Asia Cup Hockey: ಜಪಾನ್ ಮಣಿಸಿ ಕಂಚು ಗೆದ್ದ ಭಾರತ ಹಾಕಿ ತಂಡ
* ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಕಂಚು ಗೆದ್ದ ಭಾರತ ಹಾಕಿ ತಂಡ
* ಜಪಾನ್ ಎದುರು ಭರ್ಜರಿ ಗೆಲುವು ಸಾಧಿಸಿ ಪದಕ ಗೆದ್ದ ಭಾರತ
* ಆರಂಭದಲ್ಲೇ ಗೋಲು ಬಾರಿಸಿದ ರಾಜ್‌ಕುಮಾರ್ ಪಾಲ್ ಗೆಲುವಿನ ರೂವಾರಿ ಎನಿಸಿಕೊಂಡರು
ಜಕಾರ್ತ(ಜೂ.02): 11ನೇ ಆವೃತ್ತಿಯ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ (Asia Cup Hockey Tournament) ಹಾಲಿ ಚಾಂಪಿಯನ್ ಭಾರತ ಕಂಚಿನ ಪದಕ ಗೆದ್ದುಕೊಂಡಿದೆ. ಬುಧವಾರ ಜಪಾನ್ (Japan) ವಿರುದ್ಧ 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ 1-0 ಗೋಲಿನ ಅಂತರದಲ್ಲಿ ಗೆಲುವು ಸಾಧಿಸಿತು. 3 ಬಾರಿ ಚಾಂಪಿಯನ್ ಭಾರತ ಇದರೊಂದಿಗೆ ಒಟ್ಟಾರೆ 10ನೇ ಪದಕ್ಕೆ ಮುತ್ತಿಕ್ಕಿದೆ. ಇದಕ್ಕೂ ಮೊದಲು 1999ರಲ್ಲಿ ಕಂಚು ಗೆದ್ದಿದ್ದ ತಂಡ ಬಳಿಕ 2003, 2007 ಹಾಗೂ 2021ರಲ್ಲಿ ಪ್ರಶಸ್ತಿ ಗೆದ್ದಿತ್ತು. ಒಟ್ಟಾರೆ 5 ಬಾರಿ ಬೆಳ್ಳಿ ಪದಕ ಜಯಿಸಿದೆ.
ಬುಧವಾರದ ಪಂದ್ಯದಲ್ಲಿ 6ನೇ ನಿಮಿಷದಲ್ಲೇ ಗೋಲು ಬಾರಿಸಿದ ರಾಜ್‌ಕುಮಾರ್ ಪಾಲ್ ಗೆಲುವಿನ ರೂವಾರಿ ಎನಿಸಿಕೊಂಡರು. ಬಳಿಕ ಉಭಯ ತಂಡಗಳಿಂದ ಭಾರೀ ಪೈಪೋಟಿ ಕಂಡುಬಂದರೂ ಯಾವುದೇ ಗೋಲು ದಾಖಲಾಗಲಿಲ್ಲ. ಟೂರ್ನಿಯಲ್ಲಿ 3 ಬಾರಿ ಉಭಯ ತಂಡಗಳು ಮುಖಾಮುಖಿಯಾಗಿದ್ದು, 2 ಬಾರಿ ಭಾರತ ಗೆದ್ದಿದೆ. ಗುಂಪು ಹಂತದಲ್ಲಿ 2-5ರಲ್ಲಿ ಸೋತಿದ್ದ ಭಾರತ ಹಾಕಿ ತಂಡ(Indian Men's Hockey Team), ಸೂಪರ್-4ನ ಮೊದಲ ಪಂದ್ಯದಲ್ಲಿ 2-1ರಲ್ಲಿ ಜಯಗಳಿಸಿತ್ತು. ಇನ್ನು ಫೈನಲ್‌ನಲ್ಲಿ ಮಲೇಷ್ಯಾ ವಿರುದ್ಧ 2-1 ಗೋಲುಗಳಲ್ಲಿ ಗೆದ್ದ ದಕ್ಷಿಣ ಕೊರಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಹಾಕಿ ಫೈವ್ಸ್: ಸ್ವಿಜರ್‌ಲೆಂಡ್‌ಗೆ ತೆರಳಿದ ಭಾರತ ತಂಡಗಳು
ಬೆಂಗಳೂರು: ಚೊಚ್ಚಲ ಆವೃತ್ತಿಯ ಎಫ್‌ಐಎಚ್ ಹಾಕಿ ಫೈವ್ಸ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತ ಪುರುಷ ಮತ್ತು ಮಹಿಳಾ ತಂಡ ಬುಧವಾರ ಸ್ವಿಜರ್‌ಲೆಂಡ್‌ನ ಲುಸ್ಸಾನೆಗೆ ತೆರಳಿದವು. ಟೂರ್ನಿ ಜೂ.4 ಮತ್ತು 5ರಂದು ನಡೆಯಲಿದ್ದು, ಗುರೀದಂರ್ ಸಿಂಗ್ ಮುನ್ನಡೆಸುವ ಪುರುಷರ ತಂಡ ಮೊದಲ ದಿನ ಸ್ವಿಜರ್‌ಲೆಂಡ್ ಹಾಗೂ ಪಾಕಿಸ್ತಾನ, 2ನೇ ದಿನ ಮಲೇಷ್ಯಾ, ಪೋಲೆಂಡನ್ನು ಎದುರಿಸಲಿದೆ. ರಜನಿ ನಾಯಕತ್ವದ ಮಹಿಳಾ ತಂಡ ಮೊದಲ ದಿನ ಉರುಗ್ವೆ ಹಾಗೂ ಪೋಲೆಂಡ್, 2ನೇ ದಿನ ಸ್ವಿಜರ್‌ಲೆಂಡ್ ಮತ್ತು ದ.ಆಫ್ರಿಕಾ ವಿರುದ್ಧ ಆಡಲಿದೆ. ಜೂ.5ರಂದೇ ಅಗ್ರ 2 ಸ್ಥಾನ ಪಡೆಯುವ ತಂಡಗಳ ನಡುವೆ ಫೈನಲ್ ನಡೆಯಲಿದೆ.
ಪ್ಯಾರಾ ಅಥ್ಲೀಟ್ ವಿನೋದ್‌ಗೆ ನಿಷೇಧ
ನವದೆಹಲಿ: ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ (Tokyo Paralympics) ತಮ್ಮ ಸಾಮರ್ಥ್ಯದ ಬಗ್ಗೆ ಸುಳ್ಳು ದಾಖಲೆ ನೀಡಿ ಸ್ಪರ್ಧಿಸಿದ್ದ ಭಾರತದ ವಿನೋದ್ ಕುಮಾರ್ ಅವರಿಗೆ 2 ವರ್ಷ ನಿಷೇಧ ವಿಧಿಸಲಾಗಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಫೆಡರೇಷನ್, ವಿನೋದ್ 2023ರ ಆಗಸ್ಟ್‌ವರೆಗೆ ಯಾವುದೇ ಕ್ರೀಡಾಕೂಟದಲ್ಲಿ ಆಡುವ ಅರ್ಹತೆ ಕಳೆದುಕೊಂಡಿದ್ದಾರೆ ಎಂದಿದೆ.
Asia Cup Hockey ಭಾರತಕ್ಕಿಂದು ಬಲಿಷ್ಠ ದಕ್ಷಿಣ ಕೊರಿಯಾ ಸವಾಲು
ಕಳೆದ ವರ್ಷ ಪ್ಯಾರಾಲಿಂಪಿಕ್ಸ್‌ನಲ್ಲಿ ವಿನೋದ್ ಎಫ್52 ವಿಭಾಗದ ಡಿಸ್ಕಸ್ ಎಸೆತದಲ್ಲಿ 19.91 ಮೀ. ದೂರ ಎಸೆದು ಕಂಚು ಗೆದ್ದಿದ್ದರು. ಬಳಿಕ ಇತರೆ ಸ್ಪರ್ಧಿಗಳು ವಿನೋದ್ ಅವರ ಅರ್ಹತೆ ಪ್ರಶ್ನಿಸಿದ್ದರಿಂದ ಫಲಿತಾಂಶವನ್ನು ತಡೆ ಹಿಡಿಯಲಾಗಿತ್ತು ಮತ್ತು ಮರುದಿನ ವಿನೋದ್‌ರ ಪದಕವನ್ನು ಹಿಂಪಡೆಯಲಾಗಿತ್ತು.