ಲಾಸ್ ಏಂಜಲೀಸ್‌ನಲ್ಲಿ ವಿಶ್ವದ ಮೊದಲ ಲೈವ್ ವೀರ್ಯಾಣು ಓಟ (Sperm race) ನಡೆಯಿತು. ವೀರ್ಯಾಣು ಸ್ಪರ್ಧೆಯ ವಿಡಿಯೋ ಇಲ್ಲಿದೆ. ವಿನೋದದ ಜೊತೆಗೆ ಪುರುಷ ಫರ್ಟಿಲಿಟಿ ಆರೋಗ್ಯದ ಬಗೆಗೆ ಗಂಭೀರ ಕಾಳಜಿ ಕೂಡ ಇದರಲ್ಲಿ ಇದೆಯಂತೆ.
ಸಾವಿರಾರು ವೀಕ್ಷಕರ ಮುಂದೆ ಮೊದಲ ವೀರ್ಯಾಣುಗಳ ರೇಸ್! ಹೇಗಿತ್ತು ಗೊತ್ತಾ?
ವೀರ್ಯಾಣುಗಳಿಗೆ ಸ್ಪರ್ಧೆ ಎಂಬುದು ಸ್ವಭಾವ. ಒಮ್ಮೆ ಚಿಮ್ಮಿದ ವೀರ್ಯದಲ್ಲಿ ಲಕ್ಷಾಂತರ ವೀರ್ಯಾಣುಗಳಿರುತ್ತವೆ. ಅದರಲ್ಲಿ ತೀರಾ ಚುರುಕಾಗಿರುವ ವೀರ್ಯಾಣು ಮಾತ್ರವೇ ಉಳಿದೆಲ್ಲವುಗಳಿಗಂತಲೂ ಮುಂದೆ ಧಾವಿಸಿ ಹೋಗಿ ಅಂಡವನ್ನು ಕೂಡಿ ಭ್ರೂಣ ಆಗುತ್ತದೆ. ಉಳಿದವೆಲ್ಲವೂ ವೇಸ್ಟ್. ಒಬ್ಬನ ವೀರ್ಯಾಣುವಿನಲ್ಲೇ ಇಷ್ಟೊಂದು ಪೈಪೋಟಿ ಇರಬೇಕಾದರೆ, ಭೂಮಿಯ ಮೇಲಿರುವ ಕೋಟ್ಯಂತರ ಪುರುಷರ ವೀರ್ಯಾಣುಗಳ ನಡುವೆಯೂ ಸ್ಪರ್ಧೆ ಇರಬಹುದಲ್ಲವೇ? ಇರುತ್ತದೆ. ಹಾಗೆ ಸ್ಪರ್ಧೆ ಇದ್ದಾಗಲೇ ಅದು ಭೂಮಿಯ ಮೇಲೆ ಬದುಕುಳಿಯಲು ಸಾಧ್ಯ. ಇಂಥದೊಂದು ತಮಾಷೆಯ, ಆದರೆ ಸೀರಿಯಸ್ ಕೂಡ ಆಗಿರುವ, ವೀರ್ಯಾಣುಗಳಿಗಾಗಿಯೇ ನಡೆಸಲಾದ ಒಂದು ಸ್ಪರ್ಧೆ ನಿನ್ನೆ ಲಾಸ್ ಏಂಜಲೀಸ್‌ನಲ್ಲಿ ನಡೀತು. ಇದು ವಿಶ್ವದ ಮೊದಲ ವೀರ್ಯಾಣು ರೇಸ್.
ಇದು ತಮಾಷೆಯಲ್ಲ, ನಿಜ. ಸ್ಪರ್ಮ್ ರೇಸಿಂಗ್ ಎಂಬ ಹೊಸ ಸ್ಟಾರ್ಟಪ್ ಇದನ್ನು ನಡೆಸಿತು. ಇದು ವಿಶ್ವದ ಮೊದಲ ಲೈವ್ ವೀರ್ಯಾಣು ಓಟ ಆಗಿದ್ದು, ಉದ್ಘಾಟನಾ ಹಣಾಹಣಿ ಏಪ್ರಿಲ್ 25ರಂದು ನಡೆಯಿತು. ಎಲ್ಲ ರೇಸ್‌ಗಳಲ್ಲಿ ಇರುವಂತೆ ಇಲ್ಲೂ ಬೆಟ್ ಕಟ್ಟುವಿಕೆ, ಲೈವ್ ಸ್ಟ್ರೀಮಿಂಗ್ ಎಲ್ಲವೂ ಇತ್ತು. ಲೈವ್ ಸ್ಟ್ರೀಮಿಂಗ್ ಅಂದರೆ ಏನೇನೋ ಊಹಿಸಬೇಡಿ. ರೇಸ್ ಅಂದರೆ ಇಲ್ಲಿ ಎರಡು ವೀರ್ಯಾಣು ಸ್ಯಾಂಪಲ್‌ಗಳನ್ನು ನಿಖರ ಸ್ತ್ರೀ ಗರ್ಭನಾಳದ ಮಾದರಿಯ ಟ್ಯೂಬ್‌ಗಳಲ್ಲಿ ರೇಸ್‌ಗೆ ಬಿಡಲಾಯಿತು. ಇದನ್ನು ಸೂಕ್ಷ್ಮದರ್ಶಕಗಳ ಮೂಲಕ ವೀಕ್ಷಿಸಲಾಯಿತು ಮತ್ತು ಇದರ ಲೈವ್ ಅನ್ನು ದೊಡ್ಡದಾಗಿ ಕಮೆಂಟರಿ ಸಹಿತ ಪರದೆಯಲ್ಲಿ ಪ್ರದರ್ಶಿಸಲಾಯಿತು. ಅಲ್ಲಿ ಸೇರಿದ್ದ ಸಾವಿರಾರು ವೀಕ್ಷಕರು ಉಭಯ ವೀರ್ಯಾಣುಗಳ ಪರ- ವಿರೋಧ ಬೊಬ್ಬಿರಿದರು. ಯಾವುದೇ ರನ್ನಿಂಗ್ ಮ್ಯಾರಥಾನ್‌ಗಿಂತಲೂ ಈ ಸ್ಪರ್ಧೆ ರೋಚಕವಾಗಿತ್ತು.
ಸ್ಪರ್ಧೆ ಅಷ್ಟೊಂದು ಗಮನ ಸೆಳೆದದ್ದು ಯಾಕೆ? ಯಾಕೆಂದರೆ ಸ್ಪರ್ಧೆಯ ಥ್ರಿಲ್ ಜತೆಗೆ ಪುರುಷತ್ವದ ಪ್ರಶ್ನೆಯೂ ಇತ್ತಲ್ಲ! ಯಾರ ಪುರುಷತ್ವ ಹೆಚ್ಚು ಪ್ರಬಲ ಎಂಬ ಪ್ರಶ್ನೆಯೂ ಈ ವೀರ್ಯಾಣು ಸ್ಪರ್ಧೆಯಲ್ಲಿ ಇತ್ಯರ್ಥವಾಗುತ್ತದಲ್ಲ. ವೀಕ್ಷಕರಾಗಿ ಪಡ್ಡೆ ಹುಡುಗಿಯರೂ ಜಾಸ್ತಿ ಇದ್ದುದಕ್ಕೆ ಇದೂ ಒಂದು ಕಾರಣ ಇರಬಹುದು. ಸ್ಪರ್ಧೆಯಲ್ಲಿ ಭಾಗವಹಿಸಿದವರು ಇಪ್ಪತ್ತರಿಂದ ಮೂವತ್ತರ ಒಳಗಿನ ಯುವಕರು. ಸಹಜವಾಗಿಯೇ, ಮೂವತ್ತರ ನಂತರ ವೀರ್ಯಾಣುಗಳ ಸ್ಪೀಡು ಇಳಿಯುತ್ತದೆ. ಆದ್ದರಿಂದ ಈ ವಯಸ್ಸಿನವರದು ಗೆಲ್ಲಲಾರದು ಎಂಬುದು ಗೊತ್ತಿರುವುದೇ.
ಸ್ಪರ್ಧೆಯ ಆಯೋಜಕರು ಈಗಾಗಲೇ ಈ ಸ್ಪರ್ಧೆ ಸಂಘಟಿಸಲು 10 ದಶಲಕ್ಷ ಡಾಲರ್‌ಗಿಂತಲೂ ಹೆಚ್ಚಿನ ನಿಧಿ ಸಂಗ್ರಹಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಮನರಂಜನೆ, ತಮಾಷೆಯ ಜೊತೆಗೆ ಗಂಭೀರ ವೈಜ್ಞಾನಿಕ ಅಂಶವೂ ಇದೆ. ಅದೇನೆಂದರೆ, ಪುರುಷ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಕಾಳಜಿ. ಲೈಫ್‌ಸ್ಟೈಲ್ ಬದಲಾವಣೆಗಳಿಂದಾಗಿ ಪುರುಷರ ಫರ್ಟಿಲಿಟಿ ಸಾಮರ್ಥ್ಯ ಕುಂಠಿತವಾಗುತ್ತಿದೆ ಎಂಬುದು ಜಾಗತಿಕ ಕಳವಳ. ಇದರ ಬಗ್ಗೆ ಜಾಗೃತಿ ಆಗಬೇಕಿದೆ. ಆ ಬಗ್ಗೆ ಇದು ಗಮನ ಸೆಳೆಯುತ್ತಿದೆ.
ಸ್ಪರ್ಮ್ ರೇಸಿಂಗ್ ಹೆಸರಿನ ಸ್ಟಾರ್ಟ್‌ಅಪ್ ಈ ವಿಚಿತ್ರ ಸ್ಪರ್ಧೆಯ ಆಯೋಜಕ. ಈ ಯುವ ನವೋದ್ಯಮ ಸಂಸ್ಥಾಪಕರ ಗುಂಪು ಹೀಗಿದೆ- ಎರಿಕ್ ಝು (ಅವಿಯಾಟೊದ ಸಿಇಒ), ನಿಕ್ ಸ್ಮಾಲ್ (ಸ್ಟೆಲ್ತ್ ಕನ್ಸಲ್ಟಿಂಗ್), ಶೇನ್ ಫ್ಯಾನ್ (ವಾಟರ್‌ಫಾಲ್ ಎನ್‌ಎಫ್‌ಟಿ ಬೆಲೆ ನಿಗದಿ), ಮತ್ತು ಗ್ಯಾರೆಟ್ ನಿಕೋನಿಯೆಂಕೊ (ಯೂಟ್ಯೂಬರ್ ಮಿಸ್ಟರ್‌ಬೀಸ್ಟ್‌ನ ಮಾಜಿ ವಿಷಯ ತಂತ್ರಜ್ಞ). ಈ ಸ್ಪರ್ಧೆ ಸರಳವಾದರೂ ವೈಜ್ಞಾನಿಕ ಆಧಾರವಿದೆ. ಎರಡು ವೀರ್ಯಗಳು - ಪ್ರತಿಯೊಂದೂ ಕೇವಲ 0.05 ಮಿಲಿಮೀಟರ್ ಅಳತೆ - ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಅನುಕರಿಸಿ ವಿನ್ಯಾಸಗೊಳಿಸಲಾದ 20-ಸೆಂಟಿಮೀಟರ್ ಸೂಕ್ಷ್ಮ ಟ್ಯೂಬ್‌ಗಳಲ್ಲಿ ಹರಿಬಿಡಲಾಗುತ್ತದೆ.
ಸ್ಪರ್ಧೆ ರೋಚಕವಾಗಿತ್ತು. ಇದರ ಪ್ರತಿಯೊಂದು ಚಲನೆ ಮತ್ತು ತಳ್ಳುವಿಕೆಯನ್ನು ಹೆಚ್ಚಿನ ರೆಸಲ್ಯೂಶನ್ ಕ್ಯಾಮೆರಾಗಳು ವಿವರವಾಗಿ ಸೆರೆಹಿಡಿದು ತೋರಿಸಿದವು. ಆಕ್ಷನ್ ಅನ್ನು ಅಭಿಮಾನಿಗಳಿಗೆ ನೇರಪ್ರಸಾರ ಮಾಡಲಾಯಿತು. ಕಮೆಂಟರಿ, ಅಂಕಿಅಂಶಗಳು, ಲೀಡರ್‌ಬೋರ್ಡ್‌ಗಳು ಮತ್ತು ತ್ವರಿತ ಮರುಪಂದ್ಯಗಳು ಸಹ ಇದ್ದವು. ಯಾವುದೇ ನಿಜವಾದ ಕ್ರೀಡಾಕೂಟದಂತಿತ್ತು. ಪತ್ರಿಕಾಗೋಷ್ಠಿ ಇತ್ತು. ಹೌದು, ಬೆಟ್ಟಿಂಗ್ ಸಹ ಇತ್ತು.
ಮನೆಯಲ್ಲಿ Water Purifier ಇಲ್ಲವೇ, ಚಿಂತೆ ಬಿಟ್ಬಿಡಿ ಈ 4 ಸಾಂಪ್ರದಾಯಿಕ ವಿಧಾನ ಫಾಲೋ ಮಾಡಿ
ಈ ಕಾರ್ಯಕ್ರಮವು 8 ಇಂಚು ಉದ್ದದ ರೇಸ್‌ಟ್ರಾಕ್‌ನಲ್ಲಿ ನಡೆಯಿತು. ಇಬ್ಬರು ಆರೋಗ್ಯವಂತ ಯುವ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಂದ ತೆಗೆದ ಮಾದರಿಗಳನ್ನು ಪರಸ್ಪರ ವಿರುದ್ಧವಾಗಿ ಸ್ಪರ್ಧಿಸಲಾಯಿತು. ವೀರ್ಯ ರೇಸಿಂಗ್ ಕಾರ್ಯಕ್ರಮ ಲೈವ್‌ಸ್ಟ್ರೀಮ್‌ಗಳು, ಮರುಪಂದ್ಯಗಳು ಮತ್ತು ಲೈವ್ ಆಡ್ಸ್‌ಗಳನ್ನು ಒಳಗೊಂಡಿತ್ತು. USC ಯ 20 ವರ್ಷದ ಟ್ರಿಸ್ಟಾನ್ ಮಿಲ್ಕರ್ ಚಾಂಪಿಯನ್ ಆಗಿ ಕಿರೀಟಧಾರಣೆ ಮಾಡಿದ. UCಯ 19 ವರ್ಷದ ಆಶರ್ ಪ್ರೊಗರ್ ಸೋತ. ವೀರ್ಯದಂತಹ ದ್ರವವನ್ನು ಸುರಿದು ಅವನನ್ನು ತಮಾಷೆಯಾಗಿ ತೋಯಿಸಲಾಯಿತು.
ತಮಿಳುನಾಡಲ್ಲಿ ಮೇಯೋನಿಸ್ ಬ್ಯಾನ್, ಮಧುಮೇಹ ಜೊತೆ ಇದು ತರೋ ಅನಾರೋಗ್ಯ ಒಂದೆರಡಲ್ಲ
ಇನ್ನು ಮುಂದೆಯೂ ಸ್ಪರ್ಧೆಗಳು ನಡೆಯಲಿವೆಯಂತೆ. ಯಾರಿಗೆ ಗೊತ್ತು- ಇದರಲ್ಲಿ ನಿಮ್ಮ ನೆಚ್ಚಿನ ನಟರ, ಕ್ರೀಡಾಪಟುಗಳು ವೀರ್ಯಾಣುಗಳೂ ಭಾಗವಹಿಸಬಹುದು. ಅವರ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ಬೆಟ್ ಕಟ್ಟಬಹುದು!

