India@75: ಮಂಗಳೂರು ಕರಾವಳಿಯನ್ನು ಪರಕೀಯರ ಕೈಯಿಂದ ರಕ್ಷಿಸಿದ್ದ ರಾಣಿ ಅಬ್ಬಕ್ಕ
ಭಾರತೀಯ ನೆಲದಲ್ಲಿ ಅಧಿಕಾರವನ್ನು ನೆಲೆಯೂರಿಸುವ ಪೋರ್ಚುಗೀಸರ ಪ್ರಥಮ ಪ್ರಯತ್ನವನ್ನು ವಿಫಲಗೊಳಿಸಿದ ಕೀರ್ತಿ ಬಂದರು ನಗರಿ ಕರಾವಳಿಯ ಚೌಟ ಮನೆತನದ ಕೆಚ್ಚೆದೆಯ ವೀರರಾಣಿ ಅಬ್ಬಕ್ಕಳಿಗೆ ಸಲ್ಲುತ್ತದೆ.
ಭಾರತೀಯ ನೆಲದಲ್ಲಿ ಅಧಿಕಾರವನ್ನು ನೆಲೆಯೂರಿಸುವ ಪೋರ್ಚುಗೀಸರ ಪ್ರಥಮ ಪ್ರಯತ್ನವನ್ನು ವಿಫಲಗೊಳಿಸಿದ ಕೀರ್ತಿ ಬಂದರು ನಗರಿ ಕರಾವಳಿಯ ಚೌಟ ಮನೆತನದ ಕೆಚ್ಚೆದೆಯ ವೀರರಾಣಿ ಅಬ್ಬಕ್ಕಳಿಗೆ ಸಲ್ಲುತ್ತದೆ. 16ನೇ ಶತಮಾನದ ದ್ವಿತೀಯಾರ್ಧದಲ್ಲಿ ಉಳ್ಳಾಲದಲ್ಲಿ ಪರಂಗಿಯರ ಜೊತೆ ಹೋರಾಟ ನಡೆಸುವ ಮೂಲಕ ವಸಾಹತುಶಾಹಿಗಳ ವಿರುದ್ಧ ಹೋರಾಡಿದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಎಂಬ ಹೆಗ್ಗಳಿಕೆಗೆ ವೀರರಾಣಿ ಅಬ್ಬಕ್ಕ ಪಾತ್ರರಾಗುತ್ತಾರೆ.
ಅಬ್ಬಕ್ಕ ಸ್ವಾಭಿಮಾನ ಹಾಗೂ ಶೌರ್ಯದಿಂದ ಆಳ್ವಿಕೆ ನಡೆಸಿದ್ದು ಈಕೆಯ ಆಳ್ವಿಕೆ ಕಾಲದಲ್ಲಿ ಉಳ್ಳಾಲ ರಾಜ್ಯದಲ್ಲಿ ಎಲ್ಲ ಜಾತಿ, ಧರ್ಮದ ಜನ ಸೌಹಾರ್ದದಿಂದ ಬದುಕುತ್ತಿದ್ದು ಸಾಮರಸ್ಯಕ್ಕೆ ಮಾದರಿಯಾಗಿತ್ತು. ದೇವಾಲಯಗಳ ನಗರಿ ಮೂಡುಬಿದಿರೆಯ ಚೌಟ ಮನೆತನದಲ್ಲಿ ಹುಟ್ಟಿದ ರಾಣಿ ಅಬ್ಬಕ್ಕ ಮದುವೆ ನಂತರ ಉಳ್ಳಾಲ ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಾರೆ.
India@75: ಬ್ರಿಟಿಷರ ವಿರುದ್ಧ ಗುಪ್ತ ಸೈನ್ಯ ಕಟ್ಟಿದ್ದ ವಿಜಯಪುರದ ಕರಿಭಂಟನಾಳ ಸ್ವಾಮೀಜಿ
ಸಾಂಬಾರು ಪದಾರ್ಥಗಳು, ಬೆಲೆ ಬಾಳುವ ಚಿನ್ನ ಹಾಗೂ ಬೆಳ್ಳಿ ಹೇರಳವಾಗಿ ಸಿಗುತ್ತಿದ್ದ ಕರಾವಳಿಯನ್ನು ವಶಪಡಿಸಿಕೊಳ್ಳಲು ಪೋರ್ಚುಗೀಸರು ಸಂಚುಮಾಡುತ್ತಿದ್ದರು. ಪೋರ್ಚುಗೀಸರಿಗೆ ಪ್ರತಿ ಬಾರಿ ವ್ಯಾಪಾರ ತೆರಿಗೆ ಹಾಗೂ ಕಪ್ಪ ಕೊಡಲು ನಿರಾಕರಿಸುತ್ತಿದ್ದ ಅಬ್ಬಕ್ಕ ವಿದೇಶೀಯರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಳು. ಹೇಗಾದರೂ ಮಾಡಿ ರಾಣಿ ಅಬ್ಬಕ್ಕಳನ್ನು ಸೋಲಿಸಬೇಕೆಂದು ಪೋರ್ಚುಗೀಸರು ಪಣ ಹೊಂದಿದ್ದರು. ಅದಕ್ಕೆ ಅಸ್ತ್ರವಾಗಿ ಅಬ್ಬಕ್ಕಳ ಪತಿಯನ್ನೇ ಬಳಸಿಕೊಂಡರು. ಪತಿಯೇ ವಿದೇಶಿಯರೊಂದಿಗೆ ಸ್ನೇಹ ಬೆಳೆಸಿಕೊಂಡು ತನಗೆ ಎದುರು ನಿಂತ ಸಂದರ್ಭದಲ್ಲಿ ಧೃತಿಗೆಡದೆ ತನ್ನ ವಿಚಾರಗಳಿಗೆ ಬದ್ಧಳಾದವಳು ಅಬ್ಬಕ್ಕ.
ಅಬ್ಬಕ್ಕಳ ಸಾಹಸ: ಸುಮಾರು 3000ದಷ್ಟಿದ್ದ ಪೋರ್ಚುಗೀಸ್ ಸೇನೆ ಅಳಿವೆಯಲ್ಲಿ ಬೀಡುಬಿಟ್ಟಿರುವುದು ರಾಣಿ ಅಬ್ಬಕ್ಕಳ ಗಮನಕ್ಕೆ ಬಂತು. ಕೂಡಲೇ ಅವಳು ಉಳ್ಳಾಲದ ಮೊಗವೀರರು, ಬಂಟರು, ಬಿಲ್ಲವರು, ಮುಸಲ್ಮಾನರು ಮುಂತಾದ ಸ್ಥಳೀಯರನ್ನು ಒಟ್ಟಾಗಿಸಿ ಕಗ್ಗತ್ತಲೆಯಲ್ಲೇ ದೋಣಿಗಳಲ್ಲಿ ತಂಡಗಳನ್ನು ತೆಂಗಿನ ಗರಿಗಳ ಪಂಜುಗಳೊಂದಿಗೆ ಮುನ್ನುಗ್ಗಿಸಿದಳು. ನಡುರಾತ್ರಿಯಲ್ಲಿ ಆರೇಳು ಹಡಗುಗಳಲ್ಲಿ ಮೈಮರೆತಿದ್ದ ಪೋರ್ಚುಗೀಸ್ ಹಡಗುಗಳಿಗೆ ಏಕ ಕಾಲದಲ್ಲಿ ಜೈ ಸೋಮನಾಥ ಎನ್ನುತ್ತಾ ಒಂದೇ ಸಮನೆ ಬೆಂಕಿಯ ಪಂಜುಗಳ ಮಳೆಗರೆಯಲಾಯಿತು. ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಅನೇಕರನ್ನು ಸದೆ ಬಡಿದರು ಎಂಬುದು ಇತಿಹಾಸದಲ್ಲಿ ಉಲ್ಲೇಖವಾಗಿದೆ.
India@75:ತುಮಕೂರು ಕಾಲೇಜು ವಿದ್ಯಾರ್ಥಿಗಳು ರೂಪಿಸಿದ್ದ ಸ್ವಾತಂತ್ರ್ಯ ಹೋರಾಟ
ಅಬ್ಬಕ್ಕಳ ಸಾಹಸ: ಕ್ರಿ.ಶ.1581ರ ಕೊನೇ ವೇಳೆಗೆ ಸುಮಾರು 2000 ಸೈನಿಕರೊಂದಿಗೆ ಪೋರ್ಚುಗೀಸರು ಉಳ್ಳಾಲದ ಮೇಲೆ ದಾಳಿ ಮಾಡಿ ಅಲ್ಲೇ ಕಾಡುಕಡಿದು ಉಳ್ಳಾಲವನ್ನು ಸುಟ್ಟು ಹಾಕಿದರು. ಮುಂದೆ ಉಳ್ಳಾಲದಲ್ಲಿ ನಡೆದ ಯುದ್ಧದಲ್ಲಿ ಅಬ್ಬಕ್ಕ ಮತ್ತು ಆಕೆಯ ಸೈನ್ಯ ಪೋರ್ಚುಗೀಸರ ವಿರುದ್ಧ ಶಕ್ತಿ ಮೀರಿ ಕಾದಾಡಿತು. ಆದರೆ ಭಾರೀ ತಯಾರಿಯೊಂದಿಗೆ ಬಂದಿದ್ದ ಪೋರ್ಚುಗೀಸ್ ಸೈನ್ಯ, ಉಳ್ಳಾಲದಲ್ಲಿ ಅಪಾರ ಹಾನಿ ಮಾಡಿತು. ಅಂತಿಮವಾಗಿ ಅಬ್ಬಕ್ಕ ಸೋಲೊಪ್ಪಿಕೊಳ್ಳಬೇಕಾಯಿತು. ರಣರಂಗದಲ್ಲಿ ಗಾಯಗೊಂಡ ಅಬ್ಬಕ್ಕ ದೇವಿ ಕ್ರಿ.ಶ. 1582ರಲ್ಲಿ ಮರಣ ಹೊಂದಿದಳು ಎಂದು ಇತಿಹಾಸ ಉಲ್ಲೇಖಿಸುತ್ತದೆ. ಅಬ್ಬಕ್ಕನ ಹೋರಾಟ ಎಲ್ಲರಿಗೂ ಸ್ಫೂರ್ತಿಯಾಗಲೆಂದು ಉಳ್ಳಾಲದಲ್ಲಿ ಅಬ್ಬಕ್ಕನ ಎತ್ತರದ ಪ್ರತಿಮೆ ನಿರ್ಮಿಸಲಾಗಿದೆ.
ತಲುಪುವುದು ಹೇಗೆ?
ಮಂಗಳೂರಿನಿಂದ 13.3 ಕಿ.ಮೀ. ದೂರದಲ್ಲಿ ಅಬ್ಬಕ್ಕಳ ನಾಡು ಉಳ್ಳಾಲ ಸಿಗುತ್ತದೆ. ಉಳ್ಳಾಲ ತಲುಪುತ್ತಿದ್ದಂತೆ ಎತ್ತರದ ಅಬ್ಬಕ್ಕ ಪ್ರತಿಮೆಯ ಸರ್ಕಲ್ ಸಿಗುತ್ತದೆ. ಮಂಗಳೂರಿನಿಂದ ಅಲ್ಲಿಗೆ ಬಸ್ ಹಾಗೂ ಖಾಸಗಿ ವಾಹನದ ಮೂಲಕ ತಲುಪಬಹುದು.
- ವಜ್ರ ಗುಜರನ್ ಮಾಡೂರು