ನವದೆಹಲಿ(ನ.25): ಕೊರೋನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯರು ಹಾಗೂ ಇತರ ಆರೋಗ್ಯ ಸಿಬ್ಬಂದಿಗೆ ಮೊದಲು ಕೊರೋನಾ ಲಸಿಕೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಯಾವಾಗ ಲಸಿಕೆ ಲಭ್ಯವಾಗುತ್ತದೋ ಆಗ ಸುಮಾರು 1 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ ಎಂದು ಸರ್ಕಾರದ ಮೂಲಗಳು ಹೇಳಿವೆ.

ಈ ಆರೋಗ್ಯ ಕಾರ್ಯಕರ್ತರಲ್ಲಿ ವೈದ್ಯರು, ಎಂಬಿಬಿಎಸ್‌ ವಿದ್ಯಾರ್ಥಿಗಳು, ದಾದಿಯರು ಹಾಗೂ ಆಶಾ ಕಾರ್ಯಕರ್ತೆಯರಿದ್ದಾರೆ. ಕೇಂದ್ರ ಸರ್ಕಾರಕ್ಕೆ ಈಗ ಶೇ.92ರಷ್ಟುಸರ್ಕಾರಿ ಆಸ್ಪತ್ರೆಗಳ ಸಿಬ್ಬಂದಿ ಹಾಗೂ ಶೇ.55ರಷ್ಟುಖಾಸಗಿ ಆಸ್ಪತ್ರೆ ಸಿಬ್ಬಂದಿಯ ಮಾಹಿತಿಗಳು ವಿವಿಧ ರಾಜ್ಯಗಳಿಂದ ಬಂದಿವೆ. ಬಾಕಿ ಉಳಿದ ಸಿಬ್ಬಂದಿಯ ವಿವರಗಳನ್ನು ಶೀಘ್ರವೇ ಸಲ್ಲಿಸುವಂತೆ ರಾಜ್ಯಗಳಿಗೆ ಸೂಚಿಸಲಾಗಿದ್ದು, ಇನ್ನೊಂದು ವಾರದಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇವರಿಗೆ ಮೊದಲ ಆದ್ಯತೆಯ ಮೇರೆಗೆ ಲಸಿಕೆ ನೀಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.

1 ವರ್ಷ ರಕ್ಷಣೆ ನೀಡಲಿದೆ ಲಸಿಕೆ, 2023 ವೇಳೆಗೆ ವೈರಸ್‌ ಕ್ಷೀಣ!

ಲಸಿಕೆಯನ್ನು ಈ ಸಿಬ್ಬಂದಿಗೆ ನೀಡುವ ಬಗ್ಗೆ ಪೂರ್ವಸಿದ್ಧತೆಗಳನ್ನು ಕೈಗೊಳ್ಳುವಂತೆ ಹಾಗೂ ಸಿಬ್ಬಂದಿ ನಿಯೋಜನೆಯ ಯೋಜನೆ ರೂಪಿಸುವಂತೆ ರಾಜ್ಯಗಳಿಗೆ ಕೇಂದ್ರ ಸೂಚನೆ ನೀಡಿದೆ.

4 ಹಂತದಲ್ಲಿ ಲಸಿಕೆ:

4 ಹಂತದ ಲಸಿಕಾ ಯೋಜನೆಯನ್ನು ಕೇಂದ್ರ ಹಮ್ಮಿಕೊಂಡಿದೆ. ತುರ್ತು ಅಗತ್ಯ ಇರುವ 30 ಕೋಟಿ ಜನರನ್ನು ಗುರುತಿಸುವ ಪ್ರಕ್ರಿಯೆ ಸಾಗಿದೆ.

ಮೊದಲ ಹಂತದಲ್ಲಿ 1 ಕೋಟಿ ಆರೋಗ್ಯ ಕಾರ್ಯಕರ್ತರು, ದ್ವಿತೀಯ ಹಂತದಲ್ಲಿ ಸ್ಥಳೀಯ ಪೌರಾಡಳಿತದ ಸಿಬ್ಬಂದಿ, 3ನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟ26 ಕೋಟಿ ಜನ, 3ನೇ ಹಂತದಲ್ಲಿ 50 ವರ್ಷಕ್ಕಿಂತ ಕೆಳಗಿನ, ಅದರಲ್ಲೂ ಪೂರ್ವರೋಗಗಳಿಂದ ಬಳಲುತ್ತಿರುವವರಿಗೆ ಆದ್ಯತೆಯ ಮೇಲೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.

ಲಸಿಕೆ ವಿತರಣೆಗೆ ರಾಜ್ಯದಲ್ಲಿ 29500 ಕೇಂದ್ರ, 10 ಸಾವಿರ ಸಿಬ್ಬಂದಿ!

ಒಬ್ಬರಿಗೆ ಒಂದು ಸಲ ಮಾತ್ರ ಲಸಿಕೆ ನೀಡಬೇಕು. ಹೀಗಾಗಿ ಒಬ್ಬರು ಎರಡೆರಡು ಬಾರಿ ಲಸಿಕೆ ನೀಡಿಕೆ ತಪ್ಪಿಸಲು ಲಸಿಕೆಯ ಪಟ್ಟಿಯನ್ನು ಆಧಾರ್‌ನೊಂದಿಗೆ ಸಂಯೋಜಿಸಲಾಗುತ್ತದೆ. ಆಧಾರ್‌ ಇಲ್ಲದೇ ಇದ್ದರೆ ಸರ್ಕಾರದ ಗುರುತಿನ ಚೀಟಿ ಬಳಸಿ ಹೆಸರು ಸಂಯೋಜಿಸಲಾಗುತ್ತದೆ.

ಲಸಿಕೆ ನೀಡುವ ದಿನಾಂಕ, ಸ್ಥಳವನ್ನು ಫಲಾನುಭವಿಗೆ ಎಸ್ಸೆಮ್ಮೆಸ್‌ ಮೂಲಕ ಕಳಿಸಲಾಗುತ್ತದೆ.

ಈಗಾಗಲೇ ದೇಶದಲ್ಲಿ 5 ಲಸಿಕೆಗಳು ಪ್ರಾಯೋಗಿಕ ಹಂತದಲ್ಲಿವೆ. ಇವುಗಳಲ್ಲಿ 4 ಲಸಿಕೆಗಳ 2 ಹಾಗೂ 3ನೇ ಹಂತದ ಪ್ರಯೋಗ ನಡೆಯುತ್ತಿದೆ. ಒಂದು ಲಸಿಕೆ ಇನ್ನೂ ಮೊದಲ ಹಾಗೂ 2ನೇ ಹಂತದ ಪ್ರಯೋಗದಲ್ಲಿದೆ.