ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಪುರುಷರ ಹಾಕಿ ತಂಡ ಫೈನಲ್‌ಗೆ ಲಗ್ಗೆದಕ್ಷಿಣ ಆಫ್ರಿಕಾ ಎದುರು ರೋಚಕ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಚಿನ್ನದ ಪದಕದ ಮೇಲೆ ಕಣ್ಣಿಟ್ಟಿದೆ ಮನ್‌ಪ್ರೀತ್ ಸಿಂಗ್ ಪಡೆ
ಬರ್ಮಿಂಗ್‌ಹ್ಯಾಮ್(ಆ.07): ಟೋಕಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಭಾರತ ಪುರುಷರ ಹಾಕಿ ತಂಡವು ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು 3-2 ಗೋಲುಗಳ ಅಂತರದ ರೋಚಕ ಗೆಲುವು ಸಾಧಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ. ಈ ಮೂಲಕ ಭಾರತ ಹಾಕಿ ತಂಡವು ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿಕೊಂಡಿದ್ದು, ಚಿನ್ನದ ಪದಕ ಗೆಲ್ಲುವತ್ತ ಚಿತ್ತ ನೆಟ್ಟಿದೆ.
ಮೊದಲ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು ಗೋಲು ಬಾರಿಸಲು ಯಶಸ್ವಿಯಾಗಲಿಲ್ಲ. ಆದರೆ ಎರಡನೇ ಕ್ವಾರ್ಟರ್‌ನಲ್ಲಿ ಆಕ್ರಮಣಕಾರಿಯಾಟ ಪ್ರದರ್ಶಿಸಿದ ಭಾರತ ಹಾಕಿ ತಂಡವು ಎರಡು ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು. ಭಾರತ ಪರ ಅಭಿಷೇಕ್ ಗೋಲಿನ ಖಾತೆ ತೆರೆದರೇ, ಮನ್ದೀಪ್ ಸಿಂಗ್ ಈ ಅಂತರವನ್ನು 2-0ಗೆ ಹೆಚ್ಚಿಸಿದರು. ಇನ್ನು ದಕ್ಷಿಣ ಆಫ್ರಿಕಾದ ರೆಯಾನ್ ಜೂಲಿಯಸ್ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ನಾಲ್ಕನೇ ಕ್ವಾರ್ಟರ್ ಆರಂಭಕ್ಕೂ ಮುನ್ನ ಭಾರತ 3-1ರ ಮುನ್ನಡೆ ಸಾಧಿಸಿತ್ತು. ಇನ್ನು ನಾಲ್ಕನೇ ಕ್ವಾರ್ಟರ್‌ನಲ್ಲಿ ದಕ್ಷಿಣ ಆಫ್ರಿಕಾ ಒಂದು ಗೋಲು ಬಾರಿಸಿತಾದರೂ ಸೋಲಿನಿಂದ ಪಾರಾಗಲು ಸಾಧ್ಯವಾಗಲಿಲ್ಲ.
ಈ ಗೆಲುವಿನೊಂದಿಗೆ ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡವು ಅಜೇಯವಾಗಿ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಯಿತು. ಇದೀಗ ಆಗಸ್ಟ್ 08ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಹಾಕಿ ತಂಡವು ಬಲಿಷ್ಠ ಆಸ್ಟ್ರೇಲಿಯಾ ಎದುರು ಚಿನ್ನದ ಪದಕಕ್ಕಾಗಿ ಕಾದಾಡಲಿದೆ.
ಮಹಿಳಾ ಹಾಕಿ: ಭಾರತಕ್ಕೆ ಆಘಾತಕಾರಿ ಸೋಲು
ಕಾಮನ್‌ವೆಲ್ತ್ ಹಾಕಿಯಲ್ಲಿ ಭಾರತ ಮಹಿಳಾ ತಂಡ ಸೆಮಿಫೈನಲ್‌ನಲ್ಲಿ ಆಘಾತಕಾರಿ ಸೋಲುಂಡಿದೆ. ಆಸ್ಪ್ರೇಲಿಯಾ ವಿರುದ್ಧ ಶುಕ್ರವಾರ ನಡೆದ ರೋಚಕ ಕಾದಾಟದಲ್ಲಿ ಭಾರತ ಶೂಟೌಟ್‌ನಲ್ಲಿ 0-3 ಅಂತರದಲ್ಲಿ ಪರಾಭವಗೊಂಡಿತು. ಹೀಗಾಗಿ ಭಾರತ ಇನ್ನು ನ್ಯೂಜಿಲೆಂಡ್ ವಿರುದ್ಧ ಕಂಚಿನ ಪದಕಕ್ಕಾಗಿ ಸೆಣಸಾಡಲಿದೆ.
ಆರಂಭದಲ್ಲಿ ಪ್ರಾಬಲ್ಯ ಸಾಧಿಸಿದ್ದ ಆಸೀಸ್ 10ನೇ ನಿಮಿಷದಲ್ಲೇ ಗೋಲು ಬಾರಿಸಿತು. ಬಳಿಕ ಅತ್ಯುತ್ತಮ ಪ್ರದರ್ಶನ ತೋರಿದ ಭಾರತದ ಪರ ವಂದನಾ ಕಟಾರಿಯಾ 49ನೇ ನಿಮಿಷದಲ್ಲಿ ಗೋಲು ಹೊಡೆದು ಸಮಬಲಗೊಳಿಸಿದರು. ಭಾರತ ಪಂದ್ಯದುದ್ದಕ್ಕೂ ಹಲವು ಪೆನಾಲ್ಟಿಅವಕಾಶಗಳನ್ನು ಪಡೆದರೂ ಗೋಲು ಗಳಿಸಲು ವಿಫಲವಾಯಿತು. ಬಳಿಕ ಪೆನಾಲ್ಟಿಶೂಟೌಟ್‌ನಲ್ಲಿ ಭಾರತದ ಲಾಲ್ರೆಮ್ಸಿಯಾಮಿ, ನೇಹಾ ಗೋಯಲ್ ಹಾಗೂ ನವ್‌ನೀತ್ ಕೌರ್ ಮೂರು ಪ್ರಯತ್ನಗಳಲ್ಲಿ ಗೋಲು ಹೊಡೆಯಲಿಲ್ಲ. ಆಸ್ಪ್ರೇಲಿಯಾ ಎಲ್ಲಾ 3 ಅವಕಾಶಗಳನ್ನು ಗೋಲಾಗಿ ಪರಿವರ್ತಿಸಿ ಪಂದ್ಯ ಜಯಿಸಿತು.
ಭಾರತಕ್ಕೆ ಮುಳುವಾದ ಟೈಮರ್ ವಿವಾದ
ಶೂಟೌಟ್ ವೇಳೆ ಅಸೀಸ್‌ನ ಮಲೋನ್ ಮೊದಲ ಹೊಡೆತದಲ್ಲಿ ಗೋಲು ಬಾರಿಸಲಿಲ್ಲ. ಆದರೆ ಈ ವೇಳೆ ಮಧ್ಯಪ್ರವೇಶಿಸಿದ ರೆಫ್ರಿ ಮಲೋನ್ ಶೂಟೌಟ್ ವೇಳೆ ಟೈಮರ್ ಆರಂಭವಾಗಿರಲಿಲ್ಲ ಎಂದು ಮತ್ತೊಂದು ಅವಕಾಶ ನೀಡಿದರು. ಇದರ ಲಾಭ ಪಡೆದ ಮಲೋನ್ ಗೋಲು ಬಾರಿಸಿದರು. ಅಂಪೈರ್ ನಿರ್ಧಾರಕ್ಕೆ ಕೋಚ್, ಆಟಗಾರ್ತಿಯರು ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ಕೂಡಾ ಇದಕ್ಕೆ ಕ್ಷಮೆಯಾಚಿಸಿದ್ದು, ಪರಿಶೀಲನೆ ನಡೆಸುವುದಾಗಿ ತಿಳಿಸಿದೆ.
