Hockey World cup ವೇಲ್ಸ್ ವಿರುದ್ಧ ಭಾರತಕ್ಕೆ 4-2 ಅಂತರದ ಗೆಲುವು, ದೇಶದೆಲ್ಲೆಡೆ ಸಂಭ್ರಮ
ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಗೆಲುವಿನ ನಾಗಾಲೋಟ ಮುಂದುವರಿದಿದೆ. ಇಂದಿನ ಅತ್ಯಂತ ಮಹತ್ವದ ಪಂದ್ಯದಲ್ಲಿ ವೇಲ್ಸ್ ವಿರುದ್ದ ಭಾರತ 4-2 ಅಂತರದ ಗೆಲುವು ದಾಖಲಿಸಿದೆ.
ಭುಬನೇಶ್ವರ(ಜ.19): ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಸೋಲಿಲ್ಲದ ಸರದಾನಾಗಿ ಭಾರತದ ಓಟ ಮುಂದುವರಿದಿದೆ. ಇಂದು ವೇಲ್ಸ್ ವಿರುದ್ದ ನಡೆದ ಮಹತ್ವದ ಪಂದ್ಯದಲ್ಲಿ ಭಾರತ 4-2 ಅಂತರದ ಗೋಲುಗಳಿಂದ ಗೆಲವು ದಾಖಲಿಸಿತು. ಇದರೊದಿಗೆ ಡಿ ಗುಂಪಿನಿಂದ 2ನೇ ಸ್ಥಾನ ಅಲಂಕರಿಸಿರುವ ಭಾರತ ಕ್ವಾರ್ಟರ್ ಫೈನಲ್ ಪ್ರವೇಶಕ್ಕೆ ನ್ಯೂಜಿಲೆಂಡ್ ವಿರುದ್ದ ಕ್ರಾಸ್‌ಓವರ್ ಪಂದ್ಯ ಆಡಬೇಕಿದೆ.
ಪಂದ್ಯ ಆರಂಭದಲ್ಲೇ ಭಾರತ ಆತಂಕ ಎದುರಿಸಿತು ಅಕ್ಷದೀಪ್ ಎದುರಾಳಿಗಳ ಸರ್ಕಲ್‌ನಲ್ಲಿ ಜಾರಿ ಬೀದ್ದರು. ಆದರೆ ಯಾವುದೇ ಫೌಲ್ ಆಗಲಿಲ್ಲ. ಮೊದಲ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು ಯಾವುದೇ ಗೋಲು ದಾಖಲಿಸಲಿಲ್ಲ. 22ನೇ ನಿಮಿಷಕ್ಕೆ ಹರ್ಮನ್‌ಪ್ರೀತ್ ಸಿಂಗ್ ಶಾಟ್ ಬ್ಲಾಕ್ ಮಾಡಲಾಯಿತು. ಆದರೆ ಸಂಶೇರ್ ಸಿಂಗ್ ರಿಬಾಂಡ್ ಮೂಲಕ ಗೋಲು ಸಿಡಿಸಿ ಭಾರತಕ್ಕೆ ಅತೀ ದೊಡ್ಡ ಮುನ್ನಡೆ ತಂದುಕೊಟ್ಟರು.
32ನೇ ನಿಮಿಷದಲ್ಲಿ ಸಂದರ್ಭವನ್ನು ಸೂಕ್ತವಾಗಿ ಭಾರತ ಬಳಸಿಕೊಂಡಿತು. ಮನ್ದೀಪ್ ಸಿಂಗ್ ನೆರವಿನೊಂದಿಗೆ ಅಕ್ಷದೀಪ್ ಅದ್ಭುತ ಗೋಲು ಸಿಡಿಸಿದರು. ಈ ಮೂಲಕ ಭಾರತ 2-0 ಮುನ್ನಡೆ ಪಡೆಯಿತು. ಆದರೆ 43ನೇ ನಿಮಿಷದಲ್ಲಿ ವೇಲ್ಸ್ ತಿರುಗೇಟು ನೀಡಿತು. ಪೆನಾಲ್ಟಿ ಕಾರ್ನರ್ ಬಳಸಿ ಮೊದಲ ಗೋಲು ಸಿಡಿಸಿತು. 44ನೇ ನಿಮಿಷದಲ್ಲಿ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶ ಪಡೆದ ವೇಲ್ಸ್ ಗೋಲಾಗಿ ಪರಿವರ್ತಿಸಿ. ಈ ಮೂಲಕ 2-2 ಅಂತರದಲ್ಲಿ ಸಮಬಲಗೊಂಡಿತು. ಭಾರತ ಆತಂಕ ಹೆಚ್ಚಾಯಿತು.
ನಾಲ್ಕನೇ ಕ್ವಾರ್ಟರ್ ವೇಳೆ ಅಕ್ಷದೀಪ್ ಸಿಡಿಸಿದ ಗೋಲು ಭಾರತಕ್ಕೆ ವರವಾಯಿತು. ಭಾರತ 3-2 ಅಂತರದ ಮುನ್ನಡೆ ಪಡೆದುಕೊಂಡಿತು. ಅಂತಿಮ ಹಂತದಲ್ಲಿ ವೇಲ್ಸ್ ತಿರುಗೇಟು ನೀಡುವ ಪ್ರಯತ್ನ ನಡೆಸಿತು. ಆದರೆ ಭಾರತ ಅವಕಾಶ ನೀಡಲಿಲ್ಲ. ಕೊನೆಯ ಹಂತದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಭಾರತ ಬಳಸಿಕೊಂಡಿತು. ಡ್ರ್ಯಾಗ್ ಫ್ಲಿಕ್ ಮೂಲಕ ಹರ್ಮನ್‌ಪ್ರೀತ್ ಗೋಲು ಸಿಡಿಸಿದರು. ಈ ಮೂಲಕ ಭಾರತ 4-2ಅಂತರದ ಗೆಲುವು ದಾಖಲಿಸಿತು.
ಇದೀಗ ಭಾರತ ಕ್ವಾರ್ಟರ್ ಫೈನಲ್ ಪ್ರವೇಶ ಖಚಿತಪಡಿಸಿಕೊಳ್ಳಲು ನ್ಯೂಜಿಲೆಂಡ್ ವಿರುದ್ಧ ಕ್ರಾಸ್ಓವರ್ ಪಂದ್ಯ ಆಡಬೇಕಿದೆ.