Asianet Suvarna News Asianet Suvarna News

Crib Death: ಹಸುಗೂಸುಗಳಿಗೆ ತೊಟ್ಟಿಲಲ್ಲೇ ಕಾಡುತ್ತಿದೆ ಸಾವು!

ಹಸುಗೂಸುಗಳಲ್ಲಿ ಹೆಚ್ಚುತ್ತಿರುವ ಒಂದು ನಮೂನೆಯ ಸಾವುಗಳ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಕ್ರಿಬ್ ಡೆತ್(Crib death) ಎಂಬ ಹೆಸರಿನ ಇದರ ಬಗ್ಗೆ ತಿಳಿಯೋಣ ಬನ್ನಿ.

What is Crib Death and how to prevent it
Author
Bengaluru, First Published Nov 24, 2021, 5:22 PM IST

ಈ ಹಿಂದಿನ ಕ್ಷಣದವರೆಗೂ ಆಡುತ್ತಾಡುತ್ತಾ ಚೆನ್ನಾಗಿದ್ದ ಮಗು, ಇದ್ದಕ್ಕಿದ್ದಂತೆ ಮಲಗಿದಲ್ಲೇ ಉಸಿರುಗಟ್ಟಿ ಸತ್ತುಹೋಗುತ್ತದೆ. ಕಾರಣವೇ ತಿಳಿಯದೆ ಶೋಕದಲ್ಲಿ, ಆಘಾತದಲ್ಲಿ ಒದ್ದಾಡುವಂತಾಗುತ್ತದೆ. ಇದು ಕೆಲವು ಹಸುಗೂಸುಗಳಲ್ಲಿ (Infant) ಇತ್ತೀಚೆಗೆ ಕಾಣಬರುತ್ತಿರುವ 'ತೊಟ್ಟಿಲ ಸಾವು' ಅಥವಾ 'ಕ್ರಿಬ್ ಡೆತ್'. (Crib death) ಮಗು ಸಾಯುವುದು ಯಾವುದೇ ಅಪ್ಪ ಅಮ್ಮನಿಗೆ ದಾರುಣ ಶೋಕದ ಘಟನೆ. ಇದು ಯಾಕೆ ಉಂಟಾಗುತ್ತದೆ, ಇದನ್ನು ತಡೆಗಟ್ಟಲು ಸಾಧ್ಯವಾ, ಬನ್ನಿ ಇಲ್ಲಿ ತಿಳಿಯೋಣ.

ಕ್ರಿಬ್ ಡೆತ್ ಎಂದರೇನು?

ಹಠಾತ್ ಶಿಶು ಮರಣ ಸಿಂಡ್ರೋಮ್ (SIDS) ಅಂದರೆ 1 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿನ ಹಠಾತ್ ಮತ್ತು ವಿವರಿಸಲಾಗದ ಸಾವು. ಹೆಚ್ಚಿನ SIDS ಸಾವುಗಳು ನಿದ್ರೆಯಲ್ಲೇ ನಡೆಯುತ್ತವೆ. ಅದಕ್ಕಾಗಿಯೇ ಇದನ್ನು ಕ್ರಿಬ್ ಡೆತ್ ಎಂದೂ ಕರೆಯಲಾಗುತ್ತದೆ.

SIDS ಅನ್ನು ತಡೆಯಬಹುದೇ?

SIDS ಅನ್ನು ನಿರೀಕ್ಷಿಸಲಾಗದು. ಯಾವುದೇ ಗುಣಲಕ್ಷಣಗಳು ಮುಂಚಿತವಾಗಿ ಕಾಣಿಸವು. ಹೀಗಾಗಿಯೇ ಇದು ತುಂಬಾ ಭಯಾನಕ. SIDS 1 ತಿಂಗಳಿಂದ 1 ವರ್ಷ ವಯಸ್ಸಿನ ಶಿಶುಗಳಲ್ಲಿ ಬರಬಹುದು. ಹಲವಾರು ವರ್ಷಗಳ ಸಂಶೋಧನೆಯ ಹೊರತಾಗಿಯೂ ಇದರ ಬಗ್ಗೆ ಹಲವಾರು ಸಂಗತಿಗಳು ಇನ್ನೂ ತಿಳಿಯಬೇಕಿವೆ.

ಹಾಗಿದ್ದರೂ, SIDSನ ಸಂಭವನೀಯತೆಯ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು. ಪ್ರಮುಖವಾದದ್ದು: 1 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಮಲಗಲು ಬೆನ್ನಿನ ಮೇಲೆ ಇಡಬೇಕು. ಎಂದಿಗೂ ಅದರ ಹೊಟ್ಟೆಯ ಮೇಲೆ ಅಥವಾ ಅವರ ಬದಿಗಳಲ್ಲಿ ಮಲಗಿಸಬಾರದು. ಹೊಟ್ಟೆ ಅಥವಾ ಮಗ್ಗುಲಾಗಿ ಮಲಗುವುದು SIDS ನ ಅಪಾಯವನ್ನು ಹೆಚ್ಚಿಸುತ್ತದೆ.

SIDSನ ಅಪಾಯ ಯಾರಿಗೆ?

- ಯಾವುದೇ ಒಂದು ವಿಷಯವು SIDS ಸಾವಿಗೆ ಕಾರಣವಲ್ಲ. ಬದಲಿಗೆ ಹಲವಾರು ಅಪಾಯಕಾರಿ ಅಂಶಗಳು ಸಂಯೋಜಿಸಬಹುದು.

- ಹೆಚ್ಚಿನ SIDS ಸಾವುಗಳು ಶಿಶುವಿನ 2ರಿಂದ 4 ತಿಂಗಳ ವಯಸ್ಸಿನಲ್ಲಿ ಸಂಭವಿಸುತ್ತವೆ ಮತ್ತು ಶೀತ ವಾತಾವರಣದಲ್ಲಿ ಪ್ರಕರಣಗಳು ಹೆಚ್ಚಾಗುತ್ತವೆ. ಅಮೆರಿಕದಲ್ಲಿ ಇದು ಹೆಚ್ಚು. ಹುಡುಗಿಯರಿಗಿಂತ ಹೆಚ್ಚು ಹುಡುಗರು SIDSಗೆ ಬಲಿಯಾಗುತ್ತಾರೆ.

- ಗರ್ಭಾವಸ್ಥೆಯಲ್ಲಿದ್ದಾಗ ಗರ್ಭಿಣಿ ಮತ್ತು ಜನನದ ನಂತರ ತಾಯಿ ಧೂಮಪಾನ, ಮದ್ಯಪಾನ ಅಥವಾ ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದರೆ.

- ಕಳಪೆ ಪ್ರಸವಪೂರ್ವ ಆರೈಕೆಯಿಂದ.

- ಮಗು ಅವಧಿಪೂರ್ವ ಜನನ ಅಥವಾ ಕಡಿಮೆ ಜನನ ತೂಕ ಹೊಂದಿದ್ದರೆ.

- ಇಂಥ ಸಾವುಗಳ ಕೌಟುಂಬಿಕ ಇತಿಹಾಸ ಹೊಂದಿದ್ದರೆ.

- 20 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ತಾಯಿಯಾದರೆ.

- ನವಜಾತ ಶಿಶು ಸದಾ ತಂಬಾಕು ಹೊಗೆಯಿರುವ ಆವರಣದಲ್ಲಿ ಇದ್ದರೆ.

Broken heart syndrome: ನಿಮಗಿದ್ಯಾ ಈ ಪ್ರಾಬ್ಲಂ? ಜೋಪಾನ ಮಾಡ್ರೀ ಸ್ವಲ್ಪ

ಹೊಟ್ಟೆಯ ನಿದ್ರೆ ಏಕೆ ಅಪಾಯಕಾರಿ? (Sleeping on stomach)

ತಮ್ಮ ಬೆನ್ನಿನ ಮೇಲೆ ಮಲಗುವ ಮಕ್ಕಳಿಗಿಂತ ಹೊಟ್ಟೆಯ ಮೇಲೆ ಮಲಗುವ ಶಿಶುಗಳಲ್ಲಿ SIDS ಹೆಚ್ಚಾಗಿ ಕಂಡುಬರುತ್ತದೆ. ಶಿಶುಗಳನ್ನು ಮಗ್ಗುಲಾಗಿ ಸಹ ಮಲಗಿಸಬಾರದು. ಯಾಕೆಂದರೆ ಮಗು ನಿದ್ರೆಯ ಸಮಯದಲ್ಲಿ ಮಗ್ಗುಲಿನಿಂದ ಹೊಟ್ಟೆ ಕೆಳಗಾಗಿ ಹೊರಳಿಕೊಳ್ಳಬಹುದು.

ಕೆಲವು ಸಂಶೋಧಕರು, ಹೊಟ್ಟೆಯ ಮೇಲಿನ ನಿದ್ರೆಯು ಶ್ವಾಸನಾಳವನ್ನು ನಿರ್ಬಂಧಿಸಬಹುದು ಮತ್ತು ಉಸಿರಾಟವನ್ನು ನಿರ್ಭಂಧಿಸಬಹುದು ಎಂದು ನಂಬುತ್ತಾರೆ. ಹೊಟ್ಟೆಯ ನಿದ್ರಿಸುವಿಕೆ "ಮರು ಉಸಿರಾಟ"ವನ್ನು ಹೆಚ್ಚಿಸಬಹುದು- ಅಂದರೆ ಮಗುವು ಪದೇ ಪದೇ ಅದೇ ಗಾಳಿಯನ್ನು ಉಸಿರಾಡಬಹುದು. ಅದೂ ವಿಶೇಷವಾಗಿ ಮೃದುವಾದ ಹಾಸಿಗೆ ಅಥವಾ, ಸ್ಟಫ್ ಮಾಡಿದ ಆಟಿಕೆ ಅಥವಾ ದಿಂಬಿನಲ್ಲಿ ಮುಖ ಹುದುಗಿಸಿ ಮಲಗಿದ್ದರೆ. ಬಿಡುವ ಗಾಳಿಯನ್ನು ಪುನಃ ಉಸಿರಾಡಿದರೆ ದೇಹದಲ್ಲಿ ಆಮ್ಲಜನಕದ ಮಟ್ಟ ಕಡಿಮೆಯಾಗಿ ಇಂಗಾಲದ ಡೈಆಕ್ಸೈಡ್ ಮಟ್ಟವು ಹೆಚ್ಚಾಗುತ್ತದೆ.

SIDSನಿಂದ ಸಾಯುವ ಶಿಶುಗಳು, ನಿದ್ರೆಯ ಸಮಯದಲ್ಲಿ ಉಸಿರಾಟ ಮತ್ತು ಎಚ್ಚರವನ್ನು ನಿಯಂತ್ರಿಸಲು ಸಹಾಯ ಮಾಡುವ ಮೆದುಳಿನ ಭಾಗದಲ್ಲಿ ಸಮಸ್ಯೆ ಹೊಂದಿರಬಹುದು. ಮೆದುಳು ಸಾಕಷ್ಟು ಆಮ್ಲಜನಕವನ್ನು ಪಡೆಯದಿದ್ದರೆ, ಅದು ಹೆಚ್ಚು ಆಮ್ಲಜನಕವನ್ನು ಪಡೆಯಲು ಮಗುವನ್ನು ಎಚ್ಚರಗೊಳಿಸಲು ಮತ್ತು ಅಳಲು ಪ್ರಚೋದಿಸುತ್ತದೆ. ಮೆದುಳು ಈ ಸಂಕೇತವನ್ನು ತೆಗೆದುಕೊಳ್ಳದಿದ್ದರೆ, ಆಮ್ಲಜನಕದ ಮಟ್ಟವು ಕುಸಿಯುತ್ತಲೇ ಇರುತ್ತದೆ.

'ಬ್ಯಾಕ್ ಟು ಸ್ಲೀಪ್' (Back to sleep)

ಹೊಟ್ಟೆಯ ನಿದ್ದೆಯು SIDSಗೆ ಕಾರಣವಾಗಬಹುದು ಎಂಬ ಕಾರಣದಿಂದ, ಅಮೇರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ "ಬ್ಯಾಕ್ ಟು ಸ್ಲೀಪ್" (ಬೆನ್ನಿನ ಮೇಲೆ ನಿದ್ರೆ) ಅಭಿಯಾನವನ್ನು ಆರಂಭಿಸಿದೆ. ಇದು 1 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಆರೋಗ್ಯವಂತ ಶಿಶುಗಳನ್ನು ಅವರ ಬೆನ್ನಿನ ಮೇಲೆ ಮಲಗಿಸಲು ಶಿಫಾರಸು ಮಾಡಿದೆ.

Time Management: ನಿಮ್ಮ ಸಮಯವೆಲ್ಲ ಎಲ್ಲಿ ವ್ಯರ್ಥವಾಗುತ್ತಿದೆ, ನಿಮಗೆ ಗೊತ್ತೆ?

ಈ ಕ್ರಮಗಳು ಶಿಶುವಿಗೆ ಸುರಕ್ಷಿತ

- 12 ತಿಂಗಳ ವಯಸ್ಸಿನವರೆಗೆ ಶಿಶುಗಳನ್ನು ಬೆನ್ನಿನ ಮೇಲೆಯೇ ಮಲಗಿಸಬೇಕು. ಶಿಶುಗಳು ತಮ್ಮ ಭಂಗಿಯನ್ನು ಬದಲಾಯಿಸಲು ಕಲಿತರೆ ತೊಂದರೆಯಿಲ್ಲ. ಆದರೆ ರಾತ್ರಿಯಿಡೀ ಹೊಟ್ಟೆಯ ಮೇಲೆ ಮಲಗುವುದನ್ನು ಅಭ್ಯಾಸ ಮಾಡಿಸಬಾರದು.

- ಆರಂಭಿಕ ಮತ್ತು ನಿಯಮಿತ ಪ್ರಸವಪೂರ್ವ ಆರೈಕೆಯನ್ನು ಗರ್ಭಿಣಿ (pregnant) ಪಡೆಯಬೇಕು.

- ನಿಮ್ಮ ಮಗುವನ್ನು ಮಲಗಲು ಗಟ್ಟಿಯಾದ ಹಾಸಿಗೆಯ ಮೇಲೆ ಮಲಗಿಸಿ. ವಾಟರ್ ಬೆಡ್, ಕುರಿ ಚರ್ಮ, ಮಂಚ, ಕುರ್ಚಿ ಅಥವಾ ಇತರ ಮೃದುವಾದ ಮೇಲ್ಮೈ ಮೇಲೆ ಮಲಗಿಸಬೇಡಿ.

- ತೊಟ್ಟಿಲುಗಳಲ್ಲಿ ಬಂಪರ್ ಪ್ಯಾಡ್‌ಗಳನ್ನು ಬಳಸಬೇಡಿ. ಬಂಪರ್ ಪ್ಯಾಡ್‌ಗಳು ಉಸಿರುಗಟ್ಟಲು, ಕತ್ತು ಹಿಸುಕಲು ಕಾರಣವಾಗಬಹುದು.

- ಶಿಶುಗಳು ಹೆತ್ತವರ ಕೋಣೆಯಲ್ಲೇ ಮಲಗಲಿ, ಆದರೆ ಪ್ರತ್ಯೇಕ ಹಾಸಿಗೆಯಲ್ಲಿ ಮಲಗಲಿ. ಒಂದು ವರ್ಷದೊಳಗಿನ ಮಗುವನ್ನು ಪ್ರತ್ಯೇಕವಾಗಿ ಮಲಗಿಸಬಾರದು.

- ಸಾಧ್ಯವಾದಷ್ಟೂ ಸ್ತನ್ಯಪಾನ ಮಾಡಿಸಿ. ಸ್ತನ್ಯಪಾನವು SIDS ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಕಂಡುಬಂದಿದೆ.

- ನಿದ್ರಿಸುವಾಗ ನಿಮ್ಮ ಮಗು ಹೆಚ್ಚು ಬಿಸಿಯಾಗದಂತೆ, ಬೆವರದಂತೆ ನೋಡಿಕೊಳ್ಳಿ. ಕೋಣೆಯ ಉಷ್ಣಾಂಶಕ್ಕೆ ತಕ್ಕಂತೆ ಶಿಶುವಿನ ಬಟ್ಟೆಯಿರಲಿ. ಅತಿಯಾಗಿ ಬಟ್ಟೆಯಿಂದ ಸುತ್ತಬೇಡಿ.

- ಗರ್ಭಾವಸ್ಥೆಯಲ್ಲಿ ಅಥವಾ ಹೆರಿಗೆಯ ನಂತರ ಧೂಮಪಾನ ಮಾಡಬೇಡಿ. ಗರ್ಭಾವಸ್ಥೆಯಲ್ಲಿ ಧೂಮಪಾನ ಮಾಡಿದ ತಾಯಂದಿರ ಶಿಶುಗಳು ಹೆಚ್ಚು ಅಪಾಯವನ್ನು ಹೊಂದಿರುತ್ತಾರೆ. ಸೆಕೆಂಡ್‌ಹ್ಯಾಂಡ್ ಧೂಮಪಾನದ ಹೊಗೆಗೆ ಒಡ್ಡಿಕೊಳ್ಳುವುದು ಅಪಾಯವನ್ನು ಹೆಚ್ಚಿಸುತ್ತದೆ.

- ಗರ್ಭಾವಸ್ಥೆಯಲ್ಲಿ ಅಥವಾ ಹೆರಿಗೆಯ ನಂತರ ಆಲ್ಕೊಹಾಲ್ ಅಥವಾ ಮಾದಕ ದ್ರವ್ಯಗಳನ್ನು ಬಳಸಬೇಡಿ. ಮದ್ಯಪಾನ ಮಾಡುವ ಅಥವಾ ಮಾದಕ ದ್ರವ್ಯಗಳನ್ನು ಬಳಸುವ ಪೋಷಕರು ತಮ್ಮ ಮಗುವಿನೊಂದಿಗೆ ಹಾಸಿಗೆಯನ್ನು ಹಂಚಿಕೊಳ್ಳಬಾರದು.

- ನಿಮ್ಮ ಮಗುವಿಗೆ ಶಿಫಾರಸು ಮಾಡಲಾದ ಎಲ್ಲಾ ಆಂಟಿಬಯಾಟಿಕ್ಸ್ ಮತ್ತು ವ್ಯಾಕ್ಸೀನ್‌ಗಳನ್ನು ಪಡೆಯಲಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಸರಿಯಾದ ಕಾಲಕ್ಕೆ ಲಸಿಕೆಗಳನ್ನು ಸ್ವೀಕರಿಸುವ ಶಿಶುಗಳಲ್ಲಿ SIDSನ ಅಪಾಯವು 50% ಕಡಿಮೆಯಾಗಿದೆ ಎಂದು ಅಧ್ಯಯನಗಳು ತೋರಿಸಿವೆ.

Menstrual cup: ಬಳಸಲು ಮುಜುಗರವೇ? ಋತುಸ್ರಾವ ಕಪ್ ಬಗ್ಗೆ ಇರೋ ಮಿಥ್‌ಗಳಿವು

Follow Us:
Download App:
  • android
  • ios