ಹಾಕಿ ವಿಶ್ವಕಪ್ ಟೂರ್ನಿಗೆ ಮುತ್ತಿಕ್ಕಿದ ಬಲಿಷ್ಠ ಜರ್ಮನಿ ಹಾಕಿ ತಂಡ2006ರ ಬಳಿಕ ಮೊದಲ ವಿಶ್ವಕಪ್‌ ಟ್ರೋಫಿ ಜಯಿಸಿದ ಜರ್ಮನಿಭರ್ಜರಿ ಕಮ್‌ಬ್ಯಾಕ್ ಮಾಡಿ ಟ್ರೋಫಿ ಜಯಿಸಿದ ಜರ್ಮನಿ ಹಾಕಿ ತಂಡ

ಭುವನೇಶ್ವರ(ಜ.30): 2023ರ ಪುರುಷರ ಹಾಕಿ ವಿಶ್ವಕಪ್‌ ಜರ್ಮನಿ ಪಾಲಾಗಿದೆ. ಭಾನುವಾರ ಇಲ್ಲಿನ ಕಳಿಂಗಾ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ 2018ರ ಚಾಂಪಿಯನ್‌ ಬೆಲ್ಜಿಯಂ ವಿರುದ್ಧ ಪೆನಾಲ್ಟಿಶೂಟೌಟ್‌ನಲ್ಲಿ 5-4 ಗೋಲುಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ ಒಟ್ಟಾರೆ 3ನೇ ಹಾಗೂ 2006ರ ಬಳಿಕ ಮೊದಲ ವಿಶ್ವಕಪ್‌ ಟ್ರೋಫಿ ಎತ್ತಿಹಿಡಿತು. 2002ರಲ್ಲಿ ಜರ್ಮನಿ ಚೊಚ್ಚಲ ವಿಶ್ವಕಪ್‌ ಜಯಿಸಿತ್ತು.

ಟೂರ್ನಿಯಲ್ಲಿ ಜರ್ಮನಿ ತೋರಿದ ಸಾಹಸ ಯಾವ ಸಿನಿಮಾ ಕಥೆಗೂ ಕಮ್ಮಿಯಲ್ಲ. ಸತತ 3 ಪಂದ್ಯಗಳಲ್ಲಿ ತಂಡ 0-2 ಗೋಲುಗಳ ಹಿನ್ನಡೆ ಅನುಭವಿಸಿದರೂ ಪುಟಿದೆದ್ದು ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಕ್ವಾರ್ಟರ್‌ ಫೈನಲ್‌ನಲ್ಲಿ ಇಂಗ್ಲೆಂಡ್‌, ಸೆಮಿಫೈನಲ್‌ನಲ್ಲಿ ಆಸ್ಪ್ರೇಲಿಯಾ ವಿರುದ್ಧವೂ ತಂಡ 0-2ರ ಹಿನ್ನಡೆಯನ್ನು ಮೆಟ್ಟಿನಿಂತು ಗೆಲುವು ಸಂಪಾದಿಸಿತ್ತು.

ಭಾನುವಾರ ಪಂದ್ಯದಲ್ಲಿ ನಿರೀಕ್ಷೆಯಂತೆ ಭಾರೀ ಪೈಪೋಟಿ ಕಂಡುಬಂತು. ಬೆಲ್ಜಿಯಂ 9ನೇ ನಿಮಿಷದಲ್ಲೇ ಗೋಲಿನ ಖಾತೆ ತೆರೆಯಿತು. ವಾನ್‌ ಫ್ಲೋರೆಂಟ್‌ ಆಕರ್ಷಕ ಫೀಲ್ಡ್‌ ಗೋಲು ಬಾರಿಸಿದರು. 10ನೇ ನಿಮಿಷದಲ್ಲಿ ಕೊಸಿನ್ಸ್‌ ಟಾನ್‌ಗಯ್‌ ತಂಡದ ಮುನ್ನಡೆಯನ್ನು 2-0ಗೇರಿಸಿದರು.

28ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಿಸುವ ಮುನ್ನ ಜರ್ಮನಿ 3 ಪೆನಾಲ್ಟಿಕಾರ್ನರ್‌ ಹಾಗೂ 1 ಪೆನಾಲ್ಟಿಸ್ಟ್ರೋಕ್‌ ಅವಕಾಶವನ್ನು ವ್ಯರ್ಥ ಮಾಡಿತ್ತು. 40ನೇ ನಿಮಿಷದಲ್ಲಿ ಗೊಂಜಾಲೊ ಪೆನಾಲ್ಟಿಕಾರ್ನರನ್ನು ಗೋಲಾಗಿಸಿದ ಪರಿಣಾಮ 2-2ರ ಸಮಬಲ ಸಾಧಿಸಿದ ಜರ್ಮನಿ, 47ನೇ ನಿಮಿಷದಲ್ಲಿ ಮ್ಯಾಟ್ಸ್‌ ಗ್ರಾಮ್‌ಬುಶ್‌ ಬಾರಿಸಿದ ಗೋಲಿನ ನೆರವಿನಿಂದ 3-2ರ ಮುನ್ನಡೆ ಪಡೆದು ಗೆಲುವಿನತ್ತ ಮುನ್ನುಗ್ಗಿತು.

Hockey World Cup: ಇಂದು ಬೆಲ್ಜಿಯಂ vs ಜರ್ಮನಿ ಫೈನಲ್‌ ಫೈಟ್

58ನೇ ನಿಮಿಷದಲ್ಲಿ ಬೂನ್‌ ಟಾಮ್‌ ಪೆನಾಲ್ಟಿಕಾರ್ನರ್‌ ಸದ್ಬಳಕೆ ಮಾಡಿದ್ದರಿಂದ ನಿಗದಿತ 60 ನಿಮಿಷದಲ್ಲಿ ಪಂದ್ಯ 3-3ರಲ್ಲಿ ಸಮಗೊಂಡಿತು. ಹೀಗಾಗಿ ಫಲಿತಾಂಶಕ್ಕಾಗಿ ಪೆನಾಲ್ಟಿಕಾರ್ನರ್‌ ಮೊರೆ ಹೋಗಬೇಕಾಯಿತು.

ಸಡನ್‌ ಡೆತ್‌ನಲ್ಲಿ ಟ್ರೋಫಿ ಕೈಚೆಲ್ಲಿದ ಬೆಲ್ಜಿಯಂ!

ಸತತ 2 ಬಾರಿ ವಿಶ್ವಕಪ್‌ ಗೆದ್ದ ಕೇವಲ 4ನೇ ತಂಡ ಎನ್ನುವ ಹಿರಿಮೆ ಗಳಿಸುವ ನಿರೀಕ್ಷೆಯಲ್ಲಿದ್ದ ಬೆಲ್ಜಿಯಂ ಶೂಟೌಟ್‌ನಲ್ಲಿ ಹೋರಾಟ ತೋರಿದರೂ ಗೆಲುವು ಕೈಗೆಟುಕಲಿಲ್ಲ. ಮೊದಲ 5 ಯತ್ನಗಳ ಬಳಿಕ ಎರಡೂ ತಂಡಗಳು 3-3ರಲ್ಲಿ ಸಮಬಲ ಕಾಯ್ದುಕೊಂಡವು. ಹೀಗಾಗಿ ಸಡನ್‌ ಡೆತ್‌ ಮೊರೆ ಹೋಗಲಾಯಿತು. ಇದರಲ್ಲಿ ಜರ್ಮನಿ ಮೊದಲು ಗೋಲು ಬಾರಿಸಲು ಪ್ರಯತ್ನಿಸಿ ಸಫಲವಾಯಿತು. ಬೆಲ್ಜಿಯಂನಿಂದಲೂ ಗೋಲು ದಾಖಲಾಯಿತು. 2ನೇ ಯತ್ನದಲ್ಲಿ ಪ್ರಿನ್‌್ಜ ಥೀಸ್‌ ಬಾರಿಸಿದ ಗೋಲು ಜರ್ಮನಿ ಪಾಲಿನ ಗೆಲುವಿನ ಗೋಲಾಯಿತು. ಜರ್ಮನಿಯ ಗೋಲ್‌ಕೀಪರ್‌ ಬೆಲ್ಜಿಯಂಗೆ ಗೋಲು ನಿರಾಕರಿಸಿದರು. ಜರ್ಮನಿ ತಂಡ ಸಂಭ್ರಮದ ಅಲೆಯಲ್ಲಿ ತೇಲಿತು.

4ನೇ ಬಾರಿ ಶೂಟೌಟ್‌ನಲ್ಲಿ ಚಾಂಪಿಯನ್‌ ತಂಡ ನಿರ್ಧಾರ!

15 ಆವೃತ್ತಿಗಳ ಹಾಕಿ ವಿಶ್ವಕಪ್‌ನಲ್ಲಿ ಪೆನಾಲ್ಟಿಶೂಟೌಟ್‌ ಮೂಲಕ ಚಾಂಪಿಯನ್‌ ತಂಡ ಯಾವುದು ಎಂದು ನಿರ್ಧಾರವಾಗಿದ್ದು ಇದು 4ನೇ ಬಾರಿ. 1973ರ ಫೈನಲಲ್ಲಿ ಭಾರತ ವಿರುದ್ಧ ನೆದರ್‌ಲೆಂಡ್‌್ಸ ಶೂಟೌಟ್‌ನಲ್ಲಿ 4-2ರಲ್ಲಿ ಜಯಿಸಿತ್ತು. 1994ರಲ್ಲಿ ನೆದರ್‌ಲೆಂಡ್ಸ್ ವಿರುದ್ಧ ಪಾಕಿಸ್ತಾನ 4-3ರಲ್ಲಿ ಗೆದ್ದರೆ, 2018ರಲ್ಲಿ ನೆದರ್‌ಲೆಂಡ್‌್ಸ ವಿರುದ್ಧ ಬೆಲ್ಜಿಯಂ 3-2ರಲ್ಲಿ ಗೆಲುವು ಪಡೆದಿತ್ತು.

ಟೂರ್ನಿಯ ಅಂಕಿ-ಅಂಶ:

249 ಗೋಲು: 15ನೇ ಆವೃತ್ತಿಯ ವಿಶ್ವಕಪ್‌ನಲ್ಲಿ ಒಟ್ಟು 249 ಗೋಲುಗಳು ದಾಖಲಾದವು.

32 ಗೋಲು: ಈ ವಿಶ್ವಕಪ್‌ನಲ್ಲಿ ಅತಿಹೆಚ್ಚು(32) ಗೋಲು ಬಾರಿಸಿದ್ದು ನೆದರ್‌ಲೆಂಡ್‌್ಸ ತಂಡ.

12 ಗೋಲು: ಈ ವಿಶ್ವಕಪ್‌ನಲ್ಲಿ ಪೆನಾಲ್ಟಿಕಾರ್ನರ್‌ನಲ್ಲಿ ಅತಿಹೆಚ್ಚು(12) ಗೋಲು ಬಾರಿಸಿದ್ದು ಆಸ್ಪ್ರೇಲಿಯಾ.