3 ದಿನ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಿ: ಪ್ರಧಾನಿ ಮೋದಿ
ಹರ್ ಘರ್ ತಿರಂಗಾ ಅಭಿಯಾನದಿಂದಾಗಿ ರಾಷ್ಟ್ರ ಧ್ವಜದೊಂದಿಗಿನ ನಮ್ಮ ನಂಟು ಮತ್ತಷ್ಟು ಬಿಗಿಯಾಗುತ್ತದೆ ಎಂದ ಮೋದಿ
ನವದೆಹಲಿ(ಜು.23): ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಆ.13ರಿಂದ 15ರವರೆಗೆ ದೇಶದ ನಾಗರಿಕರು ಮನೆ ಮನೆಗಳಲ್ಲೂ ರಾಷ್ಟ್ರ ಧ್ವಜ ಹಾರಿಸಬೇಕು ಅಥವಾ ಪ್ರದರ್ಶಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕರೆ ನೀಡಿದ್ದಾರೆ. ತನ್ಮೂಲಕ ಕೇಂದ್ರ ಸರ್ಕಾರದ ‘ಹರ್ ಘರ್ ತಿರಂಗಾ’ (ಮನೆ ಮನೆಯಲ್ಲೂ ತ್ರಿವರ್ಣ ಧ್ವಜ) ಅಭಿಯಾನವನ್ನು ಬೆಂಬಲಿಸಿ ಶಕ್ತಿ ತುಂಬುವಂತೆ ಮನವಿ ಮಾಡಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, 1947ರ ಜು.22ರಂದು ರಾಷ್ಟ್ರ ಧ್ವಜವನ್ನು ಅಂಗೀಕರಿಸಲಾಯಿತು ಎಂದು ಹೇಳಿದ್ದಾರೆ. ಜತೆಗೆ ಹರ್ ಘರ್ ತಿರಂಗಾ ಅಭಿಯಾನದಿಂದಾಗಿ ರಾಷ್ಟ್ರ ಧ್ವಜದೊಂದಿಗಿನ ನಮ್ಮ ನಂಟು ಮತ್ತಷ್ಟು ಬಿಗಿಯಾಗುತ್ತದೆ ಎಂದಿದ್ದಾರೆ.
Har Ghar Tiranga: 1 ಕೋಟಿ ರಾಷ್ಟ್ರಧ್ವಜ ಹಾರಾಟ ಗುರಿ: ಸಿಎಂ ಬೊಮ್ಮಾಯಿ
ವಸಾಹತುಶಾಹಿ ಆಡಳಿತದ ವಿರುದ್ಧ ಹೋರಾಡುವಾಗ ಮುಕ್ತ ಭಾರತದ ಧ್ವಜಕ್ಕಾಗಿ ಚಿರಸ್ಮರಣೀಯ ಧೈರ್ಯ ಹಾಗೂ ಪ್ರಯತ್ನವನ್ನು ತೋರಿದ್ದ ಎಲ್ಲರನ್ನೂ ನಾವು ಸ್ಮರಿಸುತ್ತಿದ್ದೇವೆ. ಅವರ ಕನಸಿನ ಭಾರತವನ್ನು ನಿರ್ಮಾಣ ಮಾಡುವ ಹಾಗೂ ಅವರ ದೂರದೃಷ್ಟಿಯನ್ನು ಈಡೇರಿಸುವ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ ಎಂದಿದ್ದಾರೆ.
ತ್ರಿವರ್ಣ ಬಾವುಟವನ್ನು ರಾಷ್ಟ್ರ ಧ್ವಜವನ್ನಾಗಿ ಅಂಗೀಕರಿಸುವ ಸಂಬಂಧ ನಡೆದ ಸಂವಹನಗಳನ್ನು ಹಾಗೂ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಮೊದಲ ತ್ರಿವರ್ಣ ಧ್ಜಜವನ್ನು ಹಾರಿಸುತ್ತಿರುವ ಚಿತ್ರಗಳನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ.