* ಎಫ್‌ಐಎಚ್ ಹಾಕಿ ಟೂರ್ನಿಯಲ್ಲಿ ಭಾರತ ಭರ್ಜರಿ ಪ್ರದರ್ಶನ* ಇಂಗ್ಲೆಂಡ್ ಎದುರು ಎರಡನೇ ಪಂದ್ಯದಲ್ಲೂ ಗೆದ್ದು ಬೀಗಿದ ಹಾಕಿ ಇಂಡಿಯಾ* ಸತತ ಎರಡು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಭಾರತ ಹಾಕಿ ತಂಡ
ಭುವನೇಶ್ವರ(ಏ.04): 2021-22ರ ಎಫ್‌ಐಎಚ್ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ (FIH Pro League Hockey) ಭಾರತ ತನ್ನ ಗೆಲುವಿನ ಓಟವನ್ನು ಮುಂದುವರಿಸಿದೆ. ಇಂಗ್ಲೆಂಡ್ ವಿರುದ್ಧ ಭಾನುವಾರ ನಡೆದ 2ನೇ ಪಂದ್ಯದಲ್ಲಿ ಭಾರತ 4-3 ಗೋಲುಗಳ ಗೆಲುವು ಸಾಧಿಸಿತು. ಮೊದಲ ಪಂದ್ಯದಲ್ಲಿ ಶೂಟೌಟ್ ಮೂಲಕ 3-2ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದ ಭಾರತ, 2ನೇ ಪಂದ್ಯದಲ್ಲೂ ಗೆಲ್ಲುವುದರೊಂದಿಗೆ ಅಗ್ರಸ್ಥಾನದಲ್ಲೇ ಮುಂದುವರಿಯಲಿದೆ.
ಇಂಗ್ಲೆಂಡ್ ವಿರುದ್ಧ ಆಕ್ರಮಣಕಾರಿ ಆಟವಾಡಿದ ಭಾರತಕ್ಕೆ ಹರ್ಮನ್‌ಪ್ರೀತ್ ಸಿಂಗ್ ಹಾಗೂ ಮನ್‌ಪ್ರೀತ್ ಸಿಂಗ್ ಪೆನಾಲ್ಟಿಕಾರ್ನರ್ ಮೂಲಕ ತಲಾ 2 ಗೋಲು ಬಾರಿಸಿ ನೆರವಾದರು. ಮನ್‌ಪ್ರೀತ್ 15, 26ನೇ ನಿಮಿಷಗಳಲ್ಲಿ ಗೋಲು ಬಾರಿಸಿದರೆ, ಹರ್ಮನ್‌ಪ್ರೀತ್ 26, 43 ನಿಮಿಷಗಳಲ್ಲಿ ಗೋಲು ಗಳಿಸಿದರು. ಇಂಗ್ಲೆಂಡ್ ಕೊನೆವರೆಗೂ ಹೋರಾಟ ನಡೆಸಿದರೂ ಸಮಬಲ ಸಾಧಿಸಲು ಸಾಧ್ಯವಾಗಲಿಲ್ಲ.
ಭಾರತ ಟೂರ್ನಿಯಲ್ಲಿ ಒಟ್ಟು 10 ಪಂದ್ಯಗಳನ್ನಾಡಿದ್ದು 7 ಗೆಲುವು, 4 ಸೋಲುಗಳೊಂದಿಗೆ ಒಟ್ಟು 21 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಜರ್ಮನಿ 8 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 18 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ, ನೆದರ್‌ಲೆಂಡ್ಸ್ 3ನೇ ಸ್ಥಾನದಲ್ಲಿದೆ. ಭಾರತ ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 14, 15ರಂದು ಜರ್ಮನಿ ವಿರುದ್ಧ ಆಡಲಿದೆ. ತಂಡಕ್ಕೆ ಜೂನ್ 11, 12ರಂದು ಬೆಲ್ಜಿಯಂ, ಜೂನ್ 18, 19ರಂದು ನೆದರ್‌ಲೆಂಡ್ಸ್ ಎದುರಾಗಲಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡ ಲೀಗ್‌ನ ಚಾಂಪಿಯನ್ ಆಗಿ ಹೊರಹೊಮ್ಮಲಿದೆ.
ಕಿರಿಯರ ಮಹಿಳಾ ಹಾಕಿ ವಿಶ್ವಕಪ್: ಕ್ವಾರ್ಟರ್‌ಗೆ ಭಾರತ
ಪಾಟ್‌ಶೆಫ್‌ಸ್ಟೂ್ರಮ್: ಕಿರಿಯರ ಮಹಿಳಾ ಹಾಕಿ ವಿಶ್ವಕಪ್‌ನಲ್ಲಿ (Junior Women's Hockey World Cup) ಭಾರತ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ‘ಡಿ’ ಗುಂಪಿನಲ್ಲಿರುವ ಭಾರತ, ಭಾನುವಾರ ನಡೆದ 2ನೇ ಪಂದ್ಯದಲ್ಲಿ ಬಲಿಷ್ಠ ಜರ್ಮನಿ ವಿರುದ್ಧ 2-1 ಗೋಲುಗಳಲ್ಲಿ ಗೆಲುವು ಸಾಧಿಸಿತು. ಶನಿವಾರ ವೇಲ್ಸ್ ವಿರುದ್ಧ ಮೊದಲ ಪಂದ್ಯದಲ್ಲಿ 5-1 ಗೋಲುಗಳ ಭರ್ಜರಿ ಗೆಲುವು ಸಾಧಿಸಿ ಶುಭಾರಂಭ ಮಾಡಿತ್ತು.
ಜರ್ಮನಿ ವಿರುದ್ಧ ಲಾಲ್ರೆಮ್ಸಾಯಾಮಿ(2ನೇ ನಿಮಿಷ) ಹಾಗೂ ಮುಮ್ತಾಜ್ ಖಾನ್(25ನೇ ನಿಮಿಷ) ಗೋಲು ಬಾರಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಏ.5ರಂದು ಭಾರತ, ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಸೆಣಸಲಿದೆ. ಕ್ವಾರ್ಟರ್ ಫೈನಲ್ ಹಂತ ಏ.8ರಿಂದ ಆರಂಭಗೊಳ್ಳಲಿದೆ.
ನೆಟ್‌ಬಾಲ್: ಕರ್ನಾಟಕ ಮಹಿಳಾ ತಂಡಕ್ಕೆ ಕಂಚು
ಭಿವಾನಿ(ಹರಾರಯಣ): 39ನೇ ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಮಹಿಳಾ ತಂಡ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದೆ. ಭಾನುವಾರ ನಡೆದ ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡ ಡೆಲ್ಲಿ ವಿರುದ್ಧ 21-30ರಲ್ಲಿ ಸೋಲು ಅನುಭವಿಸಿತು. ಇದಕ್ಕೂ ಮೊದಲು ಪ್ರಿ ಕ್ವಾರ್ಟರ್‌ನಲ್ಲಿ ಕೇರಳ ವಿರುದ್ಧ 46-44, ಕ್ವಾರ್ಟರ್ ಫೈನಲ್‌ನಲ್ಲಿ ತೆಲಂಗಾಣ ವಿರುದ್ಧ 32-19ರ ಅಂತರದಲ್ಲಿ ಜಯಗಳಿಸಿತ್ತು.
ಫೆಡರೇಷನ್ ಕಪ್: ರಾಜ್ಯದ ಮನು, ಪೂವಮ್ಮಗೆ ಬೆಳ್ಳಿ
ಕಲ್ಲಿಕೋಟೆ: 25ನೇ ಫೆಡರೇಷನ್ ಕಪ್ ಅಥ್ಲೆಟಿಕ್ಸ್ ಕೂಟದ 2ನೇ ದಿನವಾದ ಭಾನುವಾರ ಕರ್ನಾಟಕದ ಕ್ರೀಡಾಪಟುಗಳು ಒಟ್ಟು 3 ಪದಕಗಳನ್ನು ಜಯಿಸಿದರು. ಪುರುಷರ ಜಾವೆಲಿನ್ ಥ್ರೋನಲ್ಲಿ ಮನು.ಪಿ. 79.17 ಮೀ. ದೂರಕ್ಕೆ ಎಸೆದು ಬೆಳ್ಳಿ ಪದಕ ಜಯಿಸಿದರೆ, ಮಹಿಳೆಯರ 400 ಮೀ. ಓಟದಲ್ಲಿ ಹಿರಿಯ ಅಥ್ಲೀಟ್ ಎಂ.ಆರ್.ಪೂವಮ್ಮ 52.70 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಇನ್ನು ಮಹಿಳೆಯರ 100 ಮೀ. ಓಟದಲ್ಲಿ ಸಿಮಿ ಎನ್.ಎಸ್. ಕಂಚಿನ ಪದಕ ಜಯಿಸಿದರು.
ರಾಷ್ಟ್ರೀಯ ಬಾಸ್ಕೆಟ್‌ಬಾಲ್: ಕರ್ನಾಟಕ ಶುಭಾರಂಭ
ಚೆನ್ನೈ: 71ನೇ ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಪುರುಷರ ತಂಡ ಶುಭಾರಂಭ ಮಾಡಿದೆ. ಭಾನುವಾರ ನಡೆದ ‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ಕರ್ನಾಟಕ, ಸವೀರ್‍ಸಸ್ ವಿರುದ್ಧ 117-76ರ ದೊಡ್ಡ ಗೆಲುವು ಸಂಪಾದಿಸಿತು. ರಾಜ್ಯ ತಂಡದ ಪರ ಅನಿಲ್ ಕುಮಾರ್ 28, ಅರವಿಂದ್ 25, ಪ್ರಿಯಾನ್ಶು 19, ಶಶಾಂಕ್ ರೈ 16 ಅಂಕ ಗಳಿಸಿದರು. ಸೋಮವಾರ ಗುಂಪು ಹಂತದ 2ನೇ ಪಂದ್ಯದಲ್ಲಿ ಕರ್ನಾಟಕ ತಂಡ ಉತ್ತರ ಪ್ರದೇಶವನ್ನು ಎದುರಿಸಲಿದೆ.
