Asianet Suvarna News Asianet Suvarna News

ಭಾರತೀಯರ ಹೃದಯ ಜೋಡಿಸಿದ ಹರ್‌ ಘರ್‌ ತಿರಂಗಾ, ಹುಲ್ಲಿನ ಮನೆ ಮೇಲೆ ಅರಳಿದ ರಾಷ್ಟ್ರಧ್ವಜ!

ದೇಶದ 75ನೇ ಸ್ವಾತಂತ್ರ್ಯೋತ್ಸವದ ಭಾಗವಾಗಿ ಕೇಂದ್ರ ಸರ್ಕಾರ ಆಜಾದಿ ಕಾ ಅಮೃತ ಮಹೋತ್ಸವ ಆಚರಣೆಯನ್ನು ಕಳೆದ ವರ್ಷದಿಂದಲೇ ಆರಂಭಿಸಿತ್ತು. ಅದರ ಭಾಗವಾಗಿ ಹರ್‌ ಘರ್‌ ತಿರಂಗಾ ಅಭಿಯಾನವನ್ನು ಕಳೆದ ತಿಂಗಳ ಕೊನೆಯಲ್ಲಿ ಘೋಷಣೆ ಮಾಡಿತ್ತು. ಪ್ರಧಾನಿ ಮೋದಿ ಮನವಿಗೆ ಓಗೊಟ್ಟಿರುವ ದೇಶದ ಜನತೆ ದೇಶಾಭಿಮಾನವನ್ನು ವ್ಯಕ್ತಪಡಿಸಿದಂಥ ಆಕರ್ಷಕ ಸಂಗತಿಗಳು ಇಲ್ಲಿವೆ.

success of har Ghar tiranga Central government campaign for 75th independence day san
Author
Bengaluru, First Published Aug 14, 2022, 4:15 PM IST

ಬೆಂಗಳೂರು (ಆ.14): ಮನೆಯ ಗೇಟ್‌ಗೆ ಕಟ್ಟಿದ ರಾಷ್ಟ್ರಧ್ವಜಕ್ಕೆ ಪೂಜೆ ಮಾಡಿದ ವ್ಯಕ್ತಿ, ಪುಟ್ಟ ಮಕ್ಕಳೊಂದಿಗೆ ಹುಲ್ಲಿನ ಮನೆಯ ಎದುರು ರಾಷ್ಟ್ರಧ್ವಜ ಹಾರಿಸಿದ ಅಜ್ಜಿ, ತಳ್ಳುವ ಗಾಡಿಯ ಕಂಬಕ್ಕೆ ತಿರಂಗಾ ಕಟ್ಟಿದ ಮಹಿಳೆ. ಇವೆಲ್ಲವೂ ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟ ಹರ್‌ ಘರ್‌ ತಿರಂಗಾ ಅಭಿಯಾನಕ್ಕೆ ದೇಶದ ಜನತೆ ಸ್ಪಂದಿಸಿದ ರೀತಿ. ಇದೆಲ್ಲವನ್ನೂ ನೋಡಿದಾಗ ಅನಿಸೋದು ಒಂದೇ, ದೇಶದ ಜನರಿಗೆ ದೇಶಾಭಿಮಾನ ತೋರಿಸಲು ಯಾವುದೂ ಅಡ್ಡಿಯಾಗೋದಿಲ್ಲ. ಅದೆಂತದೇ ಪರಿಸ್ಥಿತಿಯಲ್ಲಿದ್ದರೂ, ದೇಶಾಭಿಮಾನದ ವಿಚಾರ ಬಂದಾಗ ಅದನ್ನು ಭಾರತೀಯರು ವ್ಯಕ್ತಪಡಿಸದೇ ಬಿಡೋದಿಲ್ಲ ಎನ್ನುವುದಕ್ಕೆ ಇವೆಲ್ಲವೂ ಸಾಕ್ಷಿಗಳು. ಇನ್ನು ತಮಿಳುನಾಡಿದ ಚಿದಂಬರಂ ದೇವಸ್ಥಾನದಲ್ಲಿ ರಾಷ್ಟ್ರಧ್ವಜವನ್ನು ದೇವತ್ವದ ಸಂಕೇತ ಗೌರವದೊಂದಿಗೆ ರಾಜಗೋಪುರದ ಮೇಲೆ ಕಟ್ಟಲಾಗಿದೆ. ದೇಶದ ಜನರು ತ್ರಿವರ್ಣ ಧ್ವಜದೊಂದಿಗೆ ಹೊಂದಿರುವ ಬಾಂಧ್ಯವನ್ನು ಇದು ತೋರಿಸಿಕೊಟ್ಟಿದೆ. ಇನ್ನು ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ 900 ಕೆ.ಜಿ. ದವಸ ಧಾನ್ಯಗಳಿಂದ ರಚನೆಗೊಂಡ ತ್ರಿವರ್ಣ ಧ್ವಜವನ್ನು ನೋಡಿದರೆ ಹೆಮ್ಮೆ ಪಡುವುದು ಖಂಡಿತ. ಇದೆಲ್ಲವನ್ನು ನೋಡಿದರೆ, ಭಾರತದ ಹರ್‌ ಘರ್‌ ತಿರಂಗಾ ಅಭಿಯಾನ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿರುವುದು ಖಚಿತವಾಗಿದೆ.

ತಳ್ಳುವ ಗಾಡಿಗೆ ಧ್ವಜ ಕಟ್ಟಿದ ನಾರಿ: ಎಲ್ಲಿಯ ವಿಡಿಯೋ ಎನ್ನುವುದು ಖಚಿತವಾಗಿಲ್ಲ. ರಸ್ತೆಯಲ್ಲಿ ನಿಂತು, ತನ್ನ ತಳ್ಳುವ ಗಾಡಿಯ ಕಂಬಕ್ಕೆ ರಾಷ್ಟ್ರಧ್ವಜವನ್ನು ಕಟ್ಟುತ್ತಿರುವ ವಿಡಿಯೋವನ್ನು ಆರು ಗೌಡ ಎನ್ನುವವರು ಫೇಸ್‌ ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ರಾಷ್ಟ್ರಧ್ವಜ ಹಾರಿಸಲು ಮನೆ ಕಟ್ಟಿಸಿಕೊಡಿ ಎಂದು ಆಡಳಿತ ಪಕ್ಷಕ್ಕೆ ಕಾಂಗ್ರೆಸ್‌ ಕುಹಕವಾಡುತ್ತಿರುವ ನಡುವೆ, ರಾಷ್ಟ್ರಪ್ರೇಮವನ್ನು ಬರೀ ಧ್ವಜವನ್ನು ಮನೆ ಮೇಲೆ ಕಟ್ಟಿ ತೋರಿಸಿಕೊಳ್ಳಬೇಕಂತಿಲ್ಲ. ತಮ್ಮ ವ್ಯವಹಾರದ ಜೊತೆ ಜೊತೆಗೆ ತಾರಿ ಭಾರತಾಂಬೆಯ ಧ್ವಜ ರಾರಾಜಿಸಬಹುದು ಎನ್ನುವುದಕ್ಕೆ ಉದಾಹರಣೆ ಎಂದು ವಿಡಿಯೋವನ್ನು ಶೇರ್‌ ಮಾಡಿದ್ದಾರೆ.

ಗುಡಿಸಲ ಮುಂದೆ ಧ್ವಜ ಹಾರಿಸಿದ ಅಜ್ಜಿ: ಇನ್ನೊಂದು ವಿಡಿಯೋದಲ್ಲಿ ಗುಡಿಸಲಿನ ಎದುರು ಧ್ವಜಕಂಬದ ರೀತಿ ದೊಡ್ಡ ಕೋಲನ್ನು ನೆಡಲಾಗಿದ್ದು, ಅಂದಾಜು 70 ವರ್ಷ ದಾಟಿದ ಮಹಿಳೆಯೊಬ್ಬಳು 6 ಜನ ಪುಟ್ಟ ಮಕ್ಕಳ ಎದುರು ರಾಷ್ಟ್ರಧ್ವಜವನ್ನು ಏರಿಸುತ್ತಿರುವ ವಿಡಿಯೋ ಕೂಡ ವೈರಲ್‌ ಆಗಿದೆ. ಕಿತ್ತು ತಿನ್ನುವ ಬಡತನದ ಮಧ್ಯೆಯೂ ಇವರ ದೇಶಭಕ್ತಿಗೆ ಯಾವ ಕೊರತೆಯೂ ಇಲ್ಲ ಎಂದು ವಿಡಿಯೋ ಶೀರ್ಷಿಕೆಯಲ್ಲಿ ಬರೆಯಲಾಗಿದೆ.
 


18,400 ಅಡಿ ಎತ್ತರದಲ್ಲಿ ಧ್ವಜ ಹಾರಾಟ: ಲಡಾಖ್‌ನಲ್ಲಿ18,400 ಅಡಿ ಎತ್ತರದಲ್ಲಿ ಇಂಡೋ-ಟಿಬೇಟಿಯನ್‌ ಬಾರ್ಡರ್‌ ಪೊಲೀಸ್‌ ರಾಷ್ಟ್ರಧ್ವಜವನ್ನು ಹಾರಿಸಿದೆ. ಆ ಮೂಲಕ ಹರ್‌ ಘರ್‌ ತಿರಂಗಾ ಅಭಿಯಾನವನ್ನು ಯಶಸ್ವಿ ಮಾಡಿದೆ.

ರಾಷ್ಟ್ರಧ್ವಜಕ್ಕೆ ಪೂಜೆ ಮಾಡಿದ ವ್ಯಕ್ತಿ: ಅದೇ ರೀತಿಯ ಇನ್ನೊಂದು ವಿಡಿಯೋದಲ್ಲಿ ದೇವರಿಗೆ ಪೂಜೆ ಮಾಡುವ ರೀತಿಯಲ್ಲಿ, ಮನೆಯ ಗೇಟ್‌ಗೆ ಕಟ್ಟಿದ್ದ ರಾಷ್ಟ್ರಧ್ವಜಕ್ಕೆ ಪೂಜೆ ಮಾಡುತ್ತಿರುವ ವಿಡಿಯೋ ಕೂಡ ವೈರಲ್‌ ಆಗಿದೆ. ಎಲ್ಲದರಲ್ಲೂ ಶ್ರದ್ಧೆ, ದೈವತ್ವವನ್ನು ಕಾಣುವ ನಿರ್ಮಲ ಹೃದಯಗಳ ದೇಶ ಭಾರತ. ಇಲ್ಲಿನ ಮಣ್ಣಿನ ಜನರ ಭಾವನೆಯನ್ನು ಎಂದಿಗೂ ಬದಲಿಸಲು ಸಾಧ್ಯವಿಲ್ಲ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
 

ದೇಶದ ಪ್ರಜೆಗಳಲ್ಲಿ ದೇಶಭಕ್ತಿ ಹೆಚ್ಚಿಸುವುದಕ್ಕಾಗಿ ಹರ್‌ ಘರ್‌ ತಿರಂಗಾ ಅಭಿಯಾನ: ಜಗ್ಗೇಶ

ಮನೆ ಮೇಲೆ ಹತ್ತಿ ರಾಷ್ಟ್ರಧ್ವಜ ಇರಿಸಿದ ಅಜ್ಜಿ: ಇನ್ನೊಂದು ಚಿತ್ರದಲ್ಲಿ ಹಂಚಿನ ಮನೆಯನ್ನು ಏರಿದ ಮಹಿಳೆಯೊಬ್ಬಳು ಅಲ್ಲಿದ್ದ ಕಂಬಕ್ಕೆ ರಾಷ್ಟ್ರಧ್ವಜವನ್ನು ಕಟ್ಟಿದ ಚಿತ್ರವೂ ಗಮನಸೆಳೆದಿದೆ. ಇದನ್ನು ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಶೇರ್‌ ಮಾಡಿಕೊಳ್ಳಲಾಗಿದೆ.

ಹರ್‌ ಘರ್‌ ತಿರಂಗಾ ಅಭಿಯಾನಕ್ಕೆ ಪ್ರಧಾನಿ ಮೋದಿ ತಾಯಿ ಬೆಂಬಲ: ಮಕ್ಕಳಿಗೆ ರಾಷ್ಟ್ರಧ್ವಜ ಹಂಚಿದ ಶತಾಯುಷಿ

ತಮಿಳುನಾಡಿನ ದೇವಸ್ಥಾನದ ರಾಜಗೋಪುರದಲ್ಲಿ ಧ್ವಜ: ಇನ್ನು ತಮಿಳುನಾಡಿನ ಚಿದಂಬರಂ ದೇವಸ್ಥಾನದಲ್ಲಿ ರಾಷ್ಟ್ರಧ್ವಜಕ್ಕೆ ಪೂಜೆಯನ್ನು ಮಾಡಿ ದೇವಸ್ಥಾನದ ರಾಜಗೋಪುರಕ್ಕೆ ಕಟ್ಟಲಾಗಿದೆ. ಇದರ ವಿಡಿಯೋ ಕೂಡ ಸಾಕಷ್ಟು ಜನರು ಹಂಚಿಕೊಂಡಿದ್ದಾರೆ. ಧ್ವಜದ ಕಂಬಕ್ಕೆ ಹೂವಿನ ಹಾರಗಳನ್ನು ಹಾಕಿ, ಡೋಲು ಜಾಗಟೆಯ ಶಬ್ದದೊಂದಿಗೆ ಧ್ವಜವನ್ನು ರಾಜಗೋಪುರದಲ್ಲಿ ಕಟ್ಟಲಾಗಿದೆ.

ಕುದ್ರೋಳಿ ದೇವಸ್ಥಾನದಲ್ಲಿ ತಿರಂಗಾ: ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಬರೋಬ್ಬರಿ 900 ಕೆಜಿ ದವಸ ಧಾನ್ಯಗಳನ್ನು ಬಳಸಿಕೊಂಡು, ರಾಷ್ಟ್ರಧ್ವಜವನ್ನು ರಚಿಸಲಾಗಿದೆ. ಅದರ ಚಿತ್ರಗಳನ್ನು ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.
success of har Ghar tiranga Central government campaign for 75th independence day san

Follow Us:
Download App:
  • android
  • ios