Asianet Suvarna News Asianet Suvarna News

India@75: ಹೋರಾಟಗಾರರ ಅಡ್ಡೆ ಚಿಕ್ಕೋಡಿಯ ಬಸವಪ್ರಭು ಕೋರೆ ಮನೆ

- ಹೋರಾಟಗಾರರ ಅಡ್ಡೆ ಬಸವಪ್ರಭು ಕೋರೆ ಮನೆ

- ಸ್ವಾತಂತ್ರ್ಯ ಸೇನಾನಿಗಳಿಗೆ ಆರ್ಥಿಕವಾಗಿ ಬೆಂಗಾವಲಾಗಿದ್ದ ಕೋರೆ

- ಹೋರಾಟಗಾರರ ಕುಟುಂಬ ನಿರ್ವಹಣೆಗೂ ನೆರವಾಗಿದ್ದರು

Role of Chikkodi Basavaprabhu Kore in Freedom Fight hls
Author
Bengaluru, First Published Aug 4, 2022, 3:19 PM IST

ಮನೆಯಲ್ಲಿ ಶ್ರೀಮಂತಿಕೆ, ಮನದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು. ಹೀಗಾಗಿಯೇ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದ ಸೇನಾನಿಗಳನ್ನು ಒಟ್ಟುಗೂಡಿಸಿ ತಮ್ಮ ತೋಟದಲ್ಲೇ ಅವರಿಗೆ ಆಶ್ರಯ ನೀಡಿ, ಹೋರಾಟದ ರೂಪುರೇಷೆಗಳನ್ನು ಹೆಣೆಯುವಲ್ಲಿ ನಿಪುಣರಾಗಿದ್ದರು ದೇಶಭಕ್ತ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಬಸವಪ್ರಭು ಕೋರೆ. ಅಂತಹ ದಿಟ್ಟತನ ಪ್ರದರ್ಶಿಸಿ ಜೈಲುವಾಸವನ್ನೂ ಅನುಭವಿಸಿದ್ದರು.

ಗಾಂಧೀಜಿ ಅನುಯಾಯಿಯಾಗಿದ್ದ ಅವರು ಎಳೆ ವಯಸ್ಸಿನಲ್ಲೇ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಧುಮಕಿದರು. ಶ್ರೀಮಂತರಾಗಿದ್ದರಿಂದ ಚಿಕ್ಕೋಡಿ, ಹುಕ್ಕೇರಿ, ಸಂಕೇಶ್ವರ ಹಾಗೂ ನಿಪ್ಪಾಣಿ ಭಾಗದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ಆರ್ಥಿಕವಾಗಿ ಬೆಂಗಾವಲಾದರು. ಅವರ ಕುಟುಂಬದ ನಿರ್ವಹಣೆಗೆ ಅಗತ್ಯವಿರುವ ವೆಚ್ಚವನ್ನೂ ತಾವೇ ಭರಿಸುತ್ತಿದ್ದರು. ಸ್ವಾತಂತ್ರ್ಯ ಹೋರಾಟಗಾರರ ಸಭೆ ನಡೆಸಲು ತಮ್ಮ ಮನೆ ಮತ್ತು ತೋಟಗಳನ್ನು ಕಾರ್ಯಕ್ಷೇತ್ರವನ್ನಾಗಿ ಮಾರ್ಪಾಡು ಮಾಡಿದ್ದರು.

India@75:ಕರ್ನಾಟಕದ ಪಾತ್ರ ಹೋರಾಟಗಾರರ 'ತರಬೇತಿ ಕೇಂದ್ರ' ವಿಜಯನಗರದ ಹರಪನಹಳ್ಳಿ

ಮಹಡಿ ಮನೆಯೇ ಆಶ್ರಯತಾಣ:

1920ರಲ್ಲಿ ಚಳವಳಿ ಉತ್ತುಂಗಕ್ಕೇರಿದಾಗ ಜನರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದರು. ಸ್ವದೇಶಿ ಬಟ್ಟೆಧರಿಸಲು ಜಾಗೃತಿ ಮೂಡಿಸಿದರು. ಇವರ ಆಪ್ತರಾಗಿದ್ದ ಎಸ್‌.ನಿಜಲಿಂಗಪ್ಪ ಹಳ್ಳಿಕೇರಿ ಗುದ್ಲೆಪ್ಪ, ಅರಗಾವಿ ಬಸಪ್ಪ, ಅಣ್ಣು ಗುರೂಜಿ, ಗಂಗಾಧರ ದೇಶಪಾಂಡೆ, ಅಪ್ಪಣ್ಣಗೌಡ ಪಾಟೀಲ 1934ರಲ್ಲಿ ಅಂಕಲಿಗೆ ಬಂದು ಇವರ ಮನೆಯಲ್ಲಿ ಉಳಿದುಕೊಂಡಿದ್ದರು. ಆಗ ಹೋರಾಟದ ಬಗ್ಗೆ ಬಸವಪ್ರಭು ಕೋರೆ ಅವರು ವಿವರಣೆ ನೀಡಿದರು. ಅಲ್ಲದೆ ಅವರ ಹರಿಜನ ಪತ್ರಿಕೆಗೆ ಆರ್ಥಿಕ ಸಹಾಯ ಮಾಡಿದರು. ಅಂಕಲಿಯಲ್ಲಿ ಸೇವಾದಳ ಶಿಬಿರ ಆಯೋಜಿಸಿದರು. ಅಂಕಲಿ ಮುಖ್ಯಪೇಟೆಯ ತಮ್ಮ ಮಹಡಿ ಮನೆಯನ್ನು ಚತ್ರಾಲಯಕ್ಕೆ ಪುಕ್ಕಟ್ಟೆನೀಡಿದರು.

1942ರಲ್ಲಿ ಚಳವಳಿ ದಿಕ್ಕುಬದಲಿಸಿ ತೀವ್ರಗೊಂಡಿತು. ಈ ಸಮಯಲ್ಲಿ ಅಂಕಲಿ, ಚಿಕ್ಕೋಡಿ, ಸಂಕೇಶ್ವರ, ಬೇಡಿಕಾಳ ಚಳವಳಿಗಾರರೆಲ್ಲ ಸೇರಿ ಅಷ್ಟೇ ಉಗ್ರವಾಗಿ ಹೋರಾಟ ಆರಂಭಿಸಿದ್ದರು. ನವೆಂಬರ್‌ 6, 1942ರಂದು ದಿ.ಪ್ಪಣ್ಣಗೌಡರ ನೈತೃತ್ವದಲ್ಲಿ ರಾಯಭಾಗ ಸ್ಟೇಶನ್‌ಗೆ ಬೆಂಕಿ ಹಚ್ಚಿ ಬಂದರು. ಆಗ ಶಿವಪ್ಪ ಮಲ್ಲಪ್ಪ ಗುಂಡಾಳಿ ಅವರ ಮೈಗೆ ಬೆಂಕಿ ತಗುಲಿತ್ತು. ಇವರೆಲ್ಲರೂ ಕೋರೆಯವರ ನಂದಿಕುರಳಿ ತೋಟದಲ್ಲಿ ಅಡಗಿ ಕುಳಿತರು. ಇದರ ಮಾಹಿತಿ ದೊರೆತ ಬ್ರಿಟಿಷ್‌ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಕೋರೆ ತಮ್ಮ ವಾಹನಗಳಲ್ಲಿ ಎಲ್ಲರನ್ನು ಅಲ್ಲಿಂದ ಪಾರು ಮಾಡಿ, ತಮ್ಮ ಇನ್ನೊಂದು ತೋಟದಲ್ಲಿ ಅಡಗಿಸಿಟ್ಟರು.

ಬ್ರಿಟಿಷರು, ಜಮೀನ್ದಾರರಿಗೆ ಸಿಂಹಸ್ವಪ್ನವಾಗಿದ್ದ ಬಾಗಲಕೋಟೆ ಧೀರ ಸಿಂಧೂರ ಲಕ್ಷ್ಮಣ

ಸಿಟ್ಟಿಗೆದ್ದ ಬ್ರಿಟಿಷರು ಆಶ್ರಯದಾತ ಬಸವಪ್ರಭು ಕೋರೆ ಮತ್ತು ಇವರ ಜೊತೆ ಇದ್ದ 20 ಹೋರಾಟಗಾರರನ್ನು 1942 ರ ಡಿ.25 ರಂದು ಬಂಧಿಸಿ 5 ತಿಂಗಳು ಜೈಲಿನಲ್ಲಿರಿಸಿದರು. ರಾವ್‌ಬಹದ್ದೂರ ಅಂಗಡಿ ರಾವಸಾಬ್‌ ಕರಾಳೆ ಬಿಡುಗಡೆಗಾಗಿ ಪ್ರಯತ್ನಿಸಿದರು. ಅಲ್ಲದೆ ಇವರನ್ನು ಬಿಡುಗಡೆ ಮಾಡಬೇಕೆಂದು ಎಲ್ಲ ಕಡೆ ಹೋರಾಟ ನಡೆದಿದ್ದರಿಂದ ಬ್ರಿಟಿಷ್‌ ಸರ್ಕಾರ ಅನಿವಾರ್ಯವಾಗಿ ಬಿಡುಗಡೆ ಮಾಡಿತು.

ತಲುಪುವುದು ಹೇಗೆ?

ಬೆಳಗಾವಿಯಿಂದ ಅಂಕಲಿ 90 ಕಿ.ಮೀ. ದೂರವಿದೆ. ಬೆಳಗಾವಿಯಿಂದ ಚಿಕ್ಕೋಡಿಗೆ ಬಸ್‌ ಮೂಲಕ ಹೋಗಬಹುದು. ಅಲ್ಲಿಂದ ಅಂಕಲಿ ತಲುಪಬಹುದು. ಈ ಅಂಕಲಿಯಲ್ಲೀಗ ಬಸವಪ್ರಭು ಕೋರೆ ಅವರ ಮನೆಯಿದೆ.

- ಸಿ.ಎ.ಇಟ್ನಾಳಮಠ

Follow Us:
Download App:
  • android
  • ios