Vijayapura: ಕ್ರಾಂತಿಯೋಗಿಗೆ ಅಪಚಾರ ಮಾಡಿದ ವಿಜಯಪುರ ಜಿಲ್ಲಾಡಳಿತ!
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಕಳೆದ ಹಿನ್ನೆಲೆಯಲ್ಲಿ ದೇಶಾದ್ಯಂತ ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆ ಮಾಡಲಾಗ್ತಿದೆ. ಆದ್ರೆ ಬ್ರಿಟಿಷರ ವಿರುದ್ಧ ಬಂದೂಕಿನ ಕಾರ್ಖಾನೆ ತೆರೆದು ಉಗ್ರವಾಗಿ ಹೋರಾಡಿದ್ದ ಇಂಚಗೇರಿ ಮಠದ ಮಾಧವಾನಂದ ಶ್ರೀಗಳನ್ನ ರಾಜ್ಯ ಸರ್ಕಾರ ಮರೆತು ಬಿಟ್ಟಿದೆ.
ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ (ಜೂ.14): ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಕಳೆದ ಹಿನ್ನೆಲೆಯಲ್ಲಿ ದೇಶಾದ್ಯಂತ ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆ ಮಾಡಲಾಗ್ತಿದೆ. ಆದ್ರೆ ವಿಪರ್ಯಾಸದ ಸಂಗತಿ ಅಂದ್ರೆ ಸಾವಿರಾರು ಅನುಯಾಯಿಗಳನ್ನ ಬೆನ್ನಿಗೆ ಕಟ್ಟಿಕೊಂಡು ಬ್ರಿಟಿಷರ ವಿರುದ್ಧ ಬಂದೂಕಿನ ಕಾರ್ಖಾನೆ ತೆರೆದು ಉಗ್ರವಾಗಿ ಹೋರಾಡಿದ್ದ ಇಂಚಗೇರಿ ಮಠದ ಮಾಧವಾನಂದ ಶ್ರೀಗಳನ್ನ ರಾಜ್ಯ ಸರ್ಕಾರ ಮರೆತು ಬಿಟ್ಟಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಸ್ವಾತಂತ್ರ್ಯದ ಕಿಡಿ ಹೊತ್ತಿಸಿ ಬ್ರಿಟಿಷರ ಹುಟ್ಟಡಗಿಸಿದ್ದ ಕ್ರಾಂತಿಯೋಗಿ ಮಹಾದೇವರಿಗೆ ಅಪಮಾನ ಮಾಡಿದೆ. ಸರ್ಕಾರದ ವಿರುದ್ಧ ಮಠದ ಭಕ್ತರು ಆಕ್ರೋಶ ಹೊರಹಾಕ್ತಿದ್ದಾರೆ.
ಸ್ವಾತಂತ್ರ್ಯ ಸೇನಾನಿಗೆ ಅಪಚಾರ ಮಾಡಿದ ಸರ್ಕಾರ: ಚಡಚಣ ತಾಲೂಕಿನ ಇಂಚಗೇರಿ ಮಠದ ಮಾಧವಾನಂದ ಶ್ರೀಗಳು ಭಾರತ ಸ್ವಾತಂತ್ರ್ಯಕ್ಕಾಗಿ ಮಾಡಿದ ಉಗ್ರ ಹೋರಾಟ ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದ್ರೆ ಸ್ವಾತಂತ್ರ್ಯ ಸಿಕ್ಕು 75ನೇ ವರ್ಷಾಚರಣೆಯ ಆಜಾದಿ ಕಾ ಅಮೃತ್ ಮಹೋತ್ಸವ ಆಚರಿಸುತ್ತಿರುವ ವೇಳೆ ರಾಜ್ಯ ಸರ್ಕಾರ ಹಾಗೂ ವಿಜಯಪುರ ಜಿಲ್ಲಾಡಳಿತ ಈ ಮಾಧವಾನಂದ ಪ್ರಭುಜಿಗಳನ್ನ ಸಂಪೂರ್ಣ ನಿರ್ಲಕ್ಷ್ಯ ಮಾಡಿ ಅಪಚಾರವೆಸಗಿದೆ. ಇಂಥ ಸಂದರ್ಭದಲ್ಲಿ ಜಿಲ್ಲಾಡಳಿತ ತಮ್ಮದೆ ಜಿಲ್ಲೆಯ ಇಂಚಗೇರಿ ಮಠ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟವನ್ನ ನೆನಪಿಸಿ ಅದನ್ನ ಸ್ಮರಿಸುವ ಕೆಲಸ ಮಾಡಬೇಕಿತ್ತು. ಆದ್ರೆ ಇಂಚಗೇರಿ ಮಠದ ಮಾಧವಾನಂದ ಶ್ರೀಗಳ ಹೋರಾಟದ ಬಗ್ಗೆ ಗೊತ್ತೆ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದು, ಈ ಮೂಲಕ 20 ಸಾವಿರ ಭಕ್ತರನ್ನ ಕಟ್ಟಿಕೊಂಡು ಬ್ರೀಟಿಷರ ವಿರುದ್ಧ ಸಶಸ್ತ್ರ ಹೋರಾಟ ಮಾಡಿದ ಕ್ರಾಂತಿಯೋಗಿ ಮಹಾದೇವರಿಗೆ ಅಪಮಾನ ಮಾಡಿದೆ.
MLC Election: ಮತದಾನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡ ವಿಜಯಪುರ ಜಿಲ್ಲಾಡಳಿತ!
ಬ್ರಿಟಿಷರನ್ನ ದಿಕ್ಕಾಪಾಲಾಗಿಸಿದ ಮಹಾದೇವರು: ಇಂಚಗೇರಿ ಮಠದ ಶ್ರೀ ಗಿರಿಮಲ್ಲೇಶ್ವರ ಆದೇಶದಂತೆ 1929 ರಲ್ಲಿ ಮಾಧವಾನಂದ ಪ್ರಭುಜಿಗಳು ಸ್ವಾತಂತ್ರ್ಯ ಹೋರಾಟಕ್ಕೆ ಇಳಿದರು. ತಮ್ಮ ಇಂಚಗೇರಿ ಮಠದ ಭಕ್ತರನ್ನ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿಸಿದರು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಹಾಗೂ ಮಹಾರಾಷ್ಟ್ರದ ಜತ್ ತಾಲೂಕಿನ ಸೊನ್ಯಾಳ ಗ್ರಾಮದಲ್ಲಿ ಸೇರಿ ಎರಡು ಬಂದೂಕು ಫ್ಯಾಕ್ಟರಿ ನಿರ್ಮಿಸಿ ಸಶಸ್ತ್ರವಾಗಿ ಬ್ರೀಟಿಷರ ವಿರುದ್ಧ ಹೋರಾಡಿದ್ದರು. ತಮ್ಮ ಅನುಯಾಯಿಗಳೊಂದಿಗೆ ಸೇರಿ ಹುಲಕೋಟೆ, ಸಾವಳಗಿ, ಇಂಚಗೇರಿ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕಿ ಶಸ್ತ್ರಾಸ್ತ್ರಗಳನ್ನ ಅಪಹರಿಸಿದ್ದರು. ಹಲವು ಅಂಚೆ, ನಾಡ ಕಚೇರಿಗೆ ಬೆಂಕಿ ಹಚ್ಚಿದ್ದರು. ಬ್ರಿಟಿಷರ ಸಂಪರ್ಕ ಸಾಧನವಾಗಿದ್ದ ರೈಲು ಹಳಿಗಳನ್ನ ಕಿತ್ತಹಾಕಿ ಠಾಣೆಗಳನ್ನ ಧ್ವಂಸಗೊಳಿಸಿದ್ದರು. ಇನ್ನು ಬ್ರಿಟಿಷರ ಸರ್ಕಾರಕ್ಕೆ ಸೇರಬೇಕಿದ್ದ ಬೊಕ್ಕಸವನ್ನ ದೋಚಿದ್ದು ಆ ಸಮಯದಲ್ಲಿ ಬಾರಿ ಸಾಹಸ ಪ್ರಕರಣವಾಗಿತ್ತು. ಇದರ ಫಲವಾಗಿ 27 ಬಾರಿ ಜೈಲು ವಾಸ ಅನುಭವಿಸಿದ್ದಾರೆ.
ವಿದೇಶಿ ಪತ್ರಿಕೆಗಳಲ್ಲು ಮಹಾದೇವರ ಹೋರಾಟ ದಾಖಲು: ಸ್ವಾತಂತ್ರ ನಂತರ ಮಠಕ್ಕೆ ಭೇಟಿ ನೀಡಿದ್ದ ಮಹಾತ್ಮ ಗಾಂಧೀಜಿಯವ್ರ ಮೊಮ್ಮಗ ಅರುಣ ಗಾಂಧಿ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಮಾಧವಾನಂದರ ಕೊಡುಗೆ ಹಾಗೂ ಮಠದ ಪಾತ್ರದ ಬಗ್ಗೆ ವಿದೇಶಗಳಲ್ಲಿ ಅತ್ಯಧಿಕ ಪ್ರಸಾರ ಉಳ್ಳ 'ದಿ ಇಂಪ್ರಿಂಟ್' ಇಂಗ್ಲಿಷ ಪತ್ರಿಕೆಯಲ್ಲಿ ಬರೆದಿದ್ದರು. ಇದನ್ನ ಓದಿನ ಅದೇಷ್ಟೋ ವಿದೇಶಿಗರು ಕೂಡ ಸಧ್ಯ ಮಠದ ಭಕ್ತರಾಗಿದ್ದಾರೆ.
ಇಂಚಗೇರಿ ಮಠದ ಭಕ್ತರಲ್ಲಿ ಭುಗಿಲೆದ್ದ ಆಕ್ರೋಶ: ಆಜಾದಿ ಕಾ ಅಮೃತ್ ಮಹೋತ್ಸವ ನಡೆಯುತ್ತಿರುವ ವೇಳೆ ಮಾಧವಾನಂದ ಶ್ರೀಗಳ ಹೋರಾಟವನ್ನ ಕನಿಷ್ಟ ನೆನಪು ಮಾಡಿಕೊಳ್ಳದ ವಿಜಯಪುರ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಇಂಚಗೇರಿ ಮಠದ 2 ಕೋಟಿ ಭಕ್ತರು ಮುನಿಸಿಕೊಂಡಿದ್ದಾರೆ. ಭಾರತ ಸ್ವಾತಂತ್ರ್ಯಕ್ಕಾಗಿ ಜೀವದ ಹಂಗು ತೊರೆದು ಹೋರಾಡಿದ ಮಹಾದೇವರಿಗೆ ಹಾಗೂ ಸ್ವಾತಂತ್ರ್ಯ ಹೋರಾಟದ ಮಠ ಎಂದು ಕರೆಯಿಸಿಕೊಳ್ಳುವ ಇಂಚಗೇರಿ ಸಾಂಪ್ರದಾಯದ 2 ಕೋಟಿ ಭಕ್ತರಿಗೆ ಮಾಡಿದ ಅವಮಾನ ಎಂದು ಮಠ ಭಕ್ತರಾದ ಮುಕ್ಕುಂಬ ಬೆಳಗಲಿ ಆಕ್ರೋಶ ಹೊರಹಾಕಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ದಿನವು ಜಿಲ್ಲಾಡಳಿತದ ನಿರ್ಲಕ್ಷ್ಯ: ಪ್ರತಿ ವರ್ಷ ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ದಿನ ವಿಜಯಪುರ ಜಿಲ್ಲಾಕೇಂದ್ರದಲ್ಲಿ ನಡೆಯುವ ಧ್ವಜಾರೋಹನ ಸಮಾರಂಭದಲ್ಲು ಜಿಲ್ಲಾಡಳಿತ ಇಂಚಗೇರಿ ಮಠ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟವನ್ನ ಸ್ಮರಿಸುತ್ತಿಲ್ಲ. ಧ್ವಜಾರೋಹಣ ಭಾಷಣದಲ್ಲು ಇಂಚಗೇರಿ ಮಠದ ಸ್ವಾತಂತ್ರ್ಯ ಹೋರಾಟ, ಮಾಧವಾನಂದ ಶ್ರೀಗಳು ಬ್ರೀಟಿಷರ ವಿರುದ್ಧ ನಡೆಸಿದ ಹೋರಾಟವನ್ನು ಸ್ಮರಿಸೋದಿಲ್ಲ. ಸ್ಥಳೀಯ ರಾಜಕಾರಣಿಗಳು, ಉಸ್ತುವಾರಿ ಸಚಿವರುಗಳು, ಜಿಲ್ಲಾಧಿಕಾರಿ ಸೇರಿದಂತೆ ಯಾರೋಬ್ಬರು ನಮ್ಮದೇ ಜಿಲ್ಲೆಯ ಸ್ವಾತಂತ್ರ್ಯ ಹೋರಾಟ ಮಾಡಿದ ಮಾಧವಾನಂದ ಶ್ರೀಗಳ ಹೆಸ್ರು, ಮಠದ ಹೋರಾಟವನ್ನ ನೆನೆಯದೆ ಇರೋದು ಅಸಮಧಾನಕ್ಕೆ ಕಾರಣವಾಗಿದೆ. ಮತ್ತೊಂದು ಕಡೆಗೆ ಸ್ವಾತಂತ್ರ್ಯ ಹೋರಾಟಗಾರರಿಗೆ ವಿಜಯಪುರ ಜಿಲ್ಲಾಡಳಿತ ಮಾಡ್ತಿರೋ ಅಪಮಾನ ಎನ್ನಲಾಗ್ತಿದೆ.
ಜಿಲ್ಲಾಡಳಿತ, ಸರ್ಕಾರದ ವಿರುದ್ಧ ಹೋರಾಟದ ಎಚ್ಚರಿಕೆ: ಸತತವಾಗಿ ಸ್ವಾತಂತ್ರ್ಯ ಹೋರಾಟ ಮಾಡಿದ ಇಂಚಗೇರಿ ಮಠಕ್ಕೆ ಅಪಮಾನ ಮಾಡ್ತಿರೋ ವಿಜಯಪುರ ಜಿಲ್ಲಾಡಳಿತದ ವಿರುದ್ಧ ಮಠದ ಭಕ್ತರು ಆಕ್ರೋಶ ಹೊರಹಾಕ್ತಿದ್ದಾರೆ. ಆಜಾದಿ ಕಾ ಅಮೃತ್ ಮಹೋತ್ಸವ ನಡೆಯುತ್ತಿರುವ ಈ ಸಂದರ್ಭದಲ್ಲಿ ಕ್ರಾಂತಿಯೋಗಿ ಮಹಾದೇವರ ಬಗ್ಗೆ ಆಗಿರೋ ನಿರ್ಲಕ್ಷ್ಯವನ್ನ ಸರಿಪಡೆಸದೇ ಹೋದರೆ ಇಂಚಗೇರಿ ಮಠದ ಭಕ್ತರು ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆಯನ್ನ ಮಠದ ಭಕ್ತರು ನೀಡಿದ್ದಾರೆ.
ವಿಧಾನ ಪರಿಷತ್ ಚುನಾವಣೆ: 'ಕಾಂಗ್ರೆಸ್, ಜೆಡಿಎಸ್‌ನಿಂದ ಹಣದ ಆಮಿಷ'
ಸ್ವಾತಂತ್ರ್ಯ ಹೋರಾಟದ ಬಳಿಕ ಪಿಂಚಣಿ ತಿರಸ್ಕರಿಸಿದ್ದ ಶ್ರೀಗಳು: ಸ್ವಾತಂತ್ರ್ಯ ಹೋರಾಟದ ಬಳಿಕ ಭಾರತ ಸರ್ಕಾರ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಇಂಚಗೇರಿ ಸಾಂಪ್ರದಾಯದ ಮಾಧವಾನಂದ ಶ್ರೀಗಳಿಗೆ ಪಿಂಚಣಿ ನೀಡುವುದಾಗಿ ಹೇಳಿತ್ತು. ಆಗ ಮಾಧವಾನಂದ ಶ್ರೀ ಮಠಕ್ಕೆ ಬಂದಿದ್ದ ಅಧಿಕಾರಿಗೆ ನಾನು ನನ್ನ ತಾಯಿಯನ್ನ ಬಂಧನದಿಂದ ಮುಕ್ತ ಮಾಡಲು ಹೋರಾಟ ಮಾಡಿದ್ದೀನಿ, ನಿಮ್ಮ ಸರ್ಕಾರದ ಪಿಂಚಣಿಗಾಗಿ ಅಲ್ಲಾ ಎನ್ನುವ ಮೂಲಕ ಪಿಂಚಣಿ ತಿರಸ್ಕರಿಸಿದ್ದರಂತೆ. ಸ್ವತಃ ಮಾಧವಾನಂದ ಶ್ರೀಗಳೇ ಪಿಂಚಣಿ ಬೇಡ ಎಂದಿದ್ದರಿಂದ 2 ಸಾವಿರಕ್ಕು ಅಧಿಕ ಇಂಚಗೇರಿ ಮಠದ ಸ್ವಾತಂತ್ರ್ಯ ಹೋರಾಟಗಾರರು ಪಿಂಚಣಿ ತಿರಸ್ಕರಿಸಿದ್ದರು ಅನ್ನೋದು ಗಮನಾರ್ಹ ಸಂಗತಿ.