Asianet Suvarna News Asianet Suvarna News

ಲೈಟಿದ್ದರೆ ಮಾತ್ರ ನಿದ್ರೆ ಬರೋದಾ? ಇದಷ್ಟು ಒಳ್ಳೆ ಅಭ್ಯಾಸವಲ್ಲ!

ಕೆಲವರಿಗೆ ರಾತ್ರಿ ಲೈಟಿದ್ದರೆ ನಿದ್ರೆ ಬರೋಲ್ಲ. ಮತ್ತೆ ಕೆಲವರಿಗೆ ಕತ್ತಲಾದರೆ ನಿದ್ರೆ ಬರೋಲ್ಲ. ಆದರೆ, ನಮ್ಮ ದೇಹ ರಾತ್ರಿ-ಬೆಳಗಿನ ಬದಲಾವಣೆಗಳಿಗೆ ಒಗ್ಗಿ ಕೊಳ್ಳುತ್ತೆ. ರಾತ್ರಿ ನಿದ್ರೆ ಚೆನ್ನಾಗಿ ಮಾಡಬೇಕು. ಹಗಲು ಆ್ಯಕ್ಟಿವ್ ಆಗರಬೇಕು. ಹೀಗಿರಲು ರಾತ್ರಿ ಕತ್ತಲಲ್ಲೇ ಮಲಗಿದರೆ ಒಳ್ಳೆಯದು ಅನ್ನುತ್ತೆ ಸಂಶೋಧನೆ. 

While sleeping do not keep light it may damage your health
Author
Bangalore, First Published Jul 14, 2022, 9:50 AM IST

ರಾತ್ರಿ ಚೆನ್ನಾಗಿ ನಿದ್ರೆ ಮಾಡಬೇಕೆನ್ನುವುದು ಎಲ್ಲರ ಬಯಕೆ. ಆದರೆ, ಹಲವರು ಏನೇನೋ ಕಾರಣಗಳಿಂದ ಕಣ್ತುಂಬ ನಿದ್ರೆ ಮಾಡುವುದರಿಂದ ವಂಚಿತರಾಗುತ್ತಾರೆ. ಅದಕ್ಕಾಗಿ ವೈದ್ಯರ ಮೊರೆ ಹೋಗಿ ಮಾತ್ರೆಗಳನ್ನು ಸೇವಿಸುವವರೂ ಇದ್ದಾರೆ. ನಿದ್ರೆ ಬರುತ್ತಿಲ್ಲವೆಂದು ಕೊರಗುವ ಮುನ್ನ ನೀವು ಮಲಗುವ ವಿಧಾನದ ಬಗ್ಗೆ ಚೆಕ್ ಮಾಡಿಕೊಂಡಿದ್ದೀರಾ? ಏಕೆಂದರೆ, ಮಲಗುವ ವಿಧಾನವೂ ಉತ್ತಮ ನಿದ್ರೆಗೆ ಕಾರಣವಾಗುತ್ತದೆ. ಹೇಗೆಂದರೆ ಹಾಗೆ ಮಲಗಿದರೆ ತೀವ್ರ ಸುಸ್ತಾದಾಗ ಮಾತ್ರ ನಿದ್ರೆ ಬರಬಹುದೇ ವಿನಾ ದಿನವೂ ಅದೇ ಪದ್ಧತಿ ರೂಢಿಸಿಕೊಳ್ಳುವುದು ಸರಿಯಲ್ಲ. ಏಕೆಂದರೆ, ನಮ್ಮ ಇಂತಹ ಕೆಲವು ಅಭ್ಯಾಸಗಳಿಂದಲೇ ನಿದ್ರೆ ಬಾರದಂತಾಗಿ ಹಿಂಸೆ ಆಗಬಹುದು. ರಾತ್ರಿ ಸರಿಯಾಗಿ ನಿದ್ರೆ ಬಾರದಿರುವುದಕ್ಕೆ ಅನೇಕ ಕಾರಣಗಳನ್ನು ಗುರುತಿಸಲಾಗಿದೆ. ಹೊಟ್ಟೆ ಬಿರಿಯುವಷ್ಟು ಊಟ ಮಾಡುವುದರಿಂದ ಹಿಡಿದು, ಚಿಂತೆಯ ಮನಸ್ಥಿತಿಯವರೆಗೆ ಹಲವು ಕಾರಣಗಳಿಂದ ಉತ್ತಮ ನಿದ್ರೆ ಬಾರದೆ ಇರಬಹುದು. ಅವುಗಳಲ್ಲಿ ಒಂದು ಬೆಳಕಿನಲ್ಲಿ ಮಲಗುವುದು. ಉತ್ತಮ ನಿದ್ರೆ ಹಾಗೂ ನಿದ್ರಾಹೀನತೆಯ ಕುರಿತು ಸಾಕಷ್ಟು ಸಂಶೋಧನೆಗಳು ನಡೆದಿವೆ, ನಡೆಯುತ್ತಲೇ ಇವೆ. ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ, ರಾತ್ರಿ ಬೆಳಕು ಇರುವಂತೆ ಮಾಡಿಕೊಂಡು ಮಲಗಿದರೆ ಅದರಿಂದ ಹಾನಿಯಾಗುವುದು ಗ್ಯಾರೆಂಟಿ. ಏಕೆಂದರೆ ಇದು ಬೆಳಕಿನ ಮಾಲಿನ್ಯ.

ಮಲಗುವಾಗ ಕತ್ತಲು (Dark) ಇರುವಂತೆ ನೋಡಿಕೊಳ್ಳಬೇಕು. ಬೆಳಕಿನಲ್ಲಿ (Light) ಮಲಗುವುದರಿಂದ ನಿದ್ರೆ ಬಾರದಿರುವ ಜತೆಗೆ ಬೊಜ್ಜು (Obesity), ಮಧುಮೇಹ (Diabetes) ಹಾಗೂ ಅಧಿಕ ರಕ್ತದೊತ್ತಡದ ಸಮಸ್ಯೆಗಳೂ ಹೆಚ್ಚಬಹುದು ಎಂದು ಹೇಳಲಾಗಿದೆ. ಸಾಕಷ್ಟು ಜನರಿಗೆ ಬೆಳಕಿನಲ್ಲಿ ಮಲಗುವ ಅಭ್ಯಾಸ ಇರುತ್ತದೆ. ಅವರು ಮಲಗುವಾಗ ಚಿಕ್ಕದಾದರೂ ಬೆಳಕು ಇರಲೇಬೇಕು. ಇಲ್ಲವಾದರೆ ಏನೋ ಕಳೆದುಕೊಂಡ ಭಾವನೆ ಅನುಭವಿಸುತ್ತಾರೆ. ಆದರೆ, ಕತ್ತಲಿನಲ್ಲಿ ಮಲಗುವುದನ್ನು ಇಷ್ಟಪಡುವವರೂ ಇದ್ದಾರೆ.

ಚಿಕಾಗೋದ ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯದ ಫಿನ್ ಬರ್ಗ್ ಸ್ಕೂಲ್ ಆಫ್ ಮೆಡಿಸಿನ್ (Finberg School of Medicine) ನಲ್ಲಿ ನಡೆದ ಅಧ್ಯಯನದ ಪ್ರಕಾರ, ಬೆಳಕಿನಲ್ಲಿ ಮಲಗುವುದರಿಂದ ವಿವಿಧ ರೀತಿಯ ಅನಾರೋಗ್ಯ (Health Issues) ಹೆಚ್ಚಾಗುತ್ತದೆ. ಬೃಹತ್ ನಗರಗಳಲ್ಲಿ ವಾಸಿಸುವ ಜನರಿಗೆ ಈ ಸಂಶೋಧನೆ ಎಚ್ಚರಿಕೆ ನೀಡಿದಂತಾಗಿದೆ. ಬೀದಿ ದೀಪದ (Street Light) ಬೆಳಕು ಮಲಗುವ ಸ್ಥಳ ಅಥವಾ ಕೋಣೆಗೆ (Room) ಬೀಳದಂತೆ ಜಾಗೃತೆ ವಹಿಸುವ ಕುರಿತು ಸೂಚನೆ ನೀಡಿದಂತಾಗಿದೆ.

ನೆಮ್ಮದಿಯ ನಿದ್ರೆಗೆ ಈಸಿ ಟಿಪ್ಸ್

ಬೆಳಕಿನ ಮಾಲಿನ್ಯದಿಂದ (Light Pollution) ಹಾನಿ
ಫಿನ್ ಬರ್ಗ್ ಸ್ಕೂಲ್ ಆಫ್ ಮೆಡಿಸಿನ್ ಪ್ರಾಧ್ಯಾಪಕ ಡಾ.ಮಿಂಜಿ ಕಿಮ್ (Minji Kim) ಅವರು ಈ ಕುರಿತು ಒಂದು ಹೇಳಿಕೆಯನ್ನೇ ಹೊರಡಿಸಿಬಿಟ್ಟಿದ್ದಾರೆ. ಸ್ಮಾರ್ಟ್ ಫೋನ್ (Smart Phone) ಬೆಳಕು, ಟಿವಿಯ (Tv) ಬೆಳಕು ಅಥವಾ ಬೀದಿ ದೀಪದ ಬೆಳಕಿನ ಮಾಲಿನ್ಯದಿಂದಾಗಿ ಆರೋಗ್ಯದ ಮೇಲೆ ಅತಿಯಾದ ಪ್ರಭಾವ ಉಂಟಾಗುತ್ತದೆ ಎಂದು ಹೇಳಿದ್ದಾರೆ.

ನಾವು ಇಂದು ಎಂತಹ ಪ್ರಪಂಚದಲ್ಲಿದ್ದೇವೆಂದರೆ, ದಿನದ 24 ಗಂಟೆಯೂ ಬೆಳಕು ಇದ್ದೇ ಇರುತ್ತದೆ. ಆದರೆ, ಡಾ.ಕಿಮ್ ಅವರ ಪ್ರಕಾರ, ಸಣ್ಣದೊಂದು ದೀಪದಿಂದ ಬರುವ ಬೆಳಕೂ ಸಹ ನಮ್ಮ ದೇಹಾರೋಗ್ಯದ ಮೇಲೆ ಪರಿಣಾಮ ಬೀರಬಲ್ಲದು. ಡಿಮ್ ಲೈಟ್ ನಲ್ಲಿ ನಿದ್ರಿಸುವವರಲ್ಲೂ ಹೃದಯ ಬಡಿತ ಹಾಗೂ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವುದನ್ನು ಗುರುತಿಸಲಾಗಿದೆ.

ಹೃದಯ ವೈಫಲಕ್ಕೆ ನಿದ್ರೆಯೂ ಒಂದು ಕಾರಣ

ಸ್ವೀಡನ್ ನ ಉಪ್ಸಾಲಾ ವಿಶ್ವವಿದ್ಯಾಲಯ (Upsala University) ಹಿಂದೊಮ್ಮೆ ನಡೆಸಿದ್ದ ಸಂಶೋಧನೆಯೊಂದರಲ್ಲೂ ದೀರ್ಘಕಾಲ ಬೆಳಕಿನಲ್ಲಿ ನಿದ್ರಿಸುವವರಲ್ಲಿ ಹೃದ್ರೋಗ, ಮಧುಮೇಹ, ರಕ್ತದೊತ್ತಡ (High Blood Pressure), ಬೊಜ್ಜು ಹೆಚ್ಚಾಗುವುದು ಕಂಡುಬಂದಿತ್ತು. ಆದರೆ, ಈಗ ನಡೆಸಲಾಗಿರುವ ಹೊಸ ಅಧ್ಯಯನ(Study)ದಲ್ಲಿ ಬೆಳಕಿನ ಅಪಾಯ (Risk) ಇನ್ನಷ್ಟು ಹೆಚ್ಚು ಎನ್ನುವುದು ತಿಳಿದುಬಂದಿದೆ. ಇದರಲ್ಲಿ, ಕೇವಲ 7 ದಿನಗಳ ಕಾಲ ನಿದ್ರಿಸುವವರ ಮೇಲೆ ಬೆಳಕಿನ ಪ್ರಯೋಗ ನಡೆಸಲಾಗಿತ್ತು. ಬೆಳಕಿನಲ್ಲಿ ನಿದ್ರಿಸುವವರಲ್ಲಿ ರಕ್ತದೊತ್ತಡ ಹೆಚ್ಚಾಗುವ ಅಪಾಯ ಶೇ.74ರಷ್ಟು ಏರಿಕೆಯಾಗುತ್ತದೆ. ಬೊಜ್ಜು ಉಂಟಾಗುವ ಅಪಾಯ ಶೇ.82ರಷ್ಟು ಹಾಗೂ ಮಧುಮೇಹ ಉಂಟಾಗುವ ಅಪಾಯ ಶೇ.100ರಷ್ಟು ಇರುವುದು ದೃಢಪಟ್ಟಿದೆ.

Follow Us:
Download App:
  • android
  • ios