Asianet Suvarna News Asianet Suvarna News

India@75: ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಬೆಂಬಿಡದೆ ಕಾಡಿದ ಬಳ್ಳಾರಿಯ ಕೊಟ್ಟೂರು

ಬಳ್ಳಾರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದಲ್ಲಿ ಕೊಟ್ಟೂರು ಬಹುದೊಡ್ಡ ಪಾತ್ರ ನಿರ್ವಹಿಸಿದೆ. ಬ್ರಿಟಿಷರ ದಾಸ್ಯ ಸಂಕೋಲೆಯಿಂದ ಬಿಡುಗಡೆಗೊಳ್ಳಲು ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ನಡೆದ ಅಸಹಕಾರ, ಚಲೇಜಾವ್‌, ಮದ್ಯಪಾನ ವಿರೋಧಿ ಚಳವಳಿಯಲ್ಲಿ ಕೊಟ್ಟೂರಿನ ಯುವಕರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ, ಹೋರಾಟದ ಕಿಚ್ಚು ತೀವ್ರಗೊಳಿಸಿದರು. ಪರಿಣಾಮ ಅನೇಕರು ಜೈಲು ಪಾಲಾದರು.

Azadi Ki Amrith Mahothsav Role of Ballari Kotturu in Freedom Fight hls
Author
Bengaluru, First Published Jul 6, 2022, 11:31 AM IST

ಬಳ್ಳಾರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದಲ್ಲಿ ಕೊಟ್ಟೂರು ಬಹುದೊಡ್ಡ ಪಾತ್ರ ನಿರ್ವಹಿಸಿದೆ. ಬ್ರಿಟಿಷರ ದಾಸ್ಯ ಸಂಕೋಲೆಯಿಂದ ಬಿಡುಗಡೆಗೊಳ್ಳಲು ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ನಡೆದ ಅಸಹಕಾರ, ಚಲೇಜಾವ್‌, ಮದ್ಯಪಾನ ವಿರೋಧಿ ಚಳವಳಿಯಲ್ಲಿ ಕೊಟ್ಟೂರಿನ ಯುವಕರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ, ಹೋರಾಟದ ಕಿಚ್ಚು ತೀವ್ರಗೊಳಿಸಿದರು. ಪರಿಣಾಮ ಅನೇಕರು ಜೈಲು ಪಾಲಾದರು.

ಕೊಟ್ಟೂರು ಭಾಗದ ಧೀಮಂತ ಹೋರಾಟಗಾರರಾಗಿದ್ದ ಗೊರ್ಲಿ ಶರಣಪ್ಪ, ಬಣಕಾರ ಗೌಡಪ್ಪ, ಭದ್ರಶೆಟ್ಟಿಸಣ್ಣ ರುದ್ರಪ್ಪ, ಗುರುಲಿಂಗಪ್ಪ, ಅಲಬೂರು ನಂಜಪ್ಪ ಅವರು ಹೋರಾಟದ ನೇತೃತ್ವ ವಹಿಸಿಕೊಂಡಿದ್ದರು. ಹತ್ತಾರು ಮಹಿಳೆಯರು ಬಹಿರಂಗವಾಗಿಯೇ ಚಳವಳಿಗೆ ಧುಮುಕಿ ದೇಶಪ್ರೇಮ ಮೆರೆದಿದ್ದರು.

India@75:ಬ್ರಿಟಿಷರ ನಿದ್ದೆಗೆಡಿಸಿದ್ದ ರಾಣೆಬೆನ್ನೂರಿನ 'ನಾಡಬಾಂಬ್' ತಿಮ್ಮನಗೌಡ

ಬ್ರಿಟಿಷರ ವಿರುದ್ಧ ಚಳವಳಿ ತೀವ್ರ:

ಅದು ಅಸಹಕಾರ ಚಳವಳಿ ತೀವ್ರಗೊಂಡಿದ್ದ ಸಮಯ. ಬಣಕಾರ ಗೌಡಪ್ಪ ಅವರು ಕೊಟ್ಟೂರು ಠಾಣೆಗೆ ನುಗ್ಗಿ ಸ್ವಾತಂತ್ರ್ಯ ಹೋರಾಟದ ಕರಪತ್ರಗಳನ್ನು ಹಾಕಿ ‘ಭಾರತ ಮಾತಾಕೀ ಜೈ’ ಎಂದು ಜಯಘೋಷ ಕೂಗಿದರು. ಇವರನ್ನು ಬಂಧಿಸಿದ ಪೊಲೀಸರು ಲಾಠಿ, ಬೂಟಿನಿಂದ ಥಳಿಸಿದರಲ್ಲದೆ, ಬಳಿಕ ಮಹಾರಾಷ್ಟ್ರದ ಹಿಂಡಲಗಾ ಮತ್ತು ಯರವಾಡ ಜೈಲಿಗೆ ತಳ್ಳಿದರು. ಇವರ ಬಂಧನದಿಂದ ಕೊಟ್ಟೂರು ಭಾಗದ ಸ್ವಾತಂತ್ರ್ಯ ಚಳವಳಿಯ ಕಾವು ತೀವ್ರಗೊಂಡಿತೇ ವಿನಃ ಕಡಿಮೆಯಾಗಲಿಲ್ಲ. ಸುತ್ತಮುತ್ತಲಿನ ಹತ್ತಾರು ಹಳ್ಳಿಯಿಂದ ಯುವಕರು ಕೊಟ್ಟೂರಿಗೆ ಆಗಮಿಸಿ ಬ್ರಿಟಿಷರ ವಿರುದ್ಧದ ಘೋಷಣೆಗಳನ್ನು ಕೂಗುತ್ತ ಮೆರವಣಿಗೆ ನಡೆಸಿದರು.

ಭದ್ರಶೆಟ್ಟಿಸಣ್ಣ ರುದ್ರಪ್ಪನವರನ್ನು ಚಲೇ ಜಾವ್‌ ಚಳವಳಿಯಲ್ಲಿ ಸರ್ಕಾರಿ ಕಚೇರಿಗಳನ್ನು ಧ್ವಂಸ ಮಾಡಿದ ಆರೋಪದಡಿ ಬಂಧಿಸಿ, 18 ತಿಂಗಳು ಕಾಲ ಅವರನ್ನು ಹಿಂಡಲಗಾ, ವೆಲ್ಲೂರು, ತಂಜಾವೂರು ಸೇರಿದಂತೆ ಬೇರೆ ಬೇರೆ ಜೈಲುಗಳಲ್ಲಿರಿಸಿ ಕಠಿಣ ಶಿಕ್ಷೆ ನೀಡಲಾಯಿತು.

ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ ಆರೋಪದಡಿ ಕೊಟ್ರಬಸಯ್ಯ ಅವರನ್ನು ಬಳ್ಳಾರಿಯ ಅಲ್ಲೀಪುರ ಜೈಲಿಗೆ ಕಳಿಸಲಾಯಿತು. ಸ್ವಾತಂತ್ರ್ಯ ಚಳವಳಿಯ ನೇತೃತ್ವ ವಹಿಸಿದ್ದ ಗೊರ್ಲಿ ಶರಣಪ್ಪ, ಡಾ.ಅಲಬೂರು ನಂಜಪ್ಪ, ಕೆಲಸೇರ ತಿಮ್ಮಪ್ಪ ಹಾಗೂ ಎಸ್‌.ಗೋವಿಂದಪ್ಪರನ್ನು ವೆಲ್ಲೂರು ಜೈಲಿಗೆ ತಳ್ಳಿದರೆ, ಉಳಿದ ಹೋರಾಟಗಾರರನ್ನು ಹಿಂಡಲಗಾ, ಬಳ್ಳಾರಿಯ ಅಲ್ಲೀಪುರ ಜೈಲಿಗೆ ಹಾಕಿ ಮನಸೋ ಇಚ್ಛೆ ಥಳಿಸಲಾಯಿತು. ಗೊರ್ಲಿ ಶರಣಪ್ಪ ಪತ್ನಿ ರುದ್ರಮ್ಮ ಸಹ ಪತಿಯ ಜೊತೆಗೆ ಚಳವಳಿಯಲ್ಲಿ ತೊಡಗಿಸಿಕೊಂಡು ಮಹಿಳೆಯರನ್ನು ಚಳವಳಿಗೆ ತರಲು ಬಹುದೊಡ್ಡ ಪಾತ್ರ ನಿರ್ವಹಿಸಿದರು.

India@75:ಗಾಂಧೀಜಿ ಹೋರಾಟ ಸ್ಮರಿಸುವ ಬೆಂಗಳೂರಿನ ಗಾಂಧಿಭವನ

ಭಾರತ ವ್ಯಾಯಾಮ ಶಾಲೆಯಲ್ಲಿ ತರಬೇತಿ

ಸ್ವಾತಂತ್ರ್ಯ ಹೋರಾಟ ತೀವ್ರಗೊಳಿಸಲು, ವಿದ್ಯಾರ್ಥಿ-ಯುವಜನರಿಗೆ ಕೊಟ್ಟೂರಿನ ಭಾರತ ವ್ಯಾಯಾಮ ಶಾಲೆಯಲ್ಲಿ ತರಬೇತಿ ನೀಡಲಾಗುತ್ತಿತ್ತು. ಹೋರಾಟದ ಮುಂಚೂಣಿಯಲ್ಲಿದ್ದ ಗೊರ್ಲಿ ಶರಣಪ್ಪ ಅವರು ಇದರ ಸ್ಥಾಪಕರು. ಬೆಳಗ್ಗೆ ಹಾಗೂ ಸಂಜೆ ವೇಳೆಗೆ ವ್ಯಾಯಾಮ ಶಾಲೆಗೆ ಬರುತ್ತಿದ್ದ ಯುವಕರಿಗೆ ಗಾಂಧೀಜಿಯವರ ಹೋರಾಟ, ಬ್ರಿಟಿಷರ ದುರಾಡಳಿತ ಕುರಿತು ತಿಳಿಸಿಕೊಡಲಾಗುತ್ತಿತ್ತು. ಇದರಿಂದ ಪ್ರೇರಿತರಾಗುತ್ತಿದ್ದ ಯುವಕರು ಹೋರಾಟದಲ್ಲಿ ತೊಡಗಿಸಿಕೊಳ್ಳುತ್ತಿದ್ದರಲ್ಲದೆ, ಬಳ್ಳಾರಿಯ ಕೇಂದ್ರ ಪ್ರದೇಶಕ್ಕೂ ಆಗಮಿಸಿ ಚಳವಳಿಯಲ್ಲಿ ಧುಮುಕುತ್ತಿದ್ದರು. ಸ್ವಾತಂತ್ರ್ಯದ ನಂತರವೂ ವ್ಯಾಯಾಮ ಶಾಲೆ ಚಟುವಟಿಕೆಯಲ್ಲಿತ್ತು. ಬಳಿಕ ಸ್ಥಗಿತವಾಯಿತು.

ತಲುಪುವುದು ಹೇಗೆ?

ಕೊಟ್ಟೂರು ತಾಲೂಕು ಕೇಂದ್ರವಾಗಿದ್ದು, ಸದ್ಯ ವಿಜಯನಗರ ಜಿಲ್ಲೆಯಲ್ಲಿದೆ. ರಾಜಧಾನಿ ಬೆಂಗಳೂರಿನಿಂದ ನೇರವಾಗಿ ರೈಲು, ಬಸ್‌ ಸೇವೆ ಇದೆ.

- ಕೆ.ಎಂ.ಮಂಜುನಾಥ್‌

Follow Us:
Download App:
  • android
  • ios