* ಪ್ರೊ ಹಾಕಿ ಲೀಗ್‌ನಲ್ಲಿಂದು ಭಾರತಕ್ಕೆ ಬಲಿಷ್ಠ ಜರ್ಮನಿ ಸವಾಲು* ಗೆಲುವಿನ ಲಯಕ್ಕೆ ಮರಳಲು ಎದುರು ನೋಡುತ್ತಿದೆ ವನಿತೆಯರ ಪಡೆ* ಗೋಲ್‌ಕೀಪರ್‌ ಸವಿತಾ ನೇತೃತ್ವದ ಪಡೆ ಗೆಲುವಿನ ವಿಶ್ವಾಸದಲ್ಲಿದೆ

ಭುವನೇಶ್ವರ: ಭಾರತ ಮಹಿಳಾ ಹಾಕಿ (Indian Women's Hockey Team) ತಂಡ ಶನಿವಾರ ಮತ್ತು ಭಾನುವಾರ ನಡೆಯಲಿರುವ ಎಫ್‌ಐಎಚ್‌ ಪ್ರೊ ಲೀಗ್‌ (FIH Pro League) ಪಂದ್ಯಗಳಲ್ಲಿ ವಿಶ್ವ ನಂ.5 ಜರ್ಮನಿ ತಂಡವನ್ನು ಎದುರಿಸಲಿದೆ. ಚೊಚ್ಚಲ ಬಾರಿಗೆ ಪ್ರೊ ಲೀಗ್‌ನಲ್ಲಿ ಆಡುತ್ತಿರುವ ಭಾರತ, ಆಡಿರುವ 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. 

ಚೀನಾ ವಿರುದ್ಧ 7-1, 2-1 ಗೋಲುಗಳಲ್ಲಿ ಗೆದ್ದು ಶುಭಾರಂಭ ಮಾಡಿದ್ದ ಭಾರತ, ಸ್ಪೇನ್‌ ವಿರುದ್ಧ ಮೊದಲ ಪಂದ್ಯದಲ್ಲಿ 2-1ರಲ್ಲಿ ಜಯಿಸಿತ್ತು. 2ನೇ ಪಂದ್ಯದಲ್ಲಿ 3-4 ಗೋಲುಗಳ ವೀರೋಚಿತ ಸೋಲು ಕಂಡಿತ್ತು. ವಿಶ್ವ ಶ್ರೇಯಾಂಕದಲ್ಲಿ 9ನೇ ಸ್ಥಾನದಲ್ಲಿರುವ ಭಾರತಕ್ಕೆ, ಈ ಪಂದ್ಯ ಅತ್ಯಂತ ಮಹತ್ವದೆನಿಸಿದ್ದು, ಗೋಲ್‌ಕೀಪರ್‌ ಸವಿತಾ ನೇತೃತ್ವದ ಪಡೆ ಗೆಲುವಿನ ವಿಶ್ವಾಸದಲ್ಲಿದೆ.

ಪಂದ್ಯ: ಸಂಜೆ 5ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ಸೆಲೆಕ್ಟ್ 2

ಭಾರತ-ಜರ್ಮನಿ ಪ್ರೊ ಲೀಗ್‌ ಪಂದ್ಯ ಮುಂದಕ್ಕೆ

ಭುವನೇಶ್ವರ: ಮಾ.12, 13ರಂದು ನಡೆಯಬೇಕಿದ್ದ ಭಾರತ ಹಾಗೂ ಜರ್ಮನಿ ಪುರುಷರ ಹಾಕಿ ತಂಡಗಳ ನಡುವಿನ ಪ್ರೊ ಲೀಗ್‌ ಪಂದ್ಯ ಮುಂದೂಡಿಕೆಯಾಗಿದೆ. ಭಾರತಕ್ಕೆ ಆಗಮಿಸಿದ ವೇಳೆ ನಡೆಸಿದ ಪರೀಕ್ಷೆಯಲ್ಲಿ ಜರ್ಮನಿಯ ಅನೇಕ ಆಟಗಾರರಿಗೆ ಕೊರೋನಾ ಸೋಂಕು (Coronavirus) ತಗುಲಿರುವುದು ಪತ್ತೆಯಾಗಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್‌ ಸದ್ಯದಲ್ಲೇ ಪ್ರಕಟಿಸಲಿದೆ. ಭಾರತ ಹಾಗೂ ಜರ್ಮನಿ ಮಹಿಳಾ ತಂಡಗಳ ನಡುವಿನ ಪಂದ್ಯಗಳು ಮಾ.12, 13ರಂದೇ ನಡೆಯಲಿವೆ.

ಕಾಮನ್ವೆಲ್ತ್‌ ಹಾಕಿ: ಭಾರತಕ್ಕೆ ಘಾನಾ ಮೊದಲ ಎದುರಾಳಿ

ಬರ್ಮಿಂಗ್‌ಹ್ಯಾಮ್‌: 2022ರ ಕಾಮನ್‌ವೆಲ್ತ್‌ ಕ್ರೀಡಾಕೂಟದ ಹಾಕಿ ಸ್ಪರ್ಧೆಗಳ ವೇಳಾಪಟ್ಟಿಪ್ರಕಟಗೊಂಡಿದ್ದು, ಭಾರತ ಪುರುಷ ಹಾಗೂ ಮಹಿಳಾ ತಂಡಗಳು ಮೊದಲ ಪಂದ್ಯದಲ್ಲಿ ದುರ್ಬಲ ಘಾನಾವನ್ನು ಎದುರಿಸಲಿವೆ. ಮಹಿಳಾ ತಂಡ ಜು.29ಕ್ಕೆ ತನ್ನ ಅಭಿಯಾನ ಆರಂಭಿಸಲಿದ್ದು, ಪುರುಷರ ತಂಡ ಜು.31ಕ್ಕೆ ಮೊದಲ ಪಂದ್ಯವನ್ನಾಡಲಿದೆ. ಭಾರತ ಪುರುಷರ ತಂಡ ‘ಬಿ’ ಗುಂಪಿನಲ್ಲಿ ಇಂಗ್ಲೆಂಡ್‌, ಕೆನಡಾ, ವೇಲ್ಸ್‌ ಹಾಗೂ ಘಾನಾ ಜೊತೆ ಸ್ಥಾನ ಪಡೆದರೆ, ಮಹಿಳಾ ತಂಡವಿರುವ ‘ಎ’ ಗುಂಪಿನಲ್ಲೂ ಇಂಗ್ಲೆಂಡ್‌, ಕೆನಡಾ, ವೇಲ್ಸ್‌, ಘಾನಾ ತಂಡಗಳಿವೆ.

ಜರ್ಮನ್‌ ಓಪನ್‌: ಲಕ್ಷ್ಯ ಸೆಮಿಗೆ, ಶ್ರೀಕಾಂತ್‌ ಔಟ್‌

ಮುಯೆಲ್ಹೀಮ್‌ ಆನ್‌ ಡೆರ್‌ ರುಹ್ರ್‌(ಜರ್ಮನಿ): ಭಾರತದ ಯುವ ಶಟ್ಲರ್‌ ಲಕ್ಷ್ಯ ಸೆನ್‌ ಜರ್ಮನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದವರೇ ಆದ ಎಚ್‌.ಎಸ್‌.ಪ್ರಣಯ್‌ ವಿರುದ್ಧ 21-15, 21-16ರಲ್ಲಿ ಜಯಿಸಿದರು. ಆದರೆ ಕಿದಂಬಿ ಶ್ರೀಕಾಂತ್‌ (Kidambi Srikanth), ಡೆನ್ಮಾರ್ಕ್ನ ವಿಕ್ಟರ್‌ ಆಕ್ಸೆಲ್ಸೆನ್‌ ವಿರುದ್ಧ 10-21, 21-23ರಲ್ಲಿ ಸೋತು ಹೊರಬಿದ್ದರು.

ಜ್ವೆರೆವ್‌ ಮೇಲೆ ಎಟಿಪಿ 1 ವರ್ಷ ಕಣ್ಗಾವಲು

ಅಕಾಪುಲ್ಕೊ(ಮೆಕ್ಸಿಕೋ): ಇತ್ತೀಚೆಗೆ ಮೆಕ್ಸಿಕನ್‌ ಓಪನ್‌ ಟೂರ್ನಿ ವೇಳೆ ಅಂಪೈರ್‌ರ ಕುರ್ಚಿಗೆ ರಾಕೆಟ್‌ನಿಂದ ಹಲವು ಬಾರಿ ಹೊಡೆದಿದ್ದ ಟೋಕಿಯೋ ಒಲಿಂಪಿಕ್ಸ್‌ ಚಿನ್ನ ವಿಜೇತ, ವಿಶ್ವ ನಂ.3 ಟೆನಿಸಿಗ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಮೇಲೆ ವೃತ್ತಿಟೆನಿಸ್‌ ಆಟಗಾರರ ಸಂಸ್ಥೆ(ಎಟಿಪಿ) 1 ವರ್ಷ ಕಣ್ಗಾವಲಿಡಲು ನಿರ್ಧರಿಸಿದೆ.

Japan Open‌: ಪದಕದ ನಿರೀಕ್ಷೆಯಲ್ಲಿ ಸಿಂಧು, ಸೆನ್‌

ಪುರುಷರ ಡಬಲ್ಸ್‌ ಪಂದ್ಯದಲ್ಲಿ ಸೋತ ಬಳಿಕ ಅಸಭ್ಯವಾಗಿ ವರ್ತಿಸಿದ್ದ ಜ್ವೆರೆವ್‌ಗೆ ಭಾರೀ ದಂಡ ವಿಧಿಸಿದ್ದ ಎಟಿಪಿ, ಮುಂದಿನ 1 ವರ್ಷದಲ್ಲಿ ಇನ್ಯಾವುದೇ ರೀತಿಯ ಅನುಚಿತ ವರ್ತನೆ ತೋರಿದರೆ 8 ವಾರ ನಿಷೇಧ ಹಾಗೂ ಹೆಚ್ಚುವರಿ 25000 ಅಮೆರಿಕನ್‌ ಡಾಲರ್‌ ದಂಡ ವಿಧಿಸುವುದಾಗಿ ಎಚ್ಚರಿಸಿದೆ.