Asianet Suvarna News Asianet Suvarna News

ರಾಷ್ಟ್ರೀಯ ಮಹಿಳಾ ಕಿರಿಯರ ಹಾಕಿಯಲ್ಲಿ ಕನ್ನಡಿಗರ ಕಲರವ..!

* ರಾಷ್ಟ್ರೀಯ ಹಾಕಿ ತರಬೇತಿ ಶಿಬಿರಕ್ಕೆ ರಾಜ್ಯದ ಆರು ಆಟಗಾರ್ತಿಯರು ಆಯ್ಕೆ

* ಬೆಂಗಳೂರಿನಲ್ಲಿ ಜನವರಿ 17ರಿಂದ 29ವರೆಗೆ ತರಬೇತಿ ಶಿಬಿರ ನಡೆಯಲಿದೆ

* ಶಿಬಿರದಲ್ಲಿ ಒಟ್ಟು 66 ಆಟಗಾರ್ತಿಯರು ಇರಲಿದ್ದು, ಈ ಪೈಕಿ 33 ಮಂದಿಯನ್ನು ಮುಂದಿನ ಹಂತದ ಶಿಬಿರಕ್ಕೆ ಆಯ್ಕೆ

Junior Indian womens hockey 6 Karnataka players gets Chance to Participate camp in Bengaluru kvn
Author
Bengaluru, First Published Jan 13, 2022, 11:26 AM IST

ವರದಿ: ವಿಘ್ನೇಶ್ ಎಂ ಭೂತನಕಾಡು, ಕನ್ನಡಪ್ರಭ

ಮಡಿಕೇರಿ(ಜ.13): ಭಾರತ ಮಹಿಳಾ ಹಾಕಿ ತಂಡದಲ್ಲಿ (Indian Women's Hockey Team) ಕರ್ನಾಟಕದ ಆಟಗಾರ್ತಿಯರಿಗೆ ಅವಕಾಶ ಸಿಕ್ಕಿ ಬಹಳ ದಿನಗಳೇ ಕಳೆದಿವೆ. ಕಳೆದ ಕೆಲ ಒಲಿಂಪಿಕ್ಸ್‌ ತಂಡಗಳಲ್ಲೂ ರಾಜ್ಯದ ಆಟಗಾರ್ತಿಯರು ಇರಲಿಲ್ಲ. ಆದರೆ ಸದ್ಯ ರಾಷ್ಟ್ರೀಯ ಹಾಕಿ ತರಬೇತಿ ಶಿಬಿರಕ್ಕೆ (National Women's Hockey Camp) ರಾಜ್ಯದ ಒಟ್ಟು ಆರು ಆಟಗಾರ್ತಿಯರು ಆಯ್ಕೆಯಾಗಿದ್ದಾರೆ. ಒಟ್ಟಿಗೆ 6 ಆಟಗಾರ್ತಿಯರು ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆಯಾಗಿರುವುದು ಇದೇ ಮೊದಲ ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ಜನವರಿ 17ರಿಂದ 29ವರೆಗೆ ತರಬೇತಿ ಶಿಬಿರ ನಡೆಯಲಿದೆ. ಈ 6 ಆಟಗಾರ್ತಿಯರಲ್ಲಿ ಯಾರಾರ‍ಯರು ಭಾರತದ ಕಿರಿಯ ಮಹಿಳಾ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂಬುದು ಶಿಬಿರದಲ್ಲಿ ತೋರುವ ಪ್ರದರ್ಶನದ ಬಳಿಕ ನಿರ್ಧಾರವಾಗಲಿದೆ.

ಮಡಿಕೇರಿಯ ಪಾಂಡಂಡ ದೇಚಮ್ಮ ಗಣಪತಿ, ಶಯ ಕಾವೇರಮ್ಮ, ಕೊಡಗಿನವರಾದ ಆದಿರ, ಹಾಸನದ ಲಿಖಿತಾ ಎಸ್‌.ಪಿ., ಮೈಸೂರಿನ ಜೆ.ಚಂದನ, ಡಿ.ಎನ್‌. ತೇಜಸ್ವಿನಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ಅಕ್ಟೋಬರ್‌ನಲ್ಲಿ ಜಾರ್ಖಂಡ್‌ನಲ್ಲಿ ನಡೆದಿದ್ದ ಕಿರಿಯರ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಆಧಾರದ ಮೇಲೆ ಶಿಬಿರಕ್ಕೆ ಆಯ್ಕೆ ಮಾಡಲಾಗಿದೆ. ಶಿಬಿರದಲ್ಲಿ ಒಟ್ಟು 66 ಆಟಗಾರ್ತಿಯರು ಇರಲಿದ್ದು, ಈ ಪೈಕಿ 33 ಮಂದಿಯನ್ನು ಮುಂದಿನ ಹಂತದ ಶಿಬಿರಕ್ಕೆ ಆಯ್ಕೆ ಮಾಡಲಾಗುತ್ತದೆ.

ಯುವಕರು ಫಿಟ್ನೆಸ್‌ನತ್ತ ಗಮನ ನೀಡಬೇಕು:  ರಾಣಿ ರಾಂಪಾಲ್, ಮನ್‌ಪ್ರೀತ್ ಸಿಂಗ್ ಕಿವಿಮಾತು

ನವದೆಹಲಿ: ಕೋವಿಡ್‌ನಿಂದಾಗಿ (Coronavirus) ಬದಲಾಗುತ್ತಿರುವ ಜೀವಶೈಲಿಯಲ್ಲಿ ದೇಶದ ಯುವಕರು ದೈಹಿಕ ಹಾಗೂ ಮಾನಸಿಕ ಫಿಟ್ನೆಸ್‌ನತ್ತ ಹೆಚ್ಚು ಗಮನ ನೀಡಬೇಕು ಎಂದು ಭಾರತದ ಒಲಿಂಪಿಕ್ಸ್‌ ಹಾಗೂ ಪ್ಯಾರಾಲಿಂಪಿಕ್ಸ್‌ ತಾರೆಯರು ಕಿವಿಮಾತು ಹೇಳಿದ್ದಾರೆ. ರಾಷ್ಟ್ರೀಯ ಯುವಕರ ಹಬ್ಬದ ವರ್ಚುವಲ್‌ ಸಭೆಯಲ್ಲಿ ಪಾಲ್ಗೊಂಡಿದ್ದ ಹಾಕಿ ತಂಡದ ನಾಯಕರಾದ ಮನ್‌ಪ್ರೀತ್‌ ಸಿಂಗ್‌(Manpreet Singh), ರಾಣಿ ರಾಂಪಾಲ್‌(Rani Rampal), ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಕಂಚು ವಿಜೇತ ಬಾಕ್ಸರ್‌ ಲವ್ಲೀನಾ ಬೊರ್ಗೊಹೈನ್‌(Lovlina Borgohain), ಪ್ಯಾರಾಲಿಂಪಿಕ್ಸ್‌ (Tokyo Paralympics) ಪದಕ ವಿಜೇತರಾದ ಭವಿನಾ ಪಟೇಲ್‌, ಶರದ್‌ ಕುಮಾರ್‌ ಫಿಟ್ನೆಸ್‌ನ ಮಹತ್ವದ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡರು.

‘ಕೇವಲ ದೈಹಿಕ ಫಿಟ್ನೆಸ್‌ ಮಾತ್ರವಲ್ಲ, ಮಾನಸಿಕ ಫಿಟ್ನೆಸ್‌ ಕೂಡ ಬಹಳ ಮುಖ್ಯ. ಫಿಟ್ನೆಸ್‌ ಕಾಪಾಡಿಕೊಂಡಾಗ ಜೀವನ ಸುಲಭವಾಗುತ್ತದೆ. ಆರೋಗ್ಯ ಬಹಳ ಮುಖ್ಯ’ ಎಂದು ಭವಿನಾ ತಿಳಿಸಿದರು. ಕೋವಿಡ್‌ ಕಾರಣ ಆನ್‌ಲೈನ್‌ ತರಗತಿಗಳೇ ಹೆಚ್ಚು ನಡೆಯುತ್ತಿರುವ ಕಾರಣ ಮಕ್ಕಳಲ್ಲಿ ಕ್ರೀಡೆಯ ಮಹತ್ವ ತಿಳಿಸಬೇಕು ಎಂದು ರಾಣಿ ಅಭಿಪ್ರಾಯಿಸಿದರು. ‘ಪೋಷಕರು ಮಕ್ಕಳನ್ನು ಕ್ರೀಡೆಯಲ್ಲಿ ತೊಡಗುವಂತೆ ಮಾಡಬೇಕು. ದೈಹಿಕ ಚಟುವಟಿಕೆ ಬಹಳ ಮುಖ್ಯ’ ಎಂದು ರಾಣಿ ಹೇಳಿದರು.

Novak Djokovic: ಸೋಂಕಿತನಾದ ಬಳಿಕ ಐಸೋಲೇಟ್‌ ಆಗದೆ ತಪ್ಪು ಮಾಡಿದೆ ಎಂದ ಟೆನಿಸ್ ದಿಗ್ಗಜ

ಮನ್‌ಪ್ರೀತ್‌ ಸಿಂಗ್‌, ಪ್ರಧಾನ ನರೇಂದ್ರ ಮೋದಿ (Narendra Modi) ಅವರು ಫಿಟ್ನೆಸ್‌ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ಜೊತೆಗೆ ಫಿಟ್‌ ಇಂಡಿಯಾ(Fit India), ಖೇಲೋ ಇಂಡಿಯಾದಂತಹ (Khelo India) ಕಾರ್ಯಕ್ರಮಗಳು ಯುವಕರಿಗೆ ಬಹಳ ಸಹಕಾರಿ ಎಂದರು.

2021ರ ಜುಲೈ ಹಾಗೂ ಆಗಸ್ಟ್‌ ತಿಂಗಳಿನಲ್ಲಿ ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಒಂದು ಚಿನ್ನ, ಎರಡು ಬೆಳ್ಳಿ ಸಹಿತ ಒಟ್ಟು 7 ಪದಕಗಳಿಗೆ ಕೊರಳೊಡ್ಡಿತ್ತು. ನೀರಜ್ ಚೋಫ್ರಾ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸುವ ಮೂಲಕ ಚಾರಿತ್ರಿಕ ಸಾಧನೆ ಮಾಡಿದ್ದರು. ಇನ್ನು ಇದಾದ ಬಳಿಕ ನಡೆದ ಟೋಕಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತ 5 ಚಿನ್ನ, 8 ಬೆಳ್ಳಿ ಪದಕ ಸಹಿತ ಒಟ್ಟು 19 ಪದಕಗಳನ್ನು ಜಯಿಸುವ ಮೂಲಕ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ತೋರಿತ್ತು. 

Follow Us:
Download App:
  • android
  • ios