‘ಹರ್‌ ಘರ್‌ ತಿರಂಗಾ’ದಿಂದ .500 ಕೋಟಿ ಧ್ವಜ ಮಾರಾಟ! ‘ಹರ್‌ ಘರ್‌ ತಿರಂಗಾ’ದಿಂದ .500 ಕೋಟಿ ಧ್ವಜ ಮಾರಾಟ!  20 ದಿನದಲ್ಲಿ 30 ಕೋಟಿ ಧ್ವಜ ತಯಾರಿಸಿದ ಭಾರತೀಯ ಸಂಸ್ಥೆಗಳು -ಕೇಂದ್ರ ಸರ್ಕಾರದ ಅಭಿಯಾನದಿಂದ ಭರ್ಜರಿ ಬಾವುಟ ವಹಿವಾಟು  ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ ಸಂತಸ

ನವದೆಹಲಿ (ಆ.15): ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಮ್ಮಿಕೊಂಡಿದ್ದ ‘ಹರ್‌ ಘರ್‌ ತಿರಂಗಾ’ (ಮನೆಮನೆಯಲ್ಲೂ ತ್ರಿವರ್ಣ ಧ್ವಜ) ಅಭಿಯಾನದಿಂದಾಗಿ ರಾಷ್ಟ್ರ ಧ್ವಜ ಮಾರಾಟದಲ್ಲಿ ಭರ್ಜರಿ ವಹಿವಾಟು ನಡೆದಿದೆ. ಕೇವಲ 20 ದಿನಗಳ ಅವಧಿಯಲ್ಲಿ 30 ಕೋಟಿ ಧ್ವಜಗಳು ಮಾರಾಟವಾಗಿದ್ದು, 500 ಕೋಟಿ ರು. ವ್ಯಾಪಾರವಾಗಿದೆ. ಹಿಂದಿನ ಯಾವುದೇ ವರ್ಷದಲ್ಲೂ ಇಷ್ಟೊಂದು ವಹಿವಾಟು ನಡೆದಿರಲಿಲ್ಲ ಎಂಬುದು ಗಮನಾರ್ಹ.

ಭಾರತೀಯರ ಹೃದಯ ಜೋಡಿಸಿದ ಹರ್‌ ಘರ್‌ ತಿರಂಗಾ, ಹುಲ್ಲಿನ ಮನೆ ಮೇಲೆ ಅರಳಿದ ರಾಷ್ಟ್ರಧ್ವಜ!

‘ಸ್ವಾತಂತ್ರ್ಯ ದಿನಾಚರಣೆ(Independence Day)ಯ ಸಂದರ್ಭದಲ್ಲಿ ಹೆಚ್ಚೆಂದರೆ 150ರಿಂದ 200 ಕೋಟಿ ರು. ಮೌಲ್ಯದ ತ್ರಿವರ್ಣ ಧ್ವಜಗಳ ವಹಿವಾಟು ನಡೆಯುತ್ತಿತ್ತು. ಆದರೆ ಹರ್‌ ಘರ್‌ ತಿರಂಗಾ ಅಭಿಯಾನದಿಂದ ಈ ಬಾರಿ ಭರ್ಜರಿ ವ್ಯಾಪಾರವಾಗಿದೆ’ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಬಿ.ಸಿ. ಭಾರತೀಯ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ ಖಂಡೇಲ್‌ವಾಲ್‌ ಅವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಆ.13ರಿಂದ ಆ.15ರವರೆಗೆ ಹರ್‌ ಘರ್‌ ತಿರಂಗಾ ಅಭಿಯಾನದಲ್ಲಿ ಭಾಗಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಜು.22ರಂದು ಘೋಷಣೆ ಮಾಡಿದ್ದರು. ಅಭಿಯಾನ ಆರಂಭವಾಗಲು ಕೇವಲ 20 ದಿನಗಳು ಮಾತ್ರವೇ ಇದ್ದರೂ ಭಾರತೀಯ ಉದ್ಯಮಿಗಳು 30 ಕೋಟಿ ಧ್ವಜವನ್ನು ಉತ್ಪಾದಿಸುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಜ.26ರ ಗಣರಾಜ್ಯೋತ್ಸವ, ಆ.15ರ ಸ್ವಾತಂತ್ರ್ಯೋತ್ಸವ ಹಾಗೂ ಅ.2ರ ಗಾಂಧಿ ಜಯಂತಿಯ ದಿನ ರಾಷ್ಟ್ರಧ್ವಜಗಳು ಮಾರಾಟವಾಗುತ್ತವೆ. ಆದರೆ ಕಳೆದ ಎರಡು ವರ್ಷಗಳಿಂದ ಕೋವಿಡ್‌ ಇದ್ದ ಕಾರಣದಿಂದ ರಾಷ್ಟ್ರ ಧ್ವಜಗಳು ಹೆಚ್ಚಿನ ಪ್ರಮಾಣದಲ್ಲಿ ಬಿಕರಿಯಾಗಿರಲಿಲ್ಲ. ಆಗ ಉಳಿದಿದ್ದ ಸರಕು ಕೂಡ ಈಗ ಖಾಲಿಯಾಗಿದೆ ಎಂದು ಸಂಘ ತಿಳಿಸಿದೆ.

ಹರ್ ಘರ್ ತಿರಂಗ ಅಭಿಯಾನಕ್ಕೆ ಭರ್ಜರಿ ಸ್ಪಂದನೆ, ಪ್ರಧಾನಿ ಮೋದಿ ಸಂತಸ!

ಕೇಂದ್ರದಿಂದಲೂ ಖರೀದಿ: ಇದೇ ವೇಳೆ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಇ-ಕಾಮರ್ಸ್‌ ತಾಣ ‘ಜೆಮ್‌’ ಪೋರ್ಟಲ್‌ನಿಂದ ಜು.1ರಿಂದ ಆ.15ರ ಅವಧಿಯಲ್ಲಿ 60 ಕೋಟಿ ರು. ಮೌಲ್ಯದ 2.36 ಕೋಟಿ ಧ್ವಜಗಳನ್ನು ಖರೀದಿ ಮಾಡಿವೆ ಎಂದು ಅಂಕಿ-ಅಂಶಗಳು ತಿಳಿಸಿವೆ.