Asian Games 2023: ಜೈ ಹೋ ಇಂಡಿಯಾ, ಚಿನ್ನ ಗೆದ್ದ ಭಾರತಕ್ಕೆ ಪ್ಯಾರಿಸ್ ಒಲಿಂಪಿಕ್ಸ್ ಟಿಕೆಟ್ ಕನ್ಫರ್ಮ್
ಹಾಲಿ ಚಾಂಪಿಯನ್ ಆಗಿದ್ದ ಜಪಾನ್ ಎದುರು ಆರಂಭದಿಂದಲೇ ಅದ್ಭುತ ಪ್ರದರ್ಶನ ತೋರಿದ ಹರ್ಮನ್‌ಪ್ರೀತ್ ಸಿಂಗ್ ಪಡೆ, ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಬರೋಬ್ಬರಿ 9 ವರ್ಷಗಳ ಬಳಿಕ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪುರುಷರ ಹಾಕಿ ತಂಡವು ಚಿನ್ನದ ಪದಕಕ್ಕೆ ಕೊರಳೊಡ್ಡುವಲ್ಲಿ ಯಶಸ್ವಿಯಾಗಿದೆ.
ಹಾಂಗ್ಝೂ(ಅ.06): ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಪುರುಷರ ಹಾಕಿ ತಂಡವು ಏಷ್ಯನ್ ಗೇಮ್ಸ್ ಹಾಕಿ ಫೈನಲ್‌ನಲ್ಲಿ ಜಪಾನ್ ಎದುರು 5-1 ಅಂತರದ ಗೆಲುವು ಸಾಧಿಸುವ ಮೂಲಕ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಮುಂಬರುವ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಹಾಲಿ ಚಾಂಪಿಯನ್ ಆಗಿದ್ದ ಜಪಾನ್ ಎದುರು ಆರಂಭದಿಂದಲೇ ಅದ್ಭುತ ಪ್ರದರ್ಶನ ತೋರಿದ ಹರ್ಮನ್‌ಪ್ರೀತ್ ಸಿಂಗ್ ಪಡೆ, ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಬರೋಬ್ಬರಿ 9 ವರ್ಷಗಳ ಬಳಿಕ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪುರುಷರ ಹಾಕಿ ತಂಡವು ಚಿನ್ನದ ಪದಕಕ್ಕೆ ಕೊರಳೊಡ್ಡುವಲ್ಲಿ ಯಶಸ್ವಿಯಾಗಿದೆ. ಭಾರತ ಪುರುಷರ ಹಾಕಿ ತಂಡವು 2014ರಲ್ಲಿ ಇಂಚೋನ್ ಏಷ್ಯನ್ ಗೇಮ್ಸ್‌ನಲ್ಲಿ ಕೊನೆಯ ಬಾರಿಗೆ ಚಿನ್ನದ ಪದಕ ಬೇಟೆಯಾಡುವಲ್ಲಿ ಯಶಸ್ವಿಯಾಗಿತ್ತು.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದ ಭಾರತ ಪುರುಷರ ಹಾಕಿ ತಂಡವು ಇದೀಗ ಪ್ಯಾರಿಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಜಪಾನ್ ಎದುರಿನ ಫೈನಲ್ ಪಂದ್ಯದಲ್ಲಿ ಮನ್‌ಪ್ರೀತ್ ಸಿಂಗ್(15ನೇ ನಿ), ಹರ್ಮನ್‌ಪ್ರೀತ್ ಸಿಂಗ್(32ನೇ ನಿ), ಅಮಿತ್ ರೋಹಿದಾಸ್(36ನೇ ನಿ), ಅಭಿಷೇಕ್ ಸಿಂಗ್(48ನೇ ನಿ) ಹಾಗೂ ಹರ್ಮನ್‌ಪ್ರೀತ್ ಸಿಂಗ್(59) ಗೋಲು ಬಾರಿಸಿದರು. ಇನ್ನು ಜಪಾನ್ ಪರ ತನಕಾ ಸೆರೆನ್ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು.