ಕಿರಿಯರ ಮಹಿಳಾ ಹಾಕಿ ತಂಡಕ್ಕೆ ತುಷಾರ್ ಖಾಂಡೇಕರ್ ಕೋಚ್
ಕಿರಿಯರ ಮಹಿಳಾ ಹಾಕಿ ತಂಡಕ್ಕೆ ಭಾರತ ತಂಡ ಪ್ರಕಟ
ನವೆಂಬರ್-ಡಿಸೆಂಬರ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಸಜ್ಜಾಗುತ್ತಿರುವ ಭಾರತ ಕಿರಿಯರ ಮಹಿಳಾ ಹಾಕಿ ತಂಡ
ಹಿರಿಯ ಪುರುಷರ ತಂಡಕ್ಕೆ ಕೋಚ್ ಆಗಿದ್ದ ತುಷಾರ್ ಖಾಂಡೇಕರ್ ಈಗ ಕಿರಿಯರ ಮಹಿಳಾ ಹಾಕಿ ತಂಡಕ್ಕೆ ಕೋಚ್
ನವದೆಹಲಿ(ಜೂ.28): ನವೆಂಬರ್-ಡಿಸೆಂಬರ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಸಜ್ಜಾಗುತ್ತಿರುವ ಭಾರತ ಕಿರಿಯರ ಮಹಿಳಾ ಹಾಕಿ ತಂಡಕ್ಕೆ ಮಾಜಿ ಆಟಗಾರ ತುಷಾರ್ ಖಾಂಡೇಕರ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ಕಳೆದ ಜನವರಿಯಲ್ಲಿ ಎರಿಕ್ ವೊನಿಂಕ್ ನಿರ್ಗಮನದ ಬಳಿಕ ಹರ್ವಿಂದರ್ ಸಿಂಗ್ ಹಂಗಾಮಿ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಸ್ಥಾನಕ್ಕೆ ತುಷಾರ್‌ರನ್ನು ನೇಮಿಸಲಾಗಿದೆ.
ತುಷಾರ್ ಈ ಮೊದಲು 2014-16ರಲ್ಲಿ ಹಿರಿಯ ಪುರುಷರ ತಂಡಕ್ಕೆ ಕೋಚ್ ಆಗಿದ್ದರು. ಅವರ ಅವಧಿಯಲ್ಲಿ ತಂಡ 2016ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಬೆಳ್ಳಿ, ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಚಿನ್ನ ಗೆದ್ದಿತ್ತು. ವಿಶ್ವಕಪ್‌ಗೆ ಸಜ್ಜಾಗುತ್ತಿರುವ ಭಾರತ ಕಿರಿಯರ ಮಹಿಳಾ ಹಾಕಿ ತಂಡದ (India women's junior team) ಸಂಭಾವ್ಯ ಆಟಗಾರ್ತಿಯರ ಗುಂಪು ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್)ದಲ್ಲಿ ಅಭ್ಯಾ ನಡೆಸುತ್ತಿದ್ದು, ಈ ಗುಂಪನ್ನು ತುಷಾರ್ ಖಾಂಡೇಕರ್(Tushar Khandker) ಕೂಡಿಕೊಳ್ಳಲಿದ್ದಾರೆ.
ಏಷ್ಯನ್ ಕಬಡ್ಡಿ: ಸತತ 2 ಪಂದ್ಯ ಗೆದ್ದ ಭಾರತ
ಬುಸಾನ್(ದ.ಕೊರಿಯಾ): 11ನೇ ಆವೃತ್ತಿಯ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿನಲ್ಲಿ (Asian Kabaddi Championship) ಭಾರತ ಮೊದಲ ದಿನವೇ ಸತತ 2 ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಮಂಗಳವಾರ ಆರಂಭಿಕ ಪಂದ್ಯದಲ್ಲಿ ಆತಿಥೇಯ ದ.ಕೊರಿಯಾ ವಿರುದ್ಧ 76-13 ಅಂಕಗಳಿಂದ ಭರ್ಜರಿ ಗೆಲುವು ಸಾಧಿಸಿದ ಭಾರತ, 2ನೇ ಪಂದ್ಯದಲ್ಲಿ ಚೈನೀಸ್ ತೈಪೆ ತಂಡವನ್ನು 53-19 ಅಂಕಗಳಿಂದ ಮಣಿಸಿತು. ಭಾರತ ತನ್ನ 3ನೇ ಪಂದ್ಯದಲ್ಲಿ ಬುಧವಾರ ಜಪಾನ್ ವಿರುದ್ಧ ಸೆಣಸಲಿದೆ.
ಟೆಕ್ವಾಂಡೋ ಲೀಗ್‌ನಲ್ಲಿ ರಾಜಸ್ಥಾನ ಚಾಂಪಿಯನ್
ನವದೆಹಲಿ: ಚೊಚ್ಚಲ ಆವೃತ್ತಿಯ ಟೆಕ್ವಾಂಡೋ ಪ್ರೀಮಿಯರ್ ಲೀಗ್ (ಟಿಪಿಎಲ್)ನಲ್ಲಿ ರಾಜಸ್ಥಾನ ರೆಬೆಲ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾನುವಾರ ರಾತ್ರಿ ನಡೆದ ಫೈನಲ್‌ನಲ್ಲಿ ರಾಜಸ್ಥಾನ ತಂಡವು ಡೆಲ್ಲಿ ವಾರಿಯರ್ಸ್ ವಿರುದ್ಧ 2-1ರಿಂದ ಜಯಭೇರಿ ಬಾರಿಸಿತು. ಇನ್ನು, ಬೆಂಗಳೂರು ನಿಂಜಾಸ್ ತಂಡಕ್ಕೆ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಎದುರಾಯಿತು. ಗುಂಪು ಹಂತದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ತಂಡ ಕ್ವಾರ್ಟರ್‌ನಲ್ಲಿ ಪಂಜಾಬ್ ರಾಯಲ್ಸ್ ವಿರುದ್ಧ ಬೆಂಗಳೂರು ತಂಡ 1-2 ರಲ್ಲಿ ಸೋತು ಹೊರಬಿತ್ತು. ಚೊಚ್ಚಲ ಆವೃತ್ತಿಯ ಟೆಕ್ವಾಂಡೋ ಪ್ರೀಮಿಯರ್ ಲೀಗ್‌ನಲ್ಲಿ ಒಟ್ಟು 12 ತಂಡಗಳು ಪಾಲ್ಗೊಂಡಿದ್ದವು.
ಏಷ್ಯಾದ ಪ್ರತಿಷ್ಠಿತ ಎಕ್ಸ್30 ಚಾಂಪಿಯನ್‌ಶಿಪ್‌ನಲ್ಲಿ ಮುಂಬೈನ 11 ವರ್ಷದ ಹುಡುಗ ಹಮ್ಜಾಗೆ ಬೆಳ್ಳಿ ಪದಕ
ಕೋರ್ಟ್ ನೋಡಿಕೊಳ್ಳಲಿದೆ:ಬ್ರಿಜ್‌ಭೂಷಣ್ ಸಿಂಗ್
ನವದೆಹಲಿ: ಲೈಂಗಿಕ ಕಿರುಕುಳ ಪ್ರಕರಣ ಸದ್ಯ ನ್ಯಾಯಾಲದಲ್ಲಿದ್ದು, ಯಾವುದು ಸರಿ ಎಂಬುದನ್ನು ನ್ಯಾಯಾಲಯವೇ ನಿರ್ಧರಿಸಲಿದೆ ಎಂದು ಭಾರತೀಯ ಕುಸ್ತಿ ಫೆಡರೇಶನ್ ನಿರ್ಗಮಿತ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ಹೇಳಿದ್ದಾರೆ. ಬ್ರಿಜ್ ವಿರುದ್ಧ ಇನ್ನು ಬೀದಿಯಲ್ಲಿ ಪ್ರತಿಭಟಿಸುವುದಿಲ್ಲ, ಕೋರ್ಟ್‌ನಲ್ಲಿ ಹೋರಾಟ ನಡೆಸುತ್ತೇವೆ ಎಂಬ ಕುಸ್ತಿಪಟುಗಳ ಹೇಳಿಕೆ ಬಗ್ಗೆ ಅವರು ಈ ಸೋಮವಾರ ಪ್ರತಿಕ್ರಿಯೆ ನೀಡಿದರು. ಕೋರ್ಟ್ ತನ್ನ ಕೆಲಸ ನಿರ್ವಹಿಸಲಿದೆ. ಕಾದು ನೋಡೋಣ ಎಂದಿದ್ದಾರೆ.
ವಿಶೇಷ ಒಲಿಂಪಿಕ್ಸ್: 202ಪದಕ ಗೆದ್ದ ಭಾರತೀಯರು!
ಬರ್ಲಿನ್(ಜರ್ಮನಿ): ಇಲ್ಲಿ ನಡೆದ 2022ರ ವಿಶೇಷ ಒಲಿಂಪಿಕ್ಸ್ ಬೇಸಿಗೆ ಕ್ರೀಡಾಕೂಟದಲ್ಲಿ ಭಾರತ ಬರೋಬ್ಬರಿ 202 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಭಾರತೀಯರು ಕೂಟದಲ್ಲಿ 76 ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದು, 75 ಬೆಳ್ಳಿ ಹಾಗೂ 51 ಕಂಚಿನ ಪದಕ ಕೂಡಾ ತಮ್ಮದಾಗಿಸಿಕೊಂಡಿದ್ದಾರೆ. ಕೂಟದ ಕೊನೆ ಭಾರತ ಟೆನಿಸ್, ಸೈಕ್ಲಿಂಗ್, ಅಥ್ಲೆಟಿಕ್ಸ್ ಸೇರಿ ವಿವಿಧ ಸ್ಪರ್ಧೆಗಳಲ್ಲಿ 50ಕ್ಕೂ ಪದಕ ಗೆದ್ದಿತು. ವಿಶೇಷ ಒಲಿಂಪಿಕ್ಸ್ 1968ರಿಂದಲೂ ಪ್ರತಿ 2 ವರ್ಷಕ್ಕೊಮ್ಮೆ ನಡೆದು ಬರುತ್ತಿದೆ. ಈ ಬಾರಿ ಭಾರತದ ಒಟ್ಟು 198 ಅಥ್ಲೀಟ್‌ಗಳು 16 ಕ್ರೀಡೆಗಳಲ್ಲಿ ಪಾಲ್ಗೊಂಡಿದ್ದಾರೆ.