ರಾತ್ರಿ ವೇಳೆಯೂ ರಾಷ್ಟ್ರಧ್ವಜ ಹಾರಿಸಲು ಸರ್ಕಾರ ಅವಕಾಶ
ಕೇಂದ್ರ ಸರ್ಕಾರ ರಾಷ್ಟ್ರೀಯ ಧ್ವಜ ಸಂಹಿತೆಯಲ್ಲಿ ಮಹತ್ವದ ತಿದ್ದುಪಡಿ ತಂದಿದ್ದು, ತ್ರಿವರ್ಣ ಧ್ವಜವನ್ನು ಹಗಲು ಮಾತ್ರವಲ್ಲದೆ ರಾತ್ರಿ ಕೂಡ ಹಾರಿಸಲು ಅನುಮತಿ ನೀಡಿದೆ.
ನವದೆಹಲಿ (ಜು.24): ಕೇಂದ್ರ ಸರ್ಕಾರ ರಾಷ್ಟ್ರೀಯ ಧ್ವಜ ಸಂಹಿತೆಯಲ್ಲಿ ಮಹತ್ವದ ತಿದ್ದುಪಡಿ ತಂದಿದ್ದು, ತ್ರಿವರ್ಣ ಧ್ವಜವನ್ನು ಹಗಲು ಮಾತ್ರವಲ್ಲದೆ ರಾತ್ರಿ ಕೂಡ ಹಾರಿಸಲು ಅನುಮತಿ ನೀಡಿದೆ. ಇದರ ಜತೆಗೆ, ಕೈಮಗ್ಗದಿಂದ ಮಾತ್ರ ತಯಾರಿಸಲಾಗುತ್ತಿದ್ದ ಖಾದಿ ರಾಷ್ಟ್ರಧ್ವಜದ ಜತೆಗೆ ಯಂತ್ರ ಬಳಸಿ ತಯಾರಿಸಲಾಗುವ ಪಾಲಿಸ್ಟರ್ ಧ್ವಜದ ಬಳಕೆಗೂ ಅನುಮತಿ ನೀಡಲಾಗಿದೆ. ಭಾರತದ ಸ್ವಾತಂತ್ರ್ಯದ 75ನೇ ವರ್ಷದ ಆಚರಣೆಯ ಸಂಭ್ರಮದಲ್ಲಿ ಆ. 13 ರಿಂದ ಆ. 15ರವರೆಗೆ ‘ಹರ್ ಘರ್ ತಿರಂಗಾ’ ಯೋಜನೆಯನ್ನು ಕೇಂದ್ರ ಘೋಷಿಸಿದ ಬೆನ್ನಲ್ಲೇ ಧ್ವಜ ಸಂಹಿತೆಯಲ್ಲಿ ಶನಿವಾರ ಈ ಮಹತ್ವದ ಬದಲಾವಣೆ ತರಲಾಗಿದೆ.
ಸರ್ಕಾರದ ಹೊಸ ನಿಯಮ ಏನು?: ‘ಭಾರತದ ಧ್ವಜ ಪ್ರದರ್ಶನ, ಹಾರಾಟ ಹಾಗೂ ಬಳಕೆಯು ಭಾರತದ ಧ್ವಜ ಸಂಹಿತೆ-2002 ಹಾಗೂ ರಾಷ್ಟ್ರೀಯ ಗೌರವ ಅವಮಾನಗಳ ತಡೆ ಕಾಯ್ದೆ-1971 ಮೂಲಕ ನಿರ್ಧರಿಸಲಾಗಿತ್ತದೆ. ಈ ಹಿನ್ನೆಲೆಯಲ್ಲಿ ಧ್ವಜ ಸಂಹಿತೆಗೆ ತಂದ ಹೊಸ ತಿದ್ದುಪಡಿಯ ಪ್ರಕಾರ ‘ಧ್ವಜವನ್ನು ತೆರೆದ ಸ್ಥಳಗಳಲ್ಲಿ, ಮನೆಗಳಲ್ಲಿ ಹಗಲು-ರಾತ್ರಿ ಹಾರಿಸಬಹುದಾಗಿದೆ’ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ ಭಲ್ಲಾ ಅವರು ಎಲ್ಲ ಸಚಿವಾಲಯಗಳಿಗೆ ಹಾಗೂ ಇಲಾಖೆಗಳಿಗೆ ಪತ್ರದ ಮೂಲಕ ತಿಳಿಸಿದ್ದಾರೆ.
3 ದಿನ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಿ: ಪ್ರಧಾನಿ ಮೋದಿ
ಈ ಹಿಂದೆ, ರಾಷ್ಟ್ರಧ್ವಜವನ್ನು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಹಾರಿಸಲು ಮಾತ್ರ ಅನುಮತಿ ನೀಡಲಾಗಿತ್ತು. ಸೂರ್ಯೋದಯ ಸಮೀಪಸುತ್ತಿದ್ದಂತೆಯೇ ಧ್ವಜ ಕೆಳಗಿಳಿಸುತ್ತಿದ್ದರು. ಇನ್ನೊಂದೆಡೆ, ‘ಕೈಯಿಂದ ನೇಯ್ದ ಅಥವಾ ಯಂತ್ರ ನಿರ್ಮಿತ, ಹತ್ತಿ/ಪಾಲಿಸ್ಟರ್/ಉಣ್ಣೆ/ರೇಷ್ಮೆ/ಖಾದಿಯ ರಾಷ್ಟ್ರೀಯ ಧ್ವಜ ಬಳಕೆ ಮಾಡಲು ಅನುಮತಿ ನೀಡಲಾಗಿದೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಈವರೆಗೆ ಯಂತ್ರ ನಿರ್ಮಿತ ಹಾಗೂ ಪಾಲಿಸ್ಟರ್ ಧ್ವಜಗಳಿಗೆ ಅನುಮತಿ ಇರಲಿಲ್ಲ.
1 ಕೋಟಿ ರಾಷ್ಟ್ರಧ್ವಜ ಹಾರಾಟ ಗುರಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ರೂಪಿಸಿರುವ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ (ಹರ್ ಘರ್ ತಿರಂಗಾ) ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ 1 ಕೋಟಿ ರಾಷ್ಟ್ರಧ್ವಜ ಹಾರಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸಂಸ್ಕೃತಿ ಸಚಿವ ಕಿಶನ್ ರೆಡ್ಡಿ ಅವರು ‘ಆಜಾದಿ ಕಾ ಅಮೃತ ಮಹೋತ್ಸವ’ ಅಂಗವಾಗಿ ಆಯೋಜಿಸಿರುವ ‘ಹರ್ ಘರ್ ತಿರಂಗಾ’ ಕುರಿತ ಭಾನುವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಆ.13ರಿಂದ 15ರ ವರೆಗೆ 1 ಕೋಟಿ ರಾಷ್ಟ್ರಧ್ವಜ ಹಾರಿಸಲು ಕ್ರಮ ವಹಿಸಲಾಗಿದೆ. ಈ ಪೈಕಿ ಶೇ.60ರಷ್ಟುಗ್ರಾಮೀಣ ಪ್ರದೇಶದ ಸರ್ಕಾರಿ, ಖಾಸಗಿ ಕಚೇರಿಗಳು, ಶಾಲೆ, ಕಾಲೇಜುಗಳು, ಅತಿ ಹೆಚ್ಚು ಜನಸಂಖ್ಯೆ ಇರುವ ಹಳ್ಳಿಗಳಲ್ಲಿ ಹಾರಿಸಲಾಗುವುದು. ಉಳಿದ ಶೇ.40ರಷ್ಟುರಾಷ್ಟ್ರದ್ವಜಗಳನ್ನು ಬಿಬಿಎಂಪಿ ವ್ಯಾಪ್ತಿ ಸೇರಿದಂತೆ ನಗರ ಪ್ರದೇಶಗಳಲ್ಲಿ ಹಾರಿಸಲು ಕ್ರಮ ವಹಿಸಲಾಗಿದೆ ಎಂದರು.
ನರೇಂದ್ರ ಮೋದಿ ಹಾಗೂ ಪಾಕ್ ಪ್ರಧಾನಿ ಷರೀಫ್ ಶೀಘ್ರದಲ್ಲೇ ಭೇಟಿ, ವೇದಿಕೆ ಸಿದ್ದ!
ಹಲವು ಸಮಿತಿ ರಚನೆ: ರಾಜ್ಯದಲ್ಲಿ ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಪೊಲೀಸ್ ಇಲಾಖೆ ನೇತೃತ್ವದಲ್ಲಿ ಈಗಾಗಲೇ ಈ ಕಾರ್ಯಕ್ರಮ ಅನುಷ್ಠಾನಕ್ಕೆ ಸಭೆಗಳು ನಡೆಯುತ್ತಿವೆ. ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ಈಗಾಗಲೇ ಸುತ್ತೋಲೆಗಳನ್ನು ನೀಡಲಾಗಿದ್ದು, ಎಲ್ಲಾ ಶಾಲಾ, ಕಾಲೇಜು, ಅಂಗನವಾಡಿಗಳಲ್ಲೂ ರಾಷ್ಟ್ರಧ್ವಜ ಹಾರಿಸಲು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಜತೆಗೆ ಎನ್‌ಸಿಸಿ, ಎನ್‌ಎಸ್‌ಎಸ್, ಸ್ವಯಂ ಸೇವಕರು, ಮಾಜಿ ಸೈನಿಕರು, ಸಾರ್ವಜನಿಕ ಸಂಘ ಸಂಸ್ಥೆಗಳು ಕಾರ್ಯಕ್ರಮದ ಯಶಸ್ವಿಗೆ ಸರ್ಕಾರದೊಂದಿಗೆ ಕೈಜೋಡಿಸಿವೆ ಎಂದು ಹೇಳಿದರು.