Asianet Suvarna News Asianet Suvarna News

India@75:ಕ್ವಿಟ್ ಇಂಡಿಯಾದಲ್ಲಿ ಮಡಿಕೇರಿ ವಿದ್ಯಾರ್ಥಿಗಳ ಕಿಚ್ಚು

- ಕ್ವಿಟ್‌ ಇಂಡಿಯಾ ಚಳವಳಿಗೆ ಧುಮುಕಿ 18ರ ಹರೆಯದಲ್ಲೇ ವೀರ ಮರಣವನ್ನಪ್ಪಿದ ಸಿಂಗೂರು ಕುಟ್ಟಪ್ಪ

- ಸೋಮವಾರಪೇಟೆ ತಾಲೂಕಿನ ಸಿಂಗೂರು ಗ್ರಾಮದ ಸಿಂಹವೆಂದೇ ಖ್ಯಾತಿ ಪಡೆದಿದ್ದ ಕುಟ್ಟಪ್ಪ

- ಕ್ವಿಟ್‌ ಇಂಡಿಯಾ ಚಳವಳಿಗೆ ಇಂದಿಗೆ 80 ವರ್ಷ

Azadi ki Amrit Mahothsav Quit India Movement And Madikeri hls
Author
Bengaluru, First Published Aug 8, 2022, 4:27 PM IST

ಕ್ವಿಟ್‌ ಇಂಡಿಯಾ ಚಳವಳಿಗೆ ಮಹಾತ್ಮ ಗಾಂಧೀಜಿ ಅವರು ಕರೆಕೊಟ್ಟು ಇಂದಿಗೆ 80 ವರ್ಷ ತುಂಬುತ್ತಿದೆ. ಮಡಿಕೇರಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಚಳವಳಿಯಲ್ಲಿ ಪಾಲ್ಗೊಂಡಿದ್ದ ಕೊಡಗಿನ ಸೋಮವಾರಪೇಟೆ ತಾಲೂಕಿನ 18 ವರ್ಷದ ತರುಣ ಸಿಂಗೂರು ಗ್ರಾಮದ ಕುಟ್ಟಪ್ಪ ಬ್ರಿಟಿಷರ ಲಾಠಿ ಏಟಿಗೆ ಬಲಿಯಾಗಿ ವೀರಮರಣ ಹೊಂದಿದ್ದರು.

ಆಗಸ್ಟ್‌ 8ರ 1942ರಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧೀಜಿ ಅವರು ಬ್ರಿಟಿಷರನ್ನು ದೇಶಬಿಟ್ಟು ತೊಲಗಿ ಎಂದು ಘೋಷಿಸಿದ ಆರು ದಿನಗಳ ನಂತರ ಆ.14ರಂದು ಕೊಡಗಿನಲ್ಲಿಯೂ ಹೋರಾಟ ಆರಂಭಿಸಿದ ವಿದ್ಯಾರ್ಥಿಗಳ ಮೇಲೆ ಬ್ರಿಟಿಷರು ನೆಡೆಸಿದ ದೌರ್ಜನ್ಯಕ್ಕೆ ಸೋಮವಾರಪೇಟೆ ತಾಲೂಕಿನ ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಂಗೂರು ಗ್ರಾಮದ ಸಿಂಹವೆಂದೇ ಖ್ಯಾತಿ ಪಡೆದಿದ್ದ ಕುಟ್ಟಪ್ಪನವರು ದೇಶದ ಸ್ವಾತಂತ್ರ್ಯಕ್ಕೆ ಬಲಿಯಾದರು.

India@75:ಕರ್ನಾಟಕದ ಪಾತ್ರ ಹೋರಾಟಗಾರರ 'ತರಬೇತಿ ಕೇಂದ್ರ' ವಿಜಯನಗರದ ಹರಪನಹಳ್ಳಿ

ಸಿಂಗೂರು ಗ್ರಾಮದ ಮಾದಪ್ಪ ಮತ್ತು ಗಂಗಮ್ಮ ದಂಪತಿಯ ಹಿರಿಯ ಪುತ್ರನಾಗಿ 1924 ರಲ್ಲಿ ಜನಿಸಿದ ಕುಟ್ಟಪ್ಪನವರು ಮಡಿಕೇರಿಯ ಸೆಂಟ್ರಲ್‌ ಹೈಸ್ಕೂಲ್‌ನಲ್ಲಿ ಓದುತ್ತಿದ್ದ ಸಂದರ್ಭ 1942ರ ಆಗಸ್ಟ್‌ 14ರಂದು ಕೊಡಗಿನ ವಿದ್ಯಾರ್ಥಿಗಳಾದ ಅಜ್ಜಿಕುಟ್ಟೀರ ಅಪ್ಪಣ್ಣ, ಪಾರುವಂಗಡ ಉತ್ತಪ್ಪ, ಮಲಚೀರ ಮುತ್ತಣ್ಣ, ಕೋದಂಡ ದೇವಯ್ಯ, ಕರ್ತಮಾಡ ಸುಬ್ಬಯ್ಯ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಮಡಿಕೇರಿಯಲ್ಲಿ ಹೋರಾಟ ಆರಂಭಿಸಿದರು.

ಇವರೆನ್ನೆಲ್ಲ ಬ್ರಿಟಿಷರು ಬಂಧಿಸಿ ಸೆರೆಮನೆಗೆ ತಳ್ಳಿದರು. ಈ ಸಂದರ್ಭ ಬ್ರಿಟಿಷ್‌ ಅಧಿಕಾರಿಗಳ ಆಕ್ರೊಶಕ್ಕೆ ಗುರಿಯಾದ ವಿದ್ಯಾರ್ಥಿಗಳ ಮೇಲೆ ನಡೆಸಿದ ಲಾಠಿ ಪ್ರಹಾರದಲ್ಲಿ ಸಿಂಗೂರು ಕುಟ್ಟಪ್ಪ ತೀವ್ರವಾಗಿ ಗಾಯಗೊಂಡರು. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ರವಾನಿಸಲಾಯಿತು. ಚಿಕತ್ಸೆ ಫಲಕಾರಿಯಾದೆ ಕುಟ್ಟಪ್ಪ ತನ್ನ 18ನೇ ವಯಸ್ಸಿನಲ್ಲಿಯೇ ಮರಣ ಹೊಂದಿದರು.

ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ಹೋರಾಟ ತೀವ್ರವಾಗಿದ್ದ ದಿನಗಳಲ್ಲಿ 1942 ರ ಆಗಸ್ಟ್‌ 8ರಂದು ಮುಂಬೈನ ಆಗಸ್ಟ್‌ ಕ್ರಾಂತಿ ಮೈದಾನದಲ್ಲಿ ಮಹಾತ್ಮ ಗಾಂಧೀಜಿ ಅವರು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಹೋರಾಟ ಆರಂಭಿಸಿದ ಸಂದರ್ಭ ಕೊಡಗಿನಲ್ಲಿಯೂ ಸ್ವಾತಂತ್ರ್ಯದ ಕಿಚ್ಚು ಹೆಚ್ಚಿತು. ಕ್ವಿಟ್‌ ಇಂಡಿಯಾ ಚಳವಳಿಗೆ ಬೆಂಬಲಿಸಲು ಕೊಡಗು ಸತ್ಯಾಗ್ರಹ ಸಮಿತಿಯ ಪ್ರಮುಖರಾದ ಪಂದ್ಯಂಡ ಬೆಳ್ಯಪ್ಪ ಮತ್ತು ಅವರ ಪತ್ನಿ ಸೀತಾ, ಕೊಳ್ಳಿಮಾಡ ಕರುಂಬಯ್ಯ, ಮುಲ್ಲೇಂಗಡ ಚಂಗಪ್ಪ, ಕಾಕಮಾಡ ನಾಣಯ್ಯ, ಚೆಪ್ಪುಡಿರ ಪೂಣಚ್ಚ ಸೇರಿದಂತೆ ಹಲವು ನಾಯಕರು ಅಣಿಯಾದರು.

ಕೊಡಗಿನಲ್ಲಿ ಸ್ವಾತಂತ್ಯದ ಕಹಳೆಯನ್ನು ಮೊಳಗಿಸಿ ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟಕ್ಕೆ ತಮ್ಮ ಜೀವದ ಹಂಗು ತೊರೆದು ಶ್ರಮಿಸಿದರು. ಇವರುಗಳ ಮನವಿ ಮೇರೆಗೆ ಗಾಂಧೀಜಿಯವರು 1934ರ ಫೆಬ್ರವರಿ 21 ರಿಂದ 23 ರವರೆಗೆ ಕೊಡಗಿಗೆ ಭೇಟಿ ನೀಡಿ ಸ್ವಾತಂತ್ರ್ಯದ ಕಿಚ್ಚನ್ನು ಹೆಚ್ಚಿಸಿದರು. ಇದರಿಂದ ಪ್ರೇರಿತರಾದ ಕೊಡಗಿನ ಹಲವು ಹೋರಾಟಗಾರರು ಜೀವ ತೆತ್ತಾದರೂ ಸರಿ ದೇಶಕ್ಕೆ ಸ್ವಾತಂತ್ರ್ಯ ತರಲು ಮುಂದಾದರು.

India@75:ಹೋರಾಟಗಾರರ ಅಡ್ಡೆ ಚಿಕ್ಕೋಡಿಯ ಬಸವಪ್ರಭು ಕೋರೆ ಮನೆ

ಬಾಲ್ಯದಿಂದಲೇ ಹೋರಾಟದ ಕಿಚ್ಚು ಹಚ್ಚಿಸಿಕೊಂಡಿದ್ದ ಕುಟ್ಟಪ್ಪ!

ಕೊಡಗಿನ ಹಿರಿಯ ರಾಜಕೀಯ ಮುತ್ಸದ್ಧಿ ಸೋಮವಾರಪೇಟೆಯ ಚೌಡ್ಲು ಗ್ರಾಮದ, ವಿಧಾನಪರಿಷತ್‌ ಮಾಜಿ ಸದಸ್ಯ ದಿ.ಸಿ.ಕೆ.ಕಾಳಪ್ಪ ನವರ ಕುಟುಂಬ, ಸಿಂಗೂರು ಮಾದಪ್ಪನವರ ಕುಟುಂಬ ಸೇರಿದಂತೆ ಅವರ ಹಲವು ಸ್ನೇಹಿತರು, ಬೆಂಬಲಿಗರು ಆದಾಗಲೇ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದರು. ಸಿಂಗೂರು ಮಾದಪ್ಪನವರು 1938 ರಲ್ಲಿಯೇ ಡಿಸ್ಟ್ರಿಕ್ಟ್ ಬೋರ್ಡ್‌ ಸದಸ್ಯರಾಗಿ ಸಮಾಜ ಸೇವೆಯನ್ನು ಆರಂಭಿಸಿದರು. ಇವರಿಂದ ಪ್ರೇರಿತರಾದ ಕುಟ್ಟಪ್ಪ ಬಾಲ್ಯದಿಂದಲೇ ಸ್ವಾತಂತ್ರ್ಯ ಚಳವಳಿಯ ಹೋರಾಟವನ್ನು ಕಣ್ಣಾರೆ ಕಂಡು ತಾವು ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ತೀರ್ಮಾನಿಸಿದ್ದರು.

ಪ್ರಾಥಮಿಕ ಶಿಕ್ಷಣವನ್ನು ಸೋಮವಾರಪೇಟೆಯಲ್ಲಿ ಪೂರೈಸಿದ ನಂತರ, ಸೋಮವಾರಪೇಟೆಯಲ್ಲಿ ಹೈಸ್ಕೂಲ್‌ ಇಲ್ಲದ್ದರಿಂದ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮಡಿಕೇರಿಯ ಸೆಂಟ್ರಲ್‌ ಹೈಸ್ಕೂಲ್‌ಗೆ ಸೇರ್ಪಡೆಗೊಂಡರು. ಅಲ್ಲಿ ಇವರಿಗೆ ಮಡಿಕೇರಿ, ವಿರಾಜಪೇಟೆ, ಗೋಣಿಕೊಪ್ಪ, ಪೊನ್ನಂಪೇಟೆ ಸೇರಿದಂತೆ ಹಲವು ಪ್ರದೇಶಗಳ ವಿದ್ಯಾರ್ಥಿಗಳು ಮತ್ತು ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಸಂಪರ್ಕ ದೊರೆಯಿತು.

ಆದರೆ ಸ್ವಾತಂತ್ರ್ಯ ಹೋರಾಟ ಪೂರ್ಣಗೊಳ್ಳುವ ಮುನ್ನವೇ 1942ರ ಆಗಸ್ಟ್‌ 14 ರಂದು ಬ್ರಿಟಿಷರ ಲಾಠಿ ಏಟಿಗೆ ಬಲಿಯಾಗಿ 18 ವರ್ಷದ ತರುಣ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತೆರಬೇಕಾಯಿತು. ಇವರ ಕುಟುಂಬದ ಸುಬೇದಾರ್‌ ಸಿಂಗೂರು ಮೇದಪ್ಪ ಅವರು ಪಾಕಿಸ್ತಾನದ ಸೈನ್ಯದ ವಿರುದ್ಧ ಜರುಗಿದ 1999ರ ಕಾರ್ಗಿಲ್‌ ಯುದ್ಧದಲ್ಲಿ ವೀರಮರಣವನ್ನಪ್ಪಿದರು.

 

ಸಿಂಗೂರು ಕುಟ್ಟಪ್ಪನವರ ಕುಟುಂಬ ಅಪ್ಪದ ದೇಶ ಪ್ರೇಮವನ್ನು ಮೈಗೂಡಿಸಿಕೊಂಡು ಬಂದಿತ್ತು. ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಹೋರಾಡಿ ತನ್ನ 18ನೇ ವಯಸ್ಸಿನಲ್ಲಿಯೇ ಪ್ರಾಣತೆತ್ತ ಯುವಕ ಕುಟ್ಟಪ್ಪನವರ ತ್ಯಾಗ-ಬಲಿದಾನವನ್ನು ಇಂದು ನಾವೆಲ್ಲರೂ ಸ್ಮರಿಸಬೇಕಾಗಿದೆ. ಇದರೊಂದಿಗೆ ವೀರಯೋಧ ಸಿಂಗೂರು ಮೇದಪ್ಪನವರೂ ಕೂಡ 1999ರ ಕಾರ್ಗಿಲ್‌ ಯುದ್ಧದಲ್ಲಿ ವೀರಮರಣವನ್ನು ಅರ್ಪಿಸಿದ್ದರು. ಜಿಲ್ಲೆಯ ಹಲವು ಯುವಕರಿಗೆ ಮಾದರಿಯಾಗಿದ್ದ ಕುಟ್ಟಪ್ಪ ಮೃತಪಟ್ಟು 80ವರ್ಷಗಳು ತುಂಬುತ್ತಿದ್ದು, ಅವರ ಹೆಸರಿನಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ

- ಎಸ್‌.ಎಂ. ಚಂಗಪ್ಪ, ಅಧ್ಯಕ್ಷರು, ಜಿಲ್ಲಾ ಒಕ್ಕಲಿಗರ ಸಂಘ, ಕೊಡಗು ಜಿಲ್ಲೆ

ನನ್ನ ಅಣ್ಣ ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಬ್ರಿಟಿಷರ ಲಾಠಿ ಏಟಿಗೆ ಬಲಿಯಾದ ಸಂದರ್ಭ ಚಿಕ್ಕವನಾಗಿದ್ದ ನನಗೆ ಅಷ್ಟೇನೂ ತಿಳಿದಿಲ್ಲ. ಆದರೆ ವಿದ್ಯಾರ್ಥಿ ದಿಸೆಯಿಂದಲೇ ಅವರ ಹೋರಾಟ, ದೇಶಪ್ರೇಮದ ಬಗ್ಗೆ ಅಪ್ಪ-ಅಮ್ಮನಿಂದ ಕೇಳಿ ತಿಳಿದು ಹೆಮ್ಮೆಯೆನಿಸಿತ್ತು. ಇಂತಹ ಪುತ್ರನನ್ನು ಪಡೆದ ನಮ್ಮ ಕುಟುಂಬ ಮತ್ತು ನಮ್ಮ ಗ್ರಾಮಕ್ಕೆ ಹೆಮ್ಮೆಯೆನಿಸುತ್ತಿದೆ. ಅವರ ಆದರ್ಶವನ್ನು ಮುಂದಿನ ಯುವಪೀಳಿಗೆ ಮುಂದುವರೆಸಬೇಕಾಗಿದೆ

- ಸಿಂಗೂರು ಎಂ. ಕೃಷ್ಣಕಾಂತ್‌, ಕುಟ್ಟಪ್ಪನವರ ಸಹೋದರ

- ಮುರಳೀಧರ್‌ ಶಾಂತಳ್ಳಿ 

Follow Us:
Download App:
  • android
  • ios