ಮಹಿಳಾ ಹಾಕಿ ವಿಶ್ವಕಪ್: ಸ್ಪೇನ್ ಎದುರು ಸೋತು ಕ್ವಾರ್ಟರ್ ಫೈನಲ್‌ಗೇರಲು ಭಾರತ ವಿಫಲ
* ಮಹಿಳಾ ಹಾಕಿ ವಿಶ್ವಕಪ್‌ನಲ್ಲಿ ಕ್ವಾರ್ಟರ್ ಫೈನಲ್‌ಗೇರಲು ಭಾರತ ವಿಫಲ
* ಕ್ರಾಸ್ ಓವರ್ ಪಂದ್ಯದಲ್ಲಿ ಸ್ಪೇನ್ ವಿರುದ್ದ ಸೋಲನನ್ನುಭವಿಸಿದ ಭಾರತ
* 3 ನಿಮಿಷ ಬಾಕಿ ಇದ್ದಾಗ ಗೋಲು ಬಿಟ್ಟುಕೊಟ್ಟು ಸೋಲಿಗೆ ಶರಣಾದ ಭಾರತ
ಟೆರ್ರಾಸ್ಸಾ(ಜು.12): ಎಫ್‌ಐಎಚ್ ಮಹಿಳಾ ಹಾಕಿ ವಿಶ್ವಕಪ್ ಟೂರ್ನಿಯ ನಾಕೌಟ್ ಹಂತಕ್ಕೇರುವ ಭಾರತದ ಕನಸು ಭಗ್ನಗೊಂಡಿದೆ. ಕ್ರಾಸ್ ಓಪನ್ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಭಾರತ 0-1 ಗೋಲಿನಿಂದ ಸೋತು ನಿರಾಸೆ ಅನುಭವಿಸಿತು. ಮೊದಲ ಮೂರು ಕ್ವಾರ್ಟರ್‌ಗಳಲ್ಲಿ ಉತ್ತಮ ರಕ್ಷಣಾತ್ಮಕ ಆಟವನ್ನು ಪ್ರದರ್ಶಿಸಿದ ಭಾರತ, ಪಂದ್ಯ ಮುಕ್ತಾಯಗೊಳ್ಳಲು 3 ನಿಮಿಷ ಬಾಕಿ ಇದ್ದಾಗ ಗೋಲು ಬಿಟ್ಟುಕೊಟ್ಟು ಸೋಲಿಗೆ ಶರಣಾಯಿತು. ಆಕರ್ಷಕ ಗೋಲು ಬಾರಿಸಿದ ಮಾರ್ಟಾ ಸೆಗು ಸ್ಪೇನ್ ತಂಡವನ್ನು ಕ್ವಾರ್ಟರ್‌ಗೇರಿಸಿದರು.
ಈ ಪಂದ್ಯದಲ್ಲೂ ಭಾರತ ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಉಪಯೋಗಿಸಿಕೊಳ್ಳುವಲ್ಲಿ ವಿಫಲವಾಯಿತು. ದೊರೆತ 4 ಪೆನಾಲ್ಟಿ ಕಾರ್ನರ್‌ಗಳಲ್ಲಿ ಒಂದರಲ್ಲೂ ಗೋಲು ಗಳಿಸಲಿಲ್ಲ. ಭಾರತ 9ರಿಂದ 12ನೇ ಸ್ಥಾನಕ್ಕಾಗಿ ಆಡಲಿದ್ದು, ಮಂಗಳವಾರ ಮೊದಲ ಪಂದ್ಯದಲ್ಲಿ ಕೆನಡಾ ವಿರುದ್ಧ ಆಡಲಿದೆ. ಕ್ವಾರ್ಟರ್ ಫೈನಲ್‌ನಲ್ಲಿ ನ್ಯೂಜಿಲೆಂಡ್-ಜರ್ಮನಿ, ನೆದರ್‌ಲೆಂಡ್ಸ್-ಬೆಲ್ಜಿಯಂ, ಆಸ್ಪ್ರೇಲಿಯಾ-ಸ್ಪೇನ್, ಇಂಗ್ಲೆಂಡ್-ಅರ್ಜೆಂಟೀನಾ ಸೆಣಸಲಿವೆ.
ಭಾರತ ಮಹಿಳಾ ಹಾಕಿ ತಂಡವು (Indian Women's Hockey Team ) ಎಫ್‌ಐಎಚ್ ಮಹಿಳಾ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ 'ಬಿ' ಗುಂಪಿನಲ್ಲಿ ಸ್ಥಾನ ಪಡೆದಿತ್ತು. ಗುಂಪು ಹಂತದ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು 3-4 ಗೋಲುಗಳ ಅಂತರದಲ್ಲಿ ಸೋಲು ಕಾಣುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಕ್ರಾಸ್ ಓವರ್ ಪಂದ್ಯವನ್ನಾಡುವ ಒತ್ತಡಕ್ಕೆ ಸಿಲುಕಿತ್ತು.
ಇಂದಿನಿಂದ ಸಿಂಗಾಪುರ ಸೂಪರ್ 500 ಬ್ಯಾಡ್ಮಿಂಟನ್
ಸಿಂಗಾಪುರ: ಮಲೇಷ್ಯಾ ಮಾಸ್ಟರ್ಸ್‌ನಲ್ಲಿ ಪ್ರಶಸ್ತಿ ಗೆಲ್ಲಲು ವಿಫಲರಾದ ಭಾರತೀಯ ಶಟ್ಲರ್‌ಗಳು ಮಂಗಳವಾರದಿಂದ ಆರಂಭಗೊಳ್ಳಲಿರುವ ಸಿಂಗಾಪುರ ಸೂಪರ್ 500 ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದು ಸುಧಾರಿತ ಪ್ರದರ್ಶನ ತೋರಲು ಎದುರು ನೋಡುತ್ತಿದ್ದಾರೆ. ಕಾಮನ್ವೆಲ್ತ್ ಕ್ರೀಡಾಕೂಟಕ್ಕೂ ಮುನ್ನ ನಡೆಯಲಿರುವ ಕೊನೆಯ ಟೂರ್ನಿ ಇದ್ದಾಗಿದ್ದು, ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು, ಕಿದಂಬಿ ಶ್ರೀಕಾಂತ್, ಎಚ್.ಎಸ್.ಪ್ರಣಯ್ ಮೇಲೆ ದೊಡ್ಡ ನಿರೀಕ್ಷೆ ಇದೆ.
ಆರ್ಚರಿ ವಿಶ್ವ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದ ಅಭಿಷೇಕ್ ವರ್ಮಾ-ಜ್ಯೋತಿ ಸುರೇಖಾ
ಶೂಟಿಂಗ್ ವಿಶ್ವಕಪ್: ಚಿನ್ನ ಗೆದ್ದ ಭಾರತದ ಅರ್ಜುನ್
ಚಾಂಗ್‌ವೊನ್: ಭಾರತದ ಯುವ ಶೂಟರ್ ಅರ್ಜುನ್ ಬಾಬುತಾ ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನ ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಕೊರಳೊಡಿದ್ದಾರೆ. ಸೋಮವಾರ ನಡೆದ ಫೈನಲ್ ಸ್ಪರ್ಧೆಯಲ್ಲಿ ಅರ್ಜುನ್ ಟೋಕಿಯೋ ಒಲಿಂಪಿಕ್ಸ್ ಬೆಳ್ಳಿ ವಿಜೇತ ಅಮೆರಿಕದ ಲುಕಾಸ್ ಕೊಜೆನಿಸ್ಕೀ ವಿರುದ್ಧ 17-9 ಅಂಕಗಳಿಂದ ಜಯಗಳಿಸಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟರು. ಆದರೆ ಅರ್ಜುನ್ ಜೊತೆ ಫೈನಲ್ ತಲುಪಿದ್ದ ಭಾರತದ ಪಾಥ್‌ರ್ ಮಖಿಜಾ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. 2016ರಲ್ಲಿ ಅರ್ಜುನ್ ಕಿರಿಯರ ವಿಶ್ವಕಪ್‌ನಲ್ಲಿ ಚಿನ್ನ ಗೆದ್ದಿದ್ದರು.