FIH Pro League Hockey: ಬೆಲ್ಜಿಯಂ ವಿರುದ್ಧ ಭಾರತಕ್ಕೆ 5-1 ಗೆಲುವು
ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತಕ್ಕೆ ಭರ್ಜರಿ ಜಯ
ಬೆಲ್ಜಿಯಂ ಎದುರು ಭಾರತಕ್ಕೆ 5-1 ಅಂತರದಲ್ಲಿ ಜಯಭೇರಿ
ಕಳೆದ ವಾರ 1-2 ಗೋಲುಗಳಿಂದ ಸೋತಿದ್ದ ಭಾರತ
ಲಂಡನ್(ಜೂ.03): ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತ ಪುರುಷರ ತಂಡ ಶುಕ್ರವಾರ ಬೆಲ್ಜಿಯಂ ವಿರುದ್ಧ 5-1 ಗೋಲುಗಳಲ್ಲಿ ಗೆಲುವು ಸಾಧಿಸಿದ್ದು, ಅಂಕಪಟ್ಟಿಯಲ್ಲಿ 22 ಅಂಕಗಳೊಂದಿಗೆ 2ನೇ ಸ್ಥಾನ ಭದ್ರಪಡಿಸಿಕೊಂಡಿದೆ. ಕಳೆದ ವಾರ 1-2 ಗೋಲುಗಳಿಂದ ಸೋತಿದ್ದ ಭಾರತ ಈ ಪಂದ್ಯದಲ್ಲಿ ಸೇಡು ತೀರಿಸಿಕೊಂಡಿತು.
ಮೊದಲ ನಿಮಿಷದಲ್ಲೇ ವಿವೇಕ್ ಸಾಗರ್ ಹೊಡೆದ ಗೋಲಿನಿಂದ ಆತ್ಮವಿಶ್ವಾಸ ವೃದ್ಧಿಸಿಕೊಂಡ ಭಾರತ ಮೊದಲಾರ್ಧದಲ್ಲೇ 4 ಗೋಲಿನೊಂದಿಗೆ ಮುನ್ನಡೆ ಸಾಧಿಸಿತು. 45ನೇ ನಿಮಿಷದಲ್ಲಿ ಬೆಲ್ಜಿಯಂ ಗೋಲಿನ ಖಾತೆ ತೆರೆದರೂ, ಕೊನೆಯ ನಿಮಿಷದಲ್ಲಿ ದಿಲ್ಪ್ರೀತ್ ಸಿಂಗ್ ಬಾರಿಸಿದ ಗೋಲು ಭಾರತದ ಗೆಲುವಿನ ಅಂತರ ಹೆಚ್ಚಿಸಿತು. ಶನಿವಾರ ಭಾರತ, ಬ್ರಿಟನ್ ವಿರುದ್ಧ ಆಡಲಿದೆ. ಸದ್ಯ ಬ್ರಿಟನ್ 25 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.
ರಾಜ್ಯದ ಮೋಹಿತ್ ಶ್ರೇಷ್ಠ ಗೋಲ್ಕೀಪರ್!
ಸಲಾಲ್ಹ(ಒಮಾನ್): ಶುಕ್ರವಾರ ಮುಕ್ತಾಯಗೊಂಡ ಕಿರಿಯರ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಕರ್ನಾಟಕದ ಮೋಹಿತ್ ಎಸ್.ಎಚ್. ಶ್ರೇಷ್ಠ ಗೋಲ್ ಕೀಪರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶುಕ್ರವಾರದ ಪಾಕಿಸ್ತಾನ ವಿರುದ್ಧದ ಫೈನಲ್ ಸೇರಿದಂತೆ ಟೂರ್ನಿಯ ಎಲ್ಲಾ ಪಂದ್ಯಗಳಲ್ಲೂ ಭಾರತದ ಗೆಲುವಿನಲ್ಲಿ ಮೋಹಿತ್ ಪ್ರಮುಖ ಪಾತ್ರ ವಹಿಸಿದ್ದರು.
ಕಿರಿಯರ ಏಷ್ಯಾಕಪ್ ಹಾಕಿ: ಪಾಕಿಸ್ತಾನ ಮಣಿಸಿದ ಭಾರತ ಚಾಂಪಿಯನ್
ಲೀಗ್ ಹಂತದ 4 ಪಂದ್ಯಗಳಲ್ಲಿ ಭಾರತ 39 ಗೋಲು ಬಾರಿಸಿದ್ದರೂ ಕೇವಲ 2 ಗೋಲು ಬಿಟ್ಟುಕೊಟ್ಟಿತ್ತು. ಬಳಿಕ ಸೆಮಿಫೈನಲ್, ಫೈನಲ್ನಲ್ಲೂ ತಲಾ 1 ಗೋಲನ್ನಷ್ಟೇ ಬಿಟ್ಟುಕೊಟ್ಟು ಅರ್ಹವಾಗಿಯೇ ಪ್ರಶಸ್ತಿ ಗೆದ್ದಿತ್ತು. ಇನ್ನು, ಪ್ರಶಸ್ತಿ ವಿಜೇತ ಭಾರತದ ತಂಡದಲ್ಲಿದ್ದ ಪ್ರತಿ ಆಟಗಾರರಿಗೆ ಹಾಕಿ ಇಂಡಿಯಾ ತಲಾ 2 ಲಕ್ಷ ರು. ಹಾಗೂ ಸಹಾಯಕ ಸಿಬ್ಬಂದಿಗೆ ತಲಾ 1 ಲಕ್ಷ ರು. ಬಹುಮಾನ ಘೋಷಿಸಿದೆ.
ಮಹಿಳಾ ಹಾಕಿ: ಇಂದು ಭಾರತ vs ಉಜ್ಬೇಕಿಸ್ತಾನ
ಕಾಕಮಿಗಹರ(ಜಪಾನ್): ವರ್ಷಾಂತ್ಯದಲ್ಲಿ ಚಿಲಿಯಲ್ಲಿ ನಡೆಯಲಿರುವ ಹಾಕಿ ವಿಶ್ವಕಪ್‌ಗೆ ಅರ್ಹತೆ ಪಡೆಯುವ ನಿರೀಕ್ಷೆಯೊಂದಿಗೆ ಭಾರತ ಮಹಿಳಾ ತಂಡ ಶನಿವಾರ ಕಿರಿಯರ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಚೊಚ್ಚಲ ಪ್ರಶಸ್ತಿ ಗೆಲ್ಲುವ ತವಕದಲ್ಲಿರುವ ಭಾರತಕ್ಕೆ ಮೊದಲ ಪಂದ್ಯದಲ್ಲಿ ಉಜ್ಬೇಕಿಸ್ತಾನ ಸವಾಲು ಎದುರಾಗಲಿದೆ.
ಟೂರ್ನಿಯ ‘ಎ’ ಗುಂಪಿನಲ್ಲಿ ಭಾರತದ ಜೊತೆ ದ.ಕೊರಿಯಾ, ಉಜ್ಬೇಕಿಸ್ತಾನ, ಚೈನೀಸ್ ತೈಪೆ ಹಾಗೂ ಮಲೇಷ್ಯಾ ಸ್ಥಾನ ಪಡೆದರೆ, ಜಪಾನ್, ಕಜಕಸ್ತಾನ, ಹಾಂಕಾಂಗ್, ಇಂಡೋನೇಷ್ಯಾ ಹಾಗೂ ಚೀನಾ ‘ಬಿ’ ಗುಂಪಿನಲ್ಲಿವೆ. ಈ ಟೂರ್ನಿಯಲ್ಲಿ ಅಗ್ರ 3 ಸ್ಥಾನ ಪಡೆವ ತಂಡಗಳು ಕಿರಿಯರ ವಿಶ್ವಕಪ್‌ಗೆ ಅರ್ಹತೆ ಪಡೆಯಲಿವೆ.
ಸರ್ಫಿಂಗ್: ಕರ್ನಾಟಕದ ಇಬ್ಬರು ಫೈನಲ್ ಪ್ರವೇಶ
ಮಂಗಳೂರು: ಸಸಿಹಿತ್ಲುವಿ ಬೀಚ್‌ನಲ್ಲಿ ನಡೆಯುತ್ತಿರುವ 4ನೇ ಇಂಡಿಯನ್ ಓಪನ್ ಸರ್ಫಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಇಬ್ಬರು ಫೈನಲ್ ಪ್ರವೇಶಿಸಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಪುತ್ತೂರಿನ ಸಿಂಚನಾ ಗೌಡ ಹಾಗೂ ಅಂಡರ್-16 ಬಾಲಕರ ವಿಭಾಗದಲ್ಲಿ ಮೂಲ್ಕಿಯ ಪ್ರದೀಪ್ ಪೂಜಾರ್ ಫೈನಲ್ ತಲುಪಿದ್ದಾರೆ.
ಸ್ಪರ್ಧೆಯ 2ನೇ ದಿನವಾದ ಶುಕ್ರವಾರ ತಮಿಳುನಾಡಿನ ಸ್ಪರ್ಧಿಗಳು ಮೇಲುಗೈ ಸಾಧಿಸಿದರು. ಪುರುಷರ ವಿಭಾಗದಲ್ಲಿ ಶ್ರೀಕಾಂತ್(13 ಅಂಕ), ಕಿಶೋರ್ ಕುಮಾರ್, ಸೂರ್ಯ ಪಿ., ಮಣಿಕಂಠನ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಗೋವಾದ ಶುಗರ್ ಶಾಂತಿ ಬನ್ಸಾರೆ(10.17), ತಮಿಳುನಾಡಿನ ಕಮಲಿಮೂರ್ತಿ(8.50), ಸೃಷ್ಟಿಸೆಲ್ವಂ(4.74), ಸಿಂಚನಾ ಗೌಡ(5.17) ಫೈನಲ್ ತಲುಪಿದ್ದಾರೆ. ಅಂಡರ್-16 ಬಾಲಕರ ವಿಭಾಗದಲ್ಲಿ ಕಿಶೋರ್ ಕುಮಾರ್(11.66), ತಾಯಿನ್ ಅರುಣ್(9.17), ಹರೀಶ್(6.33) ಹಾಗೂ ರಾಜ್ಯದ 13 ವರ್ಷದ ಪ್ರದೀಪ್ 4.30 ಅಂಕ ಗಳಿಸಿ ಫೈನಲ್ ತಲುಪಿದ್ದಾರೆ.