ಲುಸ್ಸಾನೆ(ಏ.13): ಅರ್ಜೆಂಟೀನಾ ವಿರುದ್ಧ ಪ್ರೊ ಲೀಗ್‌ನಲ್ಲಿ 2 ಗೆಲುವುಗಳನ್ನು ಸಾಧಿಸಿದರೂ, ವಿಶ್ವ ರ‍್ಯಾಂಕಿಂಗ್‌ನಲ್ಲಿ ಭಾರತ ಪುರುಷರ ಹಾಕಿ ತಂಡ ಒಂದು ಸ್ಥಾನ ಕುಸಿತ ಕಂಡಿದೆ. ಈ ವರ್ಷ ಜನವರಿಯಲ್ಲಿ 4ನೇ ಸ್ಥಾನಕ್ಕೇರಿದ್ದ ಭಾರತ, ಈಗ 5ನೇ ಸ್ಥಾನ ಪಡೆದಿದೆ. 

ಆದರೆ ಕಳೆದ ಬಾರಿಗಿಂತ (2064.10) ಈಗ ಹೆಚ್ಚು ಅಂಕಗಳನ್ನು (2223.458) ಹೊಂದಿದೆ. ಬೆಲ್ಜಿಯಂ ಮೊದಲ ಸ್ಥಾನದಲ್ಲಿ ಮುಂದುವರಿದರೆ, 2ನೇ ಸ್ಥಾನದಲ್ಲಿ ಆಸ್ಪ್ರೇಲಿಯಾ, 3ನೇ ಸ್ಥಾನದಲ್ಲಿ ಜರ್ಮನಿ, 4ನೇ ಸ್ಥಾನದಲ್ಲಿ ನೆದರ್‌ಲೆಂಡ್ಸ್‌ ತಂಡಗಳಿವೆ.

ಅರ್ಜೆಂಟೀನಾ ವಿರುದ್ಧ ಭಾರತಕ್ಕೆ 3-0 ಗೆಲುವು

ಬ್ಯೂನಸ್‌ ಐರಿಸ್‌: ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ ಟೂರ್ನಿಯ ಅರ್ಜೆಂಟೀನಾ ವಿರುದ್ಧದ 2ನೇ ಪಂದ್ಯದಲ್ಲಿ ಭಾರತ 3-0 ಗೋಲುಗಳ ಗೆಲುವು ಸಾಧಿಸಿದೆ. ಈ ಜಯದೊಂದಿಗೆ ಅಂಕಪಟ್ಟಿಯಲ್ಲಿ ಭಾರತ 4ನೇ ಸ್ಥಾನಕ್ಕೇರಿದೆ. ಹಾಲಿ ಒಲಿಂಪಿಕ್‌ ಚಾಂಪಿಯನ್‌ ವಿರುದ್ಧ ಮೊದಲ ಪಂದ್ಯದಲ್ಲಿ ಭಾರತ, ಪೆನಾಲ್ಟಿ ಶೂಟೌಟ್‌ನಲ್ಲಿ 3-2 ಗೋಲುಗಳ ಜಯ ಪಡೆದಿತ್ತು.

ಪ್ರೊ ಲೀಗ್‌ ಹಾಕಿ: ಭಾರತಕ್ಕೆ ಭರ್ಜರಿ ಗೆಲುವು

ಭಾರತ ಪರ ಹರ್ಮನ್‌ಪ್ರೀತ್‌ ಸಿಂಗ್‌ (11ನೇ ನಿ.,), ಲಲಿತ್‌ ಉಪಾಧ್ಯಾಯ (25ನೇ ನಿ.,) ಹಾಗೂ ಮನ್‌ದೀಪ್‌ ಸಿಂಗ್‌(58ನೇ ನಿ.,) ಗೋಲು ಬಾರಿಸಿದರು. ಭಾರತ 8 ಪಂದ್ಯಗಳನ್ನು ಆಡಿದ್ದು 15 ಅಂಕಗಳನ್ನು ಹೊಂದಿದ್ದು, ಆಸ್ಪ್ರೇಲಿಯಾಗಿಂತ ಒಂದು ಸ್ಥಾನ ಮೇಲಿದೆ. ಭಾರತ ತನ್ನ ಮುಂದಿನ ಮುಖಾಮುಖಿಯಲ್ಲಿ ಗ್ರೇಟ್‌ ಬ್ರಿಟನ್‌ ತಂಡವನ್ನು ಎದುರಿಸಲಿದೆ. ಮೇ 8, 9ರಂದು ಪಂದ್ಯಗಳು ನಡೆಯಲಿವೆ.

ಮುಂಬರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಅರ್ಜೆಂಟೀನಾ ಹಾಗೂ ಆಸ್ಪ್ರೇಲಿಯಾವನ್ನು ಎದುರಿಸಲಿದೆ. ಇದೇ ಗುಂಪಿನಲ್ಲಿ ಸ್ಪೇನ್‌, ನ್ಯೂಜಿಲೆಂಡ್‌ ಹಾಗೂ ಜಪಾನ್‌ ತಂಡಗಳು ಸಹ ಇವೆ.