ನವದೆಹಲಿ: ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್‌ ಗುರುವಾರ ವಿಶ್ವ ಗೇಮ್ಸ್‌ ವರ್ಷದ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾದ ವಿಶ್ವದ ಮೊದಲ ಹಾಕಿ ಪಟು ಎನ್ನುವ ಹಿರಿಮೆಗೆ ಪಾತ್ರರಾದರು. 

20 ದಿನಗಳ ನಡೆದ ಆನ್‌ಲೈನ್‌ ಮತದಾನದಲ್ಲಿ ರಾಣಿ 1,99,477 ಮತಗಳನ್ನು ಪಡೆದು ಪ್ರಶಸ್ತಿಗೆ ಆಯ್ಕೆಯಾದರು. ಒಟ್ಟು 7,05,610 ಮತಗಳು ಚಲಾವಣೆಯಾಗಿದ್ದವು. ಕಳೆದ ವರ್ಷ ಭಾರತ ಎಫ್‌ಐಎಚ್‌ ಸೀರೀಸ್‌ ಫೈನಲ್ಸ್‌ ಟೂರ್ನಿ ಗೆದ್ದಿತ್ತು.  ರಾಣಿ ಪಂದ್ಯಾವಳಿಯ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಜಯಿಸಿದ್ದರು. ಅವರ ನಾಯಕತ್ವದಲ್ಲಿ ಭಾರತ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದೆ.

ಪ್ರಶಸ್ತಿ ಜಯಿಸಿದ ಬಳಿಕ ಪ್ರತಿಕ್ರಿಯಿಸಿರುವ ರಾಣಿ ರಾಂಪಾಲ್, ಈ ಪ್ರಶಸ್ತಿಯನ್ನು ದೇಶದ  ಹಾಕಿ ಸಹೋದರ-ಸಹೋದರಿಯರಿಗೆ, ನನ್ನ ತಂಡಕ್ಕೆ ಹಾಗೂ ದೇಶಕ್ಕೆ ಅರ್ಪಿಸುತ್ತೇನೆ ಎಂದಿದ್ದಾರೆ. ಹಾಕಿ ಅಭಿಮಾನಿಗಳ ಬೆಂಬಲ, ಹಾಕಿ ಇಂಡಿಯಾ, ಕೋಚ್‌ಗಳ ಸಹಕಾರದಿಂದಲೇ ಈ ಸಾಧನೆ ಸಾಧ್ಯವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

15 ವರ್ಷದವರಾಗಿದ್ದಾಗಿನಿಂದಲೇ ರಾಣಿ ರಾಂಪಾಲ್ ಭಾರತ ಹಾಕಿ ತಂಡದ ಸದಸ್ಯೆಯಾಗಿದ್ದಾರೆ. ಇದುವರೆಗೂ ರಾಣಿ 240ಕ್ಕೂ ಹೆಚ್ಚು ಪಂದ್ಯಗಳನ್ನಾಡಿದ್ದಾರೆ.  ರಾಣಿ ರಾಂಪಾಲ್ ಇತ್ತೀಚೆಗಷ್ಟೇ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.