Asianet Suvarna News Asianet Suvarna News

India@75: ಗಾಂಧೀಜಿ ಹೋರಾಟ ಸ್ಮರಿಸುವ ಬೆಂಗಳೂರಿನ ಗಾಂಧಿಭವನ

- ಗಾಂಧೀಜಿ ಹೋರಾಟ ಸ್ಮರಿಸುವ ಗಾಂಧಿಭವನ

- ಬೆಂಗ್ಳೂರಲ್ಲಿ ಗಾಂಧೀಜಿ ಭಾಷಣ ಮಾಡುತ್ತಿದ್ದ ಜಾಗದಲ್ಲೇ ನಿರ್ಮಾಣ

- ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ತುಂಬಿದ ಜಾಗ

Role of Bengalur Gandhi Bhavan in Freedom Fight hls
Author
Bengaluru, First Published Jul 3, 2022, 4:07 PM IST

ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯ ತಾಣ ಬೆಂಗಳೂರಿನಲ್ಲಿರುವ ಈಗಿನ ಗಾಂಧಿಭವನ. ಉದ್ಯಾನನಗರಿಯಲ್ಲಿರುವ ಈಗಿನ ಗಾಂಧಿಭವನ ನಿರ್ಮಾಣಗೊಂಡಿದ್ದು ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕವಾದರೂ ಈ ಸ್ಥಳ ಸ್ವಾತಂತ್ರ್ಯ ಹೋರಾಟಗಾರರನ್ನು ಹುರಿದುಂಬಿಸುವ ಹಾಗೂ ಹೋರಾಟಕ್ಕೆ ಅಣಿಯಾಗಿಸುವ ಮಹತ್ತರ ಪಾತ್ರವನ್ನು ಪೋಷಿಸಿದೆ.

India@75:ಒಂದೂವರೆ ತಿಂಗಳು ಸಮುದ್ರ ತೀರದಲ್ಲಿ ಉಪ್ಪು ತಯಾರಿಸಿ ಬ್ರಿಟಿಷರಿಗೆ ಸಡ್ಡು

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು 1927 ಹಾಗೂ 1936ರಲ್ಲಿ ಬೆಂಗಳೂರಿಗೆ ಆಗಮಿಸಿದ್ದಾಗ ಸುಮಾರು 2 ತಿಂಗಳ ಕಾಲ ಈಗಿನ ಗಾಂಧಿಭವನದ ಸ್ಥಳದಲ್ಲಿ ಸ್ವಾತಂತ್ರ್ಯ ಹೋರಾಟದ ಕುರಿತು ಭಾಷಣಗಳನ್ನು ಮಾಡಿದ್ದರು. ಪಕ್ಕದ ಕುಮಾರಕೃಪ ಅತಿಥಿಗೃಹದಲ್ಲೇ ಉಳಿದುಕೊಂಡಿದ್ದ ಅವರು ತಮ್ಮ ಭಾಷಣಗಳನ್ನು ಆಲಿಸಲು ಆಗಮಿಸುತ್ತಿದ್ದ ಸಾವಿರಾರು ಮಂದಿಯನ್ನು ತಮ್ಮ ಮಾತುಗಳಿಂದ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಲು ಪ್ರೇರಣೆ ನೀಡಿದ್ದರು.

1915ರಲ್ಲಿ ಕರ್ನಾಟಕಕ್ಕೆ ಗಾಂಧೀಜಿ ಮೊದಲ ಭೇಟಿ ನೀಡಿದ್ದರು. ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಗೋಪಾಲಕೃಷ್ಣ ಗೋಖಲೆಯವರ ಭಾವಚಿತ್ರ ಅನಾವರಣಗೊಳಿಸಿದ್ದರು. ಗಾಂಧೀಜಿಯವರ ಕರ್ನಾಟಕದ ಮೊದಲ ಭೇಟಿಗೆ ಕನ್ನಡನಾಡಿನ ಹಿರಿಯ ರಾಜಕಾರಣಿ ಸಾಹಿತಿ ಡಿ.ವಿ.ಗುಂಡಪ್ಪ (ಡಿವಿಜಿ) ಪ್ರಯತ್ನವೂ ಕಾರಣ ಎಂದು ಸಿದ್ದವನಹಳ್ಳಿ ಕೃಷ್ಣಶರ್ಮ ಅವರು ‘ಗಾಂಧಿ ಮತ್ತು ಕರ್ನಾಟಕ’ ಎಂಬ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.

India@75: ಬ್ರಿಟಿಷ್ ಅಧಿಕಾರಿಗಳ ರುಂಡ ಕಡಿದು, ಅಗಸಿ ಬಾಗಿಲಿಗೆ ಕಟ್ಟಿದ್ದ ನರಗುಂದದ ಬಾಬಾಸಾಹೇಬ್

ಪತ್ನಿ ಕಸ್ತೂರಬಾ ಅವರೊಂದಿಗೆ ರೈಲಿನಲ್ಲಿ ಗಾಂಧೀಜಿ ಬೆಂಗಳೂರಿಗೆ ಬಂದಿಳಿದರು. ಆನಂದರಾವ್‌ ವೃತ್ತದಲ್ಲಿದ್ದ ಜಿಲ್ಲಾ ನ್ಯಾಯಾಧೀಶ ಎಸ್‌.ಕೃಷ್ಣಸ್ವಾಮಿ ಅಯ್ಯಂಗಾರ್‌ ಅವರ ಮನೆಗೆ ನಡೆದೇ ಸಾಗಿದ್ದರು. ಅಲ್ಲೇ ಅವರಿಗೆ ಬಿಡಾರದ ವ್ಯವಸ್ಥೆ ಮಾಡಲಾಗಿತ್ತು. ನಂತರ ಗೌರ್ನಮೆಂಟ್‌ ಹೈಸ್ಕೂಲ್‌ ಸಭಾಭವನಕ್ಕೆ (ಅದು ಈಗಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಆಗಿದೆ) ತೆರಳಿದ್ದರು.

ಈ ಭೇಟಿ ಗಾಂಧೀಜಿಯವರ ಕರ್ನಾಟಕದ ಒಡನಾಟಕ್ಕೆ ನಾಂದಿಯಾಯಿತು. ಬಳಿಕ 1920, 1927, 1934, 1936ರಲ್ಲಿ ಹಲವು ಬಾರಿ ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ಬಹುತೇಕ ವೇಳೆ ಅವರು ನಂದಿಬೆಟ್ಟಅಥವಾ ಬೆಂಗಳೂರು ಕುಮಾರಕೃಪ ಅತಿಥಿಗೃಹದಲ್ಲಿ ತಂಗಿ ಈಗಿನ ಗಾಂಧಿಭವನದ ಜಾಗದಲ್ಲಿ ಭಾಷಣಗಳನ್ನು ಮಾಡುತ್ತಿದ್ದರು. ಹೀಗಾಗಿಯೇ ಅವರ ಅನುಯಾಯಿಗಳು ಗಾಂಧೀಜಿ ಅವರು ಕಾಲವಾದ ಬಳಿಕ ಅದೇ ಜಾಗವನ್ನು ಗಾಂಧಿಭವನ ಆಗಿಸಿದರು.

10 ವರ್ಷ ಗಾಂಧಿಭವನಕ್ಕೆ ಸ್ವಂತ ಕಟ್ಟಡವಿರಲಿಲ್ಲ:

ಕರ್ನಾಟಕದಲ್ಲಿ ಗಾಂಧಿ ಸ್ಮಾರಕ ಭವನ ಸ್ಥಾಪಿಸಬೇಕೆಂಬ ಬಯಕೆ ವಾಸ್ತವಕ್ಕೆ ಬಂದಿದ್ದು 1953ರಲ್ಲಿ. ಸುಮಾರು 10 ವರ್ಷ ಕಾಲ ಗಾಂಧಿ ಭವನಕ್ಕೆ ಸ್ವಂತ ಕಟ್ಟಡವೇ ಇರಲಿಲ್ಲ. 1965ರಲ್ಲಿ ಕುಮಾರ ಕೃಪಾ ರಸ್ತೆಯ ವಿಶಾಲ ಪ್ರದೇಶದಲ್ಲಿ ಗಾಂಧಿ ಸ್ಮಾರಕ ಭವನದ ಕಟ್ಟಡ ತಲೆ ಎತ್ತಿತು. 1965ರಲ್ಲಿ ಅಂದಿನ ರಾಷ್ಟ್ರಪತಿ ದಿ.ಡಾ.ಎಸ್‌.ರಾಧಾಕೃಷ್ಣನ್‌ ಅವರು ಉದ್ಘಾಟಿಸಿದ್ದರು.

ಸ್ವಾತಂತ್ರ್ಯ ಹೋರಾಟ ಪರಿಚಯಿಸುವ ಕೇಂದ್ರ: ಪ್ರಸ್ತುತ ಗಾಂಧಿ ಭವನದಲ್ಲಿ ಒಟ್ಟು ಮೂರು ಹಂತದ ಪುಸ್ತಕ ಭಂಡಾರವಿದೆ. 12 ಸಾವಿರ ಪುಸ್ತಕಗಳಿವೆ. ಅಮೂಲ್ಯವಾದ ಪತ್ರಿಕಾ ಪ್ರಕಟಣೆಗಳು, ಅತೀ ವಿರಳÜ ನಿಯತಕಾಲಿಕೆಗಳು, ದಿನ ಪತ್ರಿಕೆಗಳು ಇಲ್ಲಿವೆ. ಇತ್ತೀಚೆಗೆ ಅಧ್ಯಯನ ಕೇಂದ್ರ ಎಂದು ಹೊಸ ವಿಭಾಗವನ್ನು ಸ್ಥಾಪಿಸಲಾಗಿದ್ದು, ಅಲ್ಲಿ ಅಪರೂಪದ ಹಾಗೂ ಗಾಂಧಿ ಅವರಿಗೆ ಮಾತ್ರವೇ ಸಂಬಂಧಿಸಿದ ಸುಮಾರು 12 ಸಾವಿರ ಪುಸ್ತಕಗಳಿವೆ.

ತಲುಪುವುದು ಹೇಗೆ?: ಗಾಂಧಿ ಭವನ ಬೆಂಗಳೂರಿನ ಹೃದಯಭಾಗದ ಸನಿಹದಲ್ಲೇ ಇದೆ. ಬೆಂಗಳೂರಿನ ಕೇಂದ್ರ ಸ್ಥಳ ಕೆಂಪೇಗೌಡ ನಿಲ್ದಾಣದಿಂದ ಬಸ್‌ ಅಥವಾ ಆಟೋದ ಮೂಲಕ ಸುಲಭವಾಗಿ ಈ ಸ್ಥಳ ತಲುಪಬಹುದು.

- ಶ್ರೀಕಾಂತ್‌ ಎನ್‌.ಗೌಡಸಂದ್ರ

Follow Us:
Download App:
  • android
  • ios