ಬೆಂಗಳೂರಿನ ಎಲ್ಲೆಡೆ ಹಚ್ಚಹಸಿರಿನಿಂದ ಕಂಗೊಳಿಸುವ, ಇಂದು ವಾಯುವಿಹಾರ, ವಿಶ್ರಾಂತಿ, ಆಟೋಟಗಳಿಗೆ ಸೀಮಿತವಾಗಿರುವ ಉದ್ಯಾನಗಳು ಸ್ವಾತಂತ್ರ್ಯ ಪೂರ್ವದಲ್ಲಿ ಹೋರಾಟ, ಚಳವಳಿಗಳ ಕೇಂದ್ರ ಸ್ಥಾನಗಳಾಗಿದ್ದವು. ಅಂತಹ ಉದ್ಯಾನಗಳ ಪೈಕಿ ಪ್ರಮುಖವಾದದ್ದು, ಕಬ್ಬನ್‌ಪೇಟೆಯಲ್ಲಿರುವ ‘ಬನ್ನಪ್ಪ ಉದ್ಯಾನ’. 

ಬೆಂಗಳೂರಿನ ಎಲ್ಲೆಡೆ ಹಚ್ಚಹಸಿರಿನಿಂದ ಕಂಗೊಳಿಸುವ, ಇಂದು ವಾಯುವಿಹಾರ, ವಿಶ್ರಾಂತಿ, ಆಟೋಟಗಳಿಗೆ ಸೀಮಿತವಾಗಿರುವ ಉದ್ಯಾನಗಳು ಸ್ವಾತಂತ್ರ್ಯ ಪೂರ್ವದಲ್ಲಿ ಹೋರಾಟ, ಚಳವಳಿಗಳ ಕೇಂದ್ರ ಸ್ಥಾನಗಳಾಗಿದ್ದವು. ಅಂತಹ ಉದ್ಯಾನಗಳ ಪೈಕಿ ಪ್ರಮುಖವಾದದ್ದು, ಕಬ್ಬನ್‌ಪೇಟೆಯಲ್ಲಿರುವ ‘ಬನ್ನಪ್ಪ ಉದ್ಯಾನ’. ಬೆಂಗಳೂರಿನ ಬಹುತೇಕ ರಾರ‍ಯಲಿ, ಹೋರಾಟಗಳು ಆರಂಭವಾಗುತ್ತಿದ್ದ ಮೂಲ ಸ್ಥಳ ಇದೇ.

ನಗರದ ಕೇಂದ್ರ ಭಾಗವಾದ ಹಡ್ಸನ್‌ ವೃತ್ತದ ಬಳಿ ಕೆ.ಜಿ.ರಸ್ತೆಗೆ ಹೊಂದಿಕೊಂಡಂತೆ ಇರುವ ಬನ್ನಪ್ಪ ಉದ್ಯಾನ ಸ್ವಾತಂತ್ರ್ಯ ಪೂರ್ವದ 3 ದಶಕಗಳ ಕಾಲ ಬೆಂಗಳೂರಿನ ಸ್ವಾತಂತ್ರ್ಯ ಹೋರಾಟದ ಕೇಂದ್ರಬಿಂದುವಾಗಿತ್ತು. ಬಿನ್ನಿಪೇಟೆ, ತರಗುಪೇಟೆ, ಬಳೆಪೇಟೆ, ಚಿಕ್ಕಪೇಟೆ, ನಗರ್ತಪೇಟೆಗಳಂತಹ ವಾಣಿಜ್ಯ ಸ್ಥಳಗಳು, ಬಿನ್ನಿ ಮಿಲ್‌ನಂತಹ ಕೈಗಾರಿಕಾ ಪ್ರದೇಶ, ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌, ಸೆಂಟ್ರಲ್‌ ಕಾಲೇಜುಗಳಂತಹ ಶೈಕ್ಷಣಿಕ ಸಂಸ್ಥೆಗಳಿಗೂ ಈ ಉದ್ಯಾನ ಸಮೀಪದ ಸ್ಥಳವಾಗಿತ್ತು. ಹೀಗಾಗಿಯೇ ವಿದ್ಯಾರ್ಥಿಗಳು, ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಉದ್ಯಾನದಲ್ಲಿಯೇ ಒಗ್ಗೂಡಿ ಪ್ರಮುಖ ರಾರ‍ಯಲಿಗಳನ್ನು ಇಲ್ಲಿಂದಲೇ ಆರಂಭಿಸುತ್ತಿದ್ದರು.

India@75: ಇಂಡಿಯನ್ ನ್ಯಾಷನಲ್ ಆರ್ಮಿಯ ಮೊದಲ ಜನರಲ್ ಮೋಹನ್ ಸಿಂಗ್

ವಾರಕ್ಕೆ ಕನಿಷ್ಠ ಎರಡು ರ್ಯಾಲಿ:

ಸ್ವಾತಂತ್ರ್ಯ ಪೂರ್ವದಲ್ಲಿ ಬನ್ನಪ್ಪ ಉದ್ಯಾನದಲ್ಲಿ ವಾರಕ್ಕೆ ಕನಿಷ್ಠ 2 ಸ್ವಾತಂತ್ರ್ಯ ಹೋರಾಟ ರ್ಯಾಲಿಗಳು ನಡೆಯುತ್ತಿದ್ದವು. 100ಕ್ಕೂ ಅಧಿಕ ಮಂದಿ ಹೋರಾಟಗಾರರು ಭಾಗಿಯಾಗುತ್ತಿದ್ದರು. ಇಲ್ಲಿ ವಾಗ್ಮಿಗಳಿಂದ ಭಾಷಣಗಳು ಮಾಡಿದ ಬಳಿಕ ಹಡ್ಸನ್‌ ವೃತ್ತ, ಪುರಭವನ, ಮೈಸೂರು ಬ್ಯಾಂಕ್‌ ವೃತ್ತದತ್ತ ರಾರ‍ಯಲಿ ಸಾಗುತ್ತಿತ್ತು. ಇತ್ತೀಚಿನ 2015ವರೆಗೂ ಈ ಉದ್ಯಾನದಲ್ಲಿ ಸಾರ್ವಜನಿಕರ ಮೂಲಸೌಕರ್ಯಗಳಿಗಾಗಿ ಹಲವು ಪ್ರತಿಭಟನೆಗಳು ನಡೆಯುತ್ತಿದ್ದವು. ಬಿಬಿಎಂಪಿ ಪಾರ್ಕ್ ಆಗಿ ಅಭಿವೃದ್ಧಿ ಪಡಿಸಿದ ಬಳಿಕ ಪ್ರತಿಭಟನೆಗಳು ಸ್ಥಗಿತವಾಗಿವೆ ಎಂದು ಸ್ಥಳೀಯರು ತಿಳಿಸುತ್ತಾರೆ.

ಹೋರಾಟಗಾರರಿಗೆ ಹುರುಪು ತುಂಬುತ್ತಿದ್ದ ವಾಗ್ಮಿಗಳು

ಗಾಂಧೀಜಿ ಬೆಂಗಳೂರಿಗೆ ಆಗಮಿಸಿದಾಗ ಬನ್ನಪ್ಪ ಉದ್ಯಾನಕ್ಕೆ ಆಗಮಿಸಿ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಜತೆಗೆ ಮದುವೀರ್‌ ಕೃಷ್ಣರಾಯರು ಸೇರಿದಂತೆ ಪಟ್ಟಾಭಿ ಸೀತಾರಾಮಯ್ಯ ಕೂಡಾ ಇಲ್ಲಿನ ಸಭೆಯಲ್ಲಿ ಭಾಗಿಯಾಗಿ ಹೋರಾಟಗಾರರಿಗೆ ಪ್ರೇರೇಪಿಸಿದ್ದಾರೆ. ‘ಇಂತಹ ಮಹನೀಯರ ಪ್ರೇರಣೆಯಿಂದ ಹೋರಾಟಕ್ಕೆ ಧುಮುಕಿದೆವು’ ಎಂದು ಬೆಂಗಳೂರಿನ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿಯವರೇ ಹಲವು ಸಮಾರಂಭಗಳಲ್ಲಿ ಉಲ್ಲೇಖಿಸುತ್ತಿದ್ದರು.

ಸ್ವಾತಂತ್ರ್ಯ ಸ್ಮಾರಕವಿದೆ:

ಉದ್ಯಾನದಲ್ಲಿ ಚರಕ ಒಳಗೊಂಡ ಸ್ತೂಪವನ್ನು ನಿರ್ಮಿಸಿ ಸ್ವಾತಂತ್ರ್ಯ ಹೋರಾಟಗಾರರಿಗೆಂದು ಅರ್ಪಿಸಲಾಗಿದೆ. ಈ ಸ್ತೂಪವು ಮುಂದಿನ ಪೀಳಿಗೆಗೆ ಸಚ್ಚಾರಿತ್ರ್ಯ, ಸಮಾನತೆ, ರಾಷ್ಟ್ರೀಯತೆ, ಭಾವೈಕ್ಯತೆಯನ್ನು ಮೂಡಿಸುವ ಚಿಲುಮೆಯಾಗಲಿ ಎಂದು ಸ್ತೂಪದ ಒಂದು ಬದಿಯಲ್ಲಿ ಉಲ್ಲೇಖಿಸಲಾಗಿದೆ. ಮಹಾತ್ಮ ಗಾಂಧೀಜಿ ಆಗಮಿಸಿದ ಸ್ಮರಣಾರ್ಥ ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ಗಾಂಧೀಜಿಯವರ ಉಖ್ತಿಗಳನ್ನು ಸ್ತೂಪದ ಮೇಲೆ ಕೆತ್ತಲಾಗಿದೆ.

India@75:ಮಂಗಳುರು ಕರಾವಳಿಯನ್ನು ಪರಕೀಯರ ಕೈಯಿಂದ ರಕ್ಷಿಸಿದ್ದ ರಾಣಿ ಅಬ್ಬಕ್ಕ

ತಲುಪುವುದು ಹೇಗೆ?

ಬನ್ನಪ್ಪ ಪಾರ್ಕ್ ನಗರದ ಹೃದಯಭಾಗದಲ್ಲೇ ಇರುವುದರಿಂದ ತಲುಪುವುದು ಕಷ್ಟವೇನಲ್ಲ. ಬೆಂಗಳೂರು ನಗರ ಸಾರಿಗೆ ಬಸ್‌ನಲ್ಲಿ ಕಾರ್ಪೋರೇಶನ್‌ ಸ್ಟಾಪ್‌ನಲ್ಲಿ ಇಳಿದರೆ ಕಾಲ್ನಡಿಗೆ ದೂರದಲ್ಲೇ ಇದೆ. ಆಟೋ ಮೂಲಕವೂ ತಲುಪಬಹುದು.

- ಜಯಪ್ರಕಾಶ್‌ ಬಿರಾದಾರ್‌