Asianet Suvarna News Asianet Suvarna News

FIH Pro League‌: ಭಾರತ, ಇಂಗ್ಲೆಂಡ್‌ ಮಹಿಳಾ ಹಾಕಿ ಪಂದ್ಯಗಳು ಮುಂದಕ್ಕೆ..!

* ಎಫ್‌ಐಎಚ್ ಪ್ರೊ ಲೀಗ್ ಹಾಕಿ ಟೂರ್ನಮೆಂಟ್‌ಗೆ ಕೋವಿಡ್ ಕೆಂಗಣ್ಣು

* ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ಹಾಕಿ ತಂಡಗಳ ನಡುವಿನ ಪಂದ್ಯ ಮುಂದಕ್ಕೆ

* ಭಾರತ-ಇಂಗ್ಲೆಂಡ್‌ ಪುರುಷರ ತಂಡದ ನಡುವಿನ ಪಂದ್ಯಗಳು ನಿಗದಿಯಂತೆ ನಡೆಯಲಿದೆ

Womens FIH Pro League matches between India and England postponed due COVID 19 and Injury concern kvn
Author
First Published Mar 30, 2022, 8:57 AM IST

ಭುವನೇಶ್ವರ(ಮಾ.30): ಇಂಗ್ಲೆಂಡ್‌ ಆಟಗಾರ್ತಿಯರಲ್ಲಿ ಕೋವಿಡ್‌ (COVID 19) ಪತ್ತೆಯಾದ ಕಾರಣ ಭಾರತ ವಿರುದ್ಧ ನಡೆಯಬೇಕಿದ್ದ ಮಹಿಳಾ ಪ್ರೊ ಲೀಗ್‌ ಹಾಕಿ ಟೂರ್ನಿಯ (FIH Pro League Hockey Tournament) ಪಂದ್ಯಗಳು ಮುಂದೂಡಲ್ಪಟ್ಟಿವೆ. ಪಂದ್ಯಗಳು ಭುವನೇಶ್ವರದ ಕಳಿಂಗಾ ಕ್ರೀಡಾಂಗಣದಲ್ಲಿ ಏಪ್ರಿಲ್ 2 ಮತ್ತು 3ರಂದು ನಡೆಯಬೇಕಿತ್ತು.  ಈ ಕುರಿತು ಮಂಗಳವಾರ ಮಾಹಿತಿ ನೀಡಿದ ಹಾಕಿ ಇಂಡಿಯಾ(Hockey India), ಇಂಗ್ಲೆಂಡ್‌ನ ಕೆಲ ಆಟಗಾರ್ತಿಯರಿಗೆ ಸೋಂಕು ದೃಢಪಟ್ಟಿದ್ದು, ಕೆಲವರು ಗಾಯಗೊಂಡಿದ್ದಾರೆ. ಹೀಗಾಗಿ ಭಾರತ ಪ್ರವಾಸವನ್ನು ರದ್ದುಗೊಳಿಸಿದ್ದು, ಟೂರ್ನಿಯ 2 ಪಂದ್ಯಗಳನ್ನು ಮುಂದೂಡಲಾಗಿದೆ. ಪಂದ್ಯ ನಡೆಯುವ ದಿನಾಂಕವನ್ನು ಶೀಘ್ರ ಪ್ರಕಟಿಸುವುದಾಗಿ ತಿಳಿಸಿದೆ. ಇನ್ನು ಭಾರತ-ಇಂಗ್ಲೆಂಡ್‌ ಪುರುಷರ ತಂಡದ ನಡುವಿನ ಪಂದ್ಯಗಳು ನಿಗದಿಯಂತೆ ಈ ವಾರಾಂತ್ಯದಲ್ಲಿ ನಡೆಯಲಿವೆ ಎಂದಿದೆ.

ಇಂಗ್ಲೆಂಡ್ ಮಹಿಳಾ ಹಾಕಿ ತಂಡವು ಏಪ್ರಿಲ್‌ 02 ಹಾಗೂ 03ರಂದು ನಡೆಯಬೇಕಿದ್ದ ಎಫ್‌ಐಎಚ್ ಪ್ರೊ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಇಂಗ್ಲೆಂಡ್ ತಂಡದಲ್ಲಿರುವ ಕೆಲವು ಆಟಗಾರ್ತಿಯರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದರೆ, ಮತ್ತೆ ಕೆಲವು ಆಟಗಾರ್ತಿಯರು ಗಾಯದ ಸಮಸ್ಯೆಯಿಂದಾಗಿ ತಂಡದ ಆಯ್ಕೆಗೆ ಅಲಭ್ಯರಾಗಿದ್ದಾರೆ. ಹೀಗಾಗಿ ಮಹಿಳಾ ಪಂದ್ಯಾವಳಿಗಳನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ಹಾಕಿ ಇಂಡಿಯಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಟೇಬಲ್ ಟೆನಿಸ್: ಮನಿಕಾ-ಅರ್ಚನಾ ಜೋಡಿ ಸೆಮೀಸ್‌ಗೆ ಲಗ್ಗೆ

ದೋಹಾ: ಭಾರತದ ಮನಿಕಾ ಬಾತ್ರಾ (Manika Batra) ಮತ್ತು ಅರ್ಚನಾ ಕಾಮತ್‌ ಜೋಡಿ ವಲ್ಡ್‌ ಟೇಬಲ್‌ ಟೆನಿಸ್‌(ಡಬ್ಲ್ಯೂಟಿಟಿ) ಸ್ಟಾರ್‌ ಕಂಟೆಡರ್‌ನಲ್ಲಿ ಮಹಿಳಾ ಡಬಲ್ಸ್‌ ವಿಭಾಗದಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಮಂಗಳವಾರ ಕ್ವಾರ್ಟರ್‌ಫೈನಲ್‌ನಲ್ಲಿ ಈ ಜೋಡಿ ಹಾಂಕಾಂಗ್‌ನ ಸೂ ವೈ ಯಾಮ್‌ ಮತ್ತು ಲೀ ಹೋ ಚಿಂಗ್‌ ವಿರುದ್ಧ 3-1 ಅಂತರದಲ್ಲಿ ಜಯ ಸಾಧಿಸುವ ಮೂಲಕ ಅಂತಿಮ ನಾಲ್ಕರ ಘಟ್ಟಪ್ರವೇಶಿಸಿತು. 

ಸ್ವಿಸ್‌ ಓಪನ್‌ ಗೆದ್ದ ಪಿವಿ ಸಿಂಧುವಿಗೆ ಪ್ರಧಾನಿ ಮೋದಿ ಅಭಿನಂದನೆ..!

ಸೆಮೀಸ್‌ನಲ್ಲಿ ಭಾರತದ ಜೋಡಿ ತೈಪೆಯ ಲಿಯು-ಜುನ್‌ ಮತ್ತು ಚೆಂಗ್‌ ಐ-ಚಿಂಗ್‌ ವಿರುದ್ಧ ಸೆಣಸಲಿದ್ದಾರೆ. ಇನ್ನು, ಪುರುಷರ ಸಿಂಗಲ್ಸ್‌ನಲ್ಲಿ ಜಿ.ಸತ್ಯನ್‌ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರೆ, ಮಹಿಳೆಯರ ಸಿಂಗಲ್ಸ್‌ನಲ್ಲಿ ಮನಿಕಾ ಕ್ವಾರ್ಟರ್‌ಗೆ ಕಾಲಿಟ್ಟರು. ಮಿಶ್ರ ಹಾಗೂ ಪುರುಷರ ಡಬಲ್ಸ್‌ನಲ್ಲಿ ಭಾರತ ತಂಡ ಸೋಲನುಭವಿಸಿತು.

ಸ್ವಿಸ್‌ ಓಪನ್‌ ರನ್ನರ್‌-ಅಪ್‌ ಪ್ರಣಯ್‌ ರ‍್ಯಾಂಕಿಂಗ್‌ ಪ್ರಗತಿ

ನವದೆಹಲಿ: ಕಳೆದ ವಾರ ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌ (Swiss Open) ಟೂರ್ನಿಯಲ್ಲಿ ರನ್ನರ್‌-ಅಪ್‌ ಆಗಿದ್ದ ಭಾರತದ ತಾರಾ ಶಟ್ಲರ್‌ ಎಚ್‌.ಎಸ್‌.ಪ್ರಣಯ್‌ ವಿಶ್ವ ಬ್ಯಾಡ್ಮಿಂಟನ್‌ ರ‍್ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ್ದಾರೆ. ಮಂಗಳವಾರ ಬಿಡುಗಡೆಯಾದ ನೂತನ ರ‍್ಯಾಂಕಿಂಗ್‌ನಲ್ಲಿ ಪ್ರಣಯ್‌ 3 ಸ್ಥಾನ ಮೇಲಕ್ಕೇರಿ 23ನೇ ಸ್ಥಾನ ಪಡೆದಿದ್ದಾರೆ. 5 ವರ್ಷಗಳ ಬಳಿಕ ಫೈನಲ್‌ ಪ್ರವಶಿಸಿದ್ದ ಅವರು ಸದ್ಯ 52,875 ಅಂಕಗಳನ್ನು ಹೊಂದಿದ್ದಾರೆ. 

ಸ್ವಿಸ್‌ ಓಪನ್‌ ಮಹಿಳಾ ಸಿಂಗಲ್ಸ್‌ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದ ಪಿ.ವಿ.ಸಿಂಧು (PV Sindhu) 7ನೇ ಸ್ಥಾನ, ಆಲ್‌ ಇಂಗ್ಲೆಂಡ್‌ ಪುರುಷರ ಸಿಂಗಲ್ಸ್‌ ರನ್ನರ್‌-ಅಪ್‌ ಲಕ್ಷ್ಯ ಸೆನ್‌ 9ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಕಿದಂಬಿ ಶ್ರೀಕಾಂತ್‌ 12, ಸಾಯಿ ಪ್ರಣೀತ್‌ 19ನೇ ಸ್ಥಾನದಲ್ಲಿದ್ದಾರೆ.

ಅಂಗವಿಕಲರ ಕ್ರಿಕೆಟ್‌: ಭಾರತ ತಂಡಕ್ಕೆ ಜಯ

ನವದೆಹಲಿ: ಸಚಿನ್‌ ಶಿವ ಹಾಗೂ ಟಿಕ್ಕಾ ಸಿಂಗ್‌ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ 4 ರಾಷ್ಟ್ರಗಳ ಅಂಗವಿಕಲರ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ, ನೇಪಾಳ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ನೇಪಾಳ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 120 ರನ್‌ ಗಳಿಸಿತು. ಸವಾಲಿನ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಸಚಿನ್‌(54*) ಉತ್ತಮ ಆರಂಭ ನೀಡಿದರೂ, ಒಂದು ಹಂತದಲ್ಲಿ 45 ರನ್‌ ಗಳಿಸಿದ್ದಾಗ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಟಿಕ್ಕಾ(33*) ತಂಡವನ್ನು ಗೆಲುವಿನ ರೇಖೆ ದಾಟಿಸಿದರು. ಭಾರತ ತನ್ನ ಮುಂದಿನ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಆಡಲಿದೆ.


 

Follow Us:
Download App:
  • android
  • ios