ತವರಿನಲ್ಲೇ ಡೆಲ್ಲಿ ಮಣಿಸಿದ ಧೋನಿ ಬಾಯ್ಸ್

Chennai Super Kings beat Delhi Capitals by 6 wickets

ನವದೆಹಲಿ(ಮಾ.26): ಹಾಲಿ ಚಾಂಪಿಯನ್ ಚೆನ್ನೈ ಸೂಪರ್’ಕಿಂಗ್ಸ್ ಸಂಘಟಿತ ಪ್ರದರ್ಶನದ ನೆರವಿನಿಂದ ತವರಿನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಖಭಂಗ ಅನುಭವಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 6 ವಿಕೆಟ್’ಗಳಿಂದ ಮಣಿಸುವುದರ ಜತೆಗೆ ಸತತ ಎರಡು ಜಯದೊಂದಿಗೆ ಧೋನಿ ಪಡೆ ಅಗ್ರಸ್ಥಾನಕ್ಕೇರಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 147 ರನ್’ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಸುಲಭ ಗುರಿ ಬೆನ್ನತ್ತಿದ ಸಿಎಸ್’ಕೆ ಆರಂಭದಲ್ಲೇ ರಾಯುಡು ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಆದರೆ ಆ ಬಳಿಕ ವಾಟ್ಸನ್ ಹಾಗೂ ರೈನಾ ಜೋಡಿ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಉತ್ತಮವಾಗಿ ಆಡುತ್ತಿದ ವಾಟ್ಸನ್ 44 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ರೈನಾ 30, ಕೇದಾರ್ ಜಾಧವ್ 27 ಹಾಗೂ ನಾಯಕ ಧೋನಿ ಅಜೇಯ 32 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಶಿಖರ್ ಧವನ್ ಸಮಯೋಚಿತ ಅರ್ಧಶತಕ ಹಾಗೂ ರಿಷಭ್ ಪಂತ್ 25 ರನ್ ನೆರವಿನಿಂದ 147 ರನ್ ಬಾರಿಸಿತ್ತು. ಉತ್ತಮವಾಗಿ ಸಾಗುತ್ತಿದ್ದ ಡೆಲ್ಲಿ ಬ್ಯಾಟಿಂಗ್ ವೇಗಕ್ಕೆ ಡ್ವೇನ್ ಬ್ರಾವೋ ಕಡಿವಾಣ ಹಾಕಿದರು. ಡೆಲ್ಲಿಯ ಪ್ರಮುಖ 3 ವಿಕೆಟ್ ಕಬಳಿಸಿ 150 ರನ್’ಗೊಳಗೆ ಕಟ್ಟಿಹಾಕಲು ಯಶಸ್ವಿಯಾದರು.