Asianet Suvarna News Asianet Suvarna News

ಕಲ್ಯಾಣ ಕರ್ನಾಟಕದಲ್ಲಿ ಅದ್ದೂರಿ ಅಮೃತ ಮಹೋತ್ಸವಕ್ಕೆ ಸಜ್ಜು, 1 ಲಕ್ಷ ಜನ ಸೇರಿಸಿ ಆಚರಣೆ

ಬ್ರಿಟಿಷರಿಂದ ಭಾರತ ಸ್ವಾತಂತ್ರ್ಯಗೊಂಡು ಆಗಸ್ಟ್ 15ಕ್ಕೆ 75 ವರ್ಷಗಳು ಪೂರೈಸುತ್ತದೆ. ಈ ನಿಟ್ಟಿನಲ್ಲಿ ದೇಶಾದ್ಯಂತ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವವನ್ನು ವಿಜ್ರಭಂಣೆಯಿಂದ ಆಚರಿಸಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ.ಅದಂತೆ ಕಲಬುರಗಿಯಲ್ಲೂ ಸಹ ಅದ್ದೂರಿ ಅಮೃತ ಮಹೋತ್ಸವಕ್ಕೆ ಸಿದ್ಧತೆ ನಡೆದಿದೆ.

Azadi Ka Amrit Mahotsav Grand Celebration In Kalaburagi Says MLA Dattatraya Patil rbj
Author
Bengaluru, First Published Jul 19, 2022, 8:40 PM IST | Last Updated Jul 19, 2022, 8:40 PM IST

ಕಲಬುರಗಿ, (ಜು.19): ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವನ್ನು ಮಂಡಳಿಯಿಂದ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಮಂಡಳಿಯ ಅಧ್ಯಕ್ಷರು ಮತ್ತು ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ತಿಳಿಸಿದ್ದಾರೆ.

ಕಲಬುರಗಿಯಲ್ಲಿಂದು ಮಂಡಳಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸುಮಾರು ಒಂದು ಲಕ್ಷ ಜನ ಸೇರಿಸಿ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಕೇಂದ್ರ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದೆ. ಈ ಕುರಿತಂತೆ ಮುಂದಿನ ವಾರದಲ್ಲಿ ಮುಖ್ಯಮಂತ್ರಿಗಳಿಂದ ಬೆಂಗಳೂರಿನಲ್ಲಿ ಉತ್ಸವದ ಲಾಂಛನ ಬಿಡುಗಡೆ ಮಾಡಲಾಗುವುದು ಎಂದರು.

ಕರ್ನಾಟಕದ ಎಲ್ಲಾ ಶಾಲಾ, ಕಾಲೇಜು, ಮದರಸಾಗಳ ಮೇಲೆ ರಾಷ್ಟ್ರ ಧ್ವಜ ಹಾರಾಟ ಕಡ್ಡಾಯ

ಸಮಿತಿ ರಚನೆ 
ದೇಶಕ್ಕೆ ಸ್ವಾತಂತ್ರ್ಯ ದೊರೆತ ಒಂದು ವರ್ಷ ಒಂದು ತಿಂಗಳು ನಂತರ ಕಲ್ಯಾಣ ಕರ್ನಾಟಕ ಭಾಗಕ್ಕೆ ಸ್ವಾತಂತ್ರ್ಯ ದೊರೆತ್ತಿರುವ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ದೇಶಭಕ್ತಿ ಬಿಂಬಿಸಲು ಗ್ರಾಮ, ತಾಲೂಕು, ಜಿಲ್ಲೆ ಹಾಗೂ ವಿಭಾಗವಾರು ಕ್ರೀಡೆ, ಪ್ರಬಂಧ, ಆರೋಗ್ಯ ಮೇಳ ಹೀಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಎಲ್ಲಾ ಜಿಲ್ಲೆಗಳಿಂದ ಕಾರ್ಯಕ್ರಮ ಆಯೋಜನೆಗೆ ಬಗ್ಗೆ ಪ್ರಸ್ತಾವನೆ ಪಡೆದು ಅದಕ್ಕನುಗುಣವಾಗಿ ಅನುದಾನ ಸಹ ಬಿಡುಗಡೆ ಮಾಡಲಾಗುವುದು. ಇದಕ್ಕಾಗಿ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಕ್ರೀಡಾ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗುವುದು ಎಂದು ದತ್ತಾತ್ರೇಯ ಪಾಟೀಲ ಹೇಳಿದರು.

ಮುಂದುವರೆಸಲು ಸಿಎಂ ಜೊತೆ ಚರ್ಚೆ
ಇದಲ್ಲದೆ ಕೇಂದ್ರ ಸರ್ಕಾರವು ಹರ್ ಘರ್ ತಿರಂಗಾ ಅಭಿಯಾನವನ್ನು ಆಗಸ್ಟ್ 11 ರಿಂದ 17ರ ವರೆಗೆ ಹಮ್ಮಿಕೊಂಡಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಅಭಿಯಾನ ಸೆಪ್ಟೆಂಬರ್ 17ರ ವರೆಗೆ ಮುಂದುವರೆಸುವ ಕುರಿತಂತೆಯೂ ಸಿ.ಎಂ. ಅವರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.

ಶೇ. 97 ರಷ್ಟು ಪ್ರಗತಿ
371ಜೇ ಅನ್ವಯ ರಚನೆಗೊಂಡ ಮಂಡಳಿಗೆ 2013-14ನೇ ಸಾಲಿನಿಂದ 2022-23ನೇ ಸಾಲಿನ ವರೆಗೆ ಬಿಡುಗಡೆಯಾದ 7,328 ಕೋಟಿ ರೂ. ಮೊತ್ತದಲ್ಲಿ 7,107 ಕೋಟಿ ರೂ. ಖರ್ಚು ಮಾಡುವ ಮೂಲಕ ಶೇ.97ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಪ್ರಗತಿ ಸಾಧನೆ ವಿವರಿಸಿದ ಅಧ್ಯಕ್ಷರು, ಕಾಮಗಾರಿಗಳ ವೇಗ ಹೆಚ್ಚಿಸಲು ಮಂಡಳಿಗೆ ಪ್ರತ್ಯೇಕ ಇಂಜಿನೀಯರಿಂಗ್ ವಿಂಗ್ ಸ್ಥಾಪಿಸಲು ನಿರ್ಧರಿಸಿದೆ. ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ಮಂಡಳಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಯೋಜನಾ ಸಚಿವ ಮುನಿರತ್ನ ಅವರು ಸಹ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ಕಲಬುರಗಿಯಲ್ಲಿ ಫ್ಲೈಓವರ್ 
ಗುಲಬರ್ಗಾ ವಿ.ವಿ. ಆವರಣದಲ್ಲಿ 60 ಎಕರೆ ಪ್ರದೇಶದಲ್ಲಿ ಕ್ರೀಡಾ ಮತ್ತು ಸಾಂಸ್ಕøತಿಕ ಸಮುಚ್ಚಯ, ಕಣ್ಣಿ ಮಾರುಕಟ್ಟೆಯಲ್ಲಿ ತರಕಾರಿ ಮಾರುಕಟ್ಟೆ, ಸೇಡಂ ರಸ್ತೆಯಲ್ಲಿ ಫ್ಲೈ ಓವರ್ ರಸ್ತೆ ನಿರ್ಮಿಸಲಾಗುತ್ತಿದೆ. ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಬೆಂಗಳೂರಿನ ಹೆಚ್.ಎಸ್.ಆರ್. ಲೇಔಟ್‍ನಲ್ಲಿ 59 ಕೋಟಿ ರೂ. ವೆಚ್ಚದಲ್ಲಿ ವಸತಿ ನಿಲಯ ಸ್ಥಾಪಿಸಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಮ್ಮ ಅವಧಿಯಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

1500 ಕೋಟಿ ರೂ. ಕ್ರಿಯಾ ಯೋಜನೆಗೆ ಅನುಮೋದನೆ
ಪ್ರಸಕ್ತ 2022-23ನೇ ಸಾಲಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಾಖಲೆ ಪ್ರಮಾಣದಲ್ಲಿ 3000 ಕೋಟಿ ರೂ. ಅನುದಾನ ಪ್ರದೇಶಕ್ಕೆ ನೀಡಿದ್ದಾರೆ. ಆರ್ಥಿಕ ವರ್ಷದ ಮೊದಲ ಮಾಹೆ ಏಪ್ರಿಲ್‍ನಲ್ಲಿಯೇ 1,500 ಕೋಟಿ ರೂ. ಗಳ ಮೈಕ್ರೋ ನಿಧಿಯ ಕ್ರಿಯಾ ಯೋಜನೆಗೆ ಸರ್ಕಾರ ಮಂಜೂರಾತಿ ನೀಡಿದ್ದರಿಂದ, ಕೆಲಸ ಆರಂಭಿಸಲಾಗಿದೆ. ಉಳಿದಂತೆ ಮ್ಯಾಕ್ರೋ ನಿಧಿಯ 1,500 ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಶೀಘ್ರದಲ್ಲಿಯೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆದು ಅದಕ್ಕೂ ಒಪ್ಪಿಗೆ ಪಡೆಯಲಾಗುವುದು. ಇನ್ನು ಪ್ರಸಕ್ತ ವರ್ಷದ ಮೊದಲನೇ ಕಂತಿನ ಅನುದಾನ ಬಿಡುಗಡೆಗೆ ಇಂದೇ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತಿದೆ ಎಂದು ಮಂಡಳಿಯ ಅಧ್ಯಕ್ಷರು ತಿಳಿಸಿದರು.

ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿಲ್ಲ
ಕೆ.ಕೆ.ಆರ್.ಡಿ.ಬಿ. ಅನುದಾನ ಹಂಚಿಕೆಯಲ್ಲಿ ತಾರತಮ್ಮ ಮಾಡಲಾಗುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ದತ್ತಾತ್ರೇಯ ಪಾಟೀಲ ರೇವೂರ ಅವರು, ಡಾ.ಡಿ.ಎಂ.ನಂಜುಂಡಪ್ಪ ಅವರ ವರದಿಯಂತೆ ಆಯಾ ಕ್ಷೇತ್ರಕ್ಕೆ ಅನುದಾನ ಹಂಚಿಕೆ ಮಾಡಲಾಗಿದೆ. ಮಂಡಳಿಯಿಂದ ಯಾವುದೇ ಕಾಮಗಾರಿಗೆ ನೇರವಾಗಿ ಟೆಂಡರ್ ಕರೆದಿರುವುದಿಲ್ಲ. ಇಲ್ಲಿ ತಾರತಮ್ಯದ ಪ್ರಶ್ನೆಯೆ ಉದ್ಭವಿಸುವುದಿಲ್ಲ ಎಂದ ಅವರು ಕಲಬುರಗಿ ವಿಮಾನ ನಿಲ್ದಾಣಕ್ಕೆ, ಜಯದೇವ ಹೃದ್ರೋಗ ಆಸ್ಪತ್ರೆಗೆ, ರಾಯಚೂರು ವಿಮಾನ ನಿಲ್ದಾಣಕ್ಕೆ ಮಂಡಳಿಯಿಂದ ನೀಡಲಾದ ಅನುದಾನ ಒಂದು ಕ್ಷೇತ್ರಕ್ಕೆ ಸೀಮಿತವಾಗದು, ಅದು ಜಿಲ್ಲೆ, ಪ್ರದೇಶಕ್ಕೆ ಸೀಮಿತವಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ ಧಾರವಾಡಕರ್ ಇದ್ದರು.

Latest Videos
Follow Us:
Download App:
  • android
  • ios