Asianet Suvarna News Asianet Suvarna News

India@75: ಬ್ರಿಟಿಷರ ನಿದ್ದೆಗೆಡಿಸಿದ್ದ ರಾಣೆಬೆನ್ನೂರಿನ ‘ನಾಡಬಾಂಬ್‌’ ತಿಮ್ಮನಗೌಡ

ಹಾವೇರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಇತಿಹಾಸ ಕೆದಕಿದರೆ ರಾಣಿಬೆನ್ನೂರು ತಾಲೂಕಿನ ಮೆಣಸಿನಹಾಳ ಗ್ರಾಮದ ತಿಮ್ಮನಗೌಡ ಹಾಲನಗೌಡ ಪಾಟೀಲರ ಹೆಸರೂ ಪ್ರಮುಖ.

Azadi Ki Amrith Mahothsav role of Haveri Ranebennur Thimmanagowda in Freedom Fight hls
Author
Bengaluru, First Published Jul 4, 2022, 4:50 PM IST

ಹಾವೇರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಇತಿಹಾಸ ಕೆದಕಿದರೆ ರಾಣಿಬೆನ್ನೂರು ತಾಲೂಕಿನ ಮೆಣಸಿನಹಾಳ ಗ್ರಾಮದ ತಿಮ್ಮನಗೌಡ ಹಾಲನಗೌಡ ಪಾಟೀಲರ ಹೆಸರೂ ಪ್ರಮುಖ. ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ ಸಶಸ್ತ್ರ ಹೋರಾಟದಿಂದ ಹೆಚ್ಚು ಪ್ರಭಾವಿತರಾಗಿದ್ದ ತಿಮ್ಮನಗೌಡ ಅವರು ಗಾಂಧೀಜಿ ಅವರ ಆದರ್ಶಗಳನ್ನೂ ಪಾಲಿಸಿ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಹಾವೇರಿಯ ಖ್ಯಾತನಾಮರಾದ ಮೈಲಾರ ಮಹಾದೇವ, ಸಂಗೂರ ಕರಿಯಪ್ಪ ಮುಂತಾದವರ ಒಡನಾಡಿಯಾಗಿದ್ದ ತಿಮ್ಮನಗೌಡ ಅವರು ಎಳೆಯ ವಯಸ್ಸಿನಲ್ಲೇ ಯುವಕರ ತಂಡ ಕಟ್ಟಿಕೊಂಡು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದವರು. ಗಾಂಧೀಜಿ ಕರೆ ನೀಡಿದ್ದ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕೆಲಕಾಲ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು. ನಾಡಬಾಂಬ್‌ ತಯಾರಿಕೆಯಲ್ಲಿ ಪರಿಣತಿ ಹೊಂದಿದ್ದ ಇವರು ಬ್ರಿಟಿಷ್‌ ಅಧಿಕಾರಿಗಳಲ್ಲಿ ನಡುಕ ಸೃಷ್ಟಿಸಿದ್ದರು.

India@75: ಒಂದೂವರೆ ತಿಂಗಳು ಸಮುದ್ರ ತೀರದಲ್ಲಿ ಉಪ್ಪು ತಯಾರಿಸಿ ಬ್ರಿಟಿಷರಿಗೆ ಸಡ್ಡು

ನೇತಾಜಿ ಪ್ರೇರಣೆ:

ಒಮ್ಮೆ ಬ್ಯಾಡಗಿಗೆ ಸ್ವಾತಂತ್ರ್ಯ ಸೇನಾನಿ ಸುಭಾಶ್ಚಂದ್ರ ಬೋಸ್‌ ಅವರು ಆಗಮಿಸಿದಾಗ ಸ್ವಾತಂತ್ರ್ಯ ಹೋರಾಟದ ಕುರಿತ ಅವರ ಭಾಷಣ ಕೇಳಿ ಓದಿಗೆ ಶರಣುಹೊಡೆದು 21ರ ವಯಸ್ಸಿನಲ್ಲೇ ತಿಮ್ಮನಗೌಡ ಕಾನೂನು ಭಂಗ ಚಳವಳಿಗೆ ಧುಮುಕಿದರು. 1932ರ ಜನವರಿಯಲ್ಲಿ ಹಿರೇಕೆರೂರು ತಾಲೂಕಿನ ನಾಗವಂದ ಬಳಿಯ ಹಾರಿಕಟ್ಟಿಜಂಗಲ್‌ ನಾಶ ಮಾಡುವ ಕಾರ್ಯದಲ್ಲಿ 300 ಚಳವಳಿಗಾರರಲ್ಲಿ ಒಬ್ಬರಾಗಿ ಸೆರೆಸಿಕ್ಕ ಅವರು, 2 ವಷÜರ್‍ ಕಾಲ ಯರವಡಾ ಜೈಲಿನಲ್ಲಿದ್ದರು. ತುಮ್ಮಿನಕಟ್ಟಿಯಲ್ಲಿ ಸಂಗೂರ ಕರಿಯಪ್ಪ ಅವರ ತಂಡದ ಜತೆಗೂಡಿ ಸಶಸ್ತ್ರ ಹೋರಾಟದಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಬ್ರಿಟಿಷರ ನಿದ್ದೆಗೆಡಿಸಿದ್ದರು:

ಕಡೂರಿನಲ್ಲಿ ಕಂದಾಯ ಲೂಟಿ ಮಾಡಿ ಚಾವಡಿಗೆ ಬೆಂಕಿ ಹಚ್ಚಿದ್ದು, ರಟ್ಟೀಹಳ್ಳಿಯಲ್ಲಿ ಪೊಲೀಸ್‌ ಠಾಣೆಯಿಂದ 5 ಬಂದೂಕುಗಳ ಅಪಹರಣ, ಗುಡ್ಡದ ಮಾದಾಪುರ ಅರಣ್ಯ ಕಚೇರಿಯಿಂದ 4 ಬಂದೂಕು ಅಪಹರಿಸಿ ಕಚೇರಿಗೆ ಬೆಂಕಿ ಇಟ್ಟದ್ದು, ದಾವಣಗೆರೆ ಪೊಲೀಸ್‌ ಸ್ಟೇಷನ್‌ ಲೂಟಿ ಮಾಡಿದ್ದಲ್ಲದೆ ಹೊನ್ನಾಳಿ ಪೊಲೀಸ್‌ ಸ್ಟೇಶನ್‌ ನಾಶಮಾಡಿದ್ದು, ಇದಾದ ನಂತರ ಸಂಗೂರ ಕರಿಯಪ್ಪ ಅವರೊಂದಿಗೆ ಸೇರಿಕೊಂಡು ಹಾನಗಲ್‌ ಡಾಕ್‌ ಬಂಗ್ಲೋಗೆ ಬೆಂಕಿ ಹಚ್ಚಿದ್ದು ಸೇರಿ ಹಲವು ಬಂಡಾಯದ ಕೃತ್ಯಗಳಲ್ಲಿ ಪಾಲ್ಗೊಂಡಿದ್ದರು. ಇವರ ಉಪಟಳದಿಂದ ರೋಸಿಹೋದ ಜಿಲ್ಲಾ ಕಲೆಕ್ಟರ್‌, ತಿಮ್ಮನಗೌಡರನ್ನು ಹಿಡಿದು ಕೊಟ್ಟವರಿಗೆ ಅಥವಾ ಹೆಣ ತಂದುಕೊಟ್ಟವರಿಗೆ ಆಗಿನ ಕಾಲದಲ್ಲಿ .2 ಸಾವಿರ ಇನಾಮು ಘೋಷಿಸಿದ್ದಲ್ಲದೆ ಕಂಡಲ್ಲಿ ಗುಂಡಿಕ್ಕಲೂ ಆದೇಶಿಸಿದ್ದರು.

India@75: ಆಂಗ್ಲರಿಗೆ ಸಿಂಹಸ್ವಪ್ನವಾಗಿದ್ದ ವಿಜಯಪುರ ಇಂಚಗೇರಿ ಮಠ

ಹುತಾತ್ಮನಾದ ಸೇನಾನಿ: 1943ರ ಫೆಬ್ರವರಿ 10 ತಿಮ್ಮನಗೌಡರ ಪಾಲಿಗೆ ಕರಾಳ ದಿನ. ಅಂದು ರಾತ್ರಿ ಕುಪ್ಪೇಲೂರ ಚಾವಡಿಯಲ್ಲಿ ಹಫ್ತೇಹಣ ಲೂಟಿ ಯೋಜನೆ ಇತ್ತು. ರಾತ್ರಿ 10ಕ್ಕೆ ತಿಮ್ಮನಗೌಡರು ತಮ್ಮ ತಂಡದೊಂದಿಗೆ ಚಾವಡಿಗೆ ಆಗಮಿಸಿ ಹಫ್ತೇಕರ ಹಣ ಇಟ್ಟಿದ್ದ ಕೋಣೆ ಬೀಗ ಒಡೆಯಲು ಮುಂದಾಗುತ್ತಿದ್ದಂತೆ ಪೊಲೀಸರೊಂದಿಗೆ ಘಷÜರ್‍ಣೆ ನಡೆಯಿತು. ಈ ವೇಳೆ ತಿಮ್ಮನಗೌಡರ ಹೆಗಲಿನಲ್ಲಿದ್ದ ಚೀಲದಲ್ಲಿನ ಕೈಬಾಂಬ್‌ ಸ್ಫೋಟಗೊಂಡು ಅವರಿಗೆ ಗಂಭೀರ ಗಾಯಗಳಾದವು.

ಆಗ ಅವರ ಜತೆಗಿದ್ದ ತಂಡ ಅಲ್ಲಿಂದ ತಪ್ಪಿಸಿಕೊಂಡು ದಾವಣಗೆರೆ ಖಾಸಗಿ ಆಸ್ಪತ್ರೆಗೆ ತಿಮ್ಮನಗೌಡರನ್ನು ದಾಖಲಿಸಿತಾದರೂ ವಿಪರೀತ ರಕ್ತಸ್ರಾವದಿಂದ ಬದುಕುಳಿಯವುದು ಅಸಾಧ್ಯವೆನ್ನಿಸಿದ ಹಿನ್ನೆಲೆಯಲ್ಲಿ ಮೆಣಸಿನಹಾಳಕ್ಕೆ ತರುವಾಗ ಮಾರ್ಗದಲ್ಲೇ ಕೊನೆಯುಸಿರೆಳೆದರು. ತಿಮ್ಮನಗೌಡರ ಅಂತ್ಯಕ್ರಿಯೆಯನ್ನು ರಾಣಿಬೆನ್ನೂರಿನ ನ್ಯಾಯಾಲಯದ ಹಿಂಭಾಗದ ರುದ್ರಭೂಮಿಯಲ್ಲಿ ನಡೆಸಲಾಯಿತು. ತಿಮ್ಮನಗೌಡರ ಹೋರಾಟದ ಸ್ಮರಣೆಗಾಗಿ ಅವರ ಕಂಚಿನಮೂರ್ತಿಯನ್ನು ರಾಣಿಬೆನ್ನೂರಿನ ತಹಸೀಲ್ದಾರ್‌ ಕಚೇರಿ ಎದುರು ನಿರ್ಮಿಸಲಾಗಿದೆ.

ತಲುಪುವುದು ಹೇಗೆ?:

ರಾಣಿಬೆನ್ನೂರು ತಾಲೂಕಿನ ಮೆಣಸಿನಹಾಳ ಗ್ರಾಮ ನಗರದಿಂದ ಸುಮಾರು 25 ಕಿ.ಮೀ. ದೂರದಲ್ಲಿದ್ದು, ರಾಣಿಬೆನ್ನೂರಿನಿಂದ ತುಮ್ಮಿನಕಟ್ಟಿಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಸಾಗಬೇಕು.

- ಬಸವರಾಜ ಸರೂರ

Follow Us:
Download App:
  • android
  • ios