ನವದೆಹಲಿ(ಮೇ.31): ಭಾರತದಲ್ಲಿ ಕೊರೋನಾ 2ನೇ ಅಲೆ ಅಬ್ಬರ ದಿನದಿಂದ ದಿನಕ್ಕೆ ತಗ್ಗುತ್ತಿದೆ. ಭಾನುವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 1,65,553 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಇದು ಕಳೆದ 46 ದಿನಗಳಲ್ಲಿಯೇ ಕನಿಷ್ಠ ಸಂಖ್ಯೆ. ಇನ್ನು ಚೇತರಿಕೆ ಪ್ರಮಾಣ ಶೇ.91.25ಕ್ಕೆ ಏರಿದ್ದು, ಪಾಸಿಟಿವಿಟಿ ದರ ಶೇ.8ಕ್ಕೆ ಇಳಿದಿದೆ. ಇದೇ ವೇಳೆ 3460 ಜನ ಅಸುನೀಗಿದ್ದಾರೆ.

ಏ.13ರಂದು 1.61 ಲಕ್ಷ ಕೇಸ್‌ ಪತ್ತೆಯಾಗಿತ್ತು. ಅದಾದ ಬಳಿಕ ಇಷ್ಟುಕಡಿಮೆ ಪ್ರಕರಣಗಳು ದೃಢಪಟ್ಟಿರುವುದು ಇದೇ ಮೊದಲು. ಇದರೊಂದಿಗೆ ದೈನಂದಿನ ಪಾಸಿಟಿವಿಟಿ ದರ ಶೇ.8.02ಕ್ಕೆ ತಗ್ಗಿದೆ. ತನ್ಮೂಲಕ ಪಾಸಿಟಿವಿಟಿ ದರ ಸತತ 6 ದಿನಗಳಿಂದ ಶೇ.10ಕ್ಕಿಂತ ಕಡಿಮೆ ದಾಖಲಾದಂತಾಗಿದೆ. ಹಾಗೆಯೇ ವಾರದ ಪಾಸಿಟಿವಿಟಿ ದರವೂ ಶೇ.9.36ಕ್ಕೆ ಕುಸಿತ ಕಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!

ಇನ್ನು ಭಾನುವಾರ ಇದೇ ಅವಧಿಯಲ್ಲಿ ದೇಶದಲ್ಲಿ 3,460 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಮಹಾರಾಷ್ಟ್ರವೊಂದರಲ್ಲಿಯೇ 832, ಕರ್ನಾಟಕದಲ್ಲಿ 492, ತಮಿಳುನಾಡಿನಲ್ಲಿ 486, ಕೇರಳದಲ್ಲಿ 198, ಉತ್ತರ ಪ್ರದೇಶದಲ್ಲಿ 155 ಮಂದಿ ಸಾವಿಗೀಡಾಗಿದ್ದಾರೆ.

ಚೇತರಿಕೆ ಪ್ರಮಾಣ ಶೇ.91.25ಕ್ಕೆ ಏರಿಕೆಯಾಗಿದ್ದು, ಒಟ್ಟು ಸಕ್ರಿಯ ಕೇಸುಗಳ ಸಂಖ್ಯೆ 22.14 ಲಕ್ಷಕ್ಕೆ ಇಳಿಕೆಯಾಗಿದೆ.

ದೇಶದಲ್ಲಿ ಒಟ್ಟು ಕೋವಿಡ್‌ ಸೋಂಕಿತರ ಸಂಖ್ಯೆ 2.78 ಕೋಟಿ ತಲುಪಿದ್ದು. ಈ ಪೈಕಿ 2.54 ಕೋಟಿ ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ. ಒಟ್ಟು ಮೃತರ ಸಂಖ್ಯೆ 3,25,972 ಆಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona