ವರ್ಕಿಂಗ್ ಫ್ರಂ ಹೋಂ ಎಂದು ಕಂಪ್ಯೂಟರ್ ಕುಟ್ಟುತ್ತಾ, ಮುಗಿಯುತ್ತಿದ್ದಂತೆಯೇ ನೆಟ್‌ಫ್ಲಿಕ್ಸ್, ಪ್ರೈಮ್‌, ಹಾಟ್‌ಸ್ಟಾರ್‌ನಲ್ಲಿ ಮೂವಿ ಮ್ಯಾರಥಾನ್ ಮಾಡುತ್ತಾ, ಮುಗೀತಿದ್ದಂಗೆ ಮೊಬೈಲ್‌ ಹಿಡಿದು ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾ ಎಂದು ಬ್ಯುಸಿಯಾಗಿರುವ ಈ ಲಾಕ್‌ಡೌನ್ ದಿನಗಳಲ್ಲಿ ಸ್ಕ್ರೀನ್ ನೋಡಿ ನೋಡಿ ಕಣ್ಣುಗಳು ಸುಸ್ತಾಗಿವೆ. ಕಣ್ಣಿನಲ್ಲಿ ನೀರಿಳುವುದು, ಕಣ್ಣುಗಲು ಡ್ರೈ ಆಗುವುದು, ಕಣ್ಣಿನ ಸುತ್ತ ನೋವು ಮುಂತಾದ ಲಕ್ಷಣಗಳ ಮೂಲಕ ಅದು ತನ್ನ ಗೋಳನ್ನು ನಿಮಗೆ ಕೂಗಿ ಕೂಗಿ ಹೇಳುತ್ತಿದೆ. ಕಣ್ಣು ನೋವೆಂದು ಕೆಲಸವನ್ನಂತೂ ಬಿಡಲಾಗದು ನಿಜ, ಆದರೆ, ಕಣ್ಣುಗಳ ಕಾಳಜಿ ಮಾಡುವ ಮೂಲಕ ಅವುಗಳ ಆರೋಗ್ಯ ಜತನ ಮಾಡಿಕೊಂಡು ಮತ್ತಷ್ಟು ದುಡಿಸಿಕೊಳ್ಳಬಹುದಲ್ಲವೇ?
ಕಣ್ಣುಗಳ ಆರೋಗ್ಯಕ್ಕಾಗಿ ಏನೇನು ಮಾಡಬಹುದು ಎಂಬುದಕ್ಕೆ ಇಲ್ಲಿವೆ ಟಿಪ್ಸ್. 

ಡ್ರೈ ಐಸ್
ಸ್ಕ್ರೀನ್ ನೋಡಿದವರಿಗೆಲ್ಲ ಕಣ್ಣುಗಳು ಒಣಗುವುದಿಲ್ಲ. ಆದರೆ, ನಿಮಗೆ ಹಾಗೆ ಆಗುತ್ತಿದ್ದರೆ ಐ ಡ್ರಾಪ್ಸ್‌ನ್ನು ಸದಾ ಜೊತೆಗೆಯೇ ಇಟ್ಟುಕೊಂಡಿರಿ. ಇದಲ್ಲದೆ ಡ್ರೈ ಐಸ್ ಇರುವವರ ಸಹಾಯಕ್ಕೆ ಬರುವ ಮತ್ತೊಂದು ವಿಧಾನವೆಂದರೆ ವಾರ್ಮ್ ಕಂಪ್ರೆಸ್. ಸಣ್ಣ ಬಟ್ಟೆಯೊಂದಕ್ಕೆ ಬಾಯಿಯಿಂದ ಬಿಸಿ ಗಾಳಿ ಊದಿ ಅದನ್ನು ಕಣ್ಣುಗಳ ಮೇಲೆ ಇಡಿ. ಪದೇ ಪದೇ ಹೀಗೆ ಮಾಡುವುದರಿಂದ ಬಾತುಕೊಂಡ ಕಣ್ಣಿನ ಬೇಳೆಗಳು ರಿಲ್ಯಾಕ್ಸ್ ಆಗುತ್ತವೆ. ಇದಲ್ಲದೆ ಎರಡು ಗಂಟೆಗಳಿಗೊಮ್ಮೆ ಕಣ್ಣುಗಳಿಗೆ ನೀರನ್ನು ಹಾಕಿಕೊಂಡು ಬರುವುದು ಕೂಡಾ ಒಳ್ಳೆಯದೇ. 

#WorkfromHome ಮಾಡಿ ತಲೆ ಕೆಡ್ತಿದೆಯಾ? ಹೀಗ್ ರಿಲ್ಯಾಕ್ಸ್ ಆಗಿ...

ತುರಿಸುವ, ನೀರಿಳಿಸುವ ಕಣ್ಗಳು
ಡ್ರೈ ಐಸ್‌ಗೆ ಶಾಖ ಸಹಾಯಕ್ಕೆ ಬಂದರೆ, ನೀರಿಳಿಸುವ ಕಣ್ಗಳಿಗೆ ಕೋಲ್ಡ್ ಕಂಪ್ರೆಸ್ ಸಹಾಯಕ್ಕೆ ಬರುತ್ತದೆ. ಕೆಲ ಐಸ್‌ ಕ್ಯೂಬ್‌ಗಳನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಕಣ್ಣುಗಳ ಮೇಲೆ ಹಾಗೂ ಸುತ್ತಮುತ್ತ ಇಟ್ಟು ತೆಗೆವುದನ್ನು ಪದೇ ಪದೆ ಮಾಡುವುದರಿಂದ ಕಣ್ಣುಗಳು ನೋವಿನಿಂದ ಮುಕ್ತವಾಗಿ ಆರಾಮಾಗುತ್ತವೆ. ಕಣ್ಗಳಲ್ಲಿ ತುರಿಕೆ ಇದ್ದರೆ ಅವು ಸಂಪೂರ್ಣ ಸ್ವಚ್ಛವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕಣ್ಣು ಹಾಗೂ ಸುತ್ತಲ ಭಾಗವನ್ನು ಚೆನ್ನಾಗಿ ತೊಳೆಯಿರಿ. ಪದೇ ಪದೆ ಕಣ್ಗಳನ್ನು ಮುಟ್ಟಿಕೊಳ್ಳಬೇಡಿ. ಗಂಟೆಗೊನಮ್ಮೆ ಅವನ್ನು 5 ನಿಮಿಷಗಳ ಕಾಲ ಮುಚ್ಚಿ ವಿಶ್ರಾಂತಿ ನೀಡಿ. 

ಬ್ರೇಕ್ ಬೇಕು
ದೇಹಕ್ಕೆ ಸುಸ್ತಾದಾಗ ಸ್ವಲ್ಪ ಬ್ರೇಕ್ ಕೊಟ್ಟರೆ ವಿಶ್ರಾಂತಿ ಪಡೆದರೆ ನವಚೈತನ್ಯ ಪಡೆವಂತೆ ಕಣ್ಗಳು ಕೂಡಾ ಬ್ರೇಕ್ ಕೇಳುತ್ತವೆ. ಬ್ರೇಕ್ ಎಂದರೆ ಲ್ಯಾಪ್‌ಟಾಪ್ ಬದಿಗಿಟ್ಟು ಇನ್ಸ್ಟಾ ನೋಡುತ್ತಾ ಕೂರುವುದಲ್ಲ. ಕಣ್ಗಳಿಗೆ ಬ್ರೇಕ್ ಸಿಗಬೇಕೆಂದರೆ ಗಂಟೆಗೊಮ್ಮೆ ಸ್ಕ್ರೀನ್ ಬಿಟ್ಟು ಅತ್ತಿತ್ತ ನೋಡಿ. ಎದ್ದು ಓಡಾಡಿಕೊಂಡು ಬನ್ನಿ. ಸಾಧ್ಯವಿದ್ದರೆ ಹಸಿರು ಮರಗಿಡಗಳನ್ನು ನೋಡಿ. ಇಲ್ಲವೇ 5 ನಿಮಿಷ ಕಣ್ಣು ಮುಚ್ಚಿ. 

20-20-20 ವಿಧಾನ
ಬಹಳ ಹೊತ್ತು ಸ್ಕ್ರೀನ್ ಮುಂದೆ ಕುಳಿತುಕೊಳ್ಳಬೇಕಾಗಿ ಬಂದಾಗ 20-20-20 ವಿಧಾನ ಬಳಸಿ.  ಪ್ರತಿ 20 ನಿಮಿಷಕ್ಕೊಮ್ಮೆ 20 ಅಡಿ ದೂರದಲ್ಲಿರುವ ವಸ್ತುವನ್ನು 20 ಸೆಕೆಂಡ್‌ಗಳ ಕಾಲ ನೋಡಿ. ಇದರಿಂದ ಕಣ್ಣು ಹತ್ತಿರದಿಂದ ಒಂದೇ ವಸ್ತುವನ್ನು ಹೆಚ್ಚು ದಿಟ್ಟಿಸುವುದನ್ನು ತಡೆಯುವ ಜೊತೆಗೆ, ಕಣ್ಗಳಿಗೂ ಸ್ವಲ್ಪ ಹೊರಳುವಿಕೆ ಸಿಗುತ್ತದೆ. 

ಹಬ್ಬ ಆಚರಿಸುವುದೇ ಖುಷಿಯಾಗಿರಲು... ವಿಶ್ವದ ವಿನೋದಕರ ಹಬ್ಬಗಳಿವು..

ಕಿಟಕಿ ಎದುರು ಕೂರಬೇಡಿ
ಕಿಟಕಿ ಎದುರಿಗೆ ಲ್ಯಾಪ್‌ಟಾಪ್ ಇಟ್ಟುಕೊಂಡು ಕೂರುವುದರಿಂದ ಹೊರಗಿನ ಬೆಳಕು ಪೋಕಸಿಂಗ್‌ ಮೇಲೆ ಅಡ್ಡ ಪರಿಣಾಮ ಬೀರಬಲ್ಲದು. ಸ್ಕ್ರೀನನ್ನು ಕಿಟಕಿಗೆ ವಿರುದ್ಧ ದಿಕ್ಕಲ್ಲಿ ಇಟ್ಟು ಕುಳಿತರೆ ಸ್ಕ್ರೀನ್ ಮೇಲೆ ಹೊರಗಿನ ಬೆಳಕಿನ ಪ್ರತಿಫಲನ ಬಿದ್ದು ಅದು ಕಣ್ಗಳನ್ನು ಕುಕ್ಕಬಹುದು. ಹಾಗಾಗಿ, ಗೋಡೆ ಬದಿಗೆ ಲ್ಯಾಪ್‌ಟಾಪ್ ಇಟ್ಟುಕೊಂಡು ಕೆಲಸ ಮಾಡುವುದು ಉತ್ತಮ.  ಅಲ್ಲದೆ, ಲ್ಯಾಪ್‌ಟಾಪ್‌ನ ಬ್ರೈಟ್‌ನೆಸ್ ಯಾವಾಗಲೂ ಸುತ್ತಲಿನ ವಸ್ತುಗಳ ಬೆಳಕಿಗೆ ಸರಿಸಮನಾಗಿರುವಂತೆ ನೋಡಿಕೊಳ್ಳಿ.

ಕನ್ನಡಕ
ನಿಮ್ಮ ಜಾಬ್‌ಗಾಗಿ ಇಡೀ ದಿನ ಸ್ಕ್ರೀನ್ ಮುಂದೆ ಕೂರಬೇಕಾಗುತ್ತದೆ ಎಂಬುದು ನಿಂಗೆ ಗೊತ್ತಿದ್ದಾಗ ಆ್ಯಂಟಿ ಗ್ಲೇರ್ ಗ್ಲಾಸ್‌ಗಳನ್ನು ಕೊಂಡು ಅವನ್ನು ಬಳಸುವುದು ಉತ್ತಮ.