವಕೀಲ ಪಂಕಜ್ ಆರ್ಯ ಹೇಳಿದ್ದಾರೆ. ಅಭಿನವ್ ಆರೋರಾ ಹಾಗೂ ಸನಾತನ ಧರ್ಮದ ವಿರುದ್ಧ ಒಂದೇ ಗುಂಪಿನ ಜನರು ಅಭಿಯಾನವನ್ನು ನಡೆಸಿದ್ದಾರೆ. ನಾವು ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದೇವೆ. ಸುಪ್ರೀಂಕೋರ್ಟ್‌ಗೆ ಹೋಗುವ ಸಂದರ್ಭ ಬಂದರೂ ನಾವು ಸುಮ್ಮನಿರುವುದಿಲ್ಲ, ಈ ಯೂಟ್ಯೂಬರ್‌ಗಳ ವಿರುದ್ಧ ಎಫ್‌ಐಆರ್‌ಗೆ ಒತ್ತಾಯಿಸಿದ್ದೇವೆ ಎಂದು ಪಂಕಜ್ ಆರ್ಯ ಹೇಳಿದ್ದಾರೆ.
ಗ್ಯಾಂಗ್‌ಸ್ಟಾರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಜೀವ ಬೆದರಿಕೆ ಇದೆ ಎಂದು ಆಕ್ಟೋಬರ್ ತಿಂಗಳಲ್ಲಿ ಅಭಿನವ್ ಅರೋರಾ ಕುಟುಂಬದವರು ಆರೋಪಿಸಿದ್ದರು. ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಅಭಿನವ್ ಅರೋರಾ ಅವರ ತಾಯಿ, ಅಭಿನವ್ ದೇವರ ಮೇಲಿನ ಭಕ್ತಿಯನ್ನು ಹೊರತುಪಡಿಸಿ ಬೇರೇನೂ ಮಾಡಿಲ್ಲ, ಹೀಗಿರುವಾಗ ಇಂತಹ ಕಿರುಕುಳವನ್ನು ನಾವೇಕೆ ಸಹಿಸಿಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ. ಸೋಶಿಯಲ್ ಮೀಡಿಯಾದ ಮೂಲಕ ಕಿರುಕುಳ ನೀಡಲಾಗುತ್ತಿದೆ. ಭಕ್ತಿಯ ಹೊರತಾಗಿ ಬೆದರಿಕೆ ಕರೆ ಬರುವಂತಹ ಎಂಥ ಕೆಲಸವನ್ನೂ ಕೂಡ ಅಭಿನವ್ ಮಾಡಿಲ್ಲ, ಆತ ಸಾಕಷ್ಟು ಸಹಿಸಿಕೊಂಡಿದ್ದಾನೆ.
ನಮಗೆ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಕರೆ ಬಂದಿದ್ದು, ಅಭಿನವ್‌ನನ್ನು ಕೊಲೆ ಮಾಡುವುದಾಗಿ ಹೇಳಿದರು. ಇದಾದ ನಂತರ ರಾತ್ರಿಯೂ ಕರೆ ಬಂದಿತ್ತು, ಅದನ್ನು ರಿಸೀವ್ ಮಾಡಲಾಗಿರಲಿಲ್ಲ, ಬೆಳಗ್ಗೆ ಅದೇ ನಂಬರ್‌ನಿಂದ ಅಭಿನವ್‌ನನ್ನು ಇಂದು ಹತ್ಯೆ ಮಾಡುತ್ತೇವೆ ಎಂದು ಸಂದೇಶ ಬಂದಿತ್ತು ಎಂದು ಅಭಿನವ್ ಅರೋರಾ ಅವರ ತಾಯಿ ಜ್ಯೋತಿ ಅರೋರಾ ಹೇಳಿದ್ದಾರೆ. ಅಭಿನವ್ ಅರೋರಾ ಅವರು ದೆಹಲಿ ಮೂಲದ ಧಾರ್ಮಿಕ ಕಂಟೆಂಟ್ ಕ್ರಿಯೇಟರ್ ಆಗಿದ್ದು, ಮೂರು ವರ್ಷವಿದ್ದಾಗಿನಿಂದಲೇ ಆಧ್ಯಾತ್ಮದ ಪ್ರಯಾಣ ಆರಂಭಿಸಿದಾಗಿ ಅವರು ಹೇಳಿಕೊಂಡಿದ್ದಾರೆ.