ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 75 ಕಿ.ಮೀ ಕಾಂಗ್ರೆಸ್ ಪಾದಯಾತ್ರೆ: ಉಗ್ರಪ್ಪ
ಬಿಜೆಪಿಗೆ ರಾಷ್ಟ್ರೀಯಧ್ವಜ ಎಂದರೆ ತ್ರಿವರ್ಣಧ್ವಜ ಅಲ್ಲ; ಆರ್‌ಎಸ್‌ಎಸ್‌ನ ಭಗವಾ ಧ್ವಜವಾಗಿದೆ.
ಬಳ್ಳಾರಿ(ಜು.24): ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಆಗಸ್ಟ್ 1ರಿಂದ 10ರ ವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 75 ಕಿ.ಮೀ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಸ್ವಾತಂತ್ರ್ಯ ಹೋರಾಟದ ಹಿನ್ನಲೆ, ಚಳುವಳಿಯ ಮುಖ್ಯ ಆಶಯಗಳನ್ನು ತಿಳಿಸುವ ಉದ್ದೇಶದಿಂದ ಕಾಂಗ್ರೆಸ್ ಮಹತ್ವದ ಕಾರ್ಯಕ್ರಮ ರೂಪಿಸುತ್ತಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ತಿಳಿಸಿದರು.
ಇಲ್ಲಿನ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು. ಸ್ವಾತಂತ್ರ್ಯ ಹೋರಾಟದ ನೆಲೆಯ ಕೆಲವು ಸ್ಥಳಗಳಲ್ಲಿ ಸ್ವಾತಂತ್ರ್ಯದ ಮುಖ್ಯ ಉದ್ದೇಶ ಹಾಗೂ ಆಶಯಗಳ ಕುರಿತು ಬಿಂಬಿಸಲಾಗುವುದು. ಆಗಸ್ಟ್ 15ರಂದು ಬೆಂಗಳೂರಿನಲ್ಲಿ 8 ಕಿಮೀ ಪಾದಯಾತ್ರೆ ನಡೆಯಲಿದ್ದು, ಒಂದು ಲಕ್ಷಕ್ಕೂ ಹೆಚ್ಚು ಜನರು ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆಯಲಿ ಪಾಲ್ಗೊಳ್ಳಲಿದ್ದಾರೆ. ರೇಲ್ವೆ ನಿಲ್ದಾಣದ ಬಳಿಯ ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ನ್ಯಾಷನಲ್ ಹೈಸ್ಕೂಲ್ ಮೈದಾನದ ವರೆಗೆ ಪಾದಯಾತ್ರೆ ಸಾಗಲಿದೆ. ಈ ಕಾರ್ಯಕ್ರಮ ಯಶಸ್ವಿಗೊಳಿಸುವ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳ ಉಸ್ತುವಾರಿಗಳನ್ನು ಸಹ ನೇಮಿಸಲಾಗಿದ್ದು, ಅಗತ್ಯ ಸಿದ್ಧತೆಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
India@75: ಬ್ರಿಟನ್‌ನಿಂದ 75 ವಿದ್ಯಾರ್ಥಿ ವೇತನ!
ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ ಇರುವ ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರಧ್ವಜದ ಬಗ್ಗೆ ಅಪಾರ ಗೌರವವಿದೆ. ಆದರೆ, ಈ ಬಿಜೆಪಿ ಸರ್ಕಾರ ತ್ರಿವರ್ಣಧ್ವಜಕ್ಕೆ ಅಪಮಾನ ಮಾಡುವ ಕೆಲಸ ಮಾಡುತ್ತಿದೆ. ಪ್ಲಾಸ್ಟಿಕ್ ಧ್ವಜಗಳನ್ನು ಬಳಕೆ ಮಾಡಬಹುದು ಎನ್ನುತ್ತಿದೆ. ಬಿಜೆಪಿಗೆ ರಾಷ್ಟ್ರೀಯಧ್ವಜ ಎಂದರೆ ತ್ರಿವರ್ಣಧ್ವಜ ಅಲ್ಲ; ಆರ್‌ಎಸ್‌ಎಸ್‌ನ ಭಗವಾ ಧ್ವಜವಾಗಿದೆ. ಹೀಗಾಗಿಯೇ ರಾಷ್ಟ್ರಧ್ವಜವನ್ನು ಅಪಮಾನಿಸುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ದೇಶಪ್ರೇಮದ ಹೆಸರಿನಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನವನ್ನು ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಡವರು ಬಳಸುವ ಹಾಲು, ಮೊಸರಿನ ಮೇಲೆ ಜಿಎಸ್‌ಟಿ ಹಾಕುತ್ತಿರುವ ಕೇಂದ್ರ ಸರ್ಕಾರ ದೊಡ್ಡ ದೊಡ್ಡ ಉದ್ಯಮಿಗಳ ಬಳಕೆಯ ವಸ್ತುಗಳಿಗೆ ಜಿಎಸ್‌ಟಿ ವಿಧಿಸುತ್ತಿಲ್ಲ. 1ರಿಂದ 5 ಲೀಟರ್ ಹಾಲು ಮೊಸರಿಗೆ ಜಿಎಸ್‌ಟಿ ವಿಧಿಸಲಾಗುತ್ತಿದ್ದು, 20ರಿಂದ 25 ಲೀಟರ್ ಹಾಲು, ಮೊಸರು ಬಳಕೆಗೆ ಜಿಎಸ್‌ಟಿ ವಿಧಿಸುತ್ತಿಲ್ಲ ಎನ್ನುತ್ತಿದ್ದಾರೆ. ಹಾಗಾದರೆ ಬಡವರೇನು ದಿನಕ್ಕೆ 20 ಲೀಟರ್ ಹಾಲು ಮೊಸರು ಬಳಸುತ್ತಾರೆಯೇ? ಇಂತಹ ಕನಿಷ್ಠ ಜ್ಞಾನವಿಲ್ಲದ ಕೇಂದ್ರ ಸರ್ಕಾರ ನಯವಾಗಿ ಜನರನ್ನು ವಂಚಿಸುವ ಕೆಲಸ ಮಾಡುತ್ತಿದೆ ಎಂದರು.
ಪಕ್ಷದ ಮುಖಂಡರಾದ ಎಂ.ಹನುಮಕಿಶೋರ್, ಅಸುಂಡಿ ನಾಗರಾಜಗೌಡ, ರವಿ ನೆಟ್ಟಕಲ್ಲಪ್ಪ, ಲೋಕೇಶ್, ಅಲುವೇಲು ಸುರೇಶ್, ಹೊನ್ನೂರಪ್ಪ, ವೀರಭದ್ರಪ್ಪ ಸುದ್ದಿಗೋಷ್ಠಿಯಲ್ಲಿದ್ದರು.
ಸಿದ್ದರಾಮೋತ್ಸವಕ್ಕೆ 5 ಲಕ್ಷ:
ದಾವಣಗೆರೆಯಲ್ಲಿ ನಡೆಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಐದು ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್‌ಗಾಂಧಿ ಸೇರಿದಂತೆ ಅನೇಕ ನಾಯಕರು ಭಾಗವಹಿಸುವರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ಪಾಲ್ಗೊಳ್ಳುವರು ಎಂದು ಉಗ್ರಪ್ಪ ತಿಳಿಸಿದರು.
ಸಿದ್ದರಾಮಯ್ಯ ಅಮೃತ ಮಹೋತ್ಸವ ಮುಂದಿನ ಚುನಾವಣೆಗೆ ದಿಕ್ಸೂಚಿ
ಹೊಸಪೇಟೆ: ದಾವಣಗೆರೆಯಲ್ಲಿ ನಡೆಯುವ ಸಿದ್ದರಾಮಯ್ಯನವರ ಅಮೃತ ಮಹೋತ್ಸವ ಕಾರ್ಯಕ್ರಮ 2023ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಮಾಜಿ ಸಚಿವ ಸಂತೋಷ್ ಲಾಡ್ ಹೇಳಿದರು.
ಶನಿವಾರ ಇಲ್ಲಿ ನಡೆದ ಸಿದ್ದರಾಮಯ್ಯನವರ ಅಮೃತ ಮಹೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಪಣತೊಟ್ಟಿದ್ದಾರೆ. ಇದು ಪಕ್ಷದ ಕಾರ್ಯಕ್ರಮವಲ್ಲ, ಆದರೆ, ಸಿದ್ದರಾಮಯ್ಯನವರು ಈ ರಾಜ್ಯಕ್ಕೆ ನೀಡಿದ ಕೊಡುಗೆಗಾಗಿ ಅವರ 75ನೇ ವರ್ಷದ ಜನ್ಮದಿನದಂದು ಅಮೃತ ಮಹೋತ್ಸವ ಹಮ್ಮಿಕೊಂಡಿದ್ದೇವೆ ಎಂದರು.
Vijayapura: ಕ್ರಾಂತಿಯೋಗಿಗೆ ಅಪಚಾರ ಮಾಡಿದ ವಿಜಯಪುರ ಜಿಲ್ಲಾಡಳಿತ!
ಆ.3ರಂದು ದಾವಣಗೆರೆಯಲ್ಲಿರುವ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಅವಳಿ ಜಿಲ್ಲೆಗಳಿಂದ ಒಂದೂವರೆ ಲಕ್ಷ ಜನ ತೆರಳಲಿದ್ದಾರೆ. ಎಲ್ಲರಿಗೂ ಬಸ್ ಹಾಗೂ ಟ್ರ್ಯಾಕ್ಸ್‌ಗಳ ವ್ಯವಸ್ಥೆ ಮಾಡಿದ್ದೇವೆ ಎಂದರು.
ಶಾಸಕ ಎಸ್. ಭೀಮಾನಾಯ್ಕ ಮಾತನಾಡಿ, ನಾವು ವ್ಯಕ್ತಿ ಪೂಜೆ ಮಾಡುತ್ತಿಲ್ಲ, ಎಲ್ಲರೂ ಪಕ್ಷ ಪೂಜೆ ಮಾಡುತ್ತಿದ್ದೇವೆ. ಅಮೃತದಂಥ ಮನುಷ್ಯನ ಅಮೃತ ಮಹೋತ್ಸವ ಮಾಡುತ್ತಿದ್ದೇವೆ. ನುಡಿದಂತೆ ನಡೆದ ಸಿದ್ದರಾಮಯ್ಯನವರು ನಾಡಿನ ಜನತೆಗೆ ಸೇವೆ ಸಲ್ಲಿಸಿದ್ದಾರೆ. ಅವರಿಗೆ ನಾಡಿನ ಜನತೆ ಅಮೃತ ಮಹೋತ್ಸವದ ಮೂಲಕ ಕೊಡುಗೆ ನೀಡುತ್ತಿದ್ದಾರೆ. ಪ್ರತಿ ತಾಲೂಕಿನಿಂದ 10 ರಿಂದ 15 ಸಾವಿರ ಜನರು ಭಾಗಿಯಾಗಲಿದ್ದಾರೆ. ಬಳ್ಳಾರಿ- ವಿಜಯನಗರ ಜಿಲ್ಲೆಯಿಂದ ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕಾಗಿ 750 ಬಸ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಮಾಜಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿದರು. ಮಾಜಿ ಎಂ.ಎಲ್ಸಿ ಕೆಎಸ್‌ಎಲ್ ಸ್ವಾಮಿ, ಜಿಲಾಧ್ಯಕ್ಷರಾದ ಜಿ.ಎಸ್.ಮೊಹಮ್ಮದ್ ರಫೀಕ್, ಬಿ.ವಿ. ಶಿವಯೋಗಿ, ಶಾಸಕರಾದ ಈ. ತುಕಾರಾಂ, ಭೀಮಾ ನಾಯ್ಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟರಾವ್ ಘೋರ್ಪಡೆ, ಮಾಜಿ ಶಾಸಕರಾದ ಸಿರಾಜ್ ಶೇಕ್, ಚಂದ್ರಶೇಖರಯ್ಯ, ಬಿ.ಎಂ.ನಾಗರಾಜ್, ಮುಖಂಡರಾದ ಕವಿತಾ ರೆಡ್ಡಿ, ರಾಜಶೇಖರ ಹಿಟ್ನಾಳ್, ಕುರಿ ಶಿವಮೂರ್ತಿ, ಸೈಯದ್ ಮೊಹಮ್ಮದ್, ಇಮಾಮ್ ನಿಯಾಜಿ, ಗುಜ್ಜಲ ನಾಗರಾಜ್, ಗುಜ್ಜಲ ರಾಘವೇಂದ್ರ, ಹೆಗ್ಡಾಳ್ ರಾಮಣ್ಣ, ವೀಣಾ ಮಹಾಂತೇಶ್, ನಿಂಬಗಲ್ ರಾಮಕೃಷ್ಣ, ಆಶಾಲತಾ ಸೋಮಪ್ಪ, ಕೆ.ಎಂ.ಹಾಲಪ್ಪ, ಎಲ್.ಸಿದ್ದನಗೌಡ ಮತ್ತಿತರರಿದ್ದರು.