ನಮ್ಮಲ್ಲಿ ಬಹುತೇಕ ಮಹಿಳೆಯರಿಗೆ ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ಮೂಡುವುದು ಸಂಬಂಧಿಕರು ಅಥವಾ ಸ್ನೇಹಿತರ ಮದುವೆ ಅಥವಾ ಇನ್ಯಾವುದೋ ಕಾರ್ಯಕ್ರಮ ಎದುರಾದಾಗ ಮಾತ್ರ. ಉಳಿದ ದಿನಗಳಲ್ಲಿ ಏನೋ ಉದಾಸೀನತೆ. ಅದರಲ್ಲೂ ಉದ್ಯೋಗಸ್ಥ ಮಹಿಳೆಯರಿಗೆ ಆಫೀಸ್-ಮನೆ ಕೆಲಸಗಳ ನಡುವೆ ಸೌಂದರ್ಯದ ಬಗ್ಗೆ ಗಮನ ನೀಡಲು ಹೆಚ್ಚಿನ ಸಮಯಾವಕಾಶವೂ ದೊರೆಯುವುದಿಲ್ಲ. ಆದರೆ, ಸೌಂದರ್ಯ ಸಂರಕ್ಷಣೆಗೆ ಪ್ರತಿದಿನವೂ ಸ್ವಲ್ಪ ಸಮಯವನ್ನು ಮೀಸಲಿಟ್ಟರೆ 45 ದಾಟಿದರೂ ನಿಮ್ಮ ಬ್ಯೂಟಿ ಮಾಸುವುದಿಲ್ಲ.

ಮೊಡವೆ ಸಮಸ್ಯೆಗೆ ಕರಿಬೇವೆಂಬ ಮದ್ದು

ಹಾಗಾದ್ರೆ ಚಿರಯೌವನದ ಕಾಂತಿಗೆ ಏನು ಮಾಡಬೇಕು?

ನಿರಂತರ ಕಾಳಜಿ ಅಗತ್ಯ: 20-30ರ ನಡುವಿನ ವಯಸ್ಸಿನಲ್ಲಿ ನೀವು ಹೇಗೆ ಚರ್ಮದ ಸಂರಕ್ಷಣೆ ಮಾಡುತ್ತೀರಿ ಎನ್ನುವುದು ನಿಮ್ಮ ಮಧ್ಯವಯಸ್ಸಿನ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆ. ಆದಕಾರಣ 30ರ ಗಡಿ ದಾಟುವ ಮುನ್ನವೇ ನಿಮ್ಮ ಆಹಾರ ಕ್ರಮ ಹಾಗೂ ಲೈಫ್ ಸ್ಟೈಲ್ ಬಗ್ಗೆ ಎಚ್ಚರ ವಹಿಸುವುದು ಅಗತ್ಯ. ಸೌಂದರ್ಯ ಎನ್ನುವುದು ಒಂದು ದಿನದ ಸ್ವತಲ್ಲ. ಅದಕ್ಕೆ ನಿರಂತರ ಕಾಳಜಿ, ಆರೈಕೆ ಅಗತ್ಯ. 

ಸಮತೋಲಿತ ಆಹಾರ ಸೇವಿಸಿ: ನೀವು ಸೇವಿಸುವ ಆಹಾರ ನಿಮ್ಮ ಚರ್ಮದ ಮೇಲೆ ನೇರ ಪರಿಣಾಮ ಬೀರುತ್ತದೆ. ಚರ್ಮದ ಆರೋಗ್ಯಕ್ಕೆ ಅಗತ್ಯವಾಗಿರುವ ವಿಟಮಿನ್ ಇ, ಸಿ ಹಾಗೂ ಆಂಟಿಆಕ್ಸಿಡೆಂಟ್ ಹೆಚ್ಚಿರುವ ಹಣ್ಣು, ಮೊಳಕೆ ಕಾಳುಗಳು ಹಾಗೂ ಹಸಿರು ತರಕಾರಿಗಳನ್ನು ಯಥೇಚ್ಛವಾಗಿ ಸೇವಿಸಿ. ದಿನಕ್ಕೆ 3-4 ಲೀಟರ್ ನೀರು ಕುಡಿಯಿರಿ. 
ದೇಹ ದಂಡಿಸಲು ಮರೆಯಬೇಡಿ: ನಿಯಮಿತ ವ್ಯಾಯಾಮ ದೇಹದ ಸೌಂದರ್ಯವನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಒತ್ತಡ ಕೂಡ ಚರ್ಮದ ಆರೋಗ್ಯ ಕೆಡಿಸಬಲ್ಲದು. ಯೋಗ, ಪ್ರಾಣಾಯಾಮದಿಂದ ದೇಹದ ಜತೆಗೆ ಮಾನಸಿಕ ಆರೋಗ್ಯವೂ ಉತ್ತಮಗೊಂಡು ತ್ವಚೆಯ ಕಾಂತಿ ಹೆಚ್ಚುತ್ತದೆ. 

ತ್ವಚೆಯ ಸೌಂದರ್ಯಕ್ಕೆ ಸಿಹಿಯಿಂದ ದೂರವಿದ್ದರೊಳಿತು....!

ಸುಖ ನಿದ್ರೆ: ಆರೋಗ್ಯವಂತ ಚರ್ಮಕ್ಕೆ ನಿದ್ರೆ ಅತ್ಯಗತ್ಯ. ದಿನಕ್ಕೆ 6-8 ಗಂಟೆ ನಿದ್ರಿಸಿ. ಸಮರ್ಪಕವಾಗಿ ನಿದ್ರಿಸದಿದ್ದರೆ ಅದರ ಪರಿಣಾಮ ನಿಮ್ಮ ಮುಖದಲ್ಲಿ ಕಾಣಿಸುತ್ತದೆ. ಕಣ್ಣಿನ ಕೆಳ ಭಾಗದಲ್ಲಿ ಮೂಡುವ ಕಪ್ಪುಕಲೆಗಳು ನಿಮ್ಮ ಅಂದಗೆಡಿಸುತ್ತವೆ. 

ತೇವಾಂಶ ಕಾಪಾಡಿಕೊಳ್ಳಿ: ವಯಸ್ಸಾದಂತೆ ತ್ವಚೆ ತೇವಾಂಶ ಕಳೆದುಕೊಳ್ಳುತ್ತದೆ. ಪರಿಣಾಮ ಚರ್ಮದಲ್ಲಿ ಸುಕ್ಕುಗಳು ಮೂಡಲಾರಂಭಿಸುತ್ತವೆ. ಆದಕಾರಣ ವಯಸ್ಸನ್ನು ಮರೆಮಾಚಲು ಚರ್ಮದಲ್ಲಿ ಸುಕ್ಕು ಮೂಡದಂತೆ ಎಚ್ಚರ ವಹಿಸುವುದು ಅಗತ್ಯ. ರಾತ್ರಿ ವೇಳೆ ಚರ್ಮದ ಒಳ ಹಾಗೂ ಹೊರ ಪದರಗಳು ಹೆಚ್ಚಿನ ತೇವಾಂಶ ಹೀರಿಕೊಳ್ಳುವುದರಿಂದ ತೇವಾಂಶ ಹೆಚ್ಚಿನ ಪ್ರಮಾಣದಲ್ಲಿ ನಷ್ಟವಾಗುತ್ತದೆ. ಇದನ್ನು ತಪ್ಪಿಸಲು ಪ್ರತಿರಾತ್ರಿ ಮಲಗುವ ಮುನ್ನ ಮಾಯಿಶ್ಚರೈಸ್ ಕ್ರೀಂ ಅನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಲೇಪಿಸಿಕೊಳ್ಳಿ. ಇದರಿಂದ ಸುಕ್ಕುಗಳು ಮೂಡದಂತೆ ತಡೆಯಬಹುದು. ಅಲ್ಲದೆ, ಯಾವುದೇ ಬ್ಯೂಟಿ ಕ್ರೀಂ ಇರಲಿ, ಅದನ್ನು ರಾತ್ರಿ ವೇಳೆ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.

ಹೀಗ್ ಮಾಡಿದ್ರೆ ಬ್ಯೂಟಿ ಕ್ವೀನ್ ಆಗ್ತೀರಾ....!

ಸನ್ ಕ್ರೀಂ ಇಲ್ಲದೆ ಹೊರಗೆ ಕಾಲಿಡಬೇಡಿ: ಸೂರ್ಯನ ಕಿರಣಗಳು ಚರ್ಮದಲ್ಲಿನ ಕಾಲಜಿನ್ (ಒಂದು ಬಗೆಯ ಪ್ರೋಟೀನ್) ವಿಭಜನೆ ಹೆಚ್ಚಿಸುವ ಮೂಲಕ ಪಿಗ್ಮೆಂಟೇಷನ್, ವಯಸ್ಸಿನ ಕಲೆಗಳು ಹಾಗೂ ಸುಕ್ಕು ಮೂಡುವಂತೆ ಮಾಡುತ್ತವೆ. ಆದಕಾರಣ ಸೂರ್ಯನ ಪ್ರಖರತೆಯಿಂದ ಚರ್ಮವನ್ನು ಸಂರಕ್ಷಿಸಿಕೊಳ್ಳಲು ಸೂಕ್ತವಾದ ಸನ್ ಕ್ರೀಂ ಬಳಸಿ. ಮನೆಯಿಂದ ಹೊರಹೋಗುವ 30 ನಿಮಿಷ ಮೊದಲು ಸನ್ ಕ್ರೀಂ ಬಳಸುವುದರಿಂದ ಉತ್ತಮ ಫಲಿತಾಂಶ ದೊರಕುತ್ತದೆ.